ಐವತ್ತು ತುಂಬಿದ ‘ಅಂಬೇಡ್ಕರ್’ ಕವಿತೆ ಮತ್ತು ಕವಿ ವಿಮರ್ಶೆ!
ಹೊಸ ತಲೆಮಾರಿನ ಪ್ರತಿಭಾವಂತ ಗಾಯಕ ಚಿಂತನ್ ವಿಕಾಸ್ ಕಂಠದಿಂದ ಸಿದ್ಧಲಿಂಗಯ್ಯನವರು ಐವತ್ತು ವರ್ಷಗಳ ಕೆಳಗೆ ಬರೆದ ‘ನಾಡ ನಡುವಿನಿಂದ ಸಿಡಿದ ನೋವಿನ ಕೂಗೇ, ಆಕಾಶದ ಅಗಲಕ್ಕೂ ನಿಂತ ಆಲವೆ’ ಹಾಡು ಮತ್ತೆ ಕೇಳಿ ಬರತೊಡಗಿತು; ಕೆಲವು ವರ್ಷಗಳ ಕೆಳಗೆ ಒಂದು ಮಧ್ಯಾಹ್ನ ಇದೇ ಅಂಬೇಡ್ಕರ್ ಪದ್ಯದ ಸುತ್ತ ನಡೆದ ಒಂದು ಪುಟ್ಟ ಕವಿ ಸಂವಾದ ನೆನಪಾಯಿತು:
ಅವತ್ತು ಗೆಳೆಯ, ಕನ್ನಡ ಅಧ್ಯಾಪಕ ಎಂ.ಜಿ. ಚಂದ್ರಶೇಖರಯ್ಯ ಪದವಿ ತರಗತಿಗಳ ಪಠ್ಯಪುಸ್ತಕದ ಡ್ರಾಫ್ಟ್ ರೆಡಿ ಮಾಡಿಕೊಂಡು ಬೆಂಗಳೂರು ವಿಶ್ವವಿದ್ಯಾನಿಲಯದ ಪ್ರಸಾರಾಂಗದ ಕಚೇರಿಗೆ ಬಂದಿದ್ದರು. ಆ ಪಠ್ಯದಲ್ಲಿ ಸಿದ್ಧಲಿಂಗಯ್ಯನವರ ‘ಅಂಬೇಡ್ಕರ್’ ಪದ್ಯವೂ ಸೇರಿತ್ತು. ಪಠ್ಯಪುಸ್ತಕದ ಕೊನೆಗೆ ಕವಿ-ಕಾವ್ಯ ಪರಿಚಯದ ಭಾಗ ಖಾಲಿಯಿತ್ತು. ಎಂ.ಜಿ. ಚಂದ್ರಶೇಖರಯ್ಯ ಕೊಂಚ ಮೋಹಕವಾಗಿ ಮತ್ತು ಸೂಚ್ಯವಾಗಿ, ನನ್ನೆಡೆಗೆ ನೋಡಿದರು! ಸರಿ! ಕವಿತೆ ನನಗೆ ಚೆನ್ನಾಗಿ ನೆನಪಿತ್ತು; ಎಷ್ಟೋ ಸಲ ನಿಜಕ್ಕೂ ಭಾವುಕನಾಗಿ ನನಗೆ ನಾನೇ ಹಾಡಿಕೊಂಡಿದ್ದರಿಂದ ಬಾಯಿಪಾಠವಾಗಿತ್ತು.
ಕೂತಲ್ಲೇ ಕವಿ ಸಿದ್ಧಲಿಂಗಯ್ಯನವರ ಬಗ್ಗೆ, ‘ಅಂಬೇಡ್ಕರ್’ ಕವಿತೆಯ ಬಗ್ಗೆ ಎರಡು ಪ್ಯಾರಾ ಕವಿ-ಕಾವ್ಯ ಪರಿಚಯ ಬರೆದವನು, ಕೊನೆಯ ಪಂಕ್ತಿಗೆ ಬಂದು ಕೊಂಚ ಕೈ ತಡೆದವನಂತೆ ನಿಂತೆ. ಪಕ್ಕದಲ್ಲೇ ಬುದ್ಧನಂತೆ ಧ್ಯಾನಸ್ಥ ಸ್ಥಿತಿಯಲ್ಲಿ ಕೂತಿದ್ದ ಕವಿಗಳತ್ತ ನೋಡಿದೆ.
‘ಸಾರ್?’
‘ಏನ್ ನಟರಾಜ್?’ ಸಣ್ಣಗೆ ಕಣ್ಣು ತೆರೆದ ಕವಿಗಳು ಎಂದಿನಂತೆ ಮೆಲುದನಿಯಲ್ಲಿ ಕೇಳಿದರು.
‘ಸಾರ್! ಈ ಸ್ಟ್ಯಾಂಝಾದಲ್ಲಿ ಎರಡು ಮೂರು ಅರ್ಥ ಬರ್ತಾ ಇದೆಯಲ್ಲ...ಯಾವುದನ್ನು ಬರೆಯೋದು?’
‘ಬಿಟ್ಬಿಡಿ ನಟರಾಜ್!’
‘ಏನ್ ಬಿಡೋದು ಸಾರ್?’
‘ಅದೇ ಆ ಸ್ಟ್ಯಾಂಝಾನ!’
‘ಅದೆಂಗಾಗುತ್ತೆ ಸಾರ್!’
‘ಅದು ಮೊದಲೇ ಸ್ವಲ್ಪ ಕಾಂಟ್ರೋವರ್ಶಿಯಲ್ ಆಗಿದೆ...’ ಎಂದು ಕವಿಗಳು ಸುಮ್ಮನಾದರು.
‘ಕಾಂಟ್ರೋವರ್ಶಿಯಲ್’ ಎನ್ನಲಾದ ಆ ಪ್ರಶ್ನೆಗಳು ನನಗೂ ನೆನಪಿದ್ದವು. ಮೊದಲಿಗೆ ಕವಿಗಳು ಕಾಂಟ್ರೋವರ್ಶಿಯಲ್ ಎಂದ ಪಂಕ್ತಿಯನ್ನಿಲ್ಲಿ ಕೊಡುತ್ತೇನೆ:
‘ಕಪ್ಪುಕ್ಕಿನ ಕೋಳಗಳನು
ಕಡಿದು ಎಸೆದ ವಜ್ರವೆ
ಬಂಗಾರದ ಕೋಳವೊಕ್ಕ
ಮಹಾಬೌದ್ಧ ಭಿಕ್ಷುವೆ’
ಒಂದು ಪ್ರತಿಮೆ ಇನ್ನೊಂದಕ್ಕೆ ಕೂಡಿಕೊಂಡು ಅರ್ಥಗಳ ವಿಸ್ತಾರ ಆಗುವುದನ್ನು ‘ಸಹಚರಿ ಪ್ರತಿಮೆ’ಗಳು ಎನ್ನುತ್ತೇನೆ. ಇದು ಇಂಗ್ಲಿಷಿನ ‘ಅಸೋಸಿಯೇಟಿವ್ ಇಮೇಜಸ್’ ಎಂಬ ನುಡಿಗಟ್ಟಿನಿಂದ ನಾನು ರೂಪಿಸಿಕೊಂಡಿರುವ ಪರಿಭಾಷೆ. ಮೇಲಿನ ಪಂಕ್ತಿಯಲ್ಲಿರುವ ಕಪ್ಪುಕ್ಕಿನ ಕೋಳ-ಬಂಗಾರದ ಕೋಳಗಳನ್ನು ಸಹಚರಿ ರೂಪಕಗಳು ಎನ್ನಬಹುದು; ಅಥವಾ ವಿರುದ್ಧಾರ್ಥದ ರೂಪಕಗಳು ಎನ್ನಬಹುದು. ಒಂದರ ಅರ್ಥ ಇನ್ನೊಂದರಿಂದ ಬೆಳೆಯುತ್ತದೆ.
ಅದಿರಲಿ. ಕವಿಸೃಷ್ಟಿಯಲ್ಲಿ ಯಾವ ಪ್ರತಿಮೆ, ಯಾವ ರೂಪಕ ಹೇಗೆ, ಯಾಕೆ ಚಿಮ್ಮುತ್ತದೋ ಯಾರು ಬಲ್ಲರು! ಎಷ್ಟೋ ಸಲ ಮೊದಲು ಹೊಳೆದ ಒಂದು ಪದವೇ ಇನ್ನೊಂದಕ್ಕೆ ಹಾದಿ ಮಾಡಿಕೊಡುತ್ತದೆ; ಒಂದು ಪ್ರಾಸ ಇನ್ನೊಂದನ್ನು ಸೃಷ್ಟಿಸುತ್ತದೆ... ಇವೆಲ್ಲ ತಾರ್ಕಿಕವಾಗೇ ನಡೆಯಬೇಕೇಂದೇನಿಲ್ಲ. ಇದು ಕವಿತೆ ಬರೆಯುವವರಿಗೆ, ಕವಿತೆಯನ್ನು ಸರಿಯಾಗಿ ಓದುವವರಿಗೆಲ್ಲ ಗೊತ್ತಿರುತ್ತದೆ.
ಆದರೆ ‘ಅಂಬೇಡ್ಕರ್’ ಕವಿತೆ ಬಂದ ಹಲವು ವರ್ಷಗಳ ನಂತರ ಕೆಲವು ಓದುಗರು, ‘ಇದೇನಿದು! ಇಲ್ಲಿ ಬಂಗಾರದ ಕೋಳ ಎಂದರೇನರ್ಥ? ಹಾಗಾದರೆ ಬೌದ್ಧ ಧರ್ಮವೂ ಒಂದು ಬಂಧನವೇ?’ ಎಂದು ಕೇಳಿದರಂತೆ.
ಕವಿಯೊಬ್ಬ ತನ್ನ ಕವಿತೆಯ ಬಗೆಗಿನ ಪ್ರಶ್ನೆಗಳಿಗೆ ತಾನೇ ಉತ್ತರ ಕೊಡುವುದು ಕಷ್ಟ. ಕವಿಗಳು ಸುಮ್ಮನೆ ಇದ್ದುಬಿಟ್ಟರು. ಬಂಗಾರ ಎಂದರೆ ಆಕರ್ಷಕವಾದುದು ಎಂಬ ಅರ್ಥದಲ್ಲಿ ಈ ಕವಿತೆಯ ‘ಬಂಗಾರದ ಕೋಳ’ ಹುಟ್ಟಿತೋ? ಅಥವಾ ಅದು ನವ ಧರ್ಮ ಸ್ವೀಕಾರದ ವಿಮರ್ಶೆಯೋ? ಕವಿಯೇ ಇದಕ್ಕೆಲ್ಲ ಉತ್ತರ ಕೊಡುವುದು ಕಷ್ಟ.
ಕವಿಗಳ ಮನಸ್ಸಿನಲ್ಲಿ ಹಿನ್ನೆಲೆಗೆ ಸರಿದಿದ್ದ ಈ ಪ್ರಶ್ನೆ ಇದೀಗ ಮತ್ತೆ ಪಠ್ಯಪುಸ್ತಕದ ಸಂದರ್ಭದಲ್ಲಿ ಎದುರಾಗಿತ್ತು!
‘‘ಮತ್ತೆ ಟೆಕ್ಸ್ಟ್ ಬುಕ್ಕಲ್ಲಿ ಯಾಕೆ ಕಾಂಟ್ರೋವರ್ಸಿ? ಆ ಸ್ಟ್ಯಾಂಝಾ ಬಿಟ್ಬಿಡಿ’’ ಎಂದರು ಕವಿಗಳು.
‘ಹಾಗೇನಿಲ್ಲ ಸಾರ್. ಇದು ಕವಿಯ ಆ ಕಾಲಘಟ್ಟದ ಗ್ರಹಿಕೆ ಎಂದು ವಿವರಿಸಿದರಾಯಿತು’ ಎಂದೆ.
ಕವಿಗಳು ಸುಮ್ಮನಿದ್ದರು. ನಾನು ಅಲ್ಲಿಂದ ಹೋದ ನಂತರವಾದರೂ ಅವರು ಆ ಪಂಕ್ತಿ ತೆಗೆಸುವ ಸಾಧ್ಯತೆ ಇದ್ದೇ ಇತ್ತು! ಎಷ್ಟೋ ವರ್ಷಗಳ ನಂತರ ಆ ಪಠ್ಯಪುಸ್ತಕ ನೋಡಿದೆ. ‘ಅಂಬೇಡ್ಕರ್’ ಕವಿತೆಯ ಆ ಪಂಕ್ತಿ ಇರಲಿಲ್ಲ. ನನ್ನ ಅಪೂರ್ಣ ಟಿಪ್ಪಣಿ ಕೂಡ ಹಾಗೇ ಇತ್ತು!
ಇದಕ್ಕೂ ಮೊದಲು ಕೆಲವು ಹಾಡುಗಾರರು ಇದೇ ‘ಅಂಬೇಡ್ಕರ್’ ಕವಿತೆಯ ಮತ್ತೊಂದು ಪಂಕ್ತಿಯನ್ನು ಬದಲಿಸಿ ಹಾಡಲಾರಂಭಿಸಿದ್ದರು. ಕವಿತೆಯ ಮೂಲ ಪಂಕ್ತಿ ಹೀಗಿದೆ:
‘ಮಲಗಿದ್ದವರ ಕೂರಿಸಿದೆ
ನಿಲಿಸುವವರು ಯಾರೋ?
ಛಲದ ಜೊತೆಗೆ ಬಲದ ಪಾಠ
ಕಲಿಸುವವರು ಯಾರೋ?’
ಇಪ್ಪತ್ತನೆಯ ಶತಮಾನದ ತೊಂಭತ್ತರ ದಶಕದಲ್ಲಿ ಬಹುಜನ ಸಮಾಜ ಪಕ್ಷದ ರಾಜಕಾರಣ ಗಟ್ಟಿಯಾಗಿ ಬೆಳೆಯುತ್ತಿದ್ದ ಕಾಲದಲ್ಲಿ ಕೆಲವು ಹಾಡುಗಾರರು ಇದನ್ನು ಬದಲಿಸಿ, ‘ಮಲಗಿದ್ದವರ ಕೂರಿಸಿದೆ, ನಿಲಿಸುವವರು ನಾವು; ಛಲದ ಜೊತೆಗೆ ಬಲದ ಪಾಠ ಕಲಿಸುವವರು ನಾವು’ ಎಂದು ಹಾಡಲು ಶುರು ಮಾಡಿದರು.
ಮೊದಲ ಸಲ ಈ ಹೊಸ ವ್ಯಾಖ್ಯಾನ ಕೇಳಿದಾಗ ವಿಸ್ಮಯವಾಯಿತು. ಇದು ಹೊಸ ತಲೆಮಾರಿನ ಹೋರಾಟಗಾರ-ಗಾಯಕರ ಕುತೂಹಲಕರವಾದ ಪೊಲಿಟಿಕಲ್ ಓದು ಕೂಡ ಆಗಿತ್ತು. ಬಾಬಾಸಾಹೇಬರು ದಲಿತರ ಬದುಕನ್ನು ಇಲ್ಲಿಯವರೆಗೆ ತಂದಿದ್ದಾರೆ; ಅದರ ಮುಂದಿನ ಹೊಣೆಯನ್ನು ನಾವು ಹೊರುತ್ತೇವೆ; ಹೊರಬೇಕು ಎಂಬ ದನಿ ಆ ಬದಲಾವಣೆಯಲ್ಲಿತ್ತು. ಬರೆದ ಪಠ್ಯವೊಂದು ಹಾಡುಪಠ್ಯವಾಗಿ ಹೊಸ ಹೊಸ ಅರ್ಥ ಪಡೆಯುತ್ತಿತ್ತು; ಬೇಂದ್ರೆಯವರ ‘ಭಾವಗೀತ’ ಕವಿತೆಯ ಪ್ರತಿಮೆಯ ಮೂಲಕ ಹೇಳುವುದಾದರೆ, ‘ಅಂಬೇಡ್ಕರ್’ ಕವಿತೆಯ ಸಾಲು ‘ದಿಕ್ತಟಗಳ ಹಾಯುತಿತ್ತು!’
ಇಷ್ಟಾಗಿಯೂ ಅವತ್ತು ಸಿದ್ಧಲಿಂಗಯ್ಯನವರ ‘ಸ್ವ-ಸೆನ್ಸಾರ್’ಗೆ ಕಾರಣವೇನಿರಬಹುದು ಎಂದು ಹಲವು ಸಲ ಯೋಚಿಸಿದ್ದೇನೆ: ಕವಿ ಮಾರ್ಕ್ಸ್‌ವಾದಕ್ಕೆ ಒಲಿದಿದ್ದ ತಾರುಣ್ಯದ ಕಾಲದಲ್ಲಿ ‘ಧರ್ಮ ಎನ್ನುವುದು ಜನರಿಗೆ ತಿನ್ನಿಸಿದ ಅಫೀಮು; ಭರವಸೆಯಿಲ್ಲದ ಜಗತ್ತಿನ ಭರವಸೆ’ ಎಂಬ ಕಾರ್ಲ್ ಮಾರ್ಕ್ಸ್‌ನ ಹೇಳಿಕೆಯ ಮೊದಲ ಭಾಗ ಈ ಕವಿತೆಯ ಬಂಗಾರದ ಕೋಳದ ರೂಪಕವನ್ನು ರೂಪಿಸಿತ್ತೆ? ಮುಂದೆ ಸ್ವತಃ ಕವಿಯ ನಿಲುವಿನಲ್ಲೇ ಬದಲಾವಣೆಯಾಗಿ ಈ ಬಣ್ಣನೆಯ ಬಗ್ಗೆ ಸಂದೇಹ ಹುಟ್ಟಿತೆ? ಅಥವಾ ಓದುಗರ ಹೊಸ ಓದು ಕವಿಯನ್ನು ಸ್ವ-ವಿಮರ್ಶೆಗೆ ಕರೆದೊಯ್ದಿತೆ?
ಅಲ್ಲಮಪ್ರಭುಗಳು ಹೇಳಿದಂತೆ ‘ತೊಡೆಯಲಾಗದ ಲಿಪಿಯನು ಬರೆಯಬಾರದು’. ಸರಿ! ಬರೆದರೇನಂತೆ, ಮುಂದಿನ ಮುದ್ರಣದಲ್ಲಿ ತೊಡೆಯಲೂಬಹುದು ಎಂದು ಇದೀಗ ನಮ್ಮ ಕವಿಗಳು ಸೂಚಿಸುತ್ತಿದ್ದರು!
ಅದೇನೇ ಇರಲಿ, ಸಿದ್ಧಲಿಂಗಯ್ಯನವರ ಈ ಕವಿತೆಯಂತೆಯೇ ಅವರ ಒಟ್ಟು ಕಾವ್ಯವೇ ಅಂಬೇಡ್ಕರ್‌ವಾದವನ್ನು ಹಲವು ತಲೆಮಾರುಗಳಲ್ಲಿ ಹಬ್ಬಿಸಿರುವುದನ್ನು ಕೃತಜ್ಞತೆಯಿಂದ ನೆನೆಯೋಣ. ಅವರ ಕಾವ್ಯದ ಮೂಲಕವೂ ಅಂಬೇಡ್ಕರ್ ಕಡೆಗೆ ತಿರುಗಿದ ಲಕ್ಷಾಂತರ ಕನ್ನಡ ಓದುಗರಲ್ಲಿ ನಾನೂ ಒಬ್ಬ. ಗಿರೀಶ್ ಹಂದಲಗೆರೆ ಸಂಪಾದಿಸಿದ ಅಂಬೇಡ್ಕರ್ ಕುರಿತ ಪದ್ಯಗಳ ಸಂಕಲನ ‘ಅರಿವೇ ಅಂಬೇಡ್ಕರ್’ ಸಂಕಲನದಲ್ಲಿ ಅಂಬೇಡ್ಕರ್ ಕುರಿತ ಹಲವು ಹೊಸ ಬಣ್ಣನೆಗಳಿದ್ದರೂ ಸಿದ್ಧಲಿಂಗಯ್ಯನವರ ‘ಅಂಬೇಡ್ಕರ್’ ಪದ್ಯವೇ ನನ್ನ ಸದಾ ಸೆಳೆಯುವುದೇಕೆ! ಹಾಡುಗಾರರು ಈ ಕವಿತೆಯನ್ನು ಶಿವರಂಜಿನಿ ರಾಗದಲ್ಲಿ ಹಾಡಿರುವ ಧಾಟಿ ಮತ್ತೆ ಮತ್ತೆ ನನ್ನ ಕಿವಿಗೆ ಬಿದ್ದಿರುವ ಕಾರಣದಿಂದ ಕೂಡ ಈ ಕವಿತೆ ನನ್ನಲ್ಲಿ ಖಾಯಮ್ಮಾಗಿ ಉಳಿದಿರಬಹುದು.
ಕನ್ನಡ ಕಾವ್ಯದ ಕೆಲವು ಮೂಲ ಮಾದರಿಗಳನ್ನು ಸೃಷ್ಟಿಸಿದ ಸಿದ್ಧಲಿಂಗಯ್ಯ ‘ಅಂಬೇಡ್ಕರ್’ ಎಂಬ ಕಾವ್ಯಾತ್ಮಕ ವ್ಯಕ್ತಿಚಿತ್ರದಲ್ಲೂ ಮೂಲ ಮಾದರಿಯೊಂದನ್ನು ಸೃಷ್ಟಿಸಿದಂತಿದೆ; ಆ ಮಾದರಿ ಕನ್ನಡದಲ್ಲಿ ಮತ್ತೆ ಮತ್ತೆ ರಿಪೀಟಾದಂತೆ ಕಾಣುತ್ತದೆ. ಕೆಲವು ವರ್ಷಗಳ ಕೆಳಗೆ ಅಂಬೇಡ್ಕರ್ ಜೊತೆ ಸಂವಾದ ಮಾಡುತ್ತಾ ಕೋಟಗಾನಹಳ್ಳಿ ರಾಮಯ್ಯನವರು ಓದಿದ ಪದ್ಯಗಳು ಬೇರೆ ಹಾದಿ ಹಿಡಿದಂತೆ ಕಂಡಿದ್ದವು.
ಈ ವರ್ಷದ ಅಂಬೇಡ್ಕರ್ ಜಯಂತಿಯಂದು ಭಾಷಣವೊಂದಕ್ಕೆ ಟಿಪ್ಪಣಿ ಮಾಡಿಕೊಳ್ಳುತ್ತಾ, ಸಿದ್ಧಲಿಂಗಯ್ಯನವರ ಕವಿತೆಯನ್ನು ನೆನೆಯುತ್ತಿರುವಾಗಲೇ ಅವರು ಅಂಬೇಡ್ಕರ್ ಡೇ ಬಗ್ಗೆ ಹೇಳಿದ ಅನುಭವವೊಂದು ನೆನಪಾಯಿತು. ಅಂಬೇಡ್ಕರ್ ಜಯಂತಿಯ ತಿಂಗಳೆಂದರೆ ಸಿದ್ಧಲಿಂಗಯ್ಯನವರ ಬಿಡುವಿಲ್ಲದ ತಿಂಗಳು. ಅವರ ಬದುಕಿನ ಕೊನೆಕೊನೆಯವರೆಗೂ ಅದು ಹಾಗೇ ಇತ್ತು.
ಇಂಥದೇ ಒಂದು ಎಪ್ರಿಲ್ ತಿಂಗಳಲ್ಲಿ ಕವಿಗಳು ತಮ್ಮ ಎಂದಿನ ಸಸ್ಪೆನ್ಸ್ ತುಂಬಿದ ಶೈಲಿಯಲ್ಲಿ ಹೇಳಿದರು:
‘ಏನ್ ನಟರಾಜ್! ಎರಡು ಪರವಾಗಿಲ್ಲ! ಮೂರೂ ಓಕೇ! ತೀರಾ ಐದೋ ಆರೋ ಅದರೆ ಭಾಳಾ ಕಷ್ಟ!’
ಓಹೋ! ಕವಿಗಳು ಸಂಧ್ಯಾಕಾರ್ಯಕ್ರಮದ ಸವಾಲಿನ ಬಗ್ಗೆ ಹೇಳುತ್ತಿರಬಹುದು ಎಂದುಕೊಂಡ ನಾನು ಕುತೂಹಲದಿಂದ, ‘ಏನ್ ಸಾರ್?’ ಅಂದೆ.
‘ಅದೇ! ಅಂಬೇಡ್ಕರ್ ಜಯಂತಿ ಭಾಷಣ... ಮೊನ್ನೆ ಭಾನುವಾರ ಐದು ಮುಗಿಸೋವತ್ಗೆ ಸುಸ್ತಾದೆ!’
ಈ ಸಲದ ಅಂಬೇಡ್ಕರ್ ದಿನಾಚರಣೆಯ ಮುನ್ನಾ ದಿನಗಳಲ್ಲಿ, 1975ರಿಂದ ಇವತ್ತಿನವರೆಗೂ ಬರೋಬ್ಬರಿ ಐವತ್ತು ವರ್ಷಗಳ ಕಾಲ ಅಂಬೇಡ್ಕರ್ ಚೈತನ್ಯ, ಜ್ವಾಲೆ, ಬೆಳಕು ಎಲ್ಲವನ್ನೂ ನಾಡಿನ ತುಂಬಾ ಹಬ್ಬಿಸುತ್ತಲೇ ಇರುವ ಕವಿಯ ಕವಿತೆಗಳನ್ನು ನೆನೆದು ಮೌನ ಆವರಿಸತೊಡಗುತ್ತದೆ...ಕೃತಜ್ಞತೆಯೂ ಹುಟ್ಟುತ್ತದೆ.