ಬಾನು ಮುಷ್ತಾಕ್‌ರನ್ನು ಬೂಕರ್ ಅಂಗಳಕ್ಕೆ ಒಯ್ದ ದೀಪಾ ಭಸ್ತಿ!

ಕನ್ನಡ ಲೇಖಕಿ ಬಾನು ಮುಷ್ತಾಕ್ ಹೆಸರು ಈಗ ಎಲ್ಲೆಡೆ ಕೇಳಿ ಬರುತ್ತಿದೆ. ದೀಪಾ ಭಸ್ತಿ ಮಾಡಿದ ಬಾನು ಮುಷ್ತಾಕ್ ಅವರ ಹನ್ನೆರಡು ಕತೆಗಳ ಅನುವಾದಿತ ಕೃತಿ ‘ಹಾರ್ಟ್ ಲ್ಯಾಂಪ್’ 2025ರ ಬೂಕರ್ ಪ್ರಶಸ್ತಿಯ ಅಂತಿಮ ಹದಿಮೂರು ಪುಸ್ತಕಗಳ ‘ಲಾಂಗ್ ಲಿಸ್ಟ್’ಗೆ ಜಿಗಿದಿದೆ. ಈ ಜಿಗಿತದ ಖುಷಿ ಕುರಿತು ಲೇಖಕಿ ಶಾಕಿರಾ ಖಾನುಂ ಜೊತೆ ಮಾತಾಡುತ್ತಿದ್ದರೆ, ಅವರ ಸಂಭ್ರಮ ನನ್ನ
ಖುಷಿಗಿಂತ ಜೋರಾಗಿತ್ತು. ಕಾರಣ, ಅವರು ಬರೆಯಬಹುದಾಗಿದ್ದ ಕತೆಗಳನ್ನು ಬಾನು ಬರೆದಿದ್ದರು. ತಮ್ಮ ಪುಸ್ತಕವನ್ನು ಪ್ರಶಸ್ತಿಗೆ ಕಳಿಸಿದ್ದು ಕೂಡ ಗೊತ್ತಿರದ ಬಾನು ಅವರಿಗೆ ಇದೆಲ್ಲ ಅಚ್ಚರಿ ತಂದಂತಿತ್ತು.
ದಿಲ್ಲಿಯ ಪ್ರಕಾಶನ ಸಂಸ್ಥೆಯ ಗೆಳೆಯರೊಬ್ಬರು ಬಾನು ಮುಷ್ತಾಕ್‌ರ ಕತೆಗಳ ಬಗ್ಗೆ ನನ್ನನ್ನು ಕೇಳಿದಾಗ, ಹಿಂದೊಮ್ಮೆ ಓದಿದ್ದ ಅವರ ಕತೆಗಳಲ್ಲಿರುವ ಬಂಡಾಯದ ಸಹಜತೆ, ಅನಿವಾರ್ಯತೆ, ಪ್ರಾಮಾಣಿಕತೆ ಎಲ್ಲವೂ ನೆನಪಾದವು. ಬಾನು ಕತೆಗಳಲ್ಲಿ ಬರುವ ಮುಸ್ಲಿಮ್ ಸಮುದಾಯದ ಕಷ್ಟ, ಸುಖ, ಆಧುನಿಕ ಮುಸ್ಲಿಮ್ ಹೆಣ್ಣುಗಳ ತಳಮಳಕ್ಕೆ ಅವರು ಧ್ವನಿಯಾಗಿದ್ದು ಇವೆಲ್ಲದರ ಬಗ್ಗೆ ಅವರಿಗೆ ಹೇಳಿದೆ. ಆ ಕತೆಗಳನ್ನು ಈಗ ಓದಿದರೆ ಅವುಗಳ ಕಲಾತ್ಮಕ ಮಹತ್ವದ ಬಗ್ಗೆ ಏನನ್ನಿಸಬಹುದು ಎಂಬ ಬಗ್ಗೆ ನನಗೆ ಗ್ಯಾರಂಟಿಯಿರಲಿಲ್ಲ.
ಆದರೆ ಈ ಕತೆಗಳಿಗೆ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿರುವ ಸಾಂಸ್ಕೃತಿಕ-ಸಾಮಾಜಿಕ ಮಹತ್ವದ ಬಗ್ಗೆ ಖಾತ್ರಿಯಿದೆ ಎಂಬುದನ್ನು ಅವರಿಗೆ ಒತ್ತಿ ಹೇಳಿದೆ.
ಬಾನು ಮುಷ್ತಾಕ್ ಈ ಕತೆಗಳ ಹೊರಗೆ ಮಾಡಿರುವ ಹೋರಾಟಗಳು, ಲಾಯರ್ ಆಗಿ ಅವರು ಮಾಡಿರುವ ಸಮುದಾಯದ ಕೆಲಸಗಳು, ಅವರು ಎದುರಿಸಿರುವ ಮೂಲಭೂತವಾದಿಗಳ ಕಿರಿಕಿರಿಗಳು... ಇವೆಲ್ಲವೂ ಅವರನ್ನು ಕನ್ನಡದ ಅನನ್ಯ ಆಕ್ಟಿವಿಸ್ಟ್-ಲೇಖಕಿಯಾಗಿಸಿವೆ. ಅದರಲ್ಲೂ ಮುಸ್ಲಿಮ್ ಸಮುದಾಯದ ಹೆಣ್ಣೊಬ್ಬಳು ಲೇಖನಿ ಹಿಡಿಯುವುದೇ ಒಂದು ‘ಆಕ್ಟಿವಿಸಂ’ ಎನ್ನುವಂತಿದ್ದ
ಇಪ್ಪತ್ತನೆಯ ಶತಮಾನದ ಎಂಭತ್ತು-ತೊಂಭತ್ತರ ದಶಕದ ಕಾಲದಲ್ಲಿ ಬಾನು ದಿಟ್ಟವಾದ ಕತೆ, ವರದಿ, ವಿಶ್ಲೇಷಣೆಗಳನ್ನು ಬರೆದ ರೀತಿ ಕರ್ನಾಟಕದ ಸಾಂಸ್ಕೃತಿಕ ಚರಿತ್ರೆಯಲ್ಲಿ ದಾಖಲಾಗಲು ಅತ್ಯಂತ ಅರ್ಹವಾಗಿದೆ.
ಒಂದು ಪುಸ್ತಕ ಬರೆದ ನಂತರ ಅಥವಾ ಅದು ಇಂಗ್ಲಿಷಿಗೆ ಅನುವಾದ ಆದ ನಂತರ ಅದಕ್ಕೆ ಸ್ಪಂದಿಸುವ ಓದುಗ, ಓದುಗಿಯರನ್ನು ಹುಡುಕುವುದನ್ನು ಬಿಟ್ಟು ಸ್ಥಳೀಯ, ಅಂತರ್‌ರಾಷ್ಟ್ರೀಯ ಪ್ರಶಸ್ತಿಗಳ ಜಾಡು ಹುಡುಕುವ ಲೇಖಕ, ಲೇಖಕಿಯರು ಜಗತ್ತಿನ ಎಲ್ಲೆಡೆ ಇರುತ್ತಾರೆ. ಕನ್ನಡ ಪುಸ್ತಕಗಳ ಇಂಗ್ಲಿಷ್ ಪರಕಾಯ ಪ್ರವೇಶದ ಬಗ್ಗೆ ಈಚೆಗೆ ಪ್ರಕಟವಾದ ನನ್ನದೊಂದು ಲೇಖನ ಕೆಲವರಿಗೆ ವಿನಾಕಾರಣ ಕಿರಿಕಿರಿ ಹುಟ್ಟಿಸಿದ್ದನ್ನು ನೀವು ಗಮನಿಸಿರಬಹುದು. ಒಂದು ಪ್ರಶಸ್ತಿಗೆ ಯಾವ ಥರದ ಪುಸ್ತಕಗಳು ಸೂಟಾಗುತ್ತವೆ; ಈ ಪ್ರಶಸ್ತಿ ಪಡೆಯಲು ಇತ್ತೀಚಿನ ವರ್ಷಗಳಲ್ಲಿ ತನ್ನ ವ್ಯಕ್ತಿತ್ವ ಹೇಗೆಲ್ಲ ಬಿಂಬಿತವಾಗಿರಬೇಕು ಎಂದು ‘ರಿಸರ್ಚ್’ ಮಾಡುವ ಲೇಖಕ, ಲೇಖಕಿಯರೂ ಲೋಕದಲ್ಲಿರುತ್ತಾರೆ! ಒಂದು ಅಂತರ್‌ರಾಷ್ಟ್ರೀಯ ಪ್ರಶಸ್ತಿಗೆ ಅರ್ಹವಾಗಲು ‘ಪರಿಸರವಾದಿ’ ಎಂದು ಕೂಡ ಪರಿಚಿತವಾಗಿರಬೇಕು ಎಂದು ಲೇಖಕರೊಬ್ಬರಿಗೆ ಯಾರೋ ಹೇಳಿದರು. ಸರಿ, ಅವರು ಮೇಧಾ ಪಾಟ್ಕರ್ ಸರ್ದಾರ್ ಸರೋವರ್ ಅಣೆಕಟ್ಟಿನ ವಿರುದ್ಧ ಹೋರಾಡುತ್ತಿದ್ದ ಜಾಗಕ್ಕೆ ಹೋಗಿ ಅವರನ್ನು ಬೆಂಬಲಿಸಿ ಕೂತರು. ಆದರೆ ಅಲ್ಲಿ ಹಲವು ವರ್ಷಗಳಿಂದ ಹೋರಾಡುತ್ತಿದ್ದವರು ಈ ಇನ್ಸ್ಟಂಟ್ ಪರಿಸರವಾದಿಯನ್ನು ‘ದಯಮಾಡಿ ಹೊರಡಿ’ ಎಂದ ಮೇಲೆ ಆ ಮಹನೀಯರು ಅಲ್ಲಿಂದ ಹೊರಡಲೇಬೇಕಾಯಿತು!
ಆದರೆ ಬಾನು-ದೀಪಾ ಜೋಡಿಯ ‘ಹಾರ್ಟ್ ಲ್ಯಾಂಪ್’ ಕತೆಗಳ ಈ ಸಹಜ ಸೀಮೋಲ್ಲಂಘನದ ಹಿಂದೆ ಇಂಥ ಯಾವ ಸರ್ಕಸ್ಸುಗಳೂ ಇರಲಿಲ್ಲ! ಅಥವಾ ಆ ಥರದ ತಲುಬುಗಳಿಗೆಲ್ಲ ಬಾನು ಥರದ ಲೇಖಕಿಯರಿಗೆ ಎಂದೂ ಸಮಯವಿರಲಿಲ್ಲ. ಬಾನು ಹೆಣ್ಣಾಗಿ, ಒಬ್ಬ ಮುಸ್ಲಿಮ್ ಹೆಣ್ಣಾಗಿ ತಮ್ಮ ತಳಮಳ ಹಾಗೂ ಸುತ್ತಮುತ್ತಲಿನ ಮುಸ್ಲಿಮರ ಕಷ್ಟಗಳ ಬಗ್ಗೆ ಮಾತು ಕೊಡಲು ಕತೆ ಬರೆದವರು. ಅವರು ಬರೆಯುವ ಹೊತ್ತಿಗೆ ಲಂಕೇಶರು ಮುಸ್ಲಿಮ್ ಧ್ವನಿಗಳಿಗೆ ತಮ್ಮ ‘ಲಂಕೇಶ್ ಪತ್ರಿಕೆ’ಯಲ್ಲಿ ಹೆಚ್ಚು ಜಾಗ ಕೊಡತೊಡಗಿದ್ದರು. ಸಾರಾ ಅಬೂಬಕರ್, ಬಾನು ಮೊದಲಾದವರು ಇಲ್ಲಿ ಬರೆಯತೊಡಗಿದರು. ಮುಸ್ಲಿಮ್ ಮಹಿಳಾ ಲೋಕದ ಬನಿ ಕರ್ನಾಟಕದ ತುಂಬ ಹಬ್ಬತೊಡಗಿತು.
ಹೀಗೆ ತಮ್ಮ ಪತ್ರಿಕೆಯಲ್ಲಿ ಮುಸ್ಲಿಮ್ ಲೋಕವನ್ನು ಮಂಡಿಸುವುದಕ್ಕೆ ಒತ್ತು ಕೊಡಲು ಲಂಕೇಶರ ಲೋಹಿಯಾವಾದಿ-ಸಮಾಜವಾದಿ ದೃಷ್ಟಿಕೋನವೂ ಕಾರಣವಾಗಿತ್ತು. ಉದಾರವಾದಿ ರಾಜಕಾರಣಿ ನಝೀರ್ ಸಾಬ್ ಕರ್ನಾಟಕದ ಮುಖ್ಯ ಮಂತ್ರಿಯಾಗಬೇಕು ಎಂದು ಲಂಕೇಶ್ ಮತ್ತೆ ಮತ್ತೆ ಬರೆಯತೊಡಗಿದ್ದರ ಹಿಂದೆ ಈ ಸಮಾಜವಾದಿ ನೋಟವೂ ಇತ್ತು.
ಎಂಭತ್ತರ ದಶಕದಲ್ಲಿ ರೂಪುಗೊಂಡ ಬಂಡಾಯ ಸಾಹಿತ್ಯದ ವಿಮರ್ಶಾ ಚೌಕಟ್ಟುಗಳು ಕೂಡ ಬಾನು ಮುಷ್ತಾಕ್‌ರ ರೀತಿಯ ಕತೆಗಳು ಕನ್ನಡ ಸಂಸ್ಕೃತಿಯಲ್ಲಿ ಹೆಚ್ಚು ಸ್ವೀಕಾರವಾಗುವಂತೆ ಮಾಡತೊಡಗಿದವು. ನನ್ನ ತುಮಕೂರು ಗೆಳೆಯರಾದ ಸಯೀದ್, ನವೀದ್ ಪ್ರತಿವಾರ ‘ಲಂಕೇಶ್ ಪತ್ರಿಕೆ’ ಓದುತ್ತಾ ಬಾನು ಮುಷ್ತಾಕ್ ಥರದವರ ನಿಲುವುಗಳನ್ನು ಬೆಂಬಲಿಸುತ್ತಾ, ಅಲ್ಲಿನ ಮಸೀದಿಯ ಕೆಲವರ ಕೆಂಗಣ್ಣಿಗೂ ಗುರಿಯಾದರು. ಹೀಗೆ ಬಾನು ಮುಷ್ತಾಕ್‌ರ ಬರಹಗಳು ಅವರಿಗೆ ಅರಿವಿಲ್ಲದೆಯೇ ಕರ್ನಾಟಕದ ಆಧುನಿಕ ಮನಸ್ಸಿನ ಮುಸ್ಲಿಮರ ಚರಿತ್ರೆಯ ಚಕ್ರವನ್ನು ಬದಲಿಸತೊಡಗಿದ್ದವು. ಬಾನುವಿನ ಧ್ವನಿಯಿಂದ ಕೂಡ ಕರ್ನಾಟಕದ ಸಾಂಸ್ಕೃತಿಕ ಬಾನಿನಲ್ಲಿ ಅಲ್ಲಲ್ಲಿ ಬಂಡಾಯದ ಚುಕ್ಕಿಗಳು ಮೂಡತೊಡಗಿದವು. ನೆನಪಿರಲಿ, ಹೀಗೆ ಮೂಡಿದ ಹೆಣ್ಣು ಚುಕ್ಕಿಗಳು ಕೇವಲ ಮುಸ್ಲಿಮ್ ಸಮುದಾಯದ ಕತ್ತಲಿನಿಂದ ಮಾತ್ರ ಬರದೆ, ಹಿಂದೂ ಸಮಾಜದ ವಿವಿಧ ಜಾತಿಗಳಿಂದಲೂ ಬರತೊಡಗಿದ್ದವು. ಆಳವಾದ ಚಡಪಡಿಕೆಯ ಆಧುನಿಕ ಮನಸ್ಸಿನ ಮಹಿಳೆಯೊಬ್ಬರ ಕತೆಗಳು ಮೆಲ್ಲಗೆ, ಸದ್ದಿಲ್ಲದೆ ಕ್ರಾಂತಿ ಮಾಡತೊಡಗಿದ್ದವು.
ಇದೆಲ್ಲದರ ಜೊತೆಗೆ, ಪತಿ ಮುಷ್ತಾಕ್ ಗಟ್ಟಿಯಾಗಿ ಬಾನುವಿನ ಬೆಂಬಲಕ್ಕೆ ನಿಂತಿದ್ದರ ಮಹತ್ವ ಕೂಡ ನನಗೆ ನೆನಪಾಗುತ್ತದೆ. ಬಾನು ಅವರ ಕತೆಗಳು ಕಾಲೇಜುಗಳಲ್ಲಿ ಪಠ್ಯವಾದಾಗ ಅವು ಹುಡುಗ, ಹುಡುಗಿಯರ ಪ್ರಜ್ಞೆಯನ್ನೂ ಬದಲಿಸತೊಡಗಿದವು. ಮುಸ್ಲಿಮ್ ಲೋಕವನ್ನು ಹತ್ತಿರದಿಂದ ನೋಡಿ ಅರ್ಥ ಮಾಡಿಕೊಳ್ಳದೆ ಕೋಮುವಾದದ ವಿಕಾರಕ್ಕೆ ಒಳಗಾಗುತ್ತಿದ್ದ ಕನ್ನಡಿಗರನ್ನು ಬದಲಾಯಿಸಲು ಬಾನು, ಸಾರಾ ಥರದವರ ಕತೆ, ಕಾದಂಬರಿಗಳು ಮಾಡಿರುವ ಕೆಲಸದ ಸಾಮಾಜಿಕ- ಸಾಂಸ್ಕೃತಿಕ ಮಹತ್ವವನ್ನು ಗಂಭೀರವಾಗಿ ಅಧ್ಯಯನ ಮಾಡುವ ಅಗತ್ಯವಿದೆ. ಜಾತ್ಯತೀತ ಕರ್ನಾಟಕದ ಸೃಷ್ಟಿಯಲ್ಲಿ ಇಂಥ ನೂರಾರು ಪ್ರಯತ್ನಗಳು ಕೊಟ್ಟಿರುವ ಕೊಡುಗೆಗಳನ್ನು ನೆನೆದರೆ ಹೆಮ್ಮೆಯಾಗುತ್ತದೆ.
ಬಾನು ಮುಷ್ತಾಕ್‌ರ ಕತೆಗಳ ಅನುವಾದದ ಪುಸ್ತಕ ‘ಹಾರ್ಟ್ ಲ್ಯಾಂಪ್’ನಲ್ಲಿರುವ ‘ರೆಡ್ ಲುಂಗಿ’ ಕತೆಯ ಒಂದು ಭಾಗವನ್ನು ‘ಪ್ಯಾರಿಸ್ ರಿವ್ಯೆ’ನಲ್ಲಿ ಓದಿದೆ. ಹಿಂದೆ ಬಾನು ಅವರ ಕನ್ನಡ ಕತೆಗಳನ್ನು ಓದಿದ್ದಂತೆಯೇ ದೀಪಾರ ಸಹಜ ಇಂಗ್ಲಿಷ್ ಮರುಸೃಷ್ಟಿಯನ್ನೂ ಆರಾಮಾವಾಗಿ ಓದಿದೆ. ದೀಪಾ ಈ ಕತೆಗಳನ್ನು ಅನುವಾದಿಸುವ ಮೊದಲು ಅರೇಬಿಕ್ ಕಲಿತಿದ್ದು ಕೂಡ ಕುತೂಹಲಕರ. ಹವ್ಯಕ ಮಾತೃಭಾಷೆಯ ದೀಪಾ, ದಖನಿಗೆ ಹತ್ತಿರವಿರುವ ಭಾಷೆಯ ಬಾನು ಈ ಇಬ್ಬರ ಜೋಡಿ ಕನ್ನಡ ಸಂಸ್ಕೃತಿಯ ವಿಶಿಷ್ಟ ಅನುಭವಗಳನ್ನು ಜಗತ್ತಿಗೆ ತಲುಪಿಸುವ ಚಾರಿತ್ರಿಕ ಕೆಲಸ ಮಾಡಿದೆ. ‘ಪ್ಯಾರಿಸ್ ರಿವ್ಯೆ’ವರೆಗೆ ಪಯಣಿಸಿದ ದೀಪಾ ಅವರ ಕತಾನುವಾದದ ಟಿಪ್ಪಣಿ ಹಾಗೂ ‘ರೆಡ್ ಲುಂಗಿ’ ಕತೆ ಈಗಾಗಲೇ ಇಬ್ಬರನ್ನೂ ಜಗತ್ತಿನ ಸಾಂಸ್ಕೃತಿಕ ಭೂಪಟದಲ್ಲಿ ಮೂಡಿಸಿದೆ. ‘ಹಾರ್ಟ್ ಲ್ಯಾಂಪ್’ ಕೂಡ ಹೀಗೇ ಮುನ್ನಡೆದು ಗುರಿ ಮುಟ್ಟಲಿ ಎಂದು ಹಾರೈಸೋಣ.
ಸಾಹಿತ್ಯದ ವಿದ್ಯಾರ್ಥಿಯಾಗಿ ನಾನು ಗಮನಿಸಿದಂತೆ ಬದಲಾಗುವ ಪಶ್ಚಿಮದ ವಿಮರ್ಶೆಗಳ ಮಾನದಂಡಗಳು ವಿಚಿತ್ರವಾಗಿರಬಲ್ಲವು. ಈ ಮಾನದಂಡಗಳು ಯಾವ ಕಾರಣಕ್ಕೆ ಯಾವ ಕೃತಿಯನ್ನು ಎತ್ತಿ ಹಿಡಿಯುತ್ತವೋ ಹೇಳುವುದು ಕಷ್ಟ. ಕಳೆದ ವರ್ಷ ಹಾನ್ ಕಾಂಗೆರ ಸಮಗ್ರ ಸಾಹಿತ್ಯಕ್ಕೆ ನೊಬೆಲ್ ಪ್ರಶಸ್ತಿ ಘೋಷಿಸಿದ ಆಯ್ಕೆ ಸಮಿತಿ ಆಕೆಯ ‘ಕಾವ್ಯಾತ್ಮಕ ಗದ್ಯ’ವನ್ನು ವಿಶೇಷವಾಗಿ ಗುರುತಿಸಿತ್ತು. ಹಾನ್ ಕಾಂಗ್‌ಗೆ ನೊಬೆಲ್ ಬಂದಾಗ ಅವರ’ದ ವೆಜಿಟೇರಿಯನ್’ ಕಾದಂಬರಿ ಹಿಂದೊಮ್ಮೆ ಬೂಕರ್ ಪ್ರಶಸ್ತಿ ಪಡೆದಿದ್ದನ್ನು ಗಮನಿಸಿದೆ; ಆ ಕಾದಂಬರಿಯನ್ನು ಅಂದೇ ಓದಲು ಅಂಗಡಿಯಿಂದ ತರಿಸಿದ ನಾನು ಅದರಲ್ಲಿ ಸಸ್ಯಾಹಾರದ ಕಡೆಗೆ ತಿರುಗಿದ ಹೆಣ್ಣೊಬ್ಬಳ ಮೇಲೆ ನಡೆಯುವ ವಿಚಿತ್ರ ಮಾನಸಿಕ ಹಲ್ಲೆಗಳವರೆಗೂ ಓದಿ, ಬೆಚ್ಚಿ, ಎತ್ತಿಟ್ಟೆ.
ಅವತ್ತು ಬೆಳಗ್ಗೆಯೇ ಜ್ವರ ಬರುವಂತೆ ಕಾಣುತ್ತಿದ್ದ ನನಗೆ ‘ದ ವೆಜಿಟೇರಿಯನ್’ ಕಾದಂಬರಿಯ ಈ ಹಿಂಸೆಗಳ ಭಾಗಕ್ಕೆ ಬರುವ ಹೊತ್ತಿಗೆ ಜ್ವರ ಏರಿಯೇ ಬಿಟ್ಟಿತು! ಮೈ ಸರಿಯಿಲ್ಲದಿರುವಾಗ ಯಾವುದನ್ನೂ ಓದಬಾರದು ಎಂದು ನಾಟಕಕಾರ ಬರ್ಟೋಲ್ಟ್ ಬ್ರೆಕ್ಟ್ ವಿಮರ್ಶಕ ವಾಲ್ಟರ್ ಬೆಂಜಮಿನ್‌ಗೆ ಹೇಳಿದ್ದರ ಬಗ್ಗೆ ಹಿಂದೊಮ್ಮೆ ನಾನೇ ಬರೆದಿದ್ದು ನೆನಪಾಯಿತು. ಅದರಲ್ಲೂ ಜ್ವರ ಬಂದಾಗ ದಾಸ್ತೋವಸ್ಕಿಯ ತಂಟೆಗಂತೂ ಹೋಗಲೇಬೇಡ ಎನ್ನುತ್ತಾನೆ ಬ್ರೆಕ್ಟ್!
ಇವತ್ತು ಈ ಅಂಕಣ ಬರೆಯುವ ಮೊದಲೇ ಜ್ವರ ತಾನು ಬರಲಿದ್ದೇನೆಂದು ಹೆದರಿಸುತ್ತಿತ್ತು! ಆ ಹೆದರಿಕೆಯನ್ನು ಒದ್ದೋಡಿಸುವಂತೆ ಬಾನುಮುಷ್ತಾಕ್‌ರ ಅನುವಾದಿತ ಕತೆ ‘ರೆಡ್ ಲುಂಗಿ’, ಅನುವಾದಕಿ ದೀಪಾ ಅವರ ‘ಅಂತೆ’ ಟಿಪ್ಪಣಿ ಎರಡೂ ಸಿಕ್ಕವು. ಶನಿವಾರ ಸಂಜೆಯವರೆಗೂ ಏನು ಬರೆಯಬೇಕೆಂದು ಯೋಚಿಸುತ್ತಿದ್ದವನಿಗೆ ಬಾನು-ದೀಪಾ ಜೋಡಿಯ ಸಾಹಸ ಬಿಟ್ಟು ಇನ್ನೇನನ್ನೂ ಬರೆಯಲಾಗದಂಥ ಅಸಲಿ ಒತ್ತಡ ಮೂಡತೊಡಗಿತು.
ಬರುವ ಮೇ ತಿಂಗಳಲ್ಲಿ ಬೂಕರ್ ಪ್ರಶಸ್ತಿಯ ಘೋಷಣೆ ಆಗುವವರೆಗೂ ಕಾಯುವ ಸೋಮಾರಿತನದಲ್ಲಿ ಕಾಲ ಕಳೆಯದೆ, ಬಾನು ಮುಷ್ತಾಕ್‌ರ ಕನ್ನಡ ಕತೆಗಳನ್ನೂ, ಅವರ ಇಂಗ್ಲಿಷ್ ಕತೆಗಳನ್ನೂ ಮೊದಲೇ ಓದಿ, ಚರ್ಚಿಸಿ ಎಂದು ಓದುಗಿಯರಿಗೂ, ಓದುಗರಿಗೂ ಪ್ರೀತಿಯಿಂದ ಹೇಳಬಯಸುವೆ.