ಶಿಕ್ಷಕರ ವರ್ಗಾವಣೆಗೆ ವಿರೋಧ: ಕೋಡಿಬೆಂಗ್ರೆ ಶಾಲೆಗೆ ಬೀಗ ಜಡಿದು ಪ್ರತಿಭಟನೆ
ತಳ್ಳಾಟದಲ್ಲಿ ಆರು ವಿದ್ಯಾರ್ಥಿಗಳಿಗೆ ಗಾಯ: ಪೋಷಕರ ಆರೋಪ
ಉಡುಪಿ, ಜೂ.19: ಕೋಡಿಬೆಂಗ್ರೆ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರ ವರ್ಗಾವಣೆ ವಿರೋಧಿಸಿ ಹಾಗೂ ಹೆಚ್ಚುವರಿ ಶಿಕ್ಷಕರ ನೇಮಕ ಮಾಡುವಂತೆ ಆಗ್ರಹಿಸಿ ಗ್ರಾಮಸ್ಥರು ವಿದ್ಯಾರ್ಥಿಗಳೊಂದಿಗೆ ಸೇರಿ ಇಂದು ಶಾಲೆಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು. ಈ ವೇಳೆ ನಡೆದ ತಳ್ಳಾಟದಲ್ಲಿ ಶಾಲೆಯ ಆರು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆಂದು ಪೋಷಕರು ಆರೋಪಿಸಿದ್ದಾರೆ.
98 ವರ್ಷಗಳ ಇತಿಹಾಸ ಹೊಂದಿರುವ ಬ್ರಹ್ಮಾವರ ವಲಯಕ್ಕೆ ಸಂಬಂಧಪಟ್ಟ ಕೋಡಿಬೆಂಗ್ರೆ ಶಾಲೆಯಲ್ಲಿ ಒಂದನೇ ತರಗತಿಯಿಂದ ಏಳನೇ ತರಗತಿಯವರೆಗೆ ಒಟ್ಟು 58 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಈ ಶಾಲೆಯಲ್ಲಿನ ಮೂರು ಶಿಕ್ಷಕರ ಪೈಕಿ ಓರ್ವ ಶಿಕ್ಷಕನನ್ನು ಹೆಚ್ಚುವರಿ ಶಿಕ್ಷಕರ ನೆಪವೊಡ್ಡಿ ವರ್ಗಾವಣೆ ಮಾಡಲು ಶಿಕ್ಷಣ ಇಲಾಖೆ ಮುಂದಾಗಿದೆ. ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಗ್ರಾಮಸ್ಥರು, ಶಾಲೆಯ ಮುಂದೆ ಜಮಾಯಿಸಿದ ಗ್ರಾಮಸ್ಥರು, ಪೋಷಕರು ವಿದ್ಯಾರ್ಥಿಗಳೊಂದಿಗೆ ಪ್ರತಿಭಟನೆ ನಡೆಸಿ, ಶಾಲೆಗೆ ಬೀಗ ಜಡಿದರು.
‘ಶಾಲೆ ಮುಚ್ಚುವ ಅಂಚಿನಲ್ಲಿರುವ ಸಮಯ ಗ್ರಾಮಸ್ಥರು ತಮ್ಮ ಮಕ್ಕಳನ್ನು ಆಂಗ್ಲ ಮಾಧ್ಯಮದಿಂದ ಬಿಡಿಸಿ ಈ ಶಾಲೆಗೆ ಸೇರ್ಪಡೆ ಮಾಡಿದ್ದರಿಂದ ಈ ಶಾಲೆಯ ಮಕ್ಕಳ ಸಂಖ್ಯೆ 72ಕ್ಕೆ ಏರಿತ್ತು. ನಂತರ ಇಲ್ಲಿದ್ದ ನಾಲ್ಕು ಖಾಯಂ ಶಿಕ್ಷಕರಲ್ಲಿ ಒಬ್ಬ ಶಿಕ್ಷಕನನ್ನು ಬೇರೆ ಶಾಲೆಗೆ ವರ್ಗಾವಣೆ ಮಾಡಲಾಯಿತು. ಅವರ ಬದಲಿಗೆ ಇನ್ನೂ ಕೂಡ ಯಾವುದೇ ಶಿಕ್ಷಕರು ಈ ಶಾಲೆಗೆ ನೇಮಿಸಿಲ್ಲ ಎಂದು ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ರವೀಂದ್ರ ಶ್ರೀಯಾನ್ ಆರೋಪಿಸಿದರು.
ಇದೀಗ ಮತ್ತೆ ಒಬ್ಬರು ಶಿಕ್ಷಕರನ್ನು ವರ್ಗಾವಣೆ ಮಾಡುವುದರಿಂದ ಶಾಲೆಯ ಶೈಕ್ಷಣಿಕ ಸ್ಥಿತಿ ಮತ್ತಷ್ಟು ಕೆಳಗಿಳಿಯುತ್ತದೆ. ಇಂತಹ ಕಾನೂನುಗಳಿಂದ ಸರಕಾರಿ ಶಾಲೆ ಮುಚ್ಚುವಂತಾಗುತ್ತದೆ ಹೊರತು ಅಭಿವೃದ್ಧಿಯಾಗುವುದಿಲ್ಲ. ಈಗ ಕೋಡಿಬೆಂಗ್ರೆ ಹಾಗೂ ಪಡುತೋನ್ಸೆ ಬೆಂಗ್ರೆಯ ಎರಡೂ ಗ್ರಾಮಕ್ಕೂ ಇದೊಂದೇ ಶಾಲೆ ಉಳಿದಿರುವುದು. ಆದುದರಿಂದ ಈ ಶಾಲೆಗೆ ಕೂಡಲೇ ಒಟ್ಟು ನಾಲ್ವರು ಖಾಯಂ ಹಾಗೂ ಇಬ್ಬರು ಅತಿಥಿ ಶಿಕ್ಷಕರನ್ನು ನೇಮಕ ಮಾಡಬೇಕು ಎಂದು ಅವರು ಆಗ್ರಹಿಸಿದರು.
ತಳ್ಳಾಟದಲ್ಲಿ 6 ಮಕ್ಕಳಿಗೆ ಗಾಯ: ಆರೋಪ
ಸ್ಥಳಕ್ಕೆ ಆಗಮಿಸಿದ ಬ್ರಹ್ಮಾವರ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಪ್ರತಿಭಟನಕಾರರೊಂದಿಗೆ ಮಾತುಕತೆ ನಡೆಸಿ, ಮೂವರು ಖಾಯಂ ಹಾಗೂ ಓರ್ವ ಅತಿಥಿ ಶಿಕ್ಷಕರನ್ನು ಒದಗಿಸುವ ಭರವಸೆ ನೀಡಿದರು. ಆದರೆ ಇದಕ್ಕೆ ಒಪ್ಪದ ಪ್ರತಿಭಟನಕಾರರು, ನಾಲ್ಕು ಖಾಯಂ ಹಾಗೂ ಇಬ್ಬರು ಅತಿಥಿ ಶಿಕ್ಷಕರನ್ನು ಒದಗಿಸುವಂತೆ ಪಟ್ಟು ಹಿಡಿದರು. ಈ ವೇಳೆ ಶಿಕ್ಷಣಾಧಿಕಾರಿಗೆ ಮನವಿ ಮಾಡಲು ಶಾಲಾ ಕಚೇರಿಯೊಳಗೆ ತೆರಳಿದ ಮಕ್ಕಳು ತಳ್ಳಾಟದಲ್ಲಿ ಗಾಯಗೊಂಡರು ಎಂದು ಪೋಷಕರು ದೂರಿದ್ದಾರೆ.
‘ಶಾಲೆಯನ್ನು ಉಳಿಸುವುದಕ್ಕಾಗಿ ಮಕ್ಕಳು ಹಾಗೂ ಗ್ರಾಮಸ್ಥರು ಹೋರಾಟ ಮಾಡುತ್ತಿದ್ದೇವೆ. ಶಾಲೆಗೆ ಆಗಮಿಸಿದ ಶಿಕ್ಷಣಾಧಿಕಾರಿ ಜೊತೆ ನ್ಯಾಯ ಒದಗಿಸಿ ಕೊಡುವಂತೆ ಬಿಸಿಲಿನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಮಕ್ಕಳು ಕಚೇರಿಗೆ ತೆರಳಿ ಮನವಿ ಮಾಡಲು ಮುಂದಾದರು. ಆಗ ಪೊಲೀಸರು ನಮ್ಮ ಮಕ್ಕಳನ್ನು ತಡೆದರು. ಈ ವೇಳೆ ನಡೆದ ತಳ್ಳಾಟದಲ್ಲಿ ಆರು ಮಂದಿ ಮಕ್ಕಳು ಗಾಯಗೊಂಡರು. ಕೆಲವು ಮಕ್ಕಳಿಗೆ ಎದೆನೋವು ಕಾಣಿಸಿಕೊಂಡರೆ, ಕೆಲವು ಮಕ್ಕಳಿಗೆ ಕೈಕಾಲು ನೋವು ಇತ್ತು. ಅದಕ್ಕಾಗಿ ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆ ಕೊಡಿಸಿದ್ದೇವೆ’ ಎಂದು ಪೋಷಕರಾದ ಆಶಾ ಅವರು ತಿಳಿಸಿದ್ದಾರೆ.
"ಈ ಸರಕಾರಿ ಶಾಲೆಯನ್ನು ನೇರವಾಗಿ ಮುಚ್ಚದೆ ಹಿಂಬಾಗಿಲಿನಿಂದ ಮುಚ್ಚಲು ಹುನ್ನಾರ ನಡೆಸುತ್ತಿದೆ. ಶಿಕ್ಷಣಾಧಿಕಾರಿಗಳಿಗೆ, ಉದ್ಯಮಿಗಳಿಗೆ, ರಾಜಕಾರಣಿಗಳಿಗೆ ಶಿಕ್ಷಣದ ಬಗ್ಗೆ ಆಸಕ್ತಿ ಇದ್ದರೆ ಸರಕಾರಿ ಶಾಲೆಯನ್ನು ದತ್ತು ಪಡೆದು ಅಭಿವೃದ್ಧಿ ಪಡಿಸುವ ಕೆಲಸ ಮಾಡಬೇಕು. ಸರಕಾರಿ ಶಾಲೆಗೆ ಶಿಕ್ಷಕರನ್ನು ಕೊಡದ ಪರಿಣಾಮ ಮಕ್ಕಳ ಶಿಕ್ಷಣಕ್ಕೆ ಸಮಸ್ಯೆಯಾಗುತ್ತಿದೆ. ಈ ವಿಚಾರದಲ್ಲಿ ನಮಗೆ ನ್ಯಾಯ ದೊರಕಿಸಿಕೊಡಬೇಕು. ಬಡ ಕೂಲಿ ಕಾರ್ಮಿಕರ ಮಕ್ಕಳು, ಮೀನುಗಾರರ ಮಕ್ಕಳು ಶಿಕ್ಷಣ ವಂಚಿತರಾಗುವುದನ್ನು ತಡೆಯಬೇಕು".
-ರಮೇಶ್ ತಿಂಗಳಾಯ, ಹಳೆ ವಿದ್ಯಾರ್ಥಿ
"ಶಿಕ್ಷಕರ ಕೊರತೆಯಿಂದ ಈ ಬಾರಿ ಮತ್ತೆ ಒಂಭತ್ತು ಮಕ್ಕಳು ಟಿಸಿ ತೆಗೆದುಕೊಂಡು ಬೇರೆ ಶಾಲೆಗೆ ಹೋಗಿದ್ದಾರೆ. ಇದರಿಂದ ವರ್ಷದಿಂದ ವರ್ಷಕ್ಕೆ ಮಕ್ಕಳ ಸಂಖ್ಯೆ ಕಡಿಮೆ ಆಗುತ್ತಿದೆ. ಇವರ ವರ್ಗಾವಣೆ ನೀತಿಯೇ ಸರಿ ಇಲ್ಲ. ಒಂದು ಕಡೆ ಸರಕಾರಿ ಶಾಲೆ ಉಳಿಸಿ ಎಂದು ಹೇಳುವ ಸರಕಾರ, ಇನ್ನೊಂದು ಕಡೆ ಶಿಕ್ಷಕರ ಸಂಖ್ಯೆ ಕಡಿಮೆ ಮಾಡಿ ಮಕ್ಕಳು ಬಾರದಂತೆ ಮಾಡುತ್ತಿದೆ. ಶಿಕ್ಷಕರು ಇಲ್ಲದೆ ಸರಕಾರಿ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಹೇಗೆ ಹೆಚ್ಚಳ ಆಗುವುದು. ನಮಗೆ ಮೊದಲು ಶಿಕ್ಷಕರನ್ನು ಕೊಟ್ಟು ಈಗ ಇರುವವರನ್ನು ವರ್ಗಾವಣೆ ಮಾಡಲಿ"
-ರವೀಂದ್ರ ಶ್ರೀಯಾನ್, ಅಧ್ಯಕ್ಷರು, ಎಸ್‌ಡಿಎಂಸಿ