ಉತ್ತರ ಕನ್ನಡ ಜಿಲ್ಲೆಯಲ್ಲಿ ಮೀನು ಇಳುವರಿ ಕುಂಠಿತ
ಪ್ರಸಕ್ತ ಸಾಲಿನಲ್ಲಿ 56 ಕೋಟಿ ರೂ. ಕಡಿಮೆ ವಹಿವಾಟು
ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಕಳೆದ ವರ್ಷಕ್ಕಿಂತ ಈ ಬಾರಿ ಸುಮಾರು 15,957 ಮೆಟ್ರಿಕ್ ಟನ್ ಮೀನು ಇಳುವರಿ ಕುಂಠಿತವಾಗಿ ಸುಮಾರು 56 ಕೋಟಿ ರೂ. ವಹಿವಾಟು ಕಡಿಮೆಯಾಗಿದೆ.
ಕಳೆದೆರಡು ತಿಂಗಳಿಂದ ಸರಿಯಾಗಿ ಮೀನುಗಾರಿಕೆ ಆಗದ ಕಾರಣ ಬಹುತೇಕ ಪರ್ಶಿಯನ್ ಬೋಟ್‌ಗಳು ಒಂದೆರಡು ತಿಂಗಳ ಹಿಂದೆಯೇ ಲಂಗರು ಹಾಕಿವೆ. ಅಲ್ಲದೆ ಪ್ರಸಕ್ತ ಕರಾವಳಿಯಲ್ಲಿ ಆಳ ಸಮುದ್ರ ಮೀನುಗಾರಿಕೆಗೆ ಜುಲೈ 31ರವರೆಗೆ ಸಂಪೂರ್ಣ ನಿಷೇಧವಿರುವುದರಿಂದ ಉಳಿದ ಬೋಟ್‌ಗಳೂ ದಡಕ್ಕೆ ಆಗಮಿಸಿ ಲಂಗರು ಹಾಕಿವೆ. ಮೀನುಗಾರಿಕಾ ಇಲಾಖೆಯ ಮಾಹಿತಿ ಪ್ರಕಾರ ಸಮುದ್ರದಲ್ಲಿ ಮತ್ಸ್ಯಕ್ಷಾಮ ಸೃಷ್ಟಿಯಾಗಿದೆ ಎಂದು ಮೀನು ವಹಿವಾಟಿನ ಅಂಕಿ-ಅಂಶದಿಂದ ತಿಳಿದು ಬಂದಿದೆ.
ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ 1,15,082 ಮೆಟ್ರಿಕ್ ಟನ್ ಮೀನು ಉತ್ಪಾದನೆ ಮಾಡಲಾಗಿದ್ದು, 1,004 ಕೋಟಿ ರೂ. ವಹಿವಾಟು ನಡೆದಿದೆ. ಆದರೆ, 2022-23ರರಲ್ಲಿ 1,31,039 ಮೆಟ್ರಿಕ್ ಟನ್ ಮೀನು ಇಳುವರಿ ಪಡೆದು 1,060 ಕೋಟಿ ರೂ. ವಹಿವಾಟು ನಡೆಸಲಾಗಿದ್ದು, ಕಳೆದ ಬಾರಿಗಿಂತ ಸುಮಾರು 15,957 ಮೆಟ್ರಿಕ್ ಟನ್ ಮೀನು ಇಳುವರಿ ಕಡಿಮೆಯಾಗಿದೆ. ಅಲ್ಲದೆ ಇದರಿಂದ ಸುಮಾರು 56 ಕೋಟಿ ರೂ. ವಹಿವಾಟು ಕಡಿಮೆಯಾದಂತಾಗಿದೆ. ಇನ್ನು 2021-22ರಲ್ಲಿ 1,17,266 ಮೆಟ್ರಿಕ್ ಟನ್, 2020-21ರಲ್ಲಿ 1,02,800 ಮೆಟ್ರಿಕ್ ಟನ್ ಮೀನು ಉತ್ಪಾದನೆಯಾಗಿತ್ತು.
ಪ್ರತಿ ವರ್ಷ ಜೂನ್-ಜುಲೈ ತಿಂಗಳ ಮಳೆಗಾಲದ ಪ್ರಾರಂಭದಲ್ಲಿ ಮೀನುಗಳು ಸಂತಾನೋತ್ಪತ್ತಿಯಲ್ಲಿ ತೊಡಗಿಕೊಳ್ಳುವ ಕಾರಣ ಮೀನುಗಾರಿಕೆ ಸ್ಥಗಿತಗೊಳಿಸಲಾಗುತ್ತದೆ. ಕರಾವಳಿಯಾದ್ಯಂತ ಆಳ ಸಮುದ್ರಕ್ಕೆ ತೆರಳುವ ಯಾಂತ್ರೀಕೃತ ಬೋಟ್‌ಗಳು, ಫಿಶಿಂಗ್ ಬೋಟ್‌ಗಳು ಈಗಾಗಲೇ ಲಂಗರು ಹಾಕಿವೆ. ಆದರೆ, 10 ಎಚ್‌ಪಿಗಿಂತ ಕಡಿಮೆ ಸಾಮರ್ಥ್ಯದ ಇಂಜಿನ್ ಬಳಸಿ ಮೀನುಗಾರಿಕೆ ಮಾಡಬಹುದಾಗಿದೆ. ಆದರೂ ಮಳೆ, ಚಂಡಮಾರುತಗಳ ಬಗ್ಗೆ ಜಿಲ್ಲಾಡಳಿತ, ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದಲ್ಲಿ ಅದನ್ನು ಮೀನುಗಾರರು ಪಾಲಿಸಬೇಕಾಗಿದೆ. ಈ ನಿಯಮ ಮೀರಿದ್ದಲ್ಲಿ ಮೀನುಗಾರಿಕೆ ನಿಯಂತ್ರಣ ಕಾಯ್ದೆಯ ಅನ್ವಯ 1 ವರ್ಷದವರೆಗೆ ಕರ ರಹಿತ ಡೀಸೆಲ್ ಪೂರೈಕೆ ತಡೆಹಿಡಿಯುವುದಾಗಿ ಮೀನುಗಾರಿಕೆ ಇಲಾಖೆ ಜಂಟಿ ನಿರ್ದೇಶಕರು ಎಚ್ಚರಿಸಿದ್ದಾರೆ.
ಆರಂಭದಲ್ಲಿ ಮೀನುಗಾರಿಕೆ ಉತ್ತಮ ರೀತಿಯಲ್ಲಿ ನಡೆದಿತ್ತು. ಅದರಲ್ಲಿಯೂ ಪರ್ಶಿಯನ್ ಬೋಟ್‌ನವರು ಉತ್ತಮ ಮೀನುಗಾರಿಕೆ ಮಾಡಿ ಹಣ ಸಂಪಾದನೆ ಮಾಡಿದ್ದರು. ಬಳಿಕ ರಾಜ್ಯದಲ್ಲಿ ಬರ ಎದುರಾದಂತೆ ಕಡಲಿನಲ್ಲಿಯೂ ಮೀನು ಸಿಗದೆ ಮೀನುಗಾರರು ಬರಿಗೈಯಲ್ಲಿ ವಾಪಸ್ಸಾಗುವಂತಾ ಗಿತ್ತು. ಡಿಸೆಂಬರ್‌ನಿಂದ ಮಾರ್ಚ್ ಅವಧಿಯಲ್ಲಿ ಉತ್ತಮ ಮೀನುಗಾರಿಕೆ ಆಗುತಿತ್ತು. ಆದರೆ, ಈ ಬಾರಿ ಡಿಸೆಂಬರ್-ಮಾರ್ಚ್ ಅವಧಿಯಲ್ಲಿ ತೆರಳಿದ ಬೋಟ್‌ಗಳಿಗೆ ಉತ್ತಮ ಮೀನುಗಾರಿಕೆ ಆಗದೆ ನಷ್ಟವುಂಟಾದ ಕಾರಣ ಬಹುತೇಕ ಬೋಟ್‌ಗಳು ಲಂಗರು ಹಾಕಿದ್ದವು.
ಉಳಿದಂತೆ ಜಿಲ್ಲೆಯಲ್ಲಿ ಮೀನುಗಾರಿಕೆಯ ಚಟುವಟಿಕೆಯಲ್ಲಿ ನಿರತರಾಗಿದ್ದ ಕಾರ್ಮಿಕರ ಪೈಕಿ ಬಹುತೇಕರು ಒಡಿಶಾ, ಬಿಹಾರ, ಛತ್ತೀಸ್‌ಗಡ, ಜಾರ್ಖಂಡ್ ಸೇರಿದಂತೆ ಹೊರ ರಾಜ್ಯದವರು. ಈಗ ಎರಡು ತಿಂಗಳು ಮೀನುಗಾರಿಕೆ ನಿಷೇಧ ಇರುವ ಹಿನ್ನೆಲೆಯಲ್ಲಿ ವಾರದ ಹಿಂದೆಯೇ ಬಹುತೇಕರು ಊರು ಸೇರಿಕೊಂಡಿದ್ದಾರೆ.
ಸಮುದ್ರ ಪಾಚಿಗಳು ಮೀನುಗಳಿಗೆ ಪ್ರಮುಖ ಆಹಾರ. ಪಶ್ಚಿಮ ಘಟ್ಟದಿಂದ ಹರಿದು ಬರುವ ನದಿಗಳು ಮಳೆಗಾಲದಲ್ಲಿ ಹೊತ್ತು ತರುವ ಮಣ್ಣಿನಲ್ಲಿ ಪಾಚಿಗಳ ಬೆಳವಣಿಗೆ ಉತ್ತಮವಾಗಿ ಆಗುತ್ತದೆ. ಈ ವರ್ಷ ಮಳೆ ಕಡಿಮೆಯಾಗಿದ್ದು, ಮೀನು ಇಳುವರಿ ಕಡಿಮೆಯಾಗಲು ಇದೂ ಒಂದು ಕಾರಣ ಇರಬಹುದು. ಅಲ್ಲದೆ, ಹವಾಮಾನ ವೈಪರೀತ್ಯ, ಜಾಗತಿಕ ತಾಪಮಾನ ಏರಿಕೆಯೂ ಕಾರಣವಾಗಿರಬಹುದು.
ಬಿಪಿನ್ ಬೋಪಣ್ಣ, ಮೀನುಗಾರಿಕೆ ಇಲಾಖೆ ಜಂಟಿ ನಿರ್ದೇಶಕ, ಕಾರವಾರ
ಈ ಬಾರಿ ಸರಕಾರ ಮೀನುಗಾರಿಕೆ ನಿಷೇಧ ಮಾಡುವ ಪೂರ್ವದಲ್ಲಿಯೇ ಮತ್ಸ್ಯಕ್ಷಾಮದಿಂದ ಹೆಚ್ಚಿನ ಬೋಟ್‌ಗಳು ಲಂಗರು ಹಾಕಿದ್ದವು. ಇದರಿಂದ ಅನೇಕ ಮೀನುಗಾರರು ನಷ್ಟದಲ್ಲಿದ್ದಾರೆ. ಉಳಿದ ಬೋಟುಗಳೂ ಈಗ ಲಂಗರು ಹಾಕಿವೆ. ಎರಡು ತಿಂಗಳು ಮೀನು ಅಲಭ್ಯ. ಕೆಲವರು ಒಣ ಮೀನಿನ ಮೊರೆ ಹೋಗುತ್ತಿದ್ದಾರೆ. ಸಾಂಪ್ರದಾಯಿಕ ಮೀನುಗಾರಿಕೆಯಿಂದ ಮಾತ್ರ ಮೀನು ಲಭ್ಯವಾಗಲಿದೆ.
ವಿನಾಯಕ ಹರಿಕಂತ್ರ, ಮೀನುಗಾರ
ಇದೀಗ ಮೀನುಗಾರಿಕೆ ಬಂದ್ ಆಗಿದ್ದು, ಸಾಲ ಮಾಡಿಕೊಂಡಿರುವ ಮೀನುಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸರಕಾರ ರೈತರಿಗೆ ಪರಿಹಾರ ನೀಡುವಂತೆ ಮೀನುಗಾರರಿಗೂ ಪರಿಹಾರ ನೀಡಬೇಕು. ಇಲ್ಲವೇ ಬ್ಯಾಂಕ್‌ಗಳಲ್ಲಿ ಮಾಡಿರುವ ಸಾಲದ ಬಡ್ಡಿಯನ್ನಾದರೂ ಮನ್ನಾ ಮಾಡಬೇಕು.
ರಾಜು ತಾಂಡೇಲ್, ಮೀನುಗಾರ ಮುಖಂಡ