ಪ್ರಧಾನಿ ಮೋದಿ ಘೋಷಣೆ ವೀರ, ಸುಳ್ಳಿನ ಸರದಾರ : ಬಿ.ಕೆ.ಹರಿಪ್ರಸಾದ್
ಹುಬ್ಬಳ್ಳಿ : ಸಂವಿಧಾನದ ಬಗ್ಗೆ ಗೊತ್ತಿಲ್ಲದ, ಸಂವಿಧಾನ ಓದಿರದ ನರೇಂದ್ರ ಮೋದಿಯವರು ಪ್ರಚಾರಕ್ಕಾಗಿ ಸಂವಿಧಾನ ನಮ್ಮ ಧರ್ಮಗ್ರಂಥ ಎನ್ನುತ್ತಿದ್ದಾರೆ. ನರೇಂದ್ರ ಮೋದಿ ಸಾಧನೆಯ ವೀರ ಅಲ್ಲ, ಘೋಷಣೆ ವೀರ ಎಂದು ಕಾಂಗ್ರೆಸ್ ಮುಖಂಡ ಹಾಗೂ ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಆಕ್ರೋಶ ವ್ಯಕ್ತಪಡಿಸಿದರು.
ನಗರದಲ್ಲಿಂದು ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಅವರು, "ಚುನಾವಣೆ ಪೂರ್ವದಲ್ಲಿ ಪ್ರಣಾಳಿಕೆಯನ್ನು ತರುವುದು ವಾಡಿಕೆ. ಇದರಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ, ಮುಂದಿನ ದಿನಗಳಲ್ಲಿ ಮಾಡುವ ಯೋಜನೆ ಬಗ್ಗೆ ಹೇಳಬೇಕು. ಆದರೆ ಮೋದಿಯವರು 10 ವರ್ಷದಲ್ಲಿ ಮಾಡಿರುವ ಒಂದೇ ಒಂದು ಕಾರ್ಯದ ಬಗ್ಗೆ ಪ್ರಣಾಳಿಕೆಯಲ್ಲಿ ಬಿಡುಗಡೆ ಮಾಡಿಲ್ಲ. ಇಷ್ಟು ದಿನ ಸ್ಕಿಲ್ ಇಂಡಿಯಾ, ಅಚ್ಛೆದೀನ್ ಹೆಸರಲ್ಲಿ ಜನರಿಗೆ ಸುಳ್ಳು ಹೇಳಿ ವಂಚನೆ ಮಾಡಿದ್ದಾರೆ. ಈಗ ಅಮೃತ್ ದಿನ್ ಹೆಸರಲ್ಲಿ ಮತ್ತೊಮ್ಮೆ ಜನರಿಗೆ ಮೋಸ ಮಾಡಲು ಬಂದಿದ್ದಾರೆ" ಎಂದು ಟೀಕಿಸಿದರು.
ʼಇದು ಅಮೃತ ಕಾಲ ಅಲ್ಲ, ಅನ್ಯಾಯದ ಕಾಲ. ಐದು ನ್ಯಾಯ ಪತ್ರಗಳನ್ನು ನಾವು ಬಿಡುಗಡೆ ಮಾಡಿದ್ದೇವೆ. ನರೇಂದ್ರ ಮೋದಿಯವರು ಸಂವಿಧಾನ ಧರ್ಮಗ್ರಂಥ ಎಂದು ಜಾಹಿರಾತು ಕೊಟ್ಟಿದ್ದಾರೆ. ಮುಸ್ಲಿಂ ಸಮುದಾಯಕ್ಕೆ ಎಸ್‌ಸಿ,ಎಸ್‌ಟಿ ಮೀಸಲಾತಿ ಕೊಡುವುದಿಲ್ಲ ಎಂದು ಜಾಹಿರಾತಿನಲ್ಲಿ ಹೇಳಿದ್ದಾರೆ. 10 ವರ್ಷಗಳಲ್ಲಿ ಒಂದೇ ಒಂದು ಸತ್ಯವನ್ನ ಜನರಿಗೆ ಮೋದಿ ಹೇಳಿಲ್ಲ. ಮೋದಿಯ ಹೇಳಿಕೆಯಲ್ಲಿ ಸಾಕಷ್ಟು ದ್ವಂದ್ವ ಇದೆ. ಮೋದಿಯವರು ಮಾಡಿದ ಸಾಧನೆ ಬಗ್ಗೆ ಹೇಳಲು ಆಗಲ್ಲ, ಆದ್ದರಿಂದ ಧರ್ಮಗಳ ಮೇಲೆ ಚುನಾವಣೆ ಮಾಡಲು ಹೊರಟಿದ್ದಾರೆ. ಮೋದಿಯವರು ಪ್ರಧಾನ ಸುಳ್ಳುಗಾರ, ಸುಳ್ಳಿನ ಸರ್ದಾರʼ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.