ದುಬೈ | ಖ್ಯಾತ ಭಾರತೀಯ ವಕೀಲ ಸುನೀಲ್ ಅಂಬಾಳವೆಲಿಲ್ ಅವರಿಗೆ ‘ಯುಎಇಯಲ್ಲಿನ ಅತ್ಯುತ್ತಮ ವಕೀಲ’ ಪ್ರಶಸ್ತಿಯ ಗರಿ

ದುಬೈ: ಫೆಬ್ರವರಿ 9ರಂದು ದುಬೈನ ಎತಿಸಲಾತ್ ಅಕಾಡೆಮಿಯಲ್ಲಿ ಆಯೋಜನೆಗೊಂಡಿದ್ದ ಅದ್ದೂರಿ ಬ್ಯಾರಿ ಮೇಳ ಸಮಾರಂಭದಲ್ಲಿ ಖ್ಯಾತ ಭಾರತೀಯ ವಕೀಲ ಸುನೀಲ್ ಅಂಬಾಳವೆಲಿಲ್ ಅವರಿಗೆ ಯುಎಇಯ ಬ್ಯಾರಿ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿ ವತಿಯಿಂದ ‘ಯುಎಯಲ್ಲಿನ ಅತ್ಯುತ್ತಮ ವಕೀಲ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಭಾರತೀಯ ವಲಸಿಗ ಸಮುದಾಯಕ್ಕೆ ನೀಡಿರುವ ಅತ್ಯುತ್ತಮ ಕೊಡುಗೆಯನ್ನು ಪರಿಗಣಿಸಿ ಅವರಿಗೆ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.
ಸುನೀಲ್ ಅಂಬಾಳವೆಲಿಲ್ ಮುಂಚೂಣಿ ಕಾರ್ಪೊರೇಟ್ ಮತ್ತು ವಾಣಿಜ್ಯ ವಕೀಲರಾಗಿದ್ದು, ದುಬೈನಲ್ಲಿನ ಎನ್ವೈಕೆ ಲಾ ಫರ್ಮ್ ನ ಸಂಸ್ಥಾಪಕ ಪಾಲುದಾರರಾಗಿದ್ದಾರೆ. ಎರಡು ದಶಕಗಳ ಅನುಭವ ಹೊಂದಿರುವ ಅವರು, ವಾಣಿಜ್ಯ ವ್ಯವಹಾರಗಳು, ವಾಣಿಜ್ಯ ವ್ಯವಹಾರಗಳ ಕಾನೂನು, ಕಂಪನಿಗಳ ಕಾನೂನು, ದುಬೈ ರಿಯಲ್ ಎಸ್ಟೇಟ್ ಕಾನೂನು ಹಾಗೂ ಉಭಯ ದೇಶಗಳ ನಡುವಿನ ಸ್ವಾಧೀನತೆ ಮತ್ತು ಯುಎಇ ಕಾರ್ಮಿಕ ಕಾನೂನು ಸೇರಿದಂತೆ ಯುಎಇ ಕಾನೂನುಗಳಲ್ಲಿ ಪರಿಣತರಾಗಿದ್ದಾರೆ.
ಸುನೀಲ್ ಅಂಬಾಳವೆಲಿಲ್ ದುಬೈ ಸರಕಾರದ ಕಾನೂನು ವ್ಯವಹಾರಗಳ ಇಲಾಖೆ, ದುಬೈ ಅಂತಾರಾಷ್ಟ್ರೀಯ ಹಣಕಾಸು ಕೇಂದ್ರ ನ್ಯಾಯಾಲಯಗಳಲ್ಲಿ ನೋಂದಾಯಿತ ವಕೀಲರಾಗಿದ್ದು, ಕರ್ನಾಟಕ ಬಾರ್ ಕೌನ್ಸಿಲ್ ಹಾಗೂ ಭಾರತೀಯ ಸುಪ್ರೀಂ ಕೋರ್ಟ್ ಬಾರ್ ಕೌನ್ಸಿಲ್ ಗಳೆರಡಲ್ಲೂ ಸದಸ್ಯರಾಗಿದ್ದಾರೆ.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, “ಯುಎಇಯ ಬ್ಯಾರಿ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿಯ ‘ಯುಎಇಯಲ್ಲಿನ ಅತ್ಯುತ್ತಮ ವಕೀಲ’ ಪ್ರಶಸ್ತಿ ಸ್ವೀಕರಿಸಲು ತುಂಬಾ ಸಂತಸವಾಗುತ್ತಿದೆ. ದುಬೈನಲ್ಲಿನ ನನ್ನ ಪಯಣವು ಎರಡು ದಶಕಗಳ ಹಿಂದೆ ಪ್ರಾರಂಭಗೊಂಡಿತು. ದುಬೈ ನಗರವು ಜಾಗತಿಕ ಕಾನೂನು ಮತ್ತು ಔದ್ಯಮಿಕ ತಾಣವಾಗಿ ರೂಪಾಂತರಗೊಂಡಿರುವುದಕ್ಕೆ ಸಾಕ್ಷಿಯಾಗಿರುವುದು ಅದ್ಭುತ ಅನುಭವವಾಗಿದೆ. ಯುಎಇಯಲ್ಲಿನ ಭಾರತೀಯ ವಲಸಿಗ ಸಮುದಾಯ ಹಾಗೂ ವ್ಯವಹಾರಗಳಿಗೆ ಉತ್ಕೃಷ್ಟತೆ ಮತ್ತು ಸಮಗ್ರತೆಯೊಂದಿಗೆ ಸೇವೆ ಸಲ್ಲಿಸುವ ನನ್ನ ಬದ್ಧತೆಯನ್ನು ಈ ಗೌರವವು ಮರುದೃಢೀಕರಿಸಿದೆ” ಎಂದು ಕೃತಜ್ಞತೆ ಸಲ್ಲಿಸಿದರು.
ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕರ್ನಾಟಕ ರಾಜ್ಯ ವಿಧಾನಸಭೆಯ ಸ್ಪೀಕರ್ ಯು.ಟಿ.ಖಾದರ್, ಕರ್ನಾಟಕ ರಾಜ್ಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಶಾಸಕ ಎನ್.ಎ.ಹ್ಯಾರಿಸ್, ಕರ್ನಾಟಕ ಸರಕಾರದ ಅನಿವಾಸಿ ಭಾರತೀಯ ವೇದಿಕೆಯ ಉಪಾಧ್ಯಕ್ಷೆ ಆರತಿ ಕೃಷ್ಣ, ಪ್ರಖ್ಯಾತ ದಾನಿ ಡಾ. ರೊನಾಲ್ಡೊ ಕೊಲಾಸೊ, ಯುಎಇಯಲ್ಲಿನ ತುಂಬೆ ಸಮೂಹದ ಸಂಸ್ಥಾಪಕ ಮತ್ತು ಅಧ್ಯಕ್ಷ ಡಾ. ತುಂಬೆ ಮೊಯಿದೀನ್, ಬಿಸಿಸಿಐ ಯು ಎ ಇ ಘಟಕದ ಅಧ್ಯಕ್ಷ ಹಿದಾಯತ್ ಅಡ್ಡೂರು ಉಪಸ್ಥಿತರಿದ್ದರು.