ಗದಗ: ಬಡ್ಡಿ ದಂಧೆ ಪ್ರಕರಣ; ಬೆಟಗೇರಿಯ 12 ಕಡೆಗಳಲ್ಲಿ ಪೊಲೀಸ್ ದಾಳಿ
1 ಕೋಟಿ 50 ಲಕ್ಷ ರೂ. ಹಣ, ಚಿನ್ನ, ಖಾಲಿ ಬಾಂಡ್ ಮತ್ತು ಚೆಕ್ ವಶಕ್ಕೆ

ಯಲ್ಲಪ್ಪ ಮಿಸ್ಕಿನ್
ಗದಗ: ಬಡ್ಡಿ ದಂಧೆಗೆ ಸಂಬಂಧಿಸಿದಂತೆ ಬೆಟಗೇರಿಯ ಬಡ್ಡಿದಂಧೆಕೋರನ ಮನೆ ಸಹಿತ 12 ಕಡೆಗಳಲ್ಲಿ ಪೊಲೀಸರು ದಾಳಿ ಮಾಡಿರುವ ಬಗ್ಗೆ ವರದಿಯಾಗಿದೆ.
ಬೆಟಗೇರಿಯ ಯಲ್ಲಪ್ಪ ಮಿಸ್ಕಿನ್, ವಿಕಾಸ್ ಮಿಸ್ಕಿನ್, ಮಂಜು ಸಾವಿ, ಈರಣ್ಣ, ಮೋಹನ್ ಎಂಬವರ ಮನೆಗಳ ಮೇಲೆ ದಾಳಿ ನಡೆದಿದ್ದು, ದಾಳಿ ವೇಳೆ ಕಂತೆ ಕಂತೆ ಹಣ, ಚಿನ್ನ, ಖಾಲಿ ಬಾಂಡ್ ಜಪ್ತಿ ಮಾಡಲಾಗಿದೆ ಎಂದು ಗದಗ ಎಸ್ಪಿ ಬಿ ಎಸ್ ನೇಮಗೌಡ ಹೇಳಿದ್ದಾರೆ.
ಅಶೋಕ ಗಣಾಚಾರಿ ಎನ್ನುವವರು ನೀಡಿದ ದೂರಿನನ್ವಯ ದಾಳಿ ಮಾಡಿದ್ದೇವೆ. ಅಂದಾಜು 1 ಕೋಟಿ 50 ಲಕ್ಷ ರೂ. ಹಣ, ಚಿನ್ನ, ಖಾಲಿ ಬಾಂಡ್ ಮತ್ತು ಚೆಕ್ ಜಪ್ತಿ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಅಶೋಕ ಗಣಾಚಾರಿ ಅವರು 2016 ರಲ್ಲಿ ಯಲ್ಲಪ್ಪ ಮಿಸ್ಕಿನ್ ಅವರಿಂದ 1 ಕೋಟಿ 93 ಲಕ್ಷ ರೂ. ಕೈಸಾಲ ಪಡೆದಿದ್ದರು. ಅದರಲ್ಲಿ 1 ಕೋಟಿ, 40 ಲಕ್ಷ ರೂಪಾಯಿ ಮರುಪಾವತಿ ಮಾಡಿದ್ದರು. ಆದರೆ ಅಶೋಕ್ ಅವರ ಕಲ್ಯಾಣ ಮಂಟಪ, ಸೇರಿದಂತೆ ಅನೇಕ ಆಸ್ತಿ ತನ್ನ ಹೆಸರಿಗೆ ಬರೆದುಕೊಂಡಿದ್ದ ಯಲ್ಲಪ್ಪ ಮಿಸ್ಕಿನ್, ಇನ್ನೂ ಬಡ್ಡಿ ಹಣ ನೀಡುವಂತೆ ಕಿರುಕುಳ ನೀಡುತ್ತಿದ್ದ ಎಂದು ಬೆಟಗೇರಿ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿತ್ತು. ಹೀಗಾಗಿ ದೂರು ದಾಖಲಿಸಿಕೊಂಡು ದಾಳಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ.