ವಿದಾಯದ ಸಹಜ ಸ್ವೀಕಾರ!
ಮಹಾಕಾವ್ಯವಿರಲಿ, ಕವಿತೆಯರಲಿ, ನಾಟಕವಿರಲಿ, ಯಾವ ಥರದ ಕೃತಿಯೇ ಇರಲಿ, ಮುಕ್ತ ಮನಸ್ಸಿನ, ವ್ಯವಧಾನದ ಓದಿನಲ್ಲಿ ನೀಷೆಯಂಥ ಪ್ರತಿಭಾಶಾಲಿಗೆ ಹೊಳೆದ ಗಾಢ ಸತ್ಯಗಳು ನಮಗೂ ಹೊಳೆಯಬಲ್ಲವು. ಈ ಕಾಲದ ಮೂರು ಮೊಳದ ಬರವಣಿಗೆಯ, ಮೂರು ಘಳಿಗೆಯ ಓದಿನ ತರಾತುರಿಯಲ್ಲಿ ಬುದ್ಧಿ ಕೈ ಕೊಡುತ್ತದೆ; ವಿವೇಕ, ಜ್ಞಾನಗಳಂತೂ ಮೊದಲೇ ಕೈ ಕೊಟ್ಟಿರುತ್ತವೆ! ಇಂಥ ಟ್ರಾಫಿಕ್ ಸಿಗ್ನಲ್ ದಾಟುವ ‘ಓಡು ಮನಸ್ಥಿತಿ’ಯಲ್ಲಿ ಶ್ರೇಷ್ಠ ಕಲಾಕೃತಿಗಳ ಗಾಢ ಸತ್ಯಗಳು ಎಲ್ಲಿಂದ ತಾನೇ ಹೊಳೆಯಬಲ್ಲವು!
ಅವತ್ತು ಕ್ಲಾಸಿನಲ್ಲಿ ಸಾಹಿತ್ಯದ ಹುಡುಗ, ಹುಡುಗಿಯರಿಗೆ ‘ಒಡಿಸ್ಸಿ’ ಮಹಾಕಾವ್ಯದ ನಾಯಕ ಒಡಿಸ್ಯೂಸ್ ಬದುಕಿನ ಒಂದು ವಿದಾಯದ ಘಳಿಗೆಯನ್ನು ಬಣ್ಣಿಸುತ್ತಿದ್ದಾಗ, ಲೋಕದ ಅನನ್ಯ ತತ್ವಜ್ಞಾನಿ ನೀಷೆಗೆ ಹಿಂದೊಮ್ಮೆ ಈ ಭಾಗ ಓದಿ ಹೊಳೆದ ಸತ್ಯ ನೆನಪಾಯಿತು:
‘ಬದುಕಿನಿಂದ ಹೇಗೆ ನಿರ್ಗಮಿಸಬೇಕು ಗೊತ್ತಾ? ಒಡಿಸ್ಯೂಸ್ ನೌಸಿಕಾಳನ್ನು ಬೀಳ್ಕೊಡುತ್ತಾನಲ್ಲಾ ಹಾಗೆ!’ ಎನ್ನುತ್ತಾನೆ ನೀಷೆ.
ಮೊದಲಿಗೆ, ಗ್ರೀಕ್ ಮಹಾಕವಿ ಹೋಮರ್ ಬರೆದ ‘ಒಡಿಸ್ಸಿ’ಯನ್ನು ಓದದಿರುವವರಿಗೆ ಈ ಭಾಗವನ್ನು ನೆನಪಿಸುವೆ:
ಗ್ರೀಕ್ ವೀರ ಮೆನೆಲೌಸನ ಪತ್ನಿ ಜಗದೇಕ ಸುಂದರಿ ಹೆಲೆನ್ ಒಂದು ದಿನ ಮೆನೆಲೌಸನನ್ನು ಬಿಟ್ಟು ಟ್ರೋಜನ್ ಮನೆತನದ ಸುಂದರ ಪ್ಯಾರಿಸ್ ಜೊತೆ ಹೊರಡುತ್ತಾಳೆ. ಈ ‘ಪ್ರಣಯ ಪಯಣ’ ಗ್ರೀಕರು-ಟ್ರೋಜನ್ನರ ನಡುವೆ ಯುದ್ಧಕ್ಕೆ ಕಾರಣವಾಗುತ್ತದೆ. ಇದು ಮೆನೆಲೌಸ್‌ಗೆ ಹಾಗೂ ಅವನಿಗಿಂತ ಹೆಚ್ಚಾಗಿ ಅವನ ಅಣ್ಣ, ಗ್ರೀಕ್ ರಾಜ, ಅಗಮೆಮ್ನನ್‌ಗೆ ತಮ್ಮ ಮನೆತನದ ಪ್ರತಿಷ್ಠೆಯ ಪ್ರಶ್ನೆಯಾಗುತ್ತದೆ. ಇದು ಒಟ್ಟಾರೆ ಗ್ರೀಕರ ಸ್ವಾಭಿಮಾನದ ಪ್ರಶ್ನೆ ಎಂಬಂತೆ ಕೂಡ ಅಗಮೆಮ್ನನ್ ಗ್ರೀಕ್ ನಾಯಕರ ವಲಯದಲ್ಲಿ ಪ್ರಚಾರ ಮಾಡುತ್ತಾನೆ. ತಾನು ಟ್ರೋಜನ್ನರ ವಿರುದ್ಧ ಹೂಡಲಿರುವ ಯುದ್ಧಕ್ಕೆ ಗ್ರೀಕ್ ವೀರರು ತಂತಮ್ಮ ಯೋಧರ ಪಡೆಯ ಜೊತೆ ಬರಬೇಕೆಂದು ಅಗಮೆಮ್ನನ್ ಒತ್ತಾಯಿಸುತ್ತಾನೆ, ಯುದ್ಧಕ್ಕೆ ಬರುವಂತೆ ಗ್ರೀಕ್ ವೀರ ಒಡಿಸ್ಯೂಸ್‌ನನ್ನು ಕೂಡ ಕೇಳಿಕೊಳ್ಳುತ್ತಾನೆ. ಒಡಿಸ್ಯೂಸ್ ಯುದ್ಧಕ್ಕೆ ಹೊರಡಲು ಸಿದ್ಧನಿಲ್ಲ. ಕಾರಣ, ಒಡಿಸ್ಯೂಸ್ ಈಗ ಊರು ಬಿಟ್ಟರೆ ಅವನು ಇಪ್ಪತ್ತು ವರ್ಷಗಳ ಕಾಲ ತನ್ನೂರು ಇಥಾಕಕ್ಕೆ ಮರಳಿ ಬರುವುದಿಲ್ಲ ಎಂಬ ಕಣಿಯಿತ್ತು. ಆದರೂ ಒಡಿಸ್ಯೂಸ್ ಅಗಮೆಮ್ನನ್ ಒತ್ತಾಯಕ್ಕೆ ಮಣಿದು, ಒಲ್ಲದ ಮನಸ್ಸಿನಿಂದ ಯುದ್ಧಕ್ಕೆ ಹೊರಡಬೇಕಾಗುತ್ತದೆ.
ಕೊನೆಗೂ ಕಣಿ ನಿಜವಾಗುತ್ತದೆ. ಒಡಿಸ್ಯೂಸ್ ಹತ್ತು ವರ್ಷಗಳ ಟ್ರೋಜನ್ ಯುದ್ಧದ ನಂತರ ಮನೆಗೆ ಬರುವ ದಾರಿಯಲ್ಲಿ ಹತ್ತು ವರ್ಷ ಅಲೆದಾಡಬೇಕಾಗುತ್ತದೆ. ಊರಿಗೆ ಯಾನ ಹೊರಟ ಒಡಿಸ್ಯೂಸ್ ದಾರಿಯಲ್ಲಿ ತರಹೇವಾರಿ ಸಾಹಸಗಳನ್ನು, ಬಗೆಬಗೆಯ ತರಲೆಗಳನ್ನು ಮಾಡುತ್ತಾನೆ.
ರಾಕ್ಷಸ ಸೈಕ್ಲೋಪನ ಗುಹೆ ಹೊಕ್ಕು ಉಪಾಯ ಹಾಗೂ ಸಾಹಸಗಳಿಂದ ತಪ್ಪಿಸಿಕೊಂಡು ಹೊರಬರುತ್ತಾನೆ. ಮಾಯಾವಿನಿ ಸರ್ಸಿಯಿಂದ ಬಿಡಿಸಿ
ಕೊಳ್ಳುತ್ತಾನೆ; ಅವನು ಯಾನ ಮಾಡುತ್ತಿದ್ದ ಹಡಗು ಚೂರಾಗುತ್ತದೆ. ಇಂಥ ಹಲ ಬಗೆಯ ಅಪಾಯಗಳಲ್ಲಿ ಸಿಲುಕಿ, ಪಾರಾಗಿ, ಗೆದ್ದು ಒಡಿಸ್ಯೂಸ್ ಮುಂದೆ ಸಾಗುತ್ತಾನೆ.
ಇವತ್ತಿಗೂ ಲೋಕದ ಸಾವಿರಾರು ಸಾಹಿತ್ಯ ಕೃತಿಗಳಲ್ಲಿ ಹಾಗೂ ಸಿನೆಮಾ, ನಾಟಕಗಳಲ್ಲಿ ಹೀರೋನ ಮಾದರಿಯನ್ನು ಸೃಷ್ಟಿ ಮಾಡಲು ಹೋಮರನ ಒಡಿಸ್ಯೂಸನ ಮಾದರಿಯನ್ನು ಅನುಕರಿಸುವವರಿದ್ದಾರೆ. ‘ಹೀರೋ’ ಎಂದರೆ ಮುನ್ನಡೆಸುವವನು; ಎಂಥ ಕಷ್ಟದ ನಡುವೆಯೂ ಜೈಸುವವನು; ಹೆಂಗಳೆಯರ ಮನ ಗೆಲ್ಲುವವನು; ಸಾಹಸದಿಂದಲೋ ಉಪಾಯದಿಂದಲೋ ಎಂಥ ಸವಾಲನ್ನಾದರೂ ಎದುರಿಸಬಲ್ಲವನು; ನಂಬಿದವರನ್ನು, ಅನಾಥರನ್ನು ರಕ್ಷಿಸಬಲ್ಲವನು; ಎಂಥ ಒಗಟಿಗೂ ಉತ್ತರ ಹುಡುಕಬಲ್ಲವನು...ಹೀಗೆ ಈ ಕಾಲದ ಹೀರೋನ ಹತ್ತಾರು ಸಿದ್ಧ ಮಾದರಿಗಳನ್ನು ಎರಡೂವರೆ ಸಾವಿರ ವರ್ಷಗಳ ಹಿಂದೆ ಸೃಷ್ಟಿಯಾದ ಒಡಿಸ್ಯೂಸ್ ಪಾತ್ರ ಇವತ್ತಿಗೂ ಕೊಡುತ್ತಾ ಬಂದಿದೆ. ಹತ್ತಾರು ಅಪಾಯಕಾರಿ ಸಾಹಸಗಳನ್ನು ಮಾಡುತ್ತಲೇ ಒಡಿಸ್ಯೂಸ್ ಕಡಲಯಾನ ಮುಂದುವರಿಸುತ್ತಾನೆ. ಇನ್ನೇನು ತಾಯಿನಾಡು ಇಥಾಕ ಸಿಕ್ಕುವ ಮುನ್ನ ಒಡಿಸ್ಯೂಸ್ ಹೊರಟಿದ್ದ ದೋಣಿ ಚೂರಾಗಿ ಫೀಶಿಯಾ ರಾಜ್ಯದ ಕಡಲ ದಂಡೆಯಲ್ಲಿ ಅನಾಥನಾಗಿ, ಬೆತ್ತಲಾಗಿ ಬೀಳುತ್ತಾನೆ.
ಮೈ ಮೇಲೆ ನೂಲಿನೆಳೆಯೂ ಇಲ್ಲದೆ ಎಲೆಗಳಲ್ಲಿ ಸೊಂಟ ಮುಚ್ಚಿ ಕೊಂಡು ಮೇಲೆದ್ದು ಬರುತ್ತಿದ್ದ ಒಡಿಸ್ಯೂಸನ ಮೈಕಟ್ಟು ಕಂಡ ಫೀಶಿಯಾದ ದೊರೆ ಆಲ್ಕಿನೌಸಿನ ಮಗಳು ರಾಜಕುಮಾರಿ ನೌಸಿಕಾ ಬೆರಗಾಗುತ್ತಾಳೆ. ಈತ ಯಾರೋ ವೀರಾಧಿವೀರನೇ ಇರಬೇಕು; ಮದುವೆಯಾದರೆ ಇಂಥವನನ್ನೇ ಮದುವೆಯಾಗಬೇಕು ಎಂದು ಅವಳಿಗನ್ನಿಸುತ್ತದೆ! ಸಖಿಯರಿಗೆ ಹೇಳಿ ಒಡಿಸ್ಯೂಸ್‌ಗೆ ಸ್ನಾನ ಮಾಡಿಸಿ ಸಜ್ಜುಗೊಳಿಸಿ, ತಾನು ಯಾರೆಂದು ಹೇಳದೆ, ಅವನಿಗೆ ಅರಮನೆ ತಲುಪುವ ಹಾದಿ ತೋರಿಸುತ್ತಾಳೆ. ಅರಮನೆಯಲ್ಲಿ ದೊರೆ ಆಲ್ಕಿನೌಸ್ ಒಡಿಸ್ಯೂಸನನ್ನು ಎದುರುಗೊಂಡು ಆದರಿಸುತ್ತಾ ಅಲ್ಲೇ ಉಳಿಯುತ್ತಾನೆ. ಒಂದು ದಿನ ಅರಮನೆಯಲ್ಲಿ ಗಾಯಕನೊಬ್ಬ ಟ್ರೋಜನ್ ಯುದ್ಧಕಾಲದ ಒಡಿಸ್ಯೂಸ್-ಅಖಿಲೀಸರ ಕತೆಯನ್ನೇ ಹಾಡು ಮಾಡಿ ಹೇಳುತ್ತಿರುವಾಗ ಒಡಿಸ್ಯೂಸನಿಗೆ ಕಣ್ಣೀರುಕ್ಕುತ್ತದೆ. ಅಲ್ಲಿಯತನಕ ತನ್ನ ಗುರುತು ಮುಚ್ಚಿಟ್ಟಿದ್ದ ಒಡಿಸ್ಯೂಸ್ ಅಲ್ಲಿ ನೆರೆದಿದ್ದವರಿಗೆ ತನ್ನ ಸಾಹಸದ ಕತೆಗಳನ್ನು ಹೇಳತೊಡಗುತ್ತಾನೆ. ಇದು ಒಡಿಸ್ಯೂಸನ ಆವರೆಗಿನ ಪಯಣದ ಕತೆಯನ್ನು ಓದುಗರಿಗೆ ಹೇಳಲು ಹೋಮರ್ ರೂಪಿಸಿಕೊಂಡಿರುವ ಕಥಾತಂತ್ರ ಕೂಡ!
ಒಡಿಸ್ಯೂಸನ ಕತೆ ಕೇಳಿದ ಆಲ್ಕಿನೌಸನಿಗೆ ತನ್ನ ಮಗಳು ನೌಸಿಕಾಗೆ ಒಡಿಸ್ಯೂಸ್ ತಕ್ಕ ಜೋಡಿ ಎನ್ನಿಸುತ್ತದೆ; ಮಗಳಿಗೆ ಮದುವೆ ಮಾಡಿ ಒಡಿಸ್ಯೂಸನನ್ನು ಇಲ್ಲೇ ಉಳಿಸಿಕೊಳ್ಳಬೇಕೆನ್ನಿಸುತ್ತದೆ. ಆದರೆ ಊರು ತಲುಪುವ ಕಾತರದಲ್ಲಿರುವ ಒಡಿಸ್ಯೂಸನನ್ನು ಇಲ್ಲೇ ಉಳಿಯಬೇಕೆಂದು ದೊರೆ ಒತ್ತಾಯಿಸಲಾರ. ಒಡಿಸ್ಯೂಸನನ್ನು ಇಥಾಕಕ್ಕೆ ಕಳಿಸಿಕೊಡಲು ದೊರೆ ವ್ಯವಸ್ಥೆ ಮಾಡುತ್ತಾನೆ.
ಎಂಥ ಸನ್ನಿವೇಶದಲ್ಲೂ ಸುಂದರ ಚಿತ್ರಗಳನ್ನು ಕೊಡಬಲ್ಲ ವ್ಯವಧಾನದ ಪ್ರಕಾರ- ಮಹಾಕಾವ್ಯ! ಒಡಿಸ್ಯೂಸ್ ಹೊರಟು ಇನ್ನೇನು ಅರಮನೆ ಬಿಡುವ ಘಳಿಗೆಯಲ್ಲಿ ಹೋಮರ್ ಕೋಮಲ ಸನ್ನಿವೇಶವೊಂದನ್ನು ಸೃಷ್ಟಿಸುತ್ತಾನೆ. ಅದನ್ನು ಹೋಮರ್‌ನ ಕಾವ್ಯಭಾಷೆಯಲ್ಲೇ ಕೇಳಿ:
ರಾಜಕುವರಿ ನೌಸಿಕಾ, ಕಡು ಚೆಲುವೆ ನೌಸಿಕಾ,
ಸ್ವರ್ಗವೇ ಕಡೆದಂತಿರುವ ನೌಸಿಕಾ,
ಅರಮನೆಯ ಕಂಬದ ಬದಿ ನಿಂತು ಕಾಯುತ್ತಿದ್ದ ನೌಸಿಕಾ,
ಒಡಿಸ್ಯೂಸ್ ಕಂಬದ ಬಳಿ ಹಾಯುವ ಘಳಿಗೆ
ಕಂಗಳಲ್ಲಿ ಬೆರಗು ಚೆಲ್ಲಿ ಸರಕ್ಕನೆ ಮೆಲುನುಡಿದಳು:
‘ಎಲ್ಲಿಂದಲೋ ಬಂದವನೇ, ಹೋಗಿ ಬಾ!
ನಿಮ್ಮೂರಿನಲ್ಲಿ ನನ್ನ ನೆನೆಸಿಕೋ
ನಿನ್ನ ಕಂಡವಳನ್ನು, ನಿನ್ನ ಉಳಿಸಿದವಳನ್ನು ನೆನೆದುಕೋ
ನೆನೆನೆನೆದು ಹಾಯೆಂದುಕೋ.’
ನೌಸಿಕಾಳ ಮೆಲುನುಡಿ ಕೇಳಿ ಒಡಿಸ್ಯೂಸ್ ಮರುನುಡಿದನು:
‘ಓ ನೌಸಿಕಾ, ಆಲ್ಕಿನೌಸನ ಮಗಳೆ,
ಸ್ಯೂಸ್ ದೇವನ ದಯೆಯಿಂದ ಮತ್ತೊಮ್ಮೆ
ನಮ್ಮೂರಲ್ಲಿ ನನಗೆ ಬೆಳಕು ಹರಿಯಲಿ;
ಆ ನೆಲದಲ್ಲಿ ಆ ಘಳಿಗೆಯಲ್ಲಿ
ಮತ್ತು ಅಂದಿನಿಂದ ಅನುದಿನವೂ,
ನನ್ನ ಕಟ್ಟ ಕಡೆಯ ಉಸಿರಿರುವ ತನಕ,
ನನ್ನ ಜೀವ ಉಳಿಸಿದ ರಾಜಕುವರಿಯೇ,
ದೇವಿಯೊಬ್ಬಳ ನೆನೆದಂತೆ
ನಾ ನಿನ್ನ ನೆನೆಯುವಂತಾಗಲಿ.’
ಹೀಗೆಂದ ಒಡಿಸ್ಯೂಸ್ ಮುಂದಡಿಯನಿಟ್ಟನು.
‘ಒಡಿಸ್ಸಿ’ಯ ಈ ಭಾಗವನ್ನು ಅನೇಕರು ಓದಿರಬಹುದು; ಮಹಾಕಾವ್ಯವನ್ನು ಓದಲು ತಕ್ಕ ವ್ಯವಧಾನವಿಲ್ಲದ ಓದಿನಲ್ಲಿ ಇಂಥ ಸುಂದರ ಭಾಗವೊಂದನ್ನು ನನ್ನಂತೆಯೇ ಹಲವರು ಸರಿಯಾಗಿ ಗಮನಿಸದೆ ಮುಂದೆ ಸಾಗಿರಲೂಬಹುದು! ಆದರೆ ನೀಷೆಯಂಥ ದೊಡ್ಡ ತತ್ವಜ್ಞಾನಿ ಈ ಭಾಗವನ್ನು ಓದುತ್ತಿರುವಾಗ ಅವನ ಪ್ರಬುದ್ಧ ಜೀವನದರ್ಶನವೊಂದು ಹೊರಹೊಮ್ಮುತ್ತದೆ. ಒಡಿಸ್ಯೂಸ್ ನೌಸಿಕಾಳನ್ನು ಬೀಳ್ಕೊಡುವ ಭಾಗವನ್ನು ಧ್ಯಾನಿಸುತ್ತಾ, ನೀಷೆ ಗಾಢ ತತ್ವಜ್ಞಾನದ ಮಾತೊಂದನ್ನು ಬರೆಯುತ್ತಾನೆ: ‘ಒಡಿಸ್ಯೂಸ್ ಒಂದು ಘಟ್ಟದಲ್ಲಿ ರಾಜಕುಮಾರಿ ನೌಸಿಕಾಳನ್ನು ಬಿಟ್ಟು ಅರಮನೆಯಿಂದ ಹೊರಡುತ್ತಾನಲ್ಲಾ, ಹಾಗೆ ಬದುಕಿನಿಂದ ತೆರಳಬೇಕು-ಶುಭ ಕೋರುತ್ತಾ...ಬದುಕಿನ ಬಗೆಗಿನ ತೀವ್ರ ಮೋಹವನ್ನು ತೊರೆಯುತ್ತಾ.’
ಮಹಾಕಾವ್ಯವಿರಲಿ, ಕವಿತೆಯರಲಿ, ನಾಟಕವಿರಲಿ, ಯಾವ ಥರದ ಕೃತಿಯೇ ಇರಲಿ, ಮುಕ್ತ ಮನಸ್ಸಿನ, ವ್ಯವಧಾನದ ಓದಿನಲ್ಲಿ ನೀಷೆಯಂಥ ಪ್ರತಿಭಾಶಾಲಿಗೆ ಹೊಳೆದ ಗಾಢ ಸತ್ಯಗಳು ನಮಗೂ ಹೊಳೆಯಬಲ್ಲವು. ಈ ಕಾಲದ ಮೂರು ಮೊಳದ ಬರವಣಿಗೆಯ, ಮೂರು ಘಳಿಗೆಯ ಓದಿನ ತರಾತುರಿಯಲ್ಲಿ ಬುದ್ಧಿ ಕೈ ಕೊಡುತ್ತದೆ; ವಿವೇಕ, ಜ್ಞಾನಗಳಂತೂ ಮೊದಲೇ ಕೈ ಕೊಟ್ಟಿರುತ್ತವೆ! ಇಂಥ ಟ್ರಾಫಿಕ್ ಸಿಗ್ನಲ್ ದಾಟುವ ‘ಓಡು ಮನಸ್ಥಿತಿ’ಯಲ್ಲಿ ಶ್ರೇಷ್ಠ ಕಲಾಕೃತಿಗಳ ಗಾಢ ಸತ್ಯಗಳು ಎಲ್ಲಿಂದ ತಾನೇ ಹೊಳೆಯಬಲ್ಲವು! ಆದ್ದರಿಂದಲೇ ಕತೆಯನ್ನಾಗಲೀ, ನಾಟಕವನ್ನಾಗಲೀ, ವೈಚಾರಿಕ ಕೃತಿಯನ್ನಾಗಲೀ ಓದುತ್ತಾ, ಓದುತ್ತಾ ಹೊಸ ಹೊಸ ಸತ್ಯ ಕಂಡು, ಇತರರಿಗೂ ಆ ಸತ್ಯಗಳನ್ನು ಕಾಣಿಸಬಲ್ಲ ವ್ಯವಧಾನದ ಓದು ಸದಾ ನಮ್ಮ ಪಾಲಿಗಿರಲಿ.
ಹಾಗೆಯೇ, ಯಾವುದಕ್ಕಾದರೂ, ಯಾರಿಗಾದರೂ ಕೊನೆಯ
ವಿದಾಯ ಹೇಳಬೇಕಾಗಿ ಬಂದಾಗ ನೀಷೆ ಒಡಿಸ್ಯೂಸನ ವಿದಾಯದ ಭಾಗ ಓದಿದಾಗ ಕಂಡ ಹೊಸ ಕಾಣಿಕೆ ನಮ್ಮಂಥ ಹುಲುಮಾನವರಿಗೂ ದಾರಿ ತೋರುತ್ತಿರಲಿ!