ಚುನಾವಣೆ ಹಿನ್ನೆಲೆ: ಕೇದಾರನಾಥಕ್ಕೆ ರಾಹುಲ್ ಭೇಟಿ
Photo: twitter.com/ANI
ಹೊಸದಿಲ್ಲಿ: ಛತ್ತೀಸ್ ಗಢದಲ್ಲಿ ವಿವಾದಾತ್ಮಕ ಬೆಟ್ಟಿಂಗ್ ಆ್ಯಪ್ "ಮಹಾದೇವ್" ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್ ಪಕ್ಷದ ಮೇಲೆ ವಾಗ್ದಾಳಿ ಮಾಡಿದ ಬೆನ್ನಲ್ಲೇ ಐದು ರಾಜ್ಯಗಳ ವಿಧಾನಸಭಾ ಚುನಾವಣೆಯ ಒತ್ತಡದ ನಡುವೆಯೂ ರಾಹುಲ್ ಗಾಂಧಿ ಕೇದಾರನಾಥಕ್ಕೆ ಭೇಟಿ ನೀಡಿದರು.
ಐದು ದಿನಗಳ ಹಿಂದೆ ಉತ್ತರಾಖಂಡ ಕಾಂಗ್ರೆಸ್ ಮುಖ್ಯಸ್ಥ ಗಣೇಶ್ ಗೋಡಿಯಾಲ್ ಅವನ್ನು ಸಂಪರ್ಕಿಸಿದ ಪಕ್ಷದ ಮುಖಂಡರು, ರಾಹುಲ್ ಗಾಂಧಿ ಭೇಟಿ ಯೋಜನೆಯ ಬಗ್ಗೆ ಮಾಹಿತಿ ನೀಡಿದರು. ಆ ಬಳಿಕ ಇತರ ಸಹವರ್ತಿಗಳಿಗೆ ಮಾಹಿತಿ ನೀಡಿ ರಾಹುಲ್ ಗಾಂಧಿಯ ತೀರ್ಥಯಾತ್ರೆಗೆ ಅಗತ್ಯ ವ್ಯವಸ್ಥೆ ಮಾಡಲಾಯಿತು ಎಂದು ಮೂಲಗಳು ಹೇಳಿವೆ.
ರಾಹುಲ್ ಗಾಂಧಿಯವರು ಈ ಹಿಂದೆಯೂ ಕೇದಾರನಾಥ, ಖೀರಭವನಾನಿ, ಕೈಲಾಶ ಮಾನಸ ಸರೋವರದಂಥ ಧಾರ್ಮಿಕ ಮಂದಿರಗಳಿಗೆ ಭೇಟಿ ನೀಡಿದ್ದರೂ, ಅಕ್ಟೋಬರ್ ನಲ್ಲಿ ಸ್ವರ್ಣಮಂದಿರದಲ್ಲಿ ಎರಡು ದಿನಗಳ ವಾಸ್ತವ್ಯ ಮಾಡಿದ ಮಾದರಿಯಲ್ಲಿ ಇಲ್ಲೂ ತಂಗುತ್ತಾರೆ ಎಂದು ನಿರೀಕ್ಷಿಸಲಾಗಿದೆ. ಮೂರು ದಿನಗಳ ಕಾಲ ಕೇದಾರನಾಥದಲ್ಲಿ ತಂಗುವ ಅವರು, ಅಮೃತಸರ ಗುರುದ್ವಾರದಲ್ಲಿ ಸೇವೆ ಮಾಡಿದಂತೆ ಇಲ್ಲಿ ಭಕ್ತಾದಿಗಳಿಗೆ ಉತ್ಸವದ ಸವಿಯೂಟ ನೀಡಲಿದ್ದಾರೆ.
ಗಾಂಧಿ ಕುಟುಂಬದ ಈ ಭೇಟಿಯನ್ನು ಪಕ್ಷದ ಕಾರ್ಯಕರ್ತರು ಮತ್ತು ರಾಜಕೀಯೇತರ ಆಧ್ಯಾತ್ಮಿಕ ಯಾತ್ರೆ ಎಂದು ಬಣ್ಣಿಸಿದ್ದರೂ, ಇದನ್ನು ರಾಜಕೀಯ ದುರ್ಬೀನಿನಿಂದಲೇ ನೋಡಲಾಗುತ್ತಿದೆ. ಸ್ವರ್ಣಮಂದಿರ ವಾಸ್ತವ್ಯವನ್ನು ಸಿಕ್ಖರನ್ನು ತಲುಪುವ ಪ್ರಯತ್ನ ಎಂದು ಬಿಂಬಿಸಲಾಗಿತ್ತು.