ಹುಬ್ಬಳ್ಳಿಯ ಅಂಜಲಿ ಹತ್ಯೆ ಪ್ರಕರಣ | ಆರೋಪಿ ಪತ್ತೆಗಾಗಿ ಎರಡು ವಿಶೇಷ ತಂಡ ರಚನೆ: ಪೊಲೀಸ್ ಆಯುಕ್ತೆ ರೇಣುಕಾ
ಹುಬ್ಬಳ್ಳಿ : ಅಂಜಲಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯ ಪತ್ತೆಗೆ ಎರಡು ವಿಶೇಷ ತಂಡ ರಚನೆ ಮಾಡಲಾಗಿದೆ ಎಂದು ಹುಬ್ಬಳ್ಳಿ-ಧಾರವಾಡ ನಗರ ಪೊಲೀಸ್ ಆಯುಕ್ತೆ ರೇಣುಕಾ ಹೇಳಿದ್ದಾರೆ.
ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಅಂಜಲಿಗೆ 4 ಬಾರಿ ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ. ಅವರ ಮನೆಯವರ ದೂರಿನ ಪ್ರಕಾರ ಆತ ಪ್ರೀತಿಸುವಂತೆ ಪೀಡಿಸುತ್ತಿದ್ದ. ಅಂಜಲಿಯು ಪ್ರೀತಿ ನಿರಾಕರಣೆ ಮಾಡಿದ್ದಕ್ಕೆ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ" ಎಂದು ಹೇಳಿದರು.
"ಆರೋಪಿ ಪತ್ತೆಗಾಗಿ ಎರಡು ವಿಶೇಷ ತಂಡ ರಚನೆ ಮಾಡಲಾಗಿದೆ. ಆರೋಪಿ ವಿಶ್ವ ಅಲಿಯಾಸ್ ಗಿರೀಶ್ ವಿರುದ್ಧ ಕಳ್ಳತನ ಸೇರಿದಂತೆ ಹಲವು ಪ್ರಕರಣ ದಾಖಲಾಗಿವೆ. ಎಲ್ಲಾ ಆಯಾಮದಲ್ಲಿ ತನಿಖೆ ಮಾಡುತ್ತೇವೆ. ಅಂಜಲಿ ಕುಟುಂಬ ಬೆಂಡಿಗೇರಿ ಠಾಣೆಗೆ ಬಂದಿರುವುದು ನಿಜ. ಈ ಕುರಿತು ಪೊಲೀಸ್ ಠಾಣೆಯ ಸಿಸಿಕ್ಯಾಮರಾ ದೃಶ್ಯಗಳಿವೆ. ಆದರೆ ಯಾವ ಕಾರಣಕ್ಕೆ ಬಂದಿದ್ದಾರೆ ಅನ್ನೋದು ಸ್ಪಷ್ಟತೆ ಇಲ್ಲ. ಆದರೆ ಸಿಬ್ಬಂದಿ ಬೇರೆ ಪ್ರಕರಣಕ್ಕೆ ಬಂದಿದ್ದರು ಎಂದು ಹೇಳುತ್ತಿದ್ದಾರೆ. ಈ ಬಗ್ಗೆಯೂ ತನಿಖೆ ಆರಂಭಿಸಿದ್ದೇವೆ. ಬೆಂಡಿಗೇರಿ ಠಾಣೆ ಸಿಬ್ಬಂದಿ ಲೋಪದೋಷವಿದ್ದರೆ ಕ್ರಮ ಕೈಗೊಳ್ಳುತ್ತೇವೆ" ಎಂದು ಹೇಳಿದ್ದಾರೆ.
ʼಅಂಜಲಿ ಕುಟುಂಬಕ್ಕೆ ನ್ಯಾಯ ಕೊಡಿಸಿ ಎಂದು ಸ್ಥಳೀಯರಿಂದ ಮನವಿ ಬಂದಿವೆ . ಅಂಜಲಿ ಹತ್ಯೆ ಮಾಡಿದವನನ್ನು ಎನ್ಕೌಂಟರ್ ಮಾಡಬೇಕು. ಅಂಜಲಿ ಕುಟುಂಬಕ್ಕೆ ಸರ್ಕಾರ 25 ಲಕ್ಷ ರೂ. ಪರಿಹಾರ ನೀಡಬೇಕು. ಅಂಜಲಿ ಸಹೋದರಿಗೆ ಸರ್ಕಾರಿ ಕೆಲಸ ನೀಡಬೇಕೆಂದು ಮನವಿಗಳು ಸಹ ಸಾರ್ವಜನಿಕರಿಂದ ಬಂದಿವೆʼ ಎಂದು ತಿಳಿಸಿದರು