ಹುಬ್ಬಳ್ಳಿ ಪ್ರಕರಣ ವಾಪಸ್ ವಿಚಾರ | ಬಿಜೆಪಿ ಶಾಸಕರ ಮನವಿ ಸ್ವೀಕರಿಸದೇ ಸಿಎಂ ದುರಹಂಕಾರ : ಪ್ರಹ್ಲಾದ್ ಜೋಶಿ ಆಕ್ರೋಶ
ಹುಬ್ಬಳ್ಳಿ : "ಹಳೇ ಹುಬ್ಬಳ್ಳಿ ಗಲಭೆ ಪ್ರಕರಣವನ್ನು ಎನ್‌ಐಎಯಿಂದ ಹಿಂಪಡೆಯದಂತೆ ಬಿಜೆಪಿ ಶಾಸಕರು, ಮನವಿ ಸಲ್ಲಿಸಲು ಮುಂದಾದರೆ ಸಿಎಂ ಸ್ವೀಕರಿಸಲು ಸಿದ್ಧರಿಲ್ಲ. ಸಿದ್ದರಾಮಯ್ಯ ಅತ್ಯಂತ ದುರಹಂಕಾರದಿಂದ ನಡೆದುಕೊಳ್ಳುತ್ತಿದ್ದಾರೆ" ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕಿಡಿಕಾರಿದರು.
ರವಿವಾರ ಹುಬ್ಬಳ್ಳಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಸಿಎಂಗೆ ಭದ್ರತೆ ನೆಪದಲ್ಲಿ ಬಿಜೆಪಿ ಶಾಸಕರು ಮತ್ತು ಕಾರ್ಯಕರ್ತರನ್ನು ತಡೆಯುತ್ತಿದ್ದಾರೆ. ಆದರೆ, ಬಂಧಿಸಿ ಜೈಲಿಗಟ್ಟಿದರೂ ಸರಿ ಮನವಿ ಸಲ್ಲಿಸಿಯೇ ಸಿದ್ಧ" ಎಂದು ಸವಾಲು ಹಾಕಿದರು.
ಮುಖ್ಯಮಂತ್ರಿಗೆ ಬಿಜೆಪಿ ಮನವಿ ಸಲ್ಲಿಸುವುದು ತಪ್ಪೇ? ಎಂದು ಪ್ರಶ್ನಿಸಿದ ಜೋಶಿ, ಸಿಎಂ ಸಿದ್ದರಾಮಯ್ಯ ಅವರು ಮನವಿ ಸ್ವೀಕರಿಸಲೇಬೇಕು. ಇಲ್ಲದಿದ್ದರೆ ಹೋರಾಟ ತೀವ್ರಗೊಳ್ಳುತ್ತದೆ ಎಂದು ಎಚ್ಚರಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿಜೆಪಿ ಶಾಸಕರು ಮತ್ತು ಕಾರ್ಯಕರ್ತರ ಮನವಿ ಸ್ವೀಕರಿಸದೇ ಇದ್ದರೆ, ಮತಾಂಧ ಭಯೋತ್ಪಾದಕರಿಗೆ ಬೆಂಬಲವಾಗಿ ನಿಂತಿರುವುದು ರುಜುವಾತು ಆದಂತಾಗುತ್ತದೆ ಎಂದು ಜೋಶಿ ಆಕ್ರೋಶ ವ್ಯಕ್ತಪಡಿಸಿದರು.
ಸಿಎಂ ಸ್ಥಾನ ಉಳಿಸಿಕೊಳ್ಳಲು ವೋಟ್ ಬ್ಯಾಂಕ್ ರಾಜಕಾರಣ?: ಮುಡಾ ಹಗರಣದಲ್ಲಿ ಸಿಎಂ ಸ್ಥಾನ ಕಳೆದುಕೊಳ್ಳುವುದು ಖಚಿತವಾಗುತ್ತಲೇ ಸಿದ್ದರಾಮಯ್ಯ ಅವರು ಗಾಂಧಿದ್ವಯರನ್ನು ಮೆಚ್ಚಿಸಿಕೊಳ್ಳಲು, ವೋಟ್ ಬ್ಯಾಂಕ್ ರಾಜಕಾರಣ ಮಾಡುತ್ತಿದ್ದಾರೆ. ಈ ಮೂಲಕ ಮುಡಾ ಹಗರಣ, ಹೋರಾಟದ ವಿಷಯಾಂತರ ಮಾಡಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು.