ಅತಂತ್ರ ವಿಧಾನಸಭೆ ನಿರೀಕ್ಷೆ: ಬಂಡಾಯ, ಪಕ್ಷೇತರರ ಜತೆ ಉಭಯ ಕೂಟಗಳ 'ಹಾಟ್ ಲೈನ್' ಸಂಪರ್ಕ!
PC: PTI
ನಾಗ್ಪುರ: ಅತಂತ್ರ ವಿಧಾನಸಭೆ ಸೃಷ್ಟಿಯಾಗುವ ಮುನ್ಸೂಚನೆ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ಮತಗಳ ಎಣಿಕೆ ಆರಂಭಕ್ಕೆ ಮುನ್ನವೇ ಎಲ್ಲ ರಾಜಕೀಯ ಪಕ್ಷಗಳಲ್ಲಿ ಬಿರುಸಿನ ಚಟುವಟಿಕೆಗಳು ನಡೆಯುತ್ತಿವೆ. ಎಲ್ಲ ಪಂಚತಾರಾ ಹೋಟೆಲ್ ಗಳು ಬುಕ್ ಆಗಿದ್ದು, ಪ್ರವಾಸದ ವೇಳಾಪಟ್ಟಿಗಳನ್ನು ಸಿದ್ಧಪಡಿಸಿಟ್ಟುಕೊಳ್ಳಲಾಗಿದೆ. ಕುದುರೆ ವ್ಯಾಪಾರ ತಡೆಯಲು ಶಾಸಕರನ್ನು ಕರೆದೊಯ್ಯುವ ಸಂಬಂಧ ವಿಮಾನಗಳು ಸಜ್ಜಾಗಿವೆ. ಚುನಾವಣೋತ್ತರ ಮೈತ್ರಿ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ.
ಮಹಾವಿಕಾಸ ಅಘಾಡಿ ಮತ್ತು ಮಹಾಯುತಿ ಕೂಟಗಳೆರಡೂ ಸಮರ ಸಿದ್ಧತೆಯಲ್ಲಿವೆ. ಯಾವುದೇ ಮೈತ್ರಿಕೂಟಗಳು ಬಹುಮತ ಪಡೆಯದೇ ಇದ್ದಲ್ಲಿ, ಪ್ರತಿ ಪಕ್ಷೇತರರ ಸಹಕಾರ ಪ್ರಮುಖವಾಗುತ್ತದೆ ಹಾಗೂ ಪ್ರಮುಖ ಪಕ್ಷಗಳು ಚುನಾವಣಾ ಪೂರ್ವ ಮೈತ್ರಿಯಿಂದ ಹೊರಬಂದು ಸರ್ಕಾರ ರಚನೆಗೆ ವಿರೋಧಿ ಬಣವನ್ನು ಸೇರುವ ಸಾಧ್ಯತೆಯೂ ಕಾಣಿಸುತ್ತಿದೆ.
ಎರಡು ದೊಡ್ಡ ಪಕ್ಷಗಳು ತಮ್ಮ ಶಾಸಕರನ್ನು ಒಂದೆಡೆ ಹಿಡಿದಿಡಲು ಮುಂಬೈನ ಎರಡು ಪಂಚತಾರಾ ಹೋಟೆಲ್ ಗಳನ್ನು ಕಾಯ್ದಿರಿಸಿವೆ ಎಂದು ಮೂಲಗಳು ಹೇಳಿವೆ. ಉಭಯ ಹೋಟೆಲ್ ಗಳು ಅಂತರಾಷ್ಟ್ರೀಯ ಆತಿಥ್ಯ ಸರಣಿಗೆ ಸಂಬಂಧಿಸಿದ್ದಾಗಿದ್ದು, ಒಂದು ಕಲಿನಾದಲ್ಲಿ ಹಾಗೂ ಇನ್ನೊಂದು ಬಂದ್ರಾ-ಕುರ್ಲಾ ಕಾಂಪ್ಲೆಕ್ಸ್ ನಲ್ಲಿವೆ.
ವಿಜೇತ ಅಭ್ಯರ್ಥಿಗಳು ತಮ್ಮ ಗೆಲುವಿನ ಪ್ರಮಾಣಪತ್ರವನ್ನು ಪಡೆದುಕೊಂಡು ತಕ್ಷಣವೇ ಮುಂಬೈಗೆ ಆಗಮಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಅತಂತ್ರ ವಿಧಾನಸಭೆ ನಿರ್ಮಾಣವಾದಲ್ಲಿ ಚಾರ್ಟರ್ಡ್ ವಿಮಾನಗಳು ಶನಿವಾರ ಸಂಜೆ ಅಥವಾ ಭಾನುವಾರ ಬೆಳಿಗ್ಗೆ ಬಂದಿಳಿಯಲಿವೆ. ರೆಸಾರ್ಟ್ ರಾಜಕೀಯ ಮುಂಬೈನಲ್ಲಿ ಭಾನುವಾರದಿಂದ ಆರಂಭವಾಗುವ ಎಲ್ಲ ಲಕ್ಷಣಗಳೂ ಇವೆ.
"ನಾವು ಬಹುಮತ ಪಡೆಯುವ ವಿಶ್ವಾಸವಿದೆ. ಎಂವಿಎ ಕೂಡಾ ಅದೇ ವಿಶ್ವಾಸದಲ್ಲಿದೆ. ಯಾವುದೇ ದೊಡ್ಡ ಪಕ್ಷಗಳು, ಅದರಲ್ಲೂ ಮುಖ್ಯವಾಗಿ ರಾಷ್ಟ್ರೀಯ ಪಕ್ಷಗಳು ಚುನಾವಣೆಯಲ್ಲಿ ಸೋಲಲು ಸ್ಪರ್ಧಿಸುವುದಿಲ್ಲ. ಆದರೆ ಫಲಿತಾಂಶ ನಮ್ಮ ನಿರೀಕ್ಷೆಗೆ ಅನುಸಾರವಾಗಿರುವುದಿಲ್ಲ. ಆಗ ನಾವು ಸಂಖ್ಯೆಯನ್ನು ತಲುಪಲು ಪ್ರಯತ್ನ ನಡೆಸಲೇಬೇಕಾಗುತ್ತದೆ" ಎಂದು ಬಿಜೆಪಿಯ ಮುಖಂಡರೊಬ್ಬರು ಹೇಳುತ್ತಾರೆ. ಗೆಲುವಿನ ನಿರೀಕ್ಷೆಯಲ್ಲಿರುವ 10 ಮಂದಿ ಪಕ್ಷೇತರರ ಜತೆ ಮಹಾಯುಅತಿ ಈಗಾಗಲೇ ಸಂಪರ್ಕದಲ್ಲಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.