ಕುವೆಂಪು ಕವಿತೆ ಮತ್ತು ಗಾಂಧೀಜಿಯ ಉಪವಾಸ
ಇಸವಿ 1947. ಆಗಸ್ಟ್ 15 ಇನ್ನೇನು ಅಡಿಯಿಡಲಿದ್ದ ನಡುರಾತ್ರಿಯ ಗಳಿಗೆ.
ಕವಿ ಕುವೆಂಪು ದಿಲ್ಲಿಯಲ್ಲಿ ನಡೆಯುತ್ತಿದ್ದ ಸ್ವತಂತ್ರ ಭಾರತದ ಉದಯದ ವಿವರ, ಸಡಗರಗಳ ಕಾಮೆಂಟರಿಯನ್ನು ಆಕಾಶವಾಣಿಯಲ್ಲಿ ಕೇಳಿಸಿಕೊಳ್ಳುತ್ತಿದ್ದರು. ಭಾರತಕ್ಕೆ ಸ್ವಾತಂತ್ರ್ಯ ಬರಲಿದ್ದ ಆ ಗಳಿಗೆಯಲ್ಲಿ ಕವಿಯ ಮನದಲ್ಲಿ ‘ಶ್ರೀ ಸ್ವಾತಂತ್ರ್ಯೋದಯ ಮಹಾಪ್ರಗಾಥ’ ಎಂಬ ದೀರ್ಘ ಕಾವ್ಯ ಮೂಡತೊಡಗಿತು.
ಸಂಭ್ರಮ, ಪ್ರಾರ್ಥನೆ, ಜಯಕಾರಗಳ ಮೂಡ್‌ನಲ್ಲಿ ಮುನ್ನಡೆಯುತ್ತಿದ್ದ ಕವಿಯ ಮಹಾಪ್ರಗಾಥ ಯಾಕೋ ಥಟ್ಟನೆ ಉತ್ಸಾಹದ, ಹುಮ್ಮಸ್ಸಿನ ನಡೆ ತಪ್ಪಿ ತಡವರಿಸತೊಡಗಿತು. ಅದಕ್ಕೆ ಕಾರಣವಿತ್ತು: ಆ ರಾತ್ರಿ ಗಾಂಧೀಜಿ ದಿಲ್ಲಿಯ ಆ ಸಂಭ್ರಮದ ನಡುವೆ ಇರಲಿಲ್ಲ; ಹಾಗಾದರೆ ಅವರೆಲ್ಲಿದ್ದಾರೆ ಎಂದು ಕವಿತೆ ಹುಡುಕತೊಡಗಿತು:
ಮರೆವುದೆಂತಾ ನಮ್ಮ ಸ್ವಾತಂತ್ರ್ಯ ಶಿಲ್ಪಿಯಂ
ದಿವ್ಯ ದಿನದೀ ಶುಭ ಮುಹೂರ್ತದಲ್ಲಿ?
ಮರೆವುದೆಂತಯ್ ಭುವನ ಗೌರವ ಮಹಾತ್ಮನಂ
ಸ್ವಾತಂತ್ರ್ಯದೀ ಸುಪ್ರಭಾತದಲ್ಲಿ?
ಹಜ್ಜೆ ಹೆಜ್ಜೆಯನಿಡಿಸಿ ಕೈಹಿಡಿದು
ಬಿಡುಗಡೆಗೆ ತಂದ ಆ ತಂದೆಯೆಲ್ಲಿ?
ಎಲ್ಲಿ? ಓ ಅವನೆಲ್ಲಿ ನಿಚ್ಚವೂ ನಮ್ಮೆದೆಯ
ನಂಜೀಂಟುವಾ ನೀಲಕಂಠನೆಲ್ಲಿ?
‘ಸ್ವಾತಂತ್ರ್ಯ ಶಿಲ್ಪಿ’ ಎಲ್ಲಿರುವನೆಂದು ಹುಡುಕುತ್ತಾ ಕುವೆಂಪು ಪ್ರಗಾಥದ ಕಣ್ಣು ದಿಲ್ಲಿಯ ಉತ್ಸವದಲ್ಲಿ ಕಣ್ಣಾಡಿಸುತ್ತಾ, ಗಾಂಧೀಜಿಯಿದ್ದ ಕಲ್ಕತ್ತಾದ ರಕ್ತಸಿಕ್ತ ಹಾದಿಬೀದಿಗಳನ್ನು ತಲುಪುತ್ತದೆ:
ಇಲ್ಲಿ ಉತ್ಸವದೊಳವನಿಲ್ಲ, ಆ ದೂರದಲಿ
ಕ್ರೋಧ ಕಾರ್ಪಣ್ಯ ರೋದನಗಳೊಡನೆ
ಕೆನ್ನೀರು ಕಣ್ಣೀರುಗಳ ಹೊನಲ ಗೋಳ್ ನಡುವೆ
ದಾರಿದ್ರ್ಯ ದೈನ್ಯ ಧನಮದಗಳೊಡನೆ
ವಾದಿಸುತೆ ಬೋಧಿಸುತೆ ಕರುಣೆಯಂ ಸಾಧಿಸುತೆ
ಭಕ್ತಿಯಿಂ ದೇವನಂ ಪ್ರಾರ್ಥಿಸುತ್ತೆ
ನಿರಶನವ್ರತನಿಷ್ಠನಾಗಿಹನು ನೋಡಲ್ಲಿ
ಧರ್ಮಶಕ್ತಿಯ ಕೃಪೆಯನರ್ಥಿಸುತ್ತೆ!
ಕುವೆಂಪು ಈ ರಚನೆಯನ್ನು ‘ಮಹಾಪ್ರಗಾಥ’ ಎನ್ನುತ್ತಾರೆ. ಗ್ರೀಕ್ ಸಾಹಿತ್ಯಲೋಕದ ‘ಓಡ್’ ಕಾವ್ಯ ರಚನಾ ಪ್ರಕಾರ ಕನ್ನಡದಲ್ಲಿ ‘ಪ್ರಗಾಥ’ ಆಗಿದೆ. ವ್ಯಕ್ತಿ, ವಿದ್ಯಮಾನ ಅಥವಾ ಒಂದೇ ವಸ್ತುವನ್ನು ಭವ್ಯ ಶೈಲಿಯಲ್ಲಿ ಬರೆಯಲು ಗ್ರೀಕ್ ಕವಿಗಳು ಕಾವ್ಯದ ಈ ಉಪಪ್ರಕಾರವನ್ನು ಬಳಸುತ್ತಿದ್ದರು. ಇದು ಸ್ವಾತಂತ್ರ್ಯೋದಯ ಕುರಿತ ಪ್ರಗಾಥವಾದದ್ದರಿಂದ ಕುವೆಂಪು ಇದನ್ನು ಮಹಾಪ್ರಗಾಥ ಎಂದಿರಬಹುದೆ?
ಕುವೆಂಪು ತಮ್ಮ ಕವಿತೆಗಳ ಕೊನೆಯಲ್ಲಿ ಕೊಡುವ ತಾರೀಕುಗಳ ಬಗ್ಗೆ ನನಗೆ ಯಾವಾಗಲೂ ಕುತೂಹಲ ಮತ್ತು ವಿಸ್ಮಯ. ಯಾಕೆಂದರೆ, ಅವರು ಎಷ್ಟೋ ಕವಿತೆಗಳನ್ನು ಒಂದೇ ದಿನ, ಒಂದೇ ಸಿಟ್ಟಿಂಗಿನಲ್ಲಿ ಬರೆದು ಮುಗಿಸಿದಂತೆ ಕಾಣುತ್ತದೆ! ಒಮ್ಮೊಮ್ಮೆ ಒಂದು ಕತೆಯನ್ನೋ, ಪದ್ಯವನ್ನೋ ಐದು-ಹತ್ತು ವರ್ಷ ಬರೆದಿರುವ ನನಗೆ ಕುವೆಂಪು ಪ್ರಗಾಥದಂಥ ಸುದೀರ್ಘ ರಚನೆಯನ್ನೂ ಒಂದೇ ಸಿಟ್ಟಿಂಗಿನಲ್ಲಿ ಮುಗಿಸಿರುವುದು ವಿಸ್ಮಯ ಹುಟ್ಟಿಸುವುದು ಸಹಜ!
ಕುವೆಂಪು ಥರವೇ ಲಂಕೇಶ್, ಡಿ. ಆರ್. ನಾಗರಾಜ್ ಇಬ್ಬರೂ ಒಂದೇ ಸಿಟ್ಟಿಂಗಿನಲ್ಲಿ ಲೇಖನ ಬರೆದ ಸ್ಪೀಡ್ ನೋಡಿದ್ದೇನೆ. ಅಂಥ ಬರಹಗಳು ಇವತ್ತು ನಾವು ನೋಡುತ್ತಿರುವ ಹಲವು ಮಹನೀಯರ ಕ್ಷಿಪ್ರ ಬರವಣಿಗೆಗಳಂತೆ, ಇಬ್ಬನಿಯಂತೆ, ಕರಗದೆ ಶ್ರೇಷ್ಠ ಬರಹಗಳೂ ಆಗಿ ಇವತ್ತಿಗೂ ಉಳಿದಿರುವುದನ್ನೂ ನೋಡಿದ್ದೇನೆ. ಅವು ಅವರ ಮನಸ್ಸಿನಲ್ಲಿ ಎಷ್ಟು ವರ್ಷ ಮಾಗಿದ್ದವೋ, ಬರೆವಾಗ ಒದಗಿ ಬಂದವೋ ತಿಳಿಯದು!
ಕುವೆಂಪು ತಮ್ಮ ಪ್ರಗಾಥದ ಕೊನೆಗೆ ಕೊಟ್ಟಿರುವ ತಾರೀಕು ನೋಡಿದೆ: 15.8.1947! ಅವತ್ತು ರಾತ್ರಿ ಈ ಇಡೀ ಪ್ರಗಾಥ ಒಂದು ಓಘದಲ್ಲಿ ಬಂದಂತಿದೆ. ಕುವೆಂಪುವಿನ ಪ್ರಿಯ ಕವಿ ವರ್ಡ್ಸ್‌ವರ್ತ್ ಹೇಳಿದಂತೆ, ‘ಕಾವ್ಯ ಶಕ್ತ ಭಾವನೆಗಳ ಸಹಜ ಉಕ್ಕುವಿಕೆ’ ಎನ್ನುವುದು ಈ ಪ್ರಗಾಥದಲ್ಲೂ ನಡೆದಂತಿದೆ.
ಮೊನ್ನೆ ಆಗಸ್ಟ್ ಹದಿನೈದರಂದು ಶಾಲೆ, ಕಾಲೇಜುಗಳಲ್ಲಿ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಭಾಗಿಯಾದ ಮಕ್ಕಳು, ಮೇಡಂ, ಮೇಷ್ಟರುಗಳಿಗೆ; ಬಹುತೇಕ ಸಾರ್ವಜನಿಕರಿಗೆ, ರಾಜಕಾರಣಿಗಳಿಗೆ; ‘ಹರ್ ಘರ್’ ಎಂದು ಗುರ್ರೆಂದವರಿಗೆ ಆಗಸ್ಟ್ 1947ರ ಆ ರಾತ್ರಿ ಗಾಂಧೀಜಿ ದಿಲ್ಲಿಯಲ್ಲಿರಲಿಲ್ಲ ಎಂಬುದು ಗೊತ್ತಿರಲಿಕ್ಕಿಲ್ಲ; ಅವರು ಯಾಕೆ ದಿಲ್ಲಿಯಲ್ಲಿರಲಿಲ್ಲ ಎಂಬುದಂತೂ ಗೊತ್ತಿರಲಿಕ್ಕೇ ಇಲ್ಲ.
ಈ ಹಿನ್ನೆಲೆಯಲ್ಲಿ ಕುವೆಂಪು ಆ ರಾತ್ರಿ ಗಾಂಧಿಯನ್ನು ಹುಡುಕಿದ ಈ ಪದ್ಯಭಾಗದ ಮಹತ್ವ ಹಾಗೂ ಆ ರಾತ್ರಿಯ ಗಾಂಧಿ ಮನಸ್ಥಿತಿ ಇವೆರಡನ್ನೂ ಎಲ್ಲರೂ ಗಮನಿಸಬೇಕು. ಈ ದಿಸೆಯಲ್ಲಿ ಕೆಲವು ಚಾರಿತ್ರಿಕ ವಿವರಗಳನ್ನು ಕೊಡುತ್ತಿರುವೆ:
ಆಗಸ್ಟ್ ಹದಿನೈದರ ಬೆಳಗ್ಗೆ ಕಲ್ಕತ್ತಾದ ಬಡವರ ಕೇರಿಯ ಮುಸ್ಲಿಮರೊಬ್ಬರ ಮನೆಯಲ್ಲಿ ಗಾಂಧೀಜಿ ಕಣ್ತೆರೆದರು. ಕೋಮುಗಲಭೆಗೆ ತುತ್ತಾಗಿದ್ದ ಕಲ್ಕತ್ತಾದಲ್ಲಿ ಇವತ್ತಾದರೂ ಹಾದಿಬೀದಿಗಳಲ್ಲಿ ಜನರ ಸಂಭ್ರಮ ಉಕ್ಕಿದ್ದು ಕೇಳಿ ಅವರು ಕೊಂಚ ನೆಮ್ಮದಿಯಲ್ಲಿದ್ದರೆಂದು ಊಹಿಸಬಹುದು. ಭಾರತ ವಿಭಜನೆಯ ಕಹಿ ಅವತ್ತು ಅಷ್ಟು ಹಿನ್ನೆಲೆಗೆ ಸರಿಯತೊಡಗಿತ್ತು. ಗಾಂಧಿ ಸಲಹೆಯಂತೆ ಆ ಕಾಲದಲ್ಲಿನ ಕಲ್ಕತ್ತಾದ ಕೋಮುಗಲಭೆಯನ್ನು ತಹಬಂದಿಗೆ ತರಲು ಅಲ್ಲಿದ್ದ ಲೋಹಿಯಾ ಬರೆಯುತ್ತಾರೆ:
‘ಆಗಸ್ಟ್ ಹದಿನೈದರಂದು ಎಣೆಯಿಲ್ಲದ ಉತ್ಸಾಹ, ಸಂಭ್ರಮವಿತ್ತು. ಹಿಂದೂಗಳು, ಮುಸಲ್ಮಾನರು ಒಬ್ಬರನ್ನೊಬ್ಬರು ಅಪ್ಪಿಕೊಳ್ಳಲಾರಂಭಿಸಿದರು. ಒಂದು ವರ್ಷಕ್ಕಿಂತ ಹಿಂದಿನಿಂದ ಬೆಳೆದು ಬಂದ ಶತ್ರುತ್ವ, ಧರ್ಮೋನ್ಮಾದಗಳು ಕೊನೆಗೊಂಡು ಪ್ರತಿಯೊಂದು ಮೊಹಲ್ಲವೂ ಪ್ರತಿಯೊಬ್ಬರ ಪಾಲಿಗೂ ತೆರೆಯಿತು. ಅದೇ ಕ್ಷಣದಲ್ಲಿ ನಮಗೊಂದು ವಿಚಾರ ಹೊಳೆಯಿತು: ಇಡೀ ರಾತ್ರಿ ಒಂದು ಮೆರವಣಿಗೆಯ ಏರ್ಪಾಟು ಮಾಡಿದೆವು. ಆ ಮೆರವಣಿಗೆ ಎಲ್ಲ ತಡೆಗೋಡೆಗಳನ್ನೂ ಒಡೆದು ಹಾಕಿತು.’
ಆದರೆ ಸಾಮಾನ್ಯ ಜನರಲ್ಲಿ ಅವತ್ತು ಹೊರಚೆಲ್ಲಿದ್ದ ಈ ಒಳಿತಿನ ಭಾವ ಉಳಿಯದಂತೆ ಎರಡೂ ಧರ್ಮಗಳ ವಿಭಜಕ ಶಕ್ತಿಗಳು ಹುನ್ನಾರ ನಡೆಸುತ್ತಲೇ ಇದ್ದವು. ಮತ್ತೆ ಕೋಮು ಗಲಭೆ ಶುರುವಾಯಿತು.
ಗಾಂಧೀಜಿ ಮಾತ್ರ ಎಂಥ ಕಲ್ಲು ಹೃದಯಗಳನ್ನು ಕೂಡ ಕರಗಿಸಬಹುದೆಂಬ ನಂಬಿಕೆಯಿಂದ ಕಲ್ಕತ್ತಾದಲ್ಲಿ ಉಪವಾಸ ಸತ್ಯಾಗ್ರಹ ಆರಂಭಿಸಿದರು. ಪರಸ್ಪರರನ್ನು ಹಿಂಸಿಸುತ್ತಾ, ಗಲಭೆ ಹಬ್ಬಿಸುತ್ತಿದ್ದವರ ಮನಸ್ಸನ್ನು ಪರಿವರ್ತಿಸಲು ಉಪವಾಸ ಮಾಡುತ್ತಲೇ ಆತ್ಮಪರೀಕ್ಷೆ ಮಾಡಿಕೊಳ್ಳುತ್ತಿದ್ದರು.
ಆ ಕಾಲದ ಕಲ್ಕತ್ತಾದಲ್ಲಿ ತಾವು ಕಂಡ ವಿದ್ಯಾರ್ಥಿಗಳ ಹಾಗೂ ಮಹಿಳೆಯರ ಪ್ರತಿಕ್ರಿಯೆಗಳನ್ನು ಬಂಗಾಳದ ಪ್ರೊಫೆಸರೊಬ್ಬರು ದಾಖಲಿಸಿದ್ದಾರೆ:
ಕೆಲವು ವಿದ್ಯಾರ್ಥಿಗಳು ಆಯುಧಗಳನ್ನು ತೊರೆದರೆ ತಮಗೆ ಅಪಾಯವಿದೆ ಎಂದು ಗೊತ್ತಿದ್ದರೂ ಲೆಕ್ಕಿಸದೆ, ಮನೆಗಳಿಂದ, ಹಾದಿಬೀದಿಗಳಿಂದ ಆಯುಧಗಳನ್ನು ತಂದು ಗಾಂಧೀಜಿಯವರ ಎದುರು ಇಟ್ಟರು; ತಾವು ಹಿಂಸೆಯ ಮಾರ್ಗದಿಂದ ದೂರ ಸರಿದಿದ್ದೇವೆ ಎಂಬುದನ್ನು ನಿವೇದಿಸಿಕೊಂಡರು. ಇದು ವಿದ್ಯಾರ್ಥಿಗಳ ಮೇಲೆ ಗಾಂಧೀಜಿಯ ಉಪವಾಸ ಉಂಟು ಮಾಡಿದ ಸಾತ್ವಿಕ ಪ್ರಭಾವವನ್ನು ಸೂಚಿಸುವ ಒಂದು ಘಟನೆ.
ಇದಕ್ಕಿಂತ ಮನ ಕರಗಿಸುವ ಪ್ರತಿಕ್ರಿಯೆ ಕಲ್ಕತ್ತಾದ ಮನೆಗಳಲ್ಲಿ ಕಂಡು ಬಂತು. ಕಲ್ಕತ್ತಾದ ಗಂಡಸರು ತಂತಮ್ಮ ಕೆಲಸಕ್ಕೆ ಹೋಗಿ ಸಂಜೆ ಮನೆಗೆ ಮರಳುವ ಹೊತ್ತಿಗೆ ಎಂದಿನಂತೆ ಅವರ ಊಟ ರೆಡಿಯಾಗಿರುತ್ತಿತ್ತು. ಆದರೆ ಮನೆಯಲ್ಲಿದ್ದ ಮಡದಿಯರು ಇಡೀ ದಿನ ಊಟ ಮಾಡಿದಂತಿರಲಿಲ್ಲ. ‘ಯಾಕೆ ಊಟ ಮಾಡಿಲ್ಲ?’ ಎಂದು ಆ ಗಂಡಸರು ಮಡದಿಯರನ್ನು ಕೇಳಿದರು.
ಆಗ ಆ ಮಹಿಳೆಯರು ಕೊಟ್ಟ ಉತ್ತರ: ‘ಗಾಂಧೀಜಿ ನಾವು ಮಾಡಿದ ಪಾಪಗಳಿಗಾಗಿ ಸಾಯುತ್ತಿರುವಾಗ ನಾವು ಹೇಗೆ ಊಟ ಮಾಡುವುದು?’
ಆ ಮಹಿಳೆಯರ ಈ ಪ್ರತಿಕ್ರಿಯೆ ಏನನ್ನು ಹೇಳುತ್ತದೆ?
ನಾಯಕನೊಬ್ಬ ನಿಜಕ್ಕೂ ಉದಾತ್ತನಾಗಿದ್ದರೆ, ಸ್ವಾರ್ಥವಿಲ್ಲದೆ ಜನರಿಗಾಗಿ ಮಿಡಿಯುತ್ತಿದ್ದಾನೆ ಎಂಬುದು ಅರಿವಾದರೆ ಕೆಲವರಾದರೂ ಅವನ ಮಾತುಗಳನ್ನು ಕೇಳಿಸಿಕೊಳ್ಳುತ್ತಾರೆ ಎಂಬುದನ್ನು ಇದು ಸೂಚಿಸುತ್ತದೆ. ಇನ್ನೂ ಮುಗ್ಧತೆ ಉಳಿಸಿಕೊಂಡ ವಿದ್ಯಾರ್ಥಿಗಳು ಹಾಗೂ ಮಹಿಳೆಯರು ಗಾಂಧಿಗೆ ಮಿಡಿದ ಈ ರೀತಿ ಮನುಷ್ಯರ ಬಗೆಗಿನ ನಮ್ಮ ನಂಬಿಕೆಯನ್ನು ಹೆಚ್ಚಿಸುತ್ತದೆ. ‘ಅರ್ಧನಾರೀಶ್ವರ’ ಕಲ್ಪನೆಯನ್ನು ಎಲ್ಲರೂ ಅನುಸರಿಸಬಲ್ಲ ಆದರ್ಶ ಸಂಕೇತವಾಗಿ ಕಂಡಿದ್ದ ಗಾಂಧಿ ಮಾನವನೊಳಗಿನ ಮುಗ್ಧತೆ, ಒಳಿತು, ಸ್ತ್ರೀತನವನ್ನು ಸದಾ ಎಚ್ಚರಗೊಳಿಸಲು ಯತ್ನಿಸುತ್ತಿದ್ದರು.
ತಮ್ಮ ಮಾತಿನ ಪರಿಣಾಮವೇನು ಎಂಬ ಪ್ರಜ್ಞೆಯೇ ಇಲ್ಲದೆ ಬಾಯಿಗೆ ಬಂದದ್ದನ್ನು ಬೊಗಳುವ ಚಾಳಿಯವರು; ಮನಸ್ಸಿನಲ್ಲಿ ಕೇಡು ತುಂಬಿಕೊಂಡು ಜನರ ಕೇಡಿತನವನ್ನು ಉದ್ದೀಪಿಸುವವರು- ಈ ಎರಡೂ ವರ್ಗದ ವಾಚಾಳಿಗಳಿಗೆ ಗಾಂಧಿಯಾಗಲಿ, ಕುವೆಂಪು ಆಗಲಿ, ಜನರೊಳಗಿನ ಒಳಿತನ್ನು ಹೊರ ತರಲು ಪ್ರಯತ್ನಿಸಿರುವ ರೀತಿ ಸದಾ ಪಾಠವಾಗಬೇಕು.
ಜನರ ಪೂರ್ವಾಗ್ರಹಗಳನ್ನು ಹೆಚ್ಚಿಸಿ ಅಗ್ಗದ ಜನಪ್ರಿಯತೆ ಗಳಿಸಿಕೊಳ್ಳುವುದು ಸುಲಭ; ಆದರೆ ಪೂರ್ವಾಗ್ರಹಗಳನ್ನು ತಿದ್ದುವ ಕೆಲಸ ಕಷ್ಟ. ಬಸವಣ್ಣ, ಅಕ್ಕಮಹಾದೇವಿ, ಗಾಂಧಿ, ಅಂಬೇಡ್ಕರ್ ಥರದವರು ಜನರ ಪೂರ್ವಾಗ್ರಹಗಳನ್ನು ತಿದ್ದುವ, ಎದುರಿಸುವ ಕಷ್ಟದ ಹಾದಿ ಹಿಡಿದಿದ್ದರು. ಅಂಥವರು ಮಾತ್ರ ಜನರ ಮನಸ್ಸಿನ ಆರೋಗ್ಯ ಕಾಪಾಡಬಲ್ಲರು.
ಆಗಸ್ಟ್ 15ರ ರಾತ್ರಿ ಏಕಾಂಗಿಯಾಗಿದ್ದ ಗಾಂಧೀಜಿ; ಗಾಂಧೀಜಿಯ ಏಕಾಂಗಿತನವನ್ನು ತಮ್ಮ ಕಾವ್ಯರಚನೆಯ ಏಕಾಂತದಲ್ಲಿ ನೆನೆದು ಮಿಡಿಯುತ್ತಿದ್ದ ಕುವೆಂಪು...ಇವೆರಡೂ ವ್ಯಕ್ತಿತ್ವಗಳು ಸಂಧಿಸಿ ನನ್ನಂಥವನೊಳಗೆ ಹಬ್ಬಿಸಿದ ದಿವ್ಯ ಕೋಮಲ ಭಾವ ಎಲ್ಲ ‘ಮನುಷ್ಯ’ರಲ್ಲೂ ಹುಟ್ಟಬಲ್ಲದು ಎಂಬ ನಂಬಿಕೆ ನನ್ನದು.