ಬಿಜೆಪಿ ಟಿಕೆಟ್ ವಂಚನೆ ಪ್ರಕರಣ | ಪ್ರಹ್ಲಾದ್ ಜೋಶಿ, ಅಮಿತ್ ಶಾ ಎಳೆದು ತರುವುದು ಸರಿಯಲ್ಲ : ದೂರುದಾರೆ ಸುನೀತಾ ಚೌಹಾಣ್ ಸ್ಪಷ್ಟನೆ
ಹುಬ್ಬಳ್ಳಿ : ಬಿಜೆಪಿ ಟಿಕೆಟ್ ಕೊಡಿಸುವ ಸಂಬಂಧ ಗೋಪಾಲ್ ಜೋಶಿಯಿಂದ ಆಗಿರುವ ವಂಚನೆ ಪ್ರಕರಣದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಪಾತ್ರ ಏನೂ ಇಲ್ಲ ಎಂದು ಪ್ರಕರಣದ ದೂರುದಾರೆ ಸುನೀತಾ ಚೌಹಾಣ್ ಸ್ಪಷ್ಟನೆ ನೀಡಿದ್ದಾರೆ.
ಶನಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಈ ಪ್ರಕರಣದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರನ್ನು ವಿನಾಕಾರಣ ಎಳೆದು ತರಲಾಗುತ್ತಿದೆ. ಪಾಪ ಅವರ ಪಾತ್ರ ಇದರಲ್ಲಿ ಏನೂ ಇಲ್ಲ. ಅವರು ತುಂಬಾ ಒಳ್ಳೆಯವರು. ಅವರ ಹೆಸರನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಹೇಳಿದರು.
ಪ್ರಹ್ಲಾದ್ ಜೋಶಿ ಅವರನ್ನು ನಾನು ಭೇಟಿ ಮಾಡಬೇಕಿತ್ತು. ಆದರೆ, ಅದಕ್ಕೆ ಇವರು ಬಿಡಲಿಲ್ಲ. ಈ ವಂಚನೆ ಪ್ರಕರಣದಲ್ಲಿ ಸಚಿವ ಪ್ರಹ್ಲಾದ್ ಜೋಶಿ ಅವರದ್ದಾಗಲಿ, ದೇವಾನಂದ ಚೌಹಾಣ್ ಅವರದ್ದಾಗಲಿ ಯಾವ ಪಾತ್ರವೂ ಇಲ್ಲ. ಕೇಂದ್ರ ಗೃಹ ಸಚಿವ ಅಮಿತ್ ಶಾರನ್ನು ಎಳೆದು ತರುವುದು ಸರಿ ಕಾಣುವುದಿಲ್ಲ ಎಂದು ಅವರು ಆಕ್ಷೇಪಿಸಿದರು.
ಟಿಕೆಟ್ ಸಂಬಂಧ ಕೊಟ್ಟಿರುವುದು 25 ಲಕ್ಷ ರೂ. ಮಾತ್ರ. 2 ಕೋಟಿ ರೂ. ಎಲ್ಲ ಸುಳ್ಳು. 2ಕೋಟಿ ರೂ. ಅಂತೆಲ್ಲಾ ಹೇಳುತ್ತಾರಷ್ಟೇ. ಟಿಕೆಟ್ ಸಿಗದಿದ್ದಾಗ ಕೊಟ್ಟ ಹಣ ವಾಪಸ್ ನೀಡಿರಲಿಲ್ಲ. ಹೀಗಾಗಿ ಅನಿವಾರ್ಯವಾಗಿ ದೂರು ಕೊಟ್ಟಿದ್ದೇನೆ. ಆದರೆ, ಇದರಲ್ಲಿ ಬಿಜೆಪಿ ಹೈಕಮಾಂಡ್ ಹೆಸರನ್ನ ವಿನಾಕಾರಣ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.