ಮುಡಾ ನಿವೇಶನ ವಾಪಸ್ ಮಾಡಿ ಮತ್ತಷ್ಟು ಸಂಕಷ್ಟ ಮೈಮೇಲೆ ಎಳೆದುಕೊಂಡ ಸಿಎಂ : ಬಸವರಾಜ ಬೊಮ್ಮಾಯಿ
ಹುಬ್ಬಳ್ಳಿ : "ಮುಡಾ ನಿವೇಶನ ವಾಪಸ್ ಮಾಡುವ ಮೂಲಕ ಸಿಎಂ ಸಿದ್ದರಾಮಯ್ಯ ಮತ್ತಷ್ಟು ಸಂಕಷ್ಟವನ್ನು ಮೈಮೇಲೆ ಎಳೆದುಕೊಂಡಿದ್ದಾರೆ" ಎಂದು ಮಾಜಿ ಸಿಎಂ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಸಿಎಂ ಸಿದ್ದರಾಮಯ್ಯ ಪತ್ನಿ ಮುಡಾ ನಿವೇಶನ ವಾಪಸ್ ಕೊಟ್ಟಿರುವ ಕುರಿತು ಹುಬ್ಬಳ್ಳಿಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ʼಈ ಕೆಲಸವನ್ನು ಅವರು ಮೊದಲೇ ಮಾಡಬೇಕಿತ್ತು. ಆಗಲೇ ಹೈಕೋರ್ಟ್ ನ್ಯಾಯಮೂರ್ತಿಗಳ ಮೂಲಕ ತನಿಖೆ ಮಾಡಿಸಿದ್ದರೆ ಮುಗಿದು ಹೋಗುತ್ತಿತ್ತು. ಸಿದ್ದರಾಮಯ್ಯ ಅವರ ಪ್ರಾಮಾಣಿಕತೆ ಬಗ್ಗೆ ಪ್ರಶ್ನೆ ಬರುತ್ತಿರಲಿಲ್ಲ. ಆದರೆ ಆಗ ಸಮರ್ಥನೆ ಮಾಡಿಕೊಂಡರು. ರಾಜ್ಯಪಾಲರು ಪ್ರಾಸಿಕ್ಯೂಷನ್ಗೆ ಅನುಮತಿ ಕೊಟ್ಟು, ಪ್ರಕರಣ ದಾಖಲಾಗಿ, ತನಿಖೆ ನಡೆದಿದೆ. ಈಗ ವಾಪಸ್ ಮಾಡಿರುವುದರಿಂದ ಹಲವಾರು ಪ್ರಶ್ನೆಗಳು ಉದ್ಭವಿಸಿವೆ. ನಿವೇಶನ ವಾಪಸ್ ಮಾಡುವ ಮೂಲಕ ಮತ್ತಷ್ಟು ಜಟಿಲ ಮಾಡಿಕೊಂಡಿದ್ದಾರೆʼ ಎಂದು ಹೇಳಿದರು.
ʼಎಫ್ಐಆರ್ ಆದಮೇಲೆ ತನಿಖೆ ಆಗಲೇಬೇಕು. ಒಂದು ಕಡೆ ಲೋಕಾಯುಕ್ತ ತನಿಖೆ ನಡೆದಿದೆ. ಮತ್ತೊಂದು ಕಡೆ ಇಡಿ ಎಫ್ ಐಆರ್ ಮಾಡಿಕೊಂಡು ತನಿಖೆ ಮಾಡುತ್ತಿದೆ. ಮೊದಲು ಕಾಂಗ್ರೆಸ್ ನಾಯಕರು ತಪ್ಪೇ ನಡೆದಿಲ್ಲ, ಅನ್ನುತ್ತಿದ್ದರು. ಈಗ ನಿವೇಶನ ವಾಪಸ್ ಕೊಟ್ಟು ತಪ್ಪಾಗಿದೆ ಅನ್ನುವುದನ್ನು ಒಪ್ಪಿಕೊಂಡಂತಾಗಿದೆʼ ಎಂದರು.