ಟೀಚಿಂಗ್ ನೂರು ಥರ; ಟೀಚರ್ಸ್ ನೂರಾರು!
ಸಾಂದರ್ಭಿಕ ಚಿತ್ರ (PTI)
ಸೌತ್ಈಸ್ಟ್ ಏಶ್ಯನ್ ಸಂಸ್ಥೆಯ ಮೇಡಂಗಳು, ಮೇಷ್ಟ್ರುಗಳ ಜೊತೆ ಮಾತಾಡುತ್ತಾ ‘ನಿಮ್ಮ ಪ್ರಕಾರ ಟೀಚಿಂಗ್ ಎಂದರೇನು?’ ಎಂದೆ. ‘ಟೀಚಿಂಗ್ ಎಂದರೆ ನಿರಂತರ ಕಲಿಕೆ’ ಎಂದರು ಒಬ್ಬ ಮೇಡಂ. ಅಲ್ಲೇ ತೆರೆಯ ಮೇಲೆ ನನ್ನ ಪವರ್ ಪಾಯಿಂಟ್ ಮಂಡನೆಯಲ್ಲಿದ್ದ ಝೆನ್ ಸಾಲು ಇದನ್ನೇ ಇನ್ನಷ್ಟು ಪರಿಣಾಮಕಾರಿಯಾಗಿ ಹೇಳುತ್ತಿತ್ತು: ‘ದೇರ್ ಆರ್ ನೋ ಟೀಚರ್ಸ್; ವಿ ಆರ್ ಆಲ್ ಲರ್ನರ್ಸ್’. (‘ಟೀಚರ್ಸ್ ಅಂತ ಯಾರೂ ಇರುವುದಿಲ್ಲ; ನಾವೆಲ್ಲ ಕಲಿಯುವವರೇ’). ಈ ಝೆನ್ ಮಾತು ಹುಸಿ ವಿನಯದ ಮಾತೇನಲ್ಲ; ನನಗಂತೂ ಇದು ನಿತ್ಯ ಅನುಭವಕ್ಕೆ ಬರುತ್ತಿರುತ್ತದೆ.
ಅವತ್ತಿನ ಮಾತಿನಲ್ಲಿ ಹಿಂದೆ ಇದೇ ಅಂಕಣದಲ್ಲಿ ಬರೆದಿದ್ದ ನಟ ಇರ್ಫಾನ್ಖಾನ್ ಮಾತನ್ನು ನೆನಪಿಸಿದೆ: ‘ನಾಟಕದಲ್ಲಿ ಆ್ಯಕ್ಟ್ ಮಾಡೋಕೆ ನನಗೆ ನಿಜಕ್ಕೂ ಇಷ್ಟ. ಆದರೆ ಇವತ್ತು ನಟನೆ ಮಾಡಿದಂತೆ ನಾಳೆ ಮಾಡಬಾರದು; ಇದು ನನ್ನಾಸೆ. ನಟನೆ, ಡೈಲಾಗ್ ಡೆಲಿವರಿ ಎಲ್ಲದರಲ್ಲೂ ನಾಳಿನ ಪ್ರಯೋಗ ಬೇರೆಯದೇ ಆಗಿರಬೇಕು.’ ಇರ್ಫಾನ್ ಮಾತು ಟೀಚಿಂಗ್, ಬರವಣಿಗೆ, ನೃತ್ಯ, ಸಂಗೀತ ಎಲ್ಲದಕ್ಕೂ ಅನ್ವಯಿಸುತ್ತದೆ ಎಂಬುದು ನಂತರ ಹೊಳೆಯಿತು.
ಅವತ್ತು ‘ಟೀಚಿಂಗ್ ಎಂದರೇನು?’ ಎಂದು ಕೇಳುತ್ತಾ, ‘ಟೀಚಿಂಗ್ ಬಗ್ಗೆ ನಿಮ್ಮ ಅನುಭವದಿಂದ ಹುಟ್ಟಿರುವ ಡೆಫನಿಶನ್ ಮಾತ್ರ ಹೇಳಿ; ಟೀಚರ್ಸ್ ಡೇ ಕೋಟ್ಸ್, ಗುರು ವಿಷ್ಟು, ಗುರು ಬ್ರಹ್ಮ ಇವನ್ನೆಲ್ಲ ಹೇಳಬೇಡಿ’ ಎಂದಿದ್ದೆ. ಆದರೂ ಇಂಡಿಯಾದಲ್ಲಿ ‘ಗುರು’ ಎಂಬ ಕಲ್ಪನೆ ಎಷ್ಟು ಆಳವಾಗಿ ಬೇರೂರಿದೆ ಎಂದರೆ, ಇಲ್ಲಿ ತಮ್ಮ ರಾಜಕೀಯ ಮುಂದಾಳುಗಳನ್ನು ಕೂಡ ಜನರು ಗುರುಗಳಂತೆ, ತಮ್ಮ ಮಾರ್ಗದರ್ಶಕರಂತೆ ಕಾಣುತ್ತಾರೆ ಎಂಬುದನ್ನು ರಿಚರ್ಡ್ ಲ್ಯಾನಾಯ್ ‘ದ ಸ್ಪೀಕಿಂಗ್ ಟ್ರೀ’ ಪುಸ್ತಕದಲ್ಲಿ ಗುರುತಿಸುತ್ತಾನೆ.
‘ಗುರು’ ಎಂಬುದಕ್ಕೆ ಈ ಅರ್ಥ ಸ್ವಾತಂತ್ರ್ಯ ಚಳವಳಿಯ ಕಾಲದ ನಿಸ್ವಾರ್ಥಿ ನಾಯಕರನ್ನು ನೋಡಿ ಕೂಡ ಹುಟ್ಟಿರಬಹುದು ಎಂದು ನನಗನ್ನಿಸುತ್ತದೆ. ಜನರು ನೆಹರೂರನ್ನು ‘ಪಂಡಿತ್ಜೀ’ ಎಂದಿದ್ದನ್ನು ಹಾಗೂ ಗಾಂಧೀಜಿ ರವೀಂದ್ರನಾಥ ಟ್ಯಾಗೋರರನ್ನು ‘ಗುರುದೇವ್’ ಎಂದಿದ್ದನ್ನು ಲ್ಯಾನಾಯ್ ಉದಾಹರಿಸುತ್ತಾನೆ. ಮುಂದೊಮ್ಮೆ ಜನ ಅಂಬೇಡ್ಕರ್ ಅವರನ್ನು ‘ಬಾಬಾಸಾಹೇಬ್’ ಎಂದಿದ್ದನ್ನು, ಲೋಹಿಯಾರನ್ನು ‘ಡಾಕ್ಟರ್ ಸಾಹೇಬ್’ ಎಂದಿದ್ದನ್ನು ನೋಡಿದಾಗ, ಇವರೆಲ್ಲ ತಮಗೆ ಸರಿ ದಾರಿ ತೋರಿಸುವ ಗುರುಗಳು ಎಂಬ ಭಾವ ಜನರಲ್ಲಿರುವುದು ಹೊಳೆಯುತ್ತದೆ. ಲ್ಯಾನಾಯ್ ಪ್ರಕಾರ ಇಂಡಿಯಾದಲ್ಲಿ ‘ಗುರು ಎನ್ನುವುದು ಒಂದು ಮಾನಸಿಕ ಅಗತ್ಯ’ ಕೂಡ. ಆದರೂ ಅವರ ಪುಸ್ತಕದ ‘ಗುರು’ ಎಂಬ ಪದ ಗಂಡನ್ನೇ ಸೂಚಿಸುತ್ತಿದೆಯಲ್ಲ ಎಂದು ಎಂದಿನಂತೆ ಮುಜಗರ ಹುಟ್ಟಿ, ಟೀಚರ್ ಎಂಬ ಪದ ಬಳಸಿರುವೆ.
ನೀವು ಎಷ್ಟೇ ಬೆಳೆದು, ಏನೇ ಆಗಿರಿ; ನೀವು ಸೂಕ್ಷ್ಮ ಮನಸ್ಸಿನವರಾಗಿದ್ದರೆ, ಟೀಚರ್ ಎಂಬ ಪದಕ್ಕಿರುವ ತೂಕ ನಿಮ್ಮ ಮನಸ್ಸಿನಲ್ಲಿ ಹಾಗೆಯೇ ಉಳಿದಿರುತ್ತದೆ. ನಮ್ಮ ಹೈಸ್ಕೂಲ್ ಮೇಷ್ಟ್ರು ಎಚ್.ಕೆ. ರಾಮಯ್ಯನವರು ಸುಮಾರು ಮೂವತ್ತೇಳು ವರ್ಷಗಳ ನಂತರ ನನ್ನ ರೂಮಿಗೆ ಅಡಿಯಿಡುತ್ತಲೇ ‘ಗುರುತು ಸಿಕ್ತೇನಪ್ಪಾ?’ ಎಂದು ಒಳಬಂದರು; ಅವರ ದನಿ ಕೇಳಿದ ತಕ್ಷಣ, ನನಗರಿವಿಲ್ಲದೆಯೇ ಥಟ್ಟನೆ ಎದ್ದು ನಿಂತೆ. ಅವರು ತೀರಾ ಗೌರವದಿಂದ ನನ್ನನ್ನು ಮಾತಾಡಿಸತೊಡಗಿದಾಗ ಸಂಕೋಚದಿಂದ ಕುಗ್ಗಿದೆ.
ರಾಮಯ್ಯ ಮೇಷ್ಟರ ಬಗೆಗಿನ ಗೌರವಕ್ಕೆ ಅವರ ಕನ್ನಡ ಟೀಚಿಂಗಿನ ಜೊತೆಗೇ ಮತ್ತೊಂದು ಕಾರಣವೂ ಇತ್ತು: ಎಂ.ಎ. ಓದಲು ಹೊರಟಿದ್ದ ನಾನು ಹಾಸ್ಟೆಲ್ ಫೀಸ್ ಇತ್ಯಾದಿಗಳಿಗಾಗಿ ಬ್ಯಾಂಕ್ ಲೋನ್ಗೆ ಅರ್ಜಿ ಹಾಕಿದ್ದೆ; ಬ್ಯಾಂಕ್ ಅಧಿಕಾರಿಯೊಬ್ಬರು ‘ಅರ್ಜಿಗೆ ಶೂರಿಟಿ ಹಾಕಿಸಿಕೊಂಡು ಬಾ’ ಎಂದರು. ಸುಮ್ಮನೆ ಅಲ್ಲೇ ನಿಂತಿದ್ದೆ. ಬ್ಯಾಂಕಿಗೆ ಬಂದಿದ್ದ ರಾಮಯ್ಯ ಮೇಷ್ಟ್ರಿಗೆ ಅಧಿಕಾರಿಯ ಮಾತು ಕೇಳಿಸಿತ್ತು. ಮೇಷ್ಟ್ರು ನನ್ನತ್ತ ತಿರುಗಿ ನೋಡಿದವರೇ, ನನ್ನತ್ತ ಬಂದರು; ಅರ್ಜಿ ತೆಗೆದುಕೊಂಡವರೇ ಶೂರಿಟಿ ಹಾಕಿ
ಹೊರಟರು. ಅವತ್ತು ಅವರಿಗೆ ಥ್ಯಾಂಕ್ಸ್ ಹೇಳಿದ್ದು ಕೂಡ ನನಗೆ ನೆನಪಿಲ್ಲ! ಆದರೆ ಆ ಗಳಿಗೆ ಹುಟ್ಟಿದ ಜೀವಮಾನದ ಕೃತಜ್ಞತೆ ಹಾಗೇ ಉಳಿದಿದೆ.
‘ಯಾರು ಟೀಚರ್’ ಎಂಬ ಪ್ರಶ್ನೆ ಆಗಾಗ ನನ್ನನ್ನು ಕುತೂಹಲಕರ ಹುಡುಕಾಟಗಳತ್ತ ಕರೆದೊಯ್ಯುತ್ತದೆ: ನನಗೆ ಅಆಇಈ, ಎಬಿಸಿ, ಮಗ್ಗಿ ಮೂರನ್ನೂ ಕಲಿಸಿದ ತಾಯಿಯೇ ನನ್ನ ನಿಜವಾದ ಟೀಚರ್ ಎಂದು ಅನೇಕ ಸಲ ಅನ್ನಿಸಿದೆ. ಮೊನ್ನೆ ಲೋಹಿಯಾ ಜೀವನಚರಿತ್ರೆ ಬರೆಯುವಾಗ ಲೋಹಿಯಾ ಕುರಿತ ಹಿಂದಿ ಜೀವನಚರಿತ್ರೆಗಳನ್ನು, ಅವರ ಹಿಂದಿ ಭಾಷಣಗಳನ್ನು ಸಲೀಸಾಗಿ ಓದುತ್ತಿದ್ದ ರಾತ್ರಿ ‘ಥ್ಯಾಂಕ್ಯೂ ಮದರ್’ ಎಂದುಕೊಂಡೆ. ಕಾರಣ, ನಾನು
ಮಿಡ್ಲ್ಸ್ಕೂಲ್, ಹೈಸ್ಕೂಲಿನಲ್ಲಿದ್ದಾಗ ಅವರು ನನಗೆ ಹಿಂದಿ ಪ್ರಥಮ, ಮಧ್ಯಮ, ರಾಷ್ಟ್ರಭಾಷಾ ಪರೀಕ್ಷೆಗಳನ್ನು ಕಲಿಯಲು ಹಿಂದಿ ಟೀಚರ್ ಬಳಿ ಕಳಿಸಿದ್ದರು; ಹಿಂದಿ ಕಲಿಸಿದ ಆ ಹಿಂದಿ ಮೇಡಂಗಳು ನೆನಪಾಗುತ್ತಾರೆ.
ಅವತ್ತು ಹಿಂದಿ ಕಲಿತಿದ್ದು ಎಷ್ಟು ಮಹತ್ವದ್ದೆಂಬುದು ಲೋಹಿಯಾ ಭಾಷಣಗಳನ್ನು ಒರಿಜಿನಲ್ ಹಿಂದಿಯಲ್ಲಿ ಓದುತ್ತಿರುವಾಗಲೆಲ್ಲ ನನಗೆ ಅರಿವಾಗುತ್ತಿರುತ್ತದೆ. ನಮ್ಮ ಮನೆಗೆ ಬರುತ್ತಿದ್ದ ಶಫಿ, ಬಾಷಾ ಮಾತಾಡುತ್ತಿದ್ದ ಉರ್ದುವೂ ಸೇರಿ ನನ್ನ ಹಿಂದಿ ಕಲಿಕೆ
ವಿಸ್ತಾರವಾಗಿತ್ತು. ಇದೆಲ್ಲದರ ಜೊತೆಗೆ, ತಾಯಿ ಬಾಲ್ಯದಲ್ಲಿ ಕಲಿಸಿದ ಹೊಲಿಗೆ, ಅಡಿಗೆ, ಸುಧಾ, ಪ್ರಜಾಮತಗಳ ಧಾರಾವಾಹಿಗಳ ಓದಿನ ಅಭ್ಯಾಸ ಈ ಗಳಿಗೆಯಲ್ಲೂ ನೆರವಾಗುತ್ತಲೇ ಇದೆ. ಅಂಥವರು ಟೀಚರ್ ಅಲ್ಲದೆ, ಮತ್ಯಾರು?
ಇದನ್ನೆಲ್ಲ ಆತ್ಮಚರಿತ್ರಾತ್ಮಕ ಟಿಪ್ಪಣಿಯೆಂದು ನೋಡದೆ, ‘ಟೀಚಿಂಗ್’, ‘ಟೀಚರ್’ ಎಂಬ ವಸ್ತುಗಳ ಸುತ್ತ ಬೆಳೆದ ಪ್ರಬಂಧವೆಂದು ತಾವು ನೋಡಬೇಕೆಂದು ಬಿನ್ನಹ. ಒಬ್ಬ ವ್ಯಕ್ತಿಗೆ ಹತ್ತಾರು ಥರದ ಟೀಚರುಗಳಿರುತ್ತಾರೆ ಎಂದು ಸೂಚಿಸಲು ಇದನ್ನೆಲ್ಲ ಹೇಳುತ್ತಿರುವೆ. ಕಾರಣ, ನನ್ನ ಕಲ್ಪನೆಯ ‘ಟೀಚರ್’ ಎಂಬುದರ ಅರ್ಥ ನಿತ್ಯ ವಿಸ್ತಾರವಾಗುತ್ತಿರುತ್ತದೆ: ಸಾಮಿಲ್ನ ಕಂಬಿಗಳ ಮೇಲೆ ಮರದ ತುಂಡಿಟ್ಟು, ಅತ್ತಣಿಂದ ಕತ್ತರಿಸುವ ಯಾಂತ್ರಿಕ ಗರಗಸ ಬರುವ ಹೊತ್ತಿಗೆ ಛಕ್ಕನೆ ಮತ್ತೊಂದು ಮರದ ತುಂಡಿಡುತ್ತಿದ್ದ ಗಡ್ಡದ ಸಾಬರು ‘ಕಾನ್ಸೆಂಟ್ರೇಶನ್ ಎಂದರೇನು’ ಎಂಬುದನ್ನು ನನಗೆ ಕಲಿಸಿದ ಟೀಚರ್! ನಮ್ಮ ಮನೆಯ ನಲ್ಲಿ ರಿಪೇರಿ ಮಾಡುತ್ತಲೇ ನನಗೂ ರಿಪೇರಿ ಕಲೆ ಕಲಿಸಿದ ಪ್ಲಂಬರ್ ಗೋಪಾಲ್ ನನ್ನ ಟೀಚರ್. ನೀವು ಗಮನಿಸಿರಬಹುದು: ಯಾವ ಕಸುಬಿನವರೇ ಆಗಲಿ, ಏನನ್ನಾದರೂ ಹೇಳಿಕೊಡಲು ಶುರು ಮಾಡಿದ ತಕ್ಷಣ ಟೀಚರ್ ಆಗುತ್ತಾರೆ; ಕಲಿಸುವ ಥ್ರಿಲ್, ಆತ್ಮವಿಶ್ವಾಸ; ಸರಿಯಾದದ್ದನ್ನು ಕಲಿಸಬೇಕೆಂಬ ಜವಾಬ್ದಾರಿ ಎಲ್ಲವೂ ಅವರ ಕಣ್ಣು, ಮಾತುಗಳಲ್ಲಿ ಮಿಂಚತೊಡಗುತ್ತದೆ. ಟೀಚಿಂಗಿನ ಈ ಮೂಲ ಮಾದರಿ ಎಂದೂ ಮಾಯವಾಗುವುದಿಲ್ಲ!
ನನ್ನ ಟೀಚರುಗಳ ಪಟ್ಟಿ ಬೆಳೆಯುತ್ತಾ ಹೋಗುತ್ತದೆ: ಬಾಲ್ಯದಲ್ಲಿ ಅಷ್ಟಿಷ್ಟು ಕರ್ನಾಟಿಕ್ ಸಂಗೀತ ಕಲಿಸಿದ ಕೃಷ್ಣಪ್ಪ ಮೇಷ್ಟ್ರು; ನಂತರ ಹಿಂದೂಸ್ತಾನಿಯ ಹತ್ತಾರು ರಾಗಗಳನ್ನು ಕಲಿಸಿದ ಎಸ್.ಆರ್. ರಾಮಕೃಷ್ಣ, ಸಿತಾರ್ ಕಲಿಸಿದ ಜಯಂತ್ಕುಮಾರ್ದಾಸ್ ನನ್ನ ಸಂಗೀತ ಟೀಚರುಗಳು; ಈ ಸಂಗೀತ ಕಲಿಕೆಯಲ್ಲಿ ತಾಯಿಯ ಹಾಡುಗಳೂ, ಆಕಾಶವಾಣಿಯ ಬೆಳಗಿನ ಸಂಗೀತ
ಪಾಠಗಳೂ, ಸಿನೆಮಾ ಹಾಡುಗಳೂ ಸೇರಿವೆ. ನಾನು ಇಂಗ್ಲಿಷ್ ಮೇಷ್ಟರಾದ ಮೇಲೆ ಹೊಸ ಕಾಲದ ಇಂಗ್ಲಿಷ್ ಕಲಿಸಿದ ಎನ್ಎಂಕೆಆರ್ವಿ ಕಾಲೇಜಿನ ಗಿಳಿಗಳಂಥ ಹುಡುಗಿಯರೂ ನನ್ನ ಟೀಚರುಗಳೇ.
ಮೂರೂವರೆ ದಶಕಗಳಿಂದಲೂ ನಾನು ತೊಡಗಿರುವ ಟೀಚಿಂಗ್ ನನಗೆ ಕಲಿಸಿರುವ ಒಂದು ಮುಖ್ಯ ಪಾಠವೆಂದರೆ, ನಾನು ಪೂರ್ಣವಾಗಿ ತೊಡಗುವ ಟೀಚಿಂಗಿನ ಇಡೀ ಪ್ರಕ್ರಿಯೆಯೇ ನನ್ನ ಟೀಚರ್ ಎನ್ನುವುದು. ವಿಮರ್ಶೆ, ಓದುವ ಹಾದಿಗಳು, ಲಿಟರರಿ ಫಾರ್ಮ್ಸ್, ಅನುವಾದ, ಅಂಬೇಡ್ಕರ್ ಸ್ಟಡೀಸ್, ಗಾಂಧಿಯನ್ ಸ್ಟಡೀಸ್, ಮಹಿಳಾ ಅಧ್ಯಯನ, ಬಹುಶಿಸ್ತೀಯ ಅಧ್ಯಯನ... ಹೀಗೆ ಹಲವು ವಿಶ್ವವಿದ್ಯಾಲಯಗಳಲ್ಲಿ ನಾನು ಹಲಬಗೆಯ ಕೋರ್ಸ್ಗಳನ್ನು ಕೊಡುವಾಗ ಅದು ನನ್ನ ನಿಜವಾದ ಕಲಿಕೆಯಾಗಿ ಮಾರ್ಪಟ್ಟಿದೆ. ಟೀಚಿಂಗ್ ಮತ್ತು ಕಲಿಕೆಗಳ ಸುಂದರ ಸಂಬಂಧದ ಬಗ್ಗೆ; ಕಲಿಸುತ್ತಾ ಕಲಿಯುವ ಬಗ್ಗೆ ಹಿಂದೆ ಈ ಅಂಕಣದಲ್ಲೇ ಬರೆದಿರುವೆ.
ಆದ್ದರಿಂದಲೇ, ಶಿಕ್ಷಕರ ಚುನಾವಣಾ ಕ್ಷೇತ್ರಗಳ ಮತದಾನಗಳಲ್ಲಿ ಟೀಚರುಗಳ ಭ್ರಷ್ಟತೆಯಿಂದ ‘ಟೀಚರ್’ ಪರಿಕಲ್ಪನೆಗಿರುವ ದಿವ್ಯತೆ ನಾಶವಾದಾಗ ಬೇಜಾರಾಗುತ್ತದೆ. ಗುರು-ಶಿಷ್ಯ ಕಲ್ಪನೆಯಲ್ಲಿರುವ ಜಮೀನ್ದಾರಿ ದರ್ಪ ಚಲಾಯಿಸುವ ಮೇಷ್ಟರೊಬ್ಬ ತನ್ನ ವಿದ್ಯಾರ್ಥಿಯನ್ನು ‘ನನ್ನ ಶಿಷ್ಯ’ ಎನ್ನುವ ಠೇಂಕಾರ ಕಂಡಾಗ ಅಸಹ್ಯವಾಗುತ್ತದೆ.
ಆದರೂ ಇವತ್ತಿಗೂ ನಾನು ಬಲ್ಲ ನೂರಾರು ಮೇಡಂಗಳು, ಮೇಷ್ಟ್ರುಗಳು ನಿಜಕ್ಕೂ ‘ಟೀಚಿಂಗ್’ ಎಂದರೆ ‘ಕಲಿಕೆ’ ಎಂದು ಆಳದಲ್ಲಿ ನಂಬಿರುವುದನ್ನು ಕಂಡು ನೆಮ್ಮದಿಯಾಗುತ್ತದೆ. ಇಂಥ ಲಕ್ಷಾಂತರ ವೃತ್ತಿವಂತ ಟೀಚರುಗಳನ್ನು, ನಿತ್ಯ ಹಲವು ಪಾಠಗಳನ್ನು ಕಲಿಸುವ ಇನ್ನಿತರ ಎಲ್ಲ ಟೀಚರುಗಳನ್ನು ನೆನೆಯುತ್ತಲೇ ಅಡ್ವಾನ್ಸ್ ಆಗಿ ‘ಹ್ಯಾಪಿ ಟೀಚರ್ಸ್ ಡೇ’ ಹೇಳುವೆ.
ಈ ಮಾತು ಬರೆಯುತ್ತಿರುವಾಗ ಕುವೆಂಪುವಿನ ‘ಮುಚ್ಚುಮರೆಯಿಲ್ಲದೆಯೆ ನಿನ್ನ ಮುಂದೆಲ್ಲವನು ಬಿಚ್ಚಿಡುವೆ ಓ ಗುರುವೆ ಅಂತರಾತ್ಮ’ ಎಂಬ ನಿವೇದನೆ- ಹಾಡಿದವರ ಮೊಗಸಮೇತ- ನೆನಪಾಗುತ್ತಿದೆ; ಎಲ್ಲ ಬಗೆಯ ಟೀಚರುಗಳ ಒಳಗೂ ನೆಲೆಸಿರುವ ‘ಅಂತರಾತ್ಮ’ ಎಂಬ ಟೀಚರ್ ಸದಾ ಎಚ್ಚರವಾಗಿರಲಿ!