ರೋಣ: "ಪ್ರವಾದಿ ಮುಹಮ್ಮದ್ (ಸ) ಜೀವನ ಮತ್ತು ಸಂದೇಶ" ಸಾರ್ವಜನಿಕ ಸಮಾವೇಶ
ರೋಣ: ನಗರದ 18ನೇ ವಾರ್ಡ್ ಕುರುಬಗಲ್ಲಿ ವತಿಯಿಂದ ಪ್ರವಾದಿ ಮುಹಮ್ಮದ್ (ಸ) ಜೀವನ ಮತ್ತು ಸಂದೇಶದ ಕುರಿತು ಸಾರ್ವಜನಿಕ ಸಮಾವೇಶವನ್ನು ಏರ್ಪಡಿಸಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಪುರಸಭೆ ಉಪಾಧ್ಯಕ್ಷ ಮಿಥುನ್ ಜಿ. ಪಾಟೀಲ್ "ಪರಸ್ಪರ ಮನಸ್ಸನ್ನು ಜೋಡಿಸುವಂತಹ ಇಂತಹ ಕಾರ್ಯಕ್ರಮಗಳು ರಾಜ್ಯದ ಉದ್ದಗಲಕ್ಕೂ ನಡೆದರೆ ಖಂಡಿತವಾಗಿ ನಮ್ಮಲ್ಲಿ ಶಾಂತಿ ಸೌಹಾರ್ದತೆ ನೆಲೆಸುವುದು" ಎಂದು ಹೇಳಿದರು.
ಗುಲಗಂಜಿ ಮಠದ ಶ್ರೀ ಗುರುಪಾದ ಮಹಾಸ್ವಾಮಿ ಮಾತನಾಡಿ "ಪ್ರವಾದಿಗಳ ಬದುಕು ನಮ್ಮೆಲ್ಲರಿಗೂ ಆದರ್ಶವಾಗಿದೆ, ಧರ್ಮಗಳು ನಮ್ಮನ್ನು ಪರಸ್ಪರ ಪ್ರೀತಿಸಲು ಕಲಿಸುತ್ತದೆ" ಎಂದು ಹೇಳಿದರು.
ಕಾರ್ಯಕ್ರಮದ ಮುಖ್ಯ ಭಾಷಣಗಾರರಾಗಿ BIE ರಾಜ್ಯ ಕಾರ್ಯದರ್ಶಿ ರಿಯಾಝ್ ಅಹ್ಮದ್ ಮಾತನಾಡಿ "ಸೃಷ್ಟಿಕರ್ತನು ಪ್ರವಾದಿಗಳ ಮೂಲಕ ಧರ್ಮವನ್ನು ಮನುಷ್ಯರಿಗೆ ಕಲಿಸಿದನು. ಈ ಜಗತ್ತಿಗೆ ಏಕೈಕ ದೇವನಿದ್ದಾನೆ, ಅವನೇ ನಮ್ಮೆಲ್ಲರನ್ನು ಪರಿಪಾಲಿಸುತ್ತಿದ್ದು ಅವನನ್ನು ತಲುಪುವ ದಾರಿಯನ್ನು ಪ್ರವಾದಿ ಮುಹಮ್ಮದ್ (ಸ) ತೋರಿಸಿಕೊಟ್ಟರು. ಅವರ ಬದುಕು ಪ್ರಳಯಕಾಲದವರೆಗಿನ ಎಲ್ಲ ಮನುಷ್ಯರ ಪಾಲಿಗೆ ಮಾರ್ಗದರ್ಶನವಾಗಿದೆ" ಎಂದು ಹೇಳಿದರು.
ಅಂಜುಮನ್ ಹೈಸ್ಕೂಲ್ ಇದರ ನಿವೃತ್ತ ಮುಖ್ಯೋಪಾಧ್ಯಾಯರಾದ A.S ಖತೀಬ್ ಸಂದರ್ಭೋಚಿತವಾಗಿ ಮಾತನಾಡಿದರು. ಅಂಜುಮನ್ ಇಸ್ಲಾಂ ಸಂಸ್ಥೆ ಅಧ್ಯಕ್ಷ ಬಾವಾಸಾಬ್ ಬೆಟಿಗೇರಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಶಬ್ಬೀರ್ ಅಹ್ಮದ್ ಕಾಝಿ ಅವರ ಕುರ್ ಆನ್ ಪಟ್ಟಣದೊಂದಿಗೆ ಸಮಾವೇಶವು ಪ್ರಾರಂಭಗೊಂಡಿತು. ಅಝೀಝ್ ಎಲಿಗಾರ್ ಕಾರ್ಯಕ್ರಮ ನಿರೂಪಿಸಿ ಕೊನೆಯಲ್ಲಿ ಧನ್ಯವಾದವಿತ್ತರು.
ಈ ಸಂದರ್ಭ ಸೈಯದ್ ಶಾ ಸುಲೈಮಾನ್ ಶಾವಲಿ, L.K ಜೂಲಕಟ್ಟಿ P.S.I ರೋಣ, ಮಲ್ಲಣ್ಣ ಗಡಗಿ, ಇಕ್ಬಾಲ್ ಎಲಿಗಾರ್, ಹಾಫೀಝ್ ಅಬ್ದುಲ್ ಹಮೀದ್ ಪಟೇಲ್, ಬಾಬುಸಾಬ್ ಹುಲ್ಯಾಳ, ಅಬ್ಬಾಸ್ ಅಲಿ ಗಡವಾಲೆ ಮುಂತಾದರು ವೇದಿಕೆಯಲ್ಲಿ ಉಪಸ್ಥಿತರಿದ್ದರು.