ಯುವ ನಿಧಿ ಘೋಷಿಸಿದ ಕಾಂಗ್ರೆಸ್ ಸರಕಾರ ಈಗ ವಿವಿಗಳನ್ನೇ ಮುಚ್ಚಲು ಮುಂದಾಗಿರುವುದು ಅಕ್ಷಮ್ಯ: ಪ್ರಹ್ಲಾದ್ ಜೋಶಿ

ಪ್ರಹ್ಲಾದ್ ಜೋಶಿ
ಹುಬ್ಬಳ್ಳಿ: ಪದವೀಧರರಿಗೆ 'ಯುವ ನಿಧಿ' ಗ್ಯಾರೆಂಟಿ ಘೋಷಿಸಿರುವ ರಾಜ್ಯ ಕಾಂಗ್ರೆಸ್ ಸರ್ಕಾರ ಈಗ ಅಂಥ ಪದವೀಧರರನ್ನು ರೂಪಿಸುವ ವಿಶ್ವವಿದ್ಯಾನಿಲಯಗಳನ್ನೇ ಮುಚ್ಚಲು ಮುಂದಾಗಿರುವುದು ಅಕ್ಷಮ್ಯ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಆಕ್ಷೇಪಿಸಿದ್ದಾರೆ.
ರಾಜ್ಯ ಸಚಿವ ಸಂಪುಟದ ಉಪ ಸಮಿತಿ ರಾಜ್ಯದಲ್ಲಿನ 9 ವಿಶ್ವವಿದ್ಯಾಲಯಗಳನ್ನು ಮುಚ್ಚಲು ಕೈಗೊಂಡಿರುವ ತೀರ್ಮಾನಕ್ಕೆ ಸಚಿವ ಜೋಶಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ರಾಜ್ಯದೆಲ್ಲೆಡೆ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಕಲ್ಪಿಸಲು 10 ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಿದರೆ, ಕಾಂಗ್ರೆಸ್ ಸರ್ಕಾರ ಅವನ್ನು ಮುಚ್ಚುವ ಮೂಲಕ ವಿದ್ಯಾರ್ಥಿಗಳ ಉನ್ನತ ಶಿಕ್ಷಣದ ಕನಸಿಗೆ ಕೊಳ್ಳಿಯಿಡುತ್ತಿದೆ ಎಂದು ಹರಿ ಹಾಯ್ಡಿದ್ದಾರೆ.
ರಾಜ್ಯ ಕಾಂಗ್ರೆಸ್ ಸರ್ಕಾರ ವಿವಿಗಳನ್ನೂ ಆದಾಯದ ಮೂಲ ಮತ್ತು ಒಂದು ಸರಕನ್ನಾಗಿ ನೋಡುತ್ತಿರುವುದು ಖಂಡನೀಯ. ವಿವಿಗಳು ಆರ್ಥಿಕ ಮತ್ತು ಅಗತ್ಯ ಭೂಮಿಯ ಕೊರತೆ ಎದುರಿಸುತ್ತಿವೆ ಎಂಬ ಕುಂಟು ನೆಪವೊಡ್ಡುವ ಈ ಸರ್ಕಾರವೇ ಮೊದಲು ಆರ್ಥಿಕ ಸಂಕಷ್ಟದಲ್ಲಿದೆ. ಹಾಗಾಗಿ ಇಂಥ ಕ್ರಮಕ್ಕೆ ಮುಂದಾಗುತ್ತಿದೆ ಎಂದು ಟೀಕಿಸಿದ್ದಾರೆ.
ಡಿಸಿಎಂ ಡಿಕೆ ಶಿವಕುಮಾರ್ ವಿಶ್ವವಿದ್ಯಾಲಯಗಳ ಆರ್ಥಿಕ ಸ್ಥಿತಿಗತಿಯ ಪರಿಶೀಲನೆ ಸಭೆ ನಡೆಸುವ ಮೊದಲು ತಮ್ಮ ಸರ್ಕಾರ ಮತ್ತು ಇಲಾಖೆಗಳ ಆರ್ಥಿಕ ಸ್ಥಿತಿಗತಿಯ ಪರಿಶೀಲನೆಗೆ ಸಭೆ ನಡೆಸುವುದು ಒಳಿತು ಎಂದು ಸಚಿವ ಜೋಶಿ ಸಲಹೆ ಮಾಡಿದ್ದಾರೆ.
ಕರಾವಳಿ ಇಂಧನ ಕಡಿತ; ಆಡಳಿತ ವೈಫಲ್ಯಕ್ಕೆ ಕನ್ನಡಿ: ಇನ್ನು, ಕಾಂಗ್ರೆಸ್ ಸರ್ಕಾರ ಕರ್ನಾಟಕ ಕರಾವಳಿ ಭದ್ರತೆಗೆ ಬೇಕಿರುವ ಅಗತ್ಯ ಇಂಧನವನ್ನು ಕಡಿತಗೊಳಿಸಿಸಲು ಆದೇಶಿಸಿದೆ. ಕರಾವಳಿ ಭದ್ರತೆಯ ವಿಚಾರದಲ್ಲಿ ಇಂಧನ ಕಡಿತಗೊಳಿಸಿರುವುದು ಇವರ ಆಡಳಿತ ವೈಫಲ್ಯದ ನಿದರ್ಶನ ಎಂದು ಸಚಿವ ಪ್ರಹ್ಲಾದ್ ಜೋಶಿ ಪ್ರತಿಕ್ರಿಯಿಸಿದ್ದಾರೆ.
ಚುನಾವಣೆ ವೇಳೆ ಜನರಿಗೆ ಅವೈಜ್ಞಾನಿಕ ರೀತಿ ಭರವಸೆಗಳನ್ನು ನೀಡಿ ಇತ್ತ ಅವನ್ನೂ ನೀಡಲಾಗದೆ, ಜನರಿಗೆ ಬೆಲೆ ಏರಿಕೆ ಬರೆ ಎಳೆದು ಹಿಂಸೆ ಮಾಡುತ್ತಿದೆ. ಆಡಳಿತದಲ್ಲಿ ಭ್ರಷ್ಟಾಚಾರದ ಪರಾಕಾಷ್ಟೆ ಮೀರಿದೆ ಎಂದು ಆರೋಪಿಸಿದ್ದಾರೆ.
ವ್ಯಾಪಕ ಭ್ರಷ್ಟಾಚಾರ, ನಾನಾ ಹಗರಣಗಳು, ಅವೈಜ್ಞಾನಿಕ ರೀತಿಯ ಘೋಷಣೆಗಳಿಂದಾಗಿ ರಾಜ್ಯವನ್ನು ಆರ್ಥಿವಾಗಿ ಮಾತ್ರವಲ್ಲದೆ, ಬೌದ್ಧಿಕವಾಗಿಯೂ ದಿವಾಳಿತನದತ್ತ ಕೊಂಡೊಯ್ಯುತ್ತಿದೆ ಎಂದು ಆರೋಪಿಸಿದ್ದಾರೆ.