ಹೆಸ್ಕಾಂ ಅಧ್ಯಕ್ಷರಾಗಿ ಅಜ್ಜಂಪೀರ್ ಖಾದ್ರಿ ಅವರನ್ನು ನೇಮಿಸಿದ ಸರಕಾರ
ಶಿಗ್ಗಾಂವಿಯಲ್ಲಿ ಕಾಂಗ್ರೆಸ್ ಗೆದ್ದ ಬೆನ್ನಲ್ಲೇ ಅಧ್ಯಕ್ಷ ಸ್ಥಾನ
ಅಜ್ಜಂಪೀರ್ ಖಾದ್ರಿ
ಧಾರವಾಡ : ಶಿಗ್ಗಾಂವಿ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಯಾಸಿರ್ ಅಹ್ಮದ್ ಖಾನ್ ಪಠಾಣ್ ಗೆಲುವು ಸಾಧಿಸಿದ ಬೆನ್ನಲ್ಲೆ, ಮಾಜಿ ಶಾಸಕ ಅಜ್ಜಂಪೀರ್ ಖಾದ್ರಿ ಅವರನ್ನು ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪೆನಿ(ಹೆಸ್ಕಾಂ)ನಿಯಮಿತದ ಅಧ್ಯಕ್ಷರನ್ನಾಗಿ ನೇಮಕ ಮಾಡಿ ರಾಜ್ಯ ಸರಕಾರ ಸೋಮವಾರ ಆದೇಶ ಹೊರಡಿಸಿದೆ.
ರಾಜ್ಯದ ಮೂರು ಕ್ಷೇತ್ರಗಳಿಗೆ ಉಪ ಚುನಾವಣೆ ಘೋಷಣೆಯಾದ ಸಂದರ್ಭದಲ್ಲಿ ಅಜ್ಜಂಪೀರ್ ಖಾದ್ರಿ, ಶಿಗ್ಗಾಂವಿ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ, ಕಾಂಗ್ರೆಸ್ ಹೈಕಮಾಂಡ್ ಯಾಸಿರ್ ಅಹ್ಮದ್ ಖಾನ್ ಅವರಿಗೆ ಟಿಕೆಟ್ ನೀಡಿತ್ತು.
ಇದರಿಂದ ಬೇಸರಗೊಂಡ ಅಜ್ಜಂಪೀರ್ ಖಾದ್ರಿ, ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ ಮಾಡಿದ್ದರು. ಈ ಬೆಳವಣಿಗೆ ಬಳಿಕ ತಕ್ಷಣ ಅಜ್ಜಂಪೀರ್ ಖಾದ್ರಿಯನ್ನು ಬೆಂಗಳೂರಿಗೆ ಕರೆ ತಂದ ಸಚಿವ ಝಮೀರ್ ಅಹ್ಮದ್ ಖಾನ್, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿಸಿ ಬಂಡಾಯ ಶಮನಕ್ಕೆ ಯತ್ನಿಸಿದರು.
ಮುಖ್ಯಮಂತ್ರಿ ನೀಡಿದ ಭರವಸೆಯಿಂದಾಗಿ ಅಜ್ಜಂಪೀರ್ ಖಾದ್ರಿ ತಮ್ಮ ನಾಮಪತ್ರ ಹಿಂಪಡೆದು, ಯಾಸಿರ್ ಅಹ್ಮದ್ ಖಾನ್ ಪರವಾಗಿ ಶಿಗ್ಗಾಂವಿಯಲ್ಲಿ ಮತಯಾಚನೆ ನಡೆಸಿದ್ದರು. ಇದೀಗ ಶಿಗ್ಗಾಂವಿಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸುತ್ತಿದ್ದಂತೆ ಅಜ್ಜಂಪೀರ್ ಖಾದ್ರಿಗೆ ರಾಜ್ಯ ಸರಕಾರ ಹೆಸ್ಕಾಂ ಅಧ್ಯಕ್ಷರನ್ನಾಗಿ ನೇಮಕ ಮಾಡಿದೆ.