ಪ್ರತಿಭಾ ಕಾರಂಜಿಯ ಅಪಸವ್ಯಗಳು
Photo: facebook
ಮಕ್ಕಳಲ್ಲಿ ಸುಪ್ತವಾಗಿರುವ ಪ್ರತಿಭೆಗಳನ್ನು ಹೊರ ತರಲು ಶಿಕ್ಷಣ ಇಲಾಖೆಯು ರೂಪಿಸಿರುವ ಅತ್ಯುತ್ತಮ ಕಾರ್ಯಕ್ರಮಗಳಲ್ಲಿ ಪ್ರತಿಭಾ ಕಾರಂಜಿಯು ಒಂದು. ಶಾಲಾ ಹಂತದಿಂದ ಆರಂಭವಾಗುವ ಸ್ಪರ್ಧೆಗಳು ಕ್ಲಸ್ಟರ್, ತಾಲೂಕು, ಜಿಲ್ಲಾ, ರಾಜ್ಯ ಮಟ್ಟದವರೆಗೂ ನಡೆದು ಮಕ್ಕಳ ಪ್ರತಿಭಾ ಪ್ರದರ್ಶನಕ್ಕೆ ಸೂಕ್ತ ವೇದಿಕೆಯನ್ನು ಒದಗಿಸುತ್ತವೆ.ಮಕ್ಕಳ ವಯೋಮಾನಕ್ಕನುಸಾರವಾಗಿ ವಿವಿಧ ಬಗೆಯ ಸ್ಪರ್ಧೆಗಳು ನಡೆಯುವುದರಿಂದ ಮಕ್ಕಳಲ್ಲಿರುವ ಬಹುಮುಖ ಪ್ರತಿಭೆಯನ್ನು ಹೊರ ತರಲು ಈ ಕಾರ್ಯಕ್ರಮದಿಂದ ಸಹಾಯವಾಗಿದೆ.
ಆದರೆ ಇತ್ತೀಚಿನ ವರ್ಷಗಳ ಕಾರ್ಯಕ್ರಮಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಒಂದು ನಿಗದಿತ ವೇಳಾಪಟ್ಟಿಯನ್ನು ಅನುಸರಿಸದೇ ಕಾಟಾಚಾರಕ್ಕೆ ಕಾರ್ಯಕ್ರಮಗಳನ್ನು ರೂಪಿಸುತ್ತಿರುವುದು ಕಂಡು ಬರುತ್ತಿದೆ.
ಮಕ್ಕಳಿಗೆ ನೀಡುವ ಬಹುಮಾನದ ಮೊತ್ತ ಅತ್ಯಲ್ಪವಾಗಿದ್ದು ದಶಕಗಳು ಕಳೆದರೂ ಇನ್ನೂ ಪರಿಷ್ಕರಣೆಯಾಗಿಲ್ಲ. ಕೆಲವು ಸ್ಪರ್ಧೆಗಳಲ್ಲಿ ತಯಾರಿಗಾಗಿ ವಿದ್ಯಾರ್ಥಿಗಳು ಖರ್ಚು ಮಾಡುವ ಮೊತ್ತವೇ ಬಹುಮಾನದ ಮೊತ್ತಕ್ಕಿಂತ ಹಲವು ಪಟ್ಟು ಹೆಚ್ಚಾಗಿರುತ್ತದೆ. ದಾನಿಗಳ ಬೆಂಬಲ ದೊರೆಯುವ ಕೆಲವೇ ಕೆಲವು ಶಾಲೆಗಳು ಉತ್ತಮವಾಗಿ ಕಾರ್ಯಕ್ರಮವನ್ನು ಸಂಘಟಿಸುತ್ತವೆ. ಅದನ್ನು ಹೊರತುಪಡಿಸಿದರೆ ಹೆಚ್ಚಿನ ಶಾಲೆಗಳು ನೀರಸವಾಗಿ ಸ್ಪರ್ಧೆಗಳನ್ನು ನಡೆಸಿ ತಮ್ಮ ಜವಾಬ್ದಾರಿಯನ್ನು ಮುಗಿಸಿಕೊಳ್ಳುತ್ತಿರುವುದನ್ನು ಗಮನಿಸಬಹುದು.
ಇನ್ನು ಸ್ಪರ್ಧೆಯ ತೀರ್ಪುಗಾರರಾಗಿ ಬರುವ ಶಿಕ್ಷಕರಲ್ಲಿ ಈಗಲೂ ಸಹ ಸ್ಪರ್ಧೆಗಳ ಬಗ್ಗೆ ಅರಿವು ಮೂಡದೆ ಇರುವುದು ವಿಷಾದನೀಯ. ಅದರಲ್ಲೂ ಛದ್ಮವೇಷ ಸ್ಪರ್ಧೆಯಂತೂ ವಿಪರೀತ ಎನ್ನುವಷ್ಟರಮಟ್ಟಿಗೆ ತಲುಪಿರುವುದು ಆರೋಗ್ಯಕರ ಬೆಳವಣಿಗೆಯಲ್ಲ.
ಛದ್ಮವೇಷವೆಂದರೆ ಶತ್ರುಗಳ ಕಣ್ಣು ತಪ್ಪಿಸುವ, ಮರೆಮಾಚುವ ಸಲುವಾಗಿ ವಸ್ತುಗಳನ್ನು/ಜನರನ್ನು ನೈಸರ್ಗಿಕ ಹಿನ್ನೆಲೆಯ ಒಂದು ಭಾಗವಾಗಿ ಕಾಣುವಂತೆ ಮಾಡುವ ಕಪಟವೇಷ. ನೋಡುವವರ ಕಣ್ಣುಗಳನ್ನು ಮೋಸಗೊಳಿಸುವುದು ಈ ವೇಷದ ತಂತ್ರಗಾರಿಕೆ.
ವಾಸ್ತವವಾಗಿ ‘Low cost No cost’ ಮಾದರಿಯಲ್ಲಿ ಇಲ್ಲಿನ ವೇಷಗಳು ರೂಪುಗೊಳ್ಳಬೇಕು. ಆದರೆ ಹಲವು ಶಿಕ್ಷಕ ಮಹಾಶಯರು ಜಿದ್ದಿಗೆ ಬಿದ್ದವರಂತೆ ಸಾವಿರಾರು ರೂಪಾಯಿಗಳನ್ನು ಖರ್ಚು ಮಾಡಿ ಮೇಕಪ್ ಮ್ಯಾನ್ಗಳ ಸಹಾಯದಿಂದ ಚಿತ್ರ ವಿಚಿತ್ರವೇಷಗಳನ್ನು ತೊಡಿಸಲು ಮುಂದಾಗುತ್ತಿದ್ದಾರೆ. ತೀರ್ಪುಗಾರರಾಗಿ ಬಂದವರು ಹೆಚ್ಚು ಹಣ ಖರ್ಚು ಮಾಡಿ ಸ್ಪರ್ಧೆಯಲ್ಲಿ ಭಾಗವಹಿಸಿದ ಶಾಲೆಗಳನ್ನೇ ಪರಿಗಣಿಸುವ ಹಾಗೆ ಒತ್ತಡ ಉಂಟಾಗುವಂತೆ ಮಾಡುತ್ತಿರುವುದು ದುರದೃಷ್ಟಕರ. ಪ್ರಾಣಿ, ಪಕ್ಷಿ, ಸ್ವಾತಂತ್ರ್ಯ ಹೋರಾಟಗಾರರು, ಸಂತರು, ಶರಣರು ಮೊದಲಾದ ಬಗೆಯ ವೇಷಗಳನ್ನು ಆರಂಭಿಕ ಹಂತದಲ್ಲಿ ವಿದ್ಯಾರ್ಥಿಗಳು ಧರಿಸುತ್ತಿದ್ದದ್ದು ಒಂದು ಬಗೆಯಲ್ಲಿ ಆಹ್ಲಾದ ಉಂಟು ಮಾಡುತ್ತಿತ್ತು. ಈಗ ಮುಂದುವರಿದು ತಿರುಪತಿ ಬಾಲಾಜಿ, ಕಾಳಿಕಾಮಾತಾ, ಬೇಲೂರು ಶಿಲಾಬಾಲಿಕಾ, ಚಾಮುಂಡೇಶ್ವರಿ ತರಹದ ದೇವತೆಗಳ ವೇಷವನ್ನು ವಿದ್ಯಾರ್ಥಿಗಳಿಗೆ ಹಾಕಿಸಲು ವಿಪರೀತ ಬಣ್ಣ ಹಚ್ಚಿ ಸಾವಿರಾರು ರೂಪಾಯಿ ಖರ್ಚು ಮಾಡುತ್ತಿದ್ದಾರೆ. ಚಂದ್ರಯಾನದ ಮಾದರಿಯನ್ನು ತಯಾರಿಸಿ ಅದನ್ನು ವಿದ್ಯಾರ್ಥಿಗೆ ತೊಡಿಸಿ ಅದೂ ಸಹ ಛದ್ಮವೇಷವೆಂದು ಬಿಂಬಿಸುತ್ತಿದ್ದಾರೆ. ಇನ್ನು ಕೆಲವು ಕಡೆ ವೇಷ ಹಾಕಿ ವೇದಿಕೆ ಏರಿದ ವಿದ್ಯಾರ್ಥಿಗಳು ಏಕಪಾತ್ರ ಅಭಿನಯದ ರೀತಿಯಲ್ಲಿ ಸಂಭಾಷಣೆ ಹೇಳುವಂತೆ ಪ್ರೇರೇಪಿಸುತ್ತಿರುವುದು ಈಗಲೂ ನಿಂತಿಲ್ಲ.
ಇನ್ನೂ ಬೇಸರದ ಸಂಗತಿ ಎಂದರೆ ಕೆಲವು ಕಡೆ ವಿದ್ಯಾರ್ಥಿಗಳಿಗೆ ವಿತರಿಸಿರುವ ಪ್ರಶಸ್ತಿ ಪತ್ರಗಳಲ್ಲಿ ವಿದ್ಯಾರ್ಥಿಗಳ ಹೆಸರಾಗಲಿ ಶಾಲೆಯ ಹೆಸರನ್ನಾಗಲಿ ತಪ್ಪಿಲ್ಲದೆ ಬರೆಯಲು ಶಿಕ್ಷಕರಿಗೆ ಸಾಧ್ಯವಾಗಿಲ್ಲ. ಇದು ನಮ್ಮ ಶಿಕ್ಷಕರ ಗುಣಮಟ್ಟಕ್ಕೆ ಹಿಡಿದ ಕೈಗನ್ನಡಿ. ಒಂದು ಬಾರಿ ತೀರ್ಪುಗಾರರಾಗಿ ಗುರುತಿಸಿಕೊಳ್ಳುವ ಶಿಕ್ಷಕರು ಅದನ್ನೇ ರೂಢಿಸಿಕೊಂಡು ಪ್ರತಿಭಾ ಕಾರಂಜಿ ಮಾತ್ರವಲ್ಲದೆ ಅದೇ ಬಗೆಯ ಹತ್ತು ಹಲವು ಸ್ಪರ್ಧೆಗಳಲ್ಲಿ ತೀರ್ಪುಗಾರರ ವೇಷಧರಿಸಿ ಒಒಡಿ ಪಡೆದು ಶಾಲೆಯ ಶೈಕ್ಷಣಿಕ ಚಟುವಟಿಕೆಗಳಿಂದ ದೂರ ಉಳಿಯುತ್ತಿರುವುದು ದುರದೃಷ್ಟಕರ.
ಶಿಕ್ಷಣ ಇಲಾಖೆಯು ಪ್ರತಿಭಾ ಕಾರಂಜಿ ಕಾರ್ಯಕ್ರಮದ ರೂಪುರೇಷೆ ಹಾಗೂ ಸ್ಪರ್ಧೆಗಳನ್ನು ನಡೆಸುವ ಕುರಿತು ಸೂಕ್ತ ನಿರ್ದೇಶನವುಳ್ಳ ಸುತ್ತೋಲೆಯನ್ನು ಈಗಾಗಲೇ ಹೊರಡಿಸಿದ್ದರೂ ಶಿಕ್ಷಕರು ಅದನ್ನು ಗಾಳಿಗೆ ತೂರಿ ಮನಸೋ ಇಚ್ಛೆ ಸ್ಪರ್ಧೆಗಳನ್ನು ಸಂಘಟಿಸುತ್ತಿರುವುದು ಕಂಡುಬರುತ್ತಿದೆ.
ಸ್ಥಳೀಯ ಶಾಸಕರ ಜನಪ್ರತಿನಿಧಿಗಳ ಸಮಯಕ್ಕೆ ತಕ್ಕಂತೆ ಸ್ಪರ್ಧೆಗಳನ್ನು ನಡೆಸುವ ದಿನಾಂಕ ಹೊಂದಿಸಿಕೊಳ್ಳಲು ಶಿಕ್ಷಣ ಇಲಾಖೆಯ ಅಧಿಕಾರಿಗಳು ಹೆಣಗಾಡುತ್ತಿದ್ದು ರಾಜ್ಯಮಟ್ಟದ ವರೆಗಿನ ಸ್ಪರ್ಧೆಗಳನ್ನು ನಡೆಸುವಷ್ಟರಲ್ಲಿ ವಿದ್ಯಾರ್ಥಿಗಳಿಗೆ ಪರೀಕ್ಷೆಗಳೇ ಸಮೀಪಿಸಿರುತ್ತವೆ.
ಪ್ರತಿಭಾ ಕಾರಂಜಿಯನ್ನು ವಿದ್ಯಾರ್ಥಿಗಳು ಸಂಭ್ರಮಿಸುವ ರೀತಿಯಲ್ಲಿ ಸಂಘಟಿಸಬೇಕು. ಸ್ಪರ್ಧೆಯಲ್ಲಿ ಭಾಗವಹಿಸುವ ಎಲ್ಲ ವಿದ್ಯಾರ್ಥಿಗಳಿಗೂ ಪ್ರಮಾಣ ಪತ್ರ ನೀಡುವ ಮೂಲಕ ಪ್ರೋತ್ಸಾಹಿಸಬೇಕು. ಶಿಕ್ಷಕರ ಸಂಘದ ಪದಾಧಿಕಾರಿಗಳು ವಿದ್ಯಾರ್ಥಿಗಳೆದುರು ತಮ್ಮನ್ನು ತಾವು ಸನ್ಮಾನಿಸಿಕೊಳ್ಳುವುದು ಹಾಗೂ ಶಾಸಕರ ಸನ್ಮಾನಕ್ಕೆ ಮುಗಿಬಿದ್ದು ಕಾರ್ಯಕ್ರಮವನ್ನು ತಡವಾಗಿ ಆರಂಭಿಸಿ ವಿದ್ಯಾರ್ಥಿಗಳಲ್ಲಿ ನಿರಾಸಕ್ತಿ ಉಂಟು ಮಾಡುವುದನ್ನು ನಿಯಂತ್ರಿಸಬೇಕು. ಪ್ರತಿಭಾವಂತ ಶಿಕ್ಷಕರನ್ನು ಗುರುತಿಸಿ ತೀರ್ಪುಗಾರರಾಗಲು ಎಲ್ಲರಿಗೂ ಒಂದೊಂದು ಅವಕಾಶ ನೀಡಬೇಕು. ಸೂಕ್ತ ಪ್ರಾತ್ಯಕ್ಷಿಕೆ ಅಥವಾ ಸಾಕ್ಷ್ಯ ಚಿತ್ರಗಳ ಮೂಲಕ ಎಲ್ಲ ಶಾಲೆಗಳ ಶಿಕ್ಷಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಸ್ಪರ್ಧೆಗಳ ಬಗ್ಗೆ ಅರಿವು ಮೂಡಿಸುವ ಅಗತ್ಯವಿದೆ. ಹತ್ತರಲ್ಲಿ ಹನ್ನೊಂದು ಅನ್ನುವ ಹಾಗೆ ಅಧಿಕಾರಿಗಳು ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ನಿರ್ಲಕ್ಷ್ಯದಿಂದ ನೋಡುವ ಮನೋಭಾವವನ್ನು ದೂರ ಮಾಡಬೇಕು.
ಈ ಅಂಶಗಳ ಹಿನ್ನೆಲೆಯಲ್ಲಿ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಕಟ್ಟುನಿಟ್ಟಾದ ನಿರ್ದೇಶನಗಳೊಂದಿಗೆ ಮರುರೂಪಿಸಬೇಕಾದ ಅಗತ್ಯವಿದೆ.