ಪೇಮೆಂಟ್ ಬಂದಿದ್ದರಿಂದ ದಿಂಗಾಲೇಶ್ವರ ಸ್ವಾಮೀಜಿ ಚುನಾವಣೆಗೆ ಸ್ಪರ್ಧೆ: ಶಾಸಕ ಯತ್ನಾಳ್ ಆರೋಪ
ಹುಬ್ಬಳ್ಳಿ, ಎ.20: ಧಾರವಾಡ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿರುವ ದಿಂಗಾಲೇಶ್ವರ ಸ್ವಾಮೀಜಿಗೆ ಪೇಮೆಂಟ್ ಬಂದಿದೆ. ಹೀಗಾಗಿ ಅವರು ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಿದ್ದಾರೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಾರು ಪೇಮೆಂಟ್ ಮಾಡಿದ್ದಾರೆ ಎಂಬುದನ್ನು ಮೇ 7ರ ನಂತರ ಬಹಿರಂಗಪಡಿಸುವೆ ಎಂದು ಹೇಳಿದ್ದಾರೆ.
ದೇಶದ ವಿಚಾರ ಬಂದಾಗ ಲಿಂಗಾಯತರು, ವೀರಶೈವ ಲಿಂಗಾಯತರು ಬಿಜೆಪಿ ಜೊತೆಗೆ ನಿಲ್ಲುತ್ತಾರೆ. ದಿಂಗಾಲೇಶ್ವರ ಸ್ವಾಮೀಜಿ ಸ್ಪರ್ಧೆಯಿಂದ ನಮಗೆ, ನಮ್ಮ ಅಭ್ಯರ್ಥಿಗೆ ಯಾವುದೇ ಸಮಸ್ಯೆಯಿಲ್ಲ. ಹಿಂದೆ ಮಾತೆ ಮಹಾದೇವಿ ಕೂಡ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದರು. ಅವರ ಎಷ್ಟು ಮತಗಳನ್ನು ಗಳಿಸಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿದೆ. ದಿಂಗಾಲೇಶ್ವರ ಸ್ವಾಮೀಜಿ ಸುಮಾರು 5000 ಮತಗಳನ್ನು ಪಡೆಯುತ್ತಾರೆ. ಹಿಂದೆ ಮಾಜಿ ಸಚಿವ ವಿನಯ್ ಕುಲಕರ್ಣಿ ದಿಂಗಾಲೇಶ್ವರ ಸ್ವಾಮೀಜಿಯನ್ನ ತೆಗಳುತ್ತಿದ್ದರು. ಇದೀಗ ಒಳ್ಳೆಯ ಸ್ವಾಮೀಜಿ ಎಂದು ಹೇಳುತ್ತಿರುವುದನ್ನು ಗಮನಿಸಿದರೆ ಸ್ವಾಮೀಜಿಗೆ ಪೇಮೆಂಟ್ ಆಗಿದೆ ಎಂಬುದು ಖಚಿತ ಎಂದು ಯತ್ನಾಳ್ ಹೇಳಿದರು.
ರಾಜ್ಯದಲ್ಲಿ ಸೃಷ್ಟಿಯಾಗುತ್ತಿರುವ ತಾಲಿಬಾನ್ ಮಾದರಿಯ ಸಂಸ್ಕೃತಿಯನ್ನು ರಾಜ್ಯಪಾಲರು ಗಮನಿಸುತ್ತಿದ್ದಾರೆ. ಎಲ್ಲಾ ಘಟನಾವಳಿಗಳನ್ನು ಕ್ರೋಡೀಕರಿಸಿ ರಾಷ್ಟ್ರಪತಿಗೆ ವರದಿ ಸಲ್ಲಿಸಬೇಕು. ಈ ಕುರಿತು ರಾಜ್ಯಪಾಲರನ್ನು ಭೇಟಿಯಾಗಲು ಚಿಂತನೆ ನಡೆಯುತ್ತಿದೆ ಎಂದರು.
ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಡಿಕೆ ಶಿವಕುಮಾರ್ ಮತದಾರರನ್ನು ಬೆದರಿಸುತ್ತಿದ್ದಾರೆ. ಇಂತಹ ವಿಚಾರಗಳನ್ನು ಚುನಾವಣಾ ಆಯೋಗ ಗಂಭೀರವಾಗಿ ತೆಗೆದುಕೊಳ್ಳಬೇಕು ಎಂದರು.