ಹಾವಿನ ಸಂಕೇತದ ವಿಸ್ಮಯಕರ ವ್ಯಾಖ್ಯಾನಗಳು

ಆಹಾವಿನ ಕತೆ ರಾಮಾನುಜನ್‌ಗೆ ಸಿಕ್ಕಿದ್ದು ಸತ್ಯಭಾಮ ಕಂಬಾರ ಅವರ ಊರಾದ ಅಕ್ಕತಂಗೇರ ಹಾಳದಲ್ಲಿ. ಎ.ಕೆ. ರಾಮಾನುಜನ್ ಇಂಗ್ಲಿಷಿಗೆ ಅನುವಾದಿಸಿದ ಈ ಕತೆಯನ್ನು ಕರಿಗೌಡರ ಬೀಚನಹಳ್ಳಿ ‘ನಾಗಮಂಡಲ’ ಎಂಬ ಹೆಸರಿನಲ್ಲಿ ಕನ್ನಡಕ್ಕೆ ಅನುವಾದಿಸಿದರು. ಈ ಕತೆಯ ಸಾರಾಂಶ:
ತರುಣಿ ಕಾಮಾಕ್ಷಿಯ ಗಂಡ ತನ್ನ ಹೆಂಡತಿಯ ಬಗ್ಗೆ ಒಲವಿಲ್ಲದೆ, ಪ್ರೇಯಸಿಯ ಮನೆಗೆ ಮಲಗಲು ಹೋಗುತ್ತಿದ್ದ. ಇದನ್ನು ತಪ್ಪಿಸಲು ಮುದುಕಿಯೊಬ್ಬಳು ಕಾಮಾಕ್ಷಿಗೆ ಒಂದು ಬೇರನ್ನು ತೇಯ್ದು ಪಾಯಸ ತಯಾರಿಸಿ, ‘ಇದನ್ನು ನಿನ್ನ ಗಂಡನಿಗೆ ಕುಡಿಸು; ಅವನು ನಿನ್ನ ‘ಕೈವಶ’ ಆಗುತ್ತಾನೆ’ ಎಂದಳು. ರಕ್ತದಂತಿದ್ದ ಪಾಯಸ ಕಂಡ ಕಾಮಾಕ್ಷಿಗೆ ‘ಇದನ್ನು ಕುಡಿದು ಗಂಡ ತೀರಿಕೊಂಡರೆ ಗತಿಯೇನು!’ ಎಂದು ದಿಗಿಲಾಗಿ ಪಾಯಸವನ್ನು ಮನೆಯ ಹಿತ್ತಲಿನಲ್ಲಿದ್ದ ಹುತ್ತಕ್ಕೆ ಸುರಿದಳು. ಹುತ್ತದಲ್ಲಿದ್ದ ಹಾವು ಪಾಯಸ ಕುಡಿಯಿತು; ಮತ್ತೇರಿದ ಹಾವಿಗೆ ಕಾಮಾಕ್ಷಿಯ ಬಗ್ಗೆ ಮೋಹ ಹುಟ್ಟಿತು. ಒಂದು ರಾತ್ರಿ ಆ ಹಾವು ಕಾಮಾಕ್ಷಿಯ ಗಂಡನ ವೇಷದಲ್ಲಿ ಬಂದು ಅವಳನ್ನು ಕೂಡಿತು. ಕಾಮಾಕ್ಷಿ ಗರ್ಭ ಧರಿಸಿದಳು. ಹಾವು ಕಾಮಾಕ್ಷಿಗೆ ತನ್ನ ನಿಜ ಸ್ವರೂಪ ತೋರಿಸಿ, ‘ನಾನು ನಾಗರಾಜ’ ಎಂದು ಹೇಳಿತು.
ತಾನೆಂದೂ ಕೂಡದ ಕಾಮಾಕ್ಷಿ ಗರ್ಭಿಣಿಯಾಗಿದ್ದನ್ನು ಕಂಡು ಗಂಡ ಕೋಪಗೊಂಡ; ಕಾಮಾಕ್ಷಿಯ ತಂದೆತಾಯಿಗಳಿಗೆ ದೂರು ಕೊಟ್ಟ. ಕಾಮಾಕ್ಷಿ ನಾಗರಾಜನ ಸಲಹೆಯಂತೆ, ‘ನನ್ನ ಹೊಟ್ಟೆಯಲ್ಲಿರುವ ಮಗು ನನ್ನ ಗಂಡನದೇ; ಬೇಕಾದರೆ ನಾನು ಶಿವನ ಗುಡಿಯಲ್ಲಿ ನಾಗರಹಾವನ್ನು ಕೈಯಲ್ಲಿ ಹಿಡಿದು ಈ ಸತ್ಯವನ್ನು ಸಿದ್ಧ ಮಾಡಿ ತೋರಿಸುತ್ತೇನೆ’ ಎಂದಳು. ಊರವರೆಲ್ಲ ಶಿವನ ಗುಡಿಗೆ ಬಂದರು. ಐದು ಹೆಡೆಯ ನಾಗರಾಜ ಶಿವಲಿಂಗದ ಮೇಲೆ ಸಿಂಬೆ ಮಾಡಿಕೊಂಡು ಕೂತಿದ್ದ. ಹಾವನ್ನು ಕೈಯಲ್ಲಿ ಹಿಡಿದುಕೊಂಡ ಕಾಮಾಕ್ಷಿ, ‘ದೇವರೇ! ನನ್ನ ಹೊಟ್ಟೆಯಲ್ಲಿರುವ ಕುಡಿ ನನ್ನ ಗಂಡನದೇ. ನಾನು ಹೇಳಿದ್ದರಲ್ಲಿ ಏನಾದರೂ ತಪ್ಪಿದ್ದರೆ ನನ್ನನ್ನು ಕಚ್ಚಿ ಸಾಯಿಸು’ ಎಂದಳು.
ನಾಗರಾಜ ಕಾಮಾಕ್ಷಿಯ ಕೊರಳಿನ ಸುತ್ತ ಹಾರವಾಗಿ ಸುತ್ತಿಕೊಂಡು ಹೆಡೆ ಬಿಚ್ಚಿದ. ಜನ ಕಾಮಾಕ್ಷಿಯ ಪಾತಿವ್ರತ್ಯವನ್ನು ಕೊಂಡಾಡಿದರು. ಆಕೆಯ ಪಾತಿವ್ರತ್ಯದ ಬಗ್ಗೆ ಖಾತ್ರಿಯಾದ ಗಂಡ ತನ್ನ ಹೆಂಡತಿ, ಮಗುವಿನ ಜೊತೆ ಸಂತೋಷದಿಂದ ಇರತೊಡಗಿದ. ಹಲವು ದಿನಗಳಾದ ಮೇಲೆ ನಾಗರಾಜ ಒಂದು ರಾತ್ರಿ ಕಾಮಾಕ್ಷಿ ಮಲಗುವ ಕೋಣೆಗೆ ಬಂದ. ಕಾಮಾಕ್ಷಿ ಗಂಡ, ಮಗುವಿನ ಜೊತೆ ನೆಮ್ಮದಿಯಾಗಿ ನಿದ್ರಿಸುತ್ತಿದ್ದಳು. ಅದನ್ನು ಕಂಡ ನಾಗರಾಜನಿಗೆ ಹೊಟ್ಟೆ ಕಿಚ್ಚಾಗಿ, ಸಂಕಟವಾಯಿತು; ಅವಳ ಕೂದಲಿಗೆ ಸುತ್ತಿಕೊಂಡು ಮಂಚದ ತುದಿಗೆ ನೇಣು ಹಾಕಿಕೊಂಡು ಸತ್ತ. ಮಾರನೆಯ ಬೆಳಗ್ಗೆ ಸತ್ತ ಹಾವನ್ನು ಕಂಡು ದುಃಖಿಸಿದ ಕಾಮಾಕ್ಷಿ ‘ಈ ಹಾವು ನಿನ್ನನ್ನು ನನಗೆ ಮರಳಿ ತಂದುಕೊಟ್ಟಿತು’ ಎಂದು ಗಂಡನೆದುರು ಹಾವಿನ ಮಹಿಮೆಯನ್ನು ಹೊಗಳಿದಳು; ಮಗನ ಕೈಯಲ್ಲಿ ನಾಗರಾಜನಿಗೆ ಅಂತ್ಯಸಂಸ್ಕಾರ ಮಾಡಿಸಿದಳು.
ಮುಂದೊಮ್ಮೆ ಕಂಬಾರ ಮತ್ತು ಕಾರ್ನಾಡರಿಗೆ ಎ.ಕೆ. ರಾಮಾನುಜನ್ ಈ ಜನಪದ ಕತೆಯನ್ನು ಹೇಳಿದರು. ಈ ಕತೆ ಇಬ್ಬರು ನಾಟಕಕಾರರ ಸೃಜನಶೀಲತೆಯನ್ನು ಎರಡು ಬಗೆಯಲ್ಲಿ ಕೆಣಕಿ, ‘ಸಿರಿಸಂಪಿಗೆ’, ‘ನಾಗಮಂಡಲ’ ನಾಟಕಗಳು ಹುಟ್ಟಿ ಬೇರೆ ಬೇರೆ ದಿಕ್ಕಿನಲ್ಲಿ ಬೆಳೆದು ಕನ್ನಡಿಗರಿಗೆ ಪರಿಚಿತವಾಗಿವೆ. ನಾಗಮಂಡಲ ಸಿನೆಮಾ ಕೂಡ ಆಗಿದೆ.
ಈ ಜನಪದ ಕತೆ ಎಲ್ಲಿ ಹುಟ್ಟಿತೋ! ಎಲ್ಲಿಗೆ ಹೋಯಿತೋ! ಇಂಥದೊಂದು ತಮಿಳು ಜನಪದ ಕತೆಯನ್ನು ಸುಧೀರ್ ಕಾಕರ್ ತಮ್ಮ ‘ಇಂಟಿಮೇಟ್ ರಿಲೇಷನ್ಸ್’ ಪುಸ್ತಕದಲ್ಲಿ ವಿಶ್ಲೇಷಿಸುತ್ತಾರೆ: ತಮಿಳಿನ ‘ಮದನ ಕಾಮರಾಜ ಕಥೈ’ಯಲ್ಲಿ ಸರ್ಪ ಮತ್ತೆ ತನ್ನ ಹೆಣ್ಣನ್ನು ಹುಡುಕಿಕೊಂಡು ಬರುತ್ತದೆ. ಹೆಣ್ಣು ಸುಖ ನಿದ್ರೆಯಲ್ಲಿದ್ದಾಳೆ; ಗರ್ಭ ಧರಿಸಿದ್ದಾಳೆ. ತಾಯ್ತನದ ನಿರೀಕ್ಷೆಯ ಸಂತೃಪ್ತಿಯಲ್ಲಿರುವ ಅವಳನ್ನು ಕಂಡು ಸರ್ಪಕ್ಕೆ ದುಃಖವಾಗುತ್ತದೆ; ಸರ್ಪ ಅವಳ ಜಡೆಯಲ್ಲಿ ನೇಣು ಹಾಕಿಕೊಂಡು ಸಾಯುತ್ತದೆ.
‘ಸರ್ಪ ಈ ಬಗೆಯಲ್ಲಿ ಸಾಯುವುದರಲ್ಲಿ ಕಾಮ ಕುರಿತಂತೆ ಭಾರತೀಯ ಸಂಸ್ಕೃತಿಯ ಒಂದು ನೋಟವನ್ನು, ಅಂದರೆ ಕಾಮದ ಉದ್ದೇಶ ತಾಯ್ತನದ ಹೊತ್ತಿಗೆ ಮುಗಿಯಿತು ಎಂಬುದನ್ನು ಈ ಕತೆ ಸೂಚಿಸುತ್ತದೆ’ ಎನ್ನುತ್ತಾರೆ ಸುಧೀರ್ ಕಾಕರ್. ಅವರ ಪ್ರಕಾರ ಭಾರತೀಯ ದೃಷ್ಟಿಯಲ್ಲಿ ಕಾಮಕ್ಕೆ ಇರುವ ಪರಿಧಿಯೆಂದರೆ ತಾಯ್ತನ, ಅಷ್ಟೇ. ಗಂಡನಿಂದ ತಿರಸ್ಕೃತಳಾದ ಹೆಣ್ಣಿಗೆ ಗರ್ಭ ನೀಡಿ, ಅವಳಿಗೆ ತಾಯ್ತನ ದೊರೆತ ಮೇಲೆ ಸರ್ಪ ಸಾಯುತ್ತದೆ. ಸರ್ಪ ಶಿಶ್ನದ ಅಥವಾ ಕಾಮದ ಸಂಕೇತವೆನ್ನುವುದನ್ನು ಕನ್ನಡ, ತಮಿಳು ಕತೆಗಳೆರಡೂ ಸೂಚಿಸುತ್ತವೆ. ಕಂಬಾರರ ಸಿರಿಸಂಪಿಗೆ ಕೂಡ ಕೊನೆಗೆ ದಾಂಪತ್ಯ ಹಾಗೂ ತಾಯ್ತನದ ನೆಮ್ಮದಿಗೆ ಮರಳುತ್ತಾಳೆ. ಕಾಮದ ಉದ್ದೇಶ ಇಷ್ಟೇ ಎಂಬ ಭಾರತೀಯ ನೋಟವನ್ನೇ ಕಂಬಾರರ ‘ಸಿರಿಸಂಪಿಗೆ’ ನಾಟಕದ ಕೊನೆಯೂ ಹೇಳುತ್ತಿರುವಂತಿದೆ.
ತಮಿಳಿನ ‘ಮದನಕಾಮರಾಜ ಕಥೈ’ ಹಾಗೂ ಕಂಬಾರ, ಕಾರ್ನಾಡರು ಬಳಸಿರುವ ಅಕ್ಕತಂಗೇರ ಹಾಳದ ಜನಪದ ಕತೆಗಿಂತ ಕೊಂಚ ಭಿನ್ನವಾದ ‘ಪರವುಗುಂಡಿ ಕತೆ’ ಟಿ. ಗೋವಿಂದರಾಜು ಸಂಪಾದಿಸಿರುವ ‘ಬಿಸಿನೆಸ್ ಮ್ಯಾನೇಜ್‌ಮೆಂಟ್ ಕತೆಗಳು’ ಸಂಕಲನದಲ್ಲಿದೆ. ದೊಡ್ಡಬಳ್ಳಾಪುರದ ಬಳಿಯ ತೂಬುಗೆರೆಯ ಹನುಮಂತಯ್ಯ ಅಲಿಯಾಸ್ ವಾಗಿನ್ ಹೇಳಿದ ಕತೆಯಿದು:
ಚಂದ್ರಗಿರಿ ಪಟ್ಟಣದ ನವಬೋದರಾಜನ ಐದನೇ ಮಗನಿಗೆ ಬಡವಿ ಪರವುಗುಂಡಿಯನ್ನು ಕೊಟ್ಟು ಮದುವೆ ಮಾಡುತ್ತಾರೆ. ಅಷ್ಟೊತ್ತಿಗಾಗಲೇ ಈ ಐದನೇ ಮಗ ‘ಪದ್ಮಾವತಿ ಮನೇ ಪಳಗ್ಬಿಟ್ಟ’ ವನಾಗಿರುತ್ತಾನೆ. ಪರವುಗುಂಡಿ ರಾಜರ ಮನೆಯ ತೊತ್ತಾಗಬೇಕಾಗುತ್ತದೆ. ಒಮ್ಮೆ ಅವಳ ಸ್ಥಿತಿ ನೋಡಿ ಗಂಡನಿಗೆ ನಾಚಿಕೆಯಾಗಿ, ‘ನನ್ ಹೆಂಡ್ತೀನ ಹಿಂಗೆ ಎಮ್ಮೆ ಕಾಯಂಗೆ ಮಾಡ್ಬಿಟ್ಟೆನಲ್ಲಾ, ನನಗಿನ್ನ ಹೆಂಡ್ತೀನೂ ಬ್ಯಾಡ. ಮನೇನೂ ಬ್ಯಾಡ, ದೇಸಾಂತ್ರ ಹೋಗ್ಬಿಡ್ಬೇಕು’ ಅಂತ ತೀರ್ಮಾನ ಮಾಡ್ದ. ಗಂಡ ಕುದುರೆಯೇರಿ ದೇಸಾಂತ್ರ ಹೊರಟಾಗ ಪರವುಗುಂಡಿ ಬರಿಗಾಲಲ್ಲೇ ಅವನನ್ನು ಹಿಂಬಾಲಿಸುತ್ತಾಳೆ. ಕೊನೆಗೆ ಇಬ್ಬರೂ ಒಂದೇ ಮನೆಯಲ್ಲಿ ಇರುವಂತಾಗುತ್ತದೆ. ಪರವುಗುಂಡಿಯ ಸ್ಥಿತಿ ಹಾಗೇ ಮುಂದುವರಿಯುತ್ತದೆ. ಅಲ್ಲೂ ಗಂಡ ನಾಯಕಸಾನಿಯ ಮನೆಗೆ ರೂಢಿಯಾಗುತ್ತಾನೆ!
ಪರವುಗುಂಡಿಯ ಸ್ಥಿತಿ ಕಂಡು ಮರುಗಿದ ಮುದುಕಿಯೊಬ್ಬಳು ಮದ್ದು ಹಾಕಿದ ಅನ್ನವನ್ನು ಗಂಡನಿಗೆ ಉಣ್ಣಿಸಿದರೆ ಅವನು ಇವಳಿಗೆ ಒಲಿಯುವನೆಂದು ಮದ್ದು ಕೊಡುತ್ತಾಳೆ. ಪರವುಗುಂಡಿ ಮದ್ದು ಬೆರೆಸಿ ಅಡುಗೆ ಮಾಡುತ್ತಾಳೆ; ನಂತರ ಹೆದರಿ ಹಿಂಜರಿದು ಅಡುಗೆ ಬೇಯಿಸಿದ ಮಡಕೆಯನ್ನು ಬಾವಿಗೆಸೆಯುತ್ತಾಳೆ. ಮಡಕೆ ಸರ್ಪದ ತಲೆಯ ಮೇಲೆ ಬೀಳುತ್ತದೆ. ಕರ್ಣಕುಂಡ್ಲದಿಂದ ಬಳಲುತ್ತಿದ್ದ ಸರ್ಪಕ್ಕೆ ಮಹಾಪತಿವ್ರತೆಯ ಕೈಯಲ್ಲಿ ಮಾತ್ರ ಕರ್ಣಕುಂಡ್ಲ ಒಡೆಯುತ್ತದೆ ಎಂಬ ಕಣಿಯಿತ್ತು. ಈಗ ಶಾಪ ವಿಮೋಚನೆಯಾದ ಸರ್ಪ ಕೃತಜ್ಞತೆಯಿಂದ ಪರವುಗುಂಡಿಗೆ ಸಹಾಯ ಮಾಡಲು ಬರುತ್ತದೆ. ಅವಳ ಸ್ಥಿತಿ ಅರಿತ ಸರ್ಪ ಬೆಳಗಿನ ಹೊತ್ತು ಹನ್ನೆರಡು ವರ್ಷದ ಹುಡುಗ ‘ನಾಗೀಂದ್ರ’ನ ರೂಪು ತಳೆಯುತ್ತದೆ. ಪರವುಗುಂಡಿಯ ಗಂಡನ ಗೆಳೆಯನಾದ ನಾಗೀಂದ್ರ ಅವರ ಮನೆಗೆ ‘ರೂಢಿಯಾಗುತ್ತಾನೆ’. ಒಂದು ರಾತ್ರಿ ನಾಗೀಂದ್ರ ಪರವುಗುಂಡಿಯ ಗಂಡನ ವೇಷದಲ್ಲಿ ಆಕೆಯನ್ನು ಕೂಡುತ್ತಾನೆ. ಆಕೆ ಗರ್ಭಿಣಿಯಾಗುತ್ತಾಳೆ.
ಈ ಕತೆಯ ಮುಂದಿನ ತಿರುವು ಅಚ್ಚರಿ ಹುಟ್ಟಿಸುತ್ತದೆ. ತಮಿಳು ಜನಪದ ಕತೆ; ಸತ್ಯಭಾಮ ಕಂಬಾರ ಹೇಳಿದ ಕತೆ; ಕಂಬಾರ, ಕಾರ್ನಾಡರ ನಾಟಕಗಳು ಈ ಎಲ್ಲವುಗಳಿಗಿಂತ ಪರವುಗುಂಡಿ ಕತೆಯ ಕೊನೆ ವಿಶಿಷ್ಟವಾಗಿದೆ:
ಪರವುಗುಂಡಿಯ ಗಂಡ ಪತ್ನೀಗರ್ಭದ ಚೋದ್ಯದಿಂದ ಅಚ್ಚರಿಗೊಂಡು ಒಂದು ದಿನ ರಾತ್ರಿ ಮನೆಯ ಮೇಲೆ ಕಾವಲು ಕೂರುತ್ತಾನೆ. ಸರ್ಪವು ಮೂಲ ವೇಷವನ್ನು ಕಳಚಿ ತನ್ನ ವೇಷ ಧರಿಸುವುದನ್ನು ಕಂಡು ಗಂಡ ಮೂರ್ಛೆ ಹೋಗುತ್ತಾನೆ. ಇದಾದ ಮೇಲೂ ಆತ ನಾಯಕಸಾನಿಯ ಮನೆಗೆ ಹೋಗುತ್ತಾನೆ. ಪರವುಗುಂಡಿಗೆ ಮಕ್ಕಳಾದ ಮೇಲೆ ಅವಳು ತನ್ನ ಮೂಲ ಗಂಡನ ಜೊತೆ ರಾಣಿಯಾಗಿ ಮತ್ತೆ ಪಟ್ಟಣಕ್ಕೆ ಮರಳುತ್ತಾಳೆ.
‘ಪರುವುಗುಂಡಿ’ ಕತೆ ಕುರಿತು ಗೋವಿಂದರಾಜು ಬರೆಯುತ್ತಾರೆ: ‘ಮನುಷ್ಯನ ಜಟಿಲ ಬದುಕಿನ ಕಷ್ಟ ಸುಖಗಳನ್ನು ನೋಡಿದವರು, ಅನುಭವಗಳಿಂದ ಮಾಗಿದವರು ಈ ಬಗೆಯ ಅನುಭವವೂ ಜೀವನದ ಭಾಗವೆಂದು ಒಪ್ಪಿಕೊಂಡು ಒಟ್ಟಿಗೆ ಬದುಕನ್ನು ಮುಂದುವರಿಸುವ ಈ ಆರೋಗ್ಯಕರ ಧೋರಣೆ ತಳ ಸಮುದಾಯಗಳಲ್ಲಿ ಇವತ್ತಿಗೂ ಜೀವಂತವಾಗಿದೆ. ಅನುಮಾನದ ಅಪಸ್ವರ ಕೇಳಿ ಬಂದ ತಕ್ಷಣ ಪತ್ನಿಯನ್ನೇ ರಾಜ್ಯ ಬಿಟ್ಟು ಕಳಿಸಿದ ರಾಮನ ಕತೆಗೆ ಹೋಲಿಸಿದರೆ ನಮ್ಮ ಜನಪದರ ಈ ಉದಾರ ದೃಷ್ಟಿಕೋನ ಅನುಕರಣೀಯ ಆದರ್ಶವಾಗಿದೆ.’
ದೊಡ್ಡಬಳ್ಳಾಪುರದ ಸುತ್ತಿನ ಈ ಜನಪದ ಕತೆಯನ್ನು ಕಂಬಾರ, ಕಾರ್ನಾಡರು ಕೇಳಿಸಿಕೊಂಡಿದ್ದರೆ ಅವರ ನಾಟಕಗಳ ಕೊನೆ ಹೇಗಿರುತ್ತಿತ್ತೋ! ಈ ಇಬ್ಬರೂ ಜನಪದ ಕತೆಯ ಹಾವಿನ ಸಂಕೇತವನ್ನು ಫ್ರಾಯ್ಡಿಯನ್ ಮನೋವಿಶ್ಲೇಷಣೆಯ ಹಿನ್ನೆಲೆಯಲ್ಲಿ ಗ್ರಹಿಸಿ, ತಂತಮ್ಮ ಕಲ್ಪನಾವಿಲಾಸದ ಮೂಲಕ ಎರಡು ಆಧುನಿಕ ನಾಟಕಗಳನ್ನು ಸೃಷ್ಟಿಸಿದಂತಿದೆ. ಆದರೆ, ಈ ಇಬ್ಬರೂ ಎಷ್ಟೇ ‘ಆಧುನಿಕ’ ನಾಟಕಕಾರರಾದರೂ ಜನಪದರು ಸೃಷ್ಟಿಸಿದ ಪರವುಗುಂಡಿಯ ಕತೆ ಹೊಮ್ಮಿಸುವ ಔದಾರ್ಯ ಹಾಗೂ ಭಾರತದ ಕುಟುಂಬಗಳಲ್ಲಿ ಕಾಮ, ವ್ಯಭಿಚಾರಗಳ ಬಗೆಗೆ ಕಂಡೂ ಕಾಣದಂತೆ ಇರುವ ಸಹಜ ಉದಾರ ಗುಣ ಅವರ ನಾಟಕಗಳಲ್ಲಿ ಮೂಡಲಿಲ್ಲವಲ್ಲ!
ಇದು ಕಂಬಾರ, ಕಾರ್ನಾಡರ ಸ್ವತಂತ್ರ ಕಲ್ಪನಾವಿಲಾಸ ಕುರಿತ ಆಕ್ಷೇಪಣೆಯಲ್ಲ; ಸಾಹಿತ್ಯದ ವಿದ್ಯಾರ್ಥಿಯೊಬ್ಬನ ಒಂದು ವಿಚಿತ್ರ ಅಚ್ಚರಿಯ ಉದ್ಗಾರ, ಅಷ್ಟೆ!