ದೊಡ್ಡ ದೊಡ್ಡ ಮಾತಿನ ಬಲೂನು ಮತ್ತು ನಿಜದ ಸೂಜಿ ಮೊನೆ
‘‘ಪಿಕ್‌ಪಾಕೆಟ್ ಮಾಡಿದವನು ಸಿಕ್ಕಿಬಿದ್ದಾಗ ಅವನನ್ನು ‘ಹಿಡ್ಕಳಿ ಹಿಡ್ಕಳಿ’ ಎಂದು ಎಲ್ಲರಿಗಿಂತ ಜೋರಾಗಿ ಕೂಗುವವರು ಸಾಮಾನ್ಯವಾಗಿ ಪಿಕ್‌ಪಾಕೆಟ್ ಮಾಡಲು ಮಾನಸಿಕವಾಗಿ ಸಿದ್ಧರಾಗಿರುವ ಜನರೇ ಆಗಿರುತ್ತಾರೆ!’’
ಮನೋವಿಜ್ಞಾನಿಗಳ ಈ ಗ್ರಹಿಕೆಯನ್ನು ಲಂಕೇಶರು ಹಿಂದೊಮ್ಮೆ ಉಲ್ಲೇಖಿಸಿದ್ದು ಮೊನ್ನೆ ನೆನಪಾಯಿತು. ಕಾರಣ, ಯಾವುದಾದರೂ ಖಡಕ್ ಸರಕಾರ ತನಿಖೆಗೆ ಒಳಪಡಿಸಿದರೆ ಸ್ವತಃ ತಾವೇ ಜೈಲು ಸೇರುವ ಸಾಧ್ಯತೆಯಿರುವ ಇಬ್ಬರು ರಾಜಕಾರಣಿಗಳು ಕ್ರೂರ ಕೃತ್ಯದಲ್ಲಿ ಭಾಗಿಯಾದ ನಟನೊಬ್ಬನಿಗೆ ಉಗ್ರ ಶಿಕ್ಷೆ ವಿಧಿಸಿ ಎಂದು ಕೂಗುತ್ತಿದ್ದರು!
ಅವರ ಮಾತಿನ ವರದಿಯ ಪಕ್ಕದಲ್ಲೇ ಅವರ ಪಕ್ಷದ ನಾಯಕರಿಗೆ ಜಾಮೀನುರಹಿತ ಅರೆಸ್ಟ್ ವಾರಂಟ್ ಜಾರಿಯಾದ ಸುದ್ದಿಯಿತ್ತು. ಮಾರನೆಯ ದಿನ ಅವರ ಪಕ್ಷದ ಮತ್ತೊಬ್ಬ ನಾಯಕನ ಮಗ ಬಂಧನವಾಗಲಿರುವ ಸುದ್ದಿ ಬಂದಿತ್ತು. ವಾರದ ಹಿಂದೆ ಅವರ ಲೋಕಸಭಾ ಅಭ್ಯರ್ಥಿಯೊಬ್ಬ ವಿಕೃತ ಕಾಮಜಾಲದಲ್ಲಿ ಸಿಕ್ಕಿಕೊಂಡಿದ್ದ; ಇಂಥ ವಿರೋಧಾಭಾಸಗಳು ಅರ್ಥವಾಗದಷ್ಟು ಅಸೂಕ್ಷ್ಮತೆ ಹಾಗೂ ಭಂಡತನ ನಮ್ಮ ಸಾರ್ವಜನಿಕ ಜೀವನದಲ್ಲಿ ಹಬ್ಬಿದೆ.
ಇಂಥ ಕಾಲದಲ್ಲಿ ಕೊಲೆ ಕೇಸಿನಲ್ಲಿ ಸಿಕ್ಕಿಬಿದ್ದಿರುವ ನಟನೊಬ್ಬನ ಬಗ್ಗೆ ಅವನ ಅಭಿಮಾನಿಗಳು, ವಿರೋಧಿಗಳು, ಟಿಆರ್‌ಪಿಗೋಸ್ಕರ ಮಾಧ್ಯಮಗಳು ಚಿತ್ರವಿಚಿತ್ರ ‘ಚೀರುರಂಜನೆ’ಯನ್ನು ಸೃಷ್ಟಿಸಿರುವುದು ಅಚ್ಚರಿಯಲ್ಲ. ತಪ್ಪಿತಸ್ಥರಿಗೆ ಶಿಕ್ಷೆಯಾಗಬಹುದು; ಆದರೆ ‘ಸಜ್ಜನರು’ ಕೂಡ ತಾವು ತಪ್ಪು ಮಾಡಿದಾಗ ಶಿಕ್ಷೆಯಿಂದ ತಪ್ಪಿಸಿಕೊಳ್ಳುವ ಮಾರ್ಗ ಹುಡುಕುತ್ತಲೇ ಇರುತ್ತಾರೆ ಎಂಬುದನ್ನು ಮರೆಯದಿರೋಣ! ಆದ್ದರಿಂದಲೇ ಅಪರಾಧ-ಶಿಕ್ಷೆಗಳ ಆಚೆ ಹೋಗಿ, ‘ಅಪರಾಧ’ ಎನ್ನುವುದು ಯಾರು ಬೇಕಾದರೂ ಮಾಡುವ ಕ್ರಿಯೆ ಎನ್ನುವುದನ್ನು ನೆನಪಿನಲ್ಲಿಟ್ಟುಕೊಂಡೇ ಇಂಥ ಪ್ರಕರಣಗಳನ್ನು ನೋಡಬೇಕೇನೋ!
ತೆರೆಯ ಮೇಲಿನ ಸೂಪರ್ ಹೀರೋ ಇಮೇಜುಗಳನ್ನು ತೆರೆಯಾಚೆಗೂ ಪ್ರಯೋಗ ಮಾಡಲೆತ್ನಿಸುವ ವರಸೆ ಹೊಸದೇನಲ್ಲ. ಕಾಡುಮೃಗಗಳನ್ನು ಬೇಟೆಯಾಡಿ ಕಾನೂನಿನ ಕುಣಿಕೆಯಲ್ಲಿ ಸಿಕ್ಕಿಕೊಂಡ ನಟರಿದ್ದಾರೆ. ಎದುರಾಳಿ ನಟರನ್ನು ಹತ್ಯೆ ಮಾಡಿಸಿ ಬಚಾವಾಗಿರುವವರೂ ಇರಬಹುದು. ಹೇಳಿ ಕೇಳಿ ಜನಪ್ರಿಯ ಸಿನೆಮಾ ಲೋಕ ಒಣ ಮೆಚ್ಚುಗೆಯನ್ನೇ ಹೆಚ್ಚು ಆಶ್ರಯಿಸಿದ ಲೋಕ. ಇಲ್ಲಿ ಖ್ಯಾತ ನಟ ಕೂಡ ಒಂದು ಟೇಕ್ ಮುಗಿಸಿದ ಕೂಡಲೇ ಹೊಗಳುವ ಬಾಯಿಗಳಿಗಾಗಿ ಎದುರು ನೋಡುವುದು ಸಹಜ! ‘ಸೂಪರ್ ಅಣ್ಣ!’ ಎನ್ನಲು ತುದಿಬಾಯಲ್ಲಿರುವ ಜನ ಅವನ ಸುತ್ತ ಇರಬಲ್ಲರು. ಈ ವರಸೆ ಸಿನೆಮಾಲೋಕದಲ್ಲಿ ಮಾತ್ರವಲ್ಲ, ಸಾಹಿತ್ಯ, ಸಂಸ್ಕೃತಿಗಳ ಇನ್ನಿತರ ಲೋಕಗಳಲ್ಲೂ ಇದೆ!
ಒಣಮೆಚ್ಚುಗೆಗೆ ಬಲಿಬಿದ್ದ ವಲಯಗಳಲ್ಲಂತೂ ಕಲಾವಿದರು ಬೆಳೆಯದೆ ಮರಗಟ್ಟುವುದು ಸಹಜ. ಯಾವ ವಿಮರ್ಶೆಯೂ ಒಗ್ಗದ, ಯಾವ ವಿಮರ್ಶೆಗೂ ಬಗ್ಗದ, ನಟರ ಮನಸ್ಸು ಇನ್ನಷ್ಟು ಜಟಿಲವಾಗಿರಬಲ್ಲದು. ಈಚಿನ ವರ್ಷಗಳಲ್ಲಂತೂ ನಾಯಕನಟರನ್ನು ಅಸಾಮಾನ್ಯರನ್ನಾಗಿ ಮಾಡುವ, ಹೈಪರ್ ಮ್ಯಾಸ್ಕುಲೈನ್ ಹೀರೋಗಳನ್ನಾಗಿಸುವ ಸಿನೆಮಾಗಳನ್ನು ನೀವು ನೋಡಿರಬಹುದು. ಇವನ್ನೆಲ್ಲ ಆಟದಂತೆ ಕಂಡು ನಟಿಸುವ ನಟ ಮಾತ್ರ ಅತಿಮಾನವ ಭ್ರಮೆಯಿಂದ ಬಚಾವಾಗುತ್ತಾನೆ; ಆ ಅತಿಮಾನವ ನಾನೇ ಎಂದು ಭ್ರಮಿಸುವ ನಟ ಮುಗ್ಗರಿಸುತ್ತಾನೆ.
ಅಮೆರಿಕದ ಶ್ರೇಷ್ಠ ಕಾದಂಬರಿಕಾರ ಹೆನ್ರಿ ಜೇಮ್ಸ್ ಕಾದಂಬರಿ ಬರವಣಿಗೆ ಕುರಿತು ಮಾತಾಡುತ್ತಾ ‘ಥಿಯರಿ ಆಫ್ ಇಲ್ಯುಮಿನೇಶನ್’ ಎಂಬ ಐಡಿಯಾವನ್ನು ಚರ್ಚಿಸುತ್ತಾನೆ. ನಾನು ಇದನ್ನು ‘ಪಾತ್ರ ಪ್ರಕಾಶ ತತ್ವ’ ಎನ್ನುತ್ತೇನೆ. ಅದರ ಸಾರಾಂಶ: ಒಂದು ವೃತ್ತದ ಕೇಂದ್ರದಲ್ಲಿ ಮುಖ್ಯ ಪಾತ್ರ ನಿಂತಿದೆ. ಉಳಿದ ಪಾತ್ರಗಳು ಮುಖ್ಯ ಪಾತ್ರವನ್ನು ಸುತ್ತುವರಿದು ನಿಂತಿವೆ. ಈ ಮುಖ್ಯ ಪಾತ್ರ ತನ್ನ ಸುತ್ತ ನಿಂತಿರುವ ಪಾತ್ರಗಳೊಂದಿಗೆ ವ್ಯವಹರಿಸುತ್ತದೆ. ಹಲವು ದೀಪಗಳು ಕತ್ತಲ ಕೋಣೆಯ ವಿವಿಧ ಭಾಗಗಳನ್ನು ಬೆಳಗುವಂತೆ ಉಳಿದ ಪಾತ್ರಗಳ ಜೊತೆಗಿನ ಪ್ರತಿ ಒಡನಾಟವೂ ಮುಖ್ಯಪಾತ್ರದ ವಿವಿಧ ಆಯಾಮಗಳ ಮೇಲೆ ಬೆಳಕು ಚೆಲ್ಲುತ್ತದೆ.
ಅಂದರೆ, ಕೇಂದ್ರ ಪಾತ್ರದಲ್ಲಿ ನಾವು ಕಾಣದ ಮುಖಗಳು ಇತರ ಪಾತ್ರಗಳ ಮೂಲಕ ಬೆಳಕಿಗೆ ಬರುತ್ತವೆ ಎಂದರ್ಥ.
ಕಾದಂಬರಿಯ ಪ್ರೇರಣೆಯಿಂದಲೇ ವಿಕಾಸಗೊಂಡ ಹಾಲಿವುಡ್ ಸಿನೆಮಾ ಹೆನ್ರಿ ಜೇಮ್ಸ್ ತತ್ವವನ್ನು ಸೃಜನಶೀಲವಾಗಿ ಬಳಸಬಹುದಾದ ರೀತಿಯನ್ನು ಹಾಲಿವುಡ್ ಸ್ಕ್ರೀನ್ ಪ್ಲೇ ಗುರು ಸಿಡ್ ಫೀಲ್ಡ್ ಚರ್ಚಿಸುತ್ತಾನೆ. ಆದರೆ ಹಾಲಿವುಡ್‌ನಿಂದ ಹಿಡಿದು ಇಂಡಿಯಾದವರೆಗೂ ‘ಪಾತ್ರ ಪ್ರಕಾಶ ತತ್ವ’ವನ್ನು ಸಂತೆಯ ಹೊತ್ತಿಗೆ ಮೂರು ಮೊಳ ನೇಯುವ ಚಿತ್ರಕಥಾಕಾರರು ಅಗ್ಗವಾಗಿ ಬಳಸಿಕೊಂಡಿದ್ದಾರೆ; ಪುರಾಣ ಮಹಾಕಾವ್ಯಗಳ ಹೀರೋಗಳು ವಿಕಾಸಗೊಂಡ ರೀತಿಯನ್ನು ಹಲವು ವರ್ಷಗಳ ಕಾಲ ರಿಸರ್ಚ್ ಮಾಡಿ ಜೋಸೆಫ್ ಕ್ಯಾಂಪ್‌ಬೆಲ್ ಬರೆದ ‘ದ ಹೀರೋ ವಿತ್ ಎ ಥೌಸಂಡ್ ಫೇಸಸ್’ನಂಥ ಗಂಭೀರ ಪುಸ್ತಕಗಳ ಐಡಿಯಾಗಳನ್ನು ತಲೆಕೆಟ್ಟಂತೆ ತಿರುಚಿ ಹುಲುಮಾನವ ಹೀರೋಗಳನ್ನು ಅತಿಮಾನವರನ್ನಾಗಿ ಮಾಡಿದ್ದಾರೆ.
ಆದರೆ ಯಾವುದೇ ಹೀರೋ ತೆರೆಯ ಮೇಲಿನ ತನ್ನ ‘ಲಾರ್ಜರ್ ದ್ಯಾನ್ ಲೈಫ್’ ಇಮೇಜಿಗೆ ತಾನೇ ಮನಸೋತರೆ ದುರಂತ ಖಾತ್ರಿ. ತೆರೆಯ ಇಮೇಜಿಗೆ ಕಟ್ಟುಬಿದ್ದ ಹೀರೋಗೆ, ತನ್ನ ಸಿನೆಮಾವನ್ನೋ, ತನ್ನ ನಟನೆಯನ್ನೋ ಹೊಗಳದವರಿಗೆ ರಾತ್ರಿ ಪಾರ್ಟಿಯಲ್ಲಿ ಯಾಕೆ ನಾಲ್ಕು ಬಿಡಬಾರದು ಎನ್ನಿಸಬಹುದು! ಸೂಪರ್ ಹೀರೋ ಆಗಿ ನಟಿಸಿ ನಟಿಸಿ, ‘ನಾನು’ ಅಥವಾ ‘ಇಗೋ’ ಭಯಂಕರವಾಗಿ ಬೆಳೆಯತೊಡಗುತ್ತದೆ. ನನಗೆ ಬೇಕಾದ ರಾಜಕಾರಣಿಯ ಪರವಾಗಿ ಪ್ರಚಾರ ಮಾಡಿ ಗೆಲ್ಲಿಸಬಲ್ಲೆ ಎಂಬ ಅಹಂಕಾರ ಮೊಳೆಯುತ್ತದೆ. ಈ ಹೀರೋ ಒಂಚೂರು ಆಯ ತಪ್ಪಿದರೆ ಖೆಡ್ಡಾಕ್ಕೆ ಕೆಡವಲು ಎದುರಾಳಿ ರಾಜಕಾರಣಿಗಳು ಕಾಯತೊಡಗುತ್ತಾರೆ.
ಇಂಥ ಭ್ರಮಾವಲಯಗಳಲ್ಲಿ ಸಂಭ್ರಮವೂ ಅತಿ ಕುಡಿತದಲ್ಲಿ ಪರ್ಯಾವಸಾನವಾಗುತ್ತದೆ; ಸೋಲೂ ಅತಿ ಹತಾಶೆಯ ಕುಡಿತದಲ್ಲಿ ಕೊನೆಗೊಳ್ಳುತ್ತದೆ! ಕುಡಿಯುವುದು ಯಾತಕ್ಕಾಗಿ ಎಂಬುದರ ನೆದರೇ ಇರದ ಭ್ರಮೆಯ, ಆತ್ಮನಾಶದ ಭೀಕರ ವಾತಾವರಣವಿದು. ಸೋಷಿಯಲ್ ಡ್ರಿಂಕಿಂಗ್‌ನ ಅರ್ಥವೇ ಗೊತ್ತಿರದ, ಹುಚ್ಚು ಸ್ವಪ್ರತಿಷ್ಠೆಯ, ಹುಂಬ ಹೊಗಳಿಕೆಯ ಕಣ್ಕಟ್ಟಿನ ರಾತ್ರಿಗಳಲ್ಲಿ ಉಬ್ಬಿದ ಇಮೇಜುಗಳ ಬಲೂನುಗಳಿಗೆ ನಿಜದ ಸೂಜಿ ಮೊನೆ ತಾಗಿಸುವವರು ಯಾರು! ‘ದೊಡ್ಡ ದೊಡ್ಡ ಮಾತು ಬಲೂನು ಹಿಗ್ಗುವಾಗೆಲ್ಲ ತಾಗಿಸು ನಿಜದ ಸೂಜಿ ಮೊನೆ’ ಎಂದ ಅಡಿಗರ ಕವಿತೆಯ ಪ್ರಾರ್ಥನೆಯನ್ನು ಉದ್ದಾಮ ಸಾಹಿತಿಗಳೇ ಕೇಳಿಸಿಕೊಳ್ಳಲು ಸಿದ್ಧರಿಲ್ಲ; ಇಂಥದ್ದರಲ್ಲಿ ಸಿನೆಮಾದ ಮಂದಿ ಎಲ್ಲಿ ಕೇಳಿಯಾರು!
ವಿಚಿತ್ರವೆಂದರೆ ತೆರೆಯ ಮೇಲೆ ಕಾನೂನು ಕಾಯ್ದೆಗಳನ್ನು ಉಲ್ಲಂಘಿಸುವ ದುಷ್ಟರನ್ನು ಸದೆ ಬಡಿಯುವ ನಾಯಕನಟರಿಗೆ ಸಂವಿಧಾನ ಎನ್ನುವುದು ವ್ಯಕ್ತಿಯ ವರ್ತನೆ, ಹಕ್ಕು ಕರ್ತವ್ಯಗಳ ಬಗ್ಗೆ ಏನು ಹೇಳುತ್ತದೆ ಎಂಬುದರ ಅರಿವೇ ಇದ್ದಂತಿಲ್ಲ. ಇಂಥ ಅಜ್ಞಾನ ನಿಜಕ್ಕೂ ಕಲಾವಿದರಾಗಿರಬಹುದಾದ ನಟ, ನಟಿಯರನ್ನೂ ಆಹುತಿ ತೆಗೆದುಕೊಳ್ಳುತ್ತದೆ. ಅವರೊಳಗಿದ್ದ ಅಷ್ಟಿಷ್ಟು ಕಲೆಯೂ ನಾಶವಾಗಿ ವೈಯಕ್ತಿಕ ದ್ವೇಷ, ಸೇಡು ವಿಜೃಂಭಿಸುತ್ತದೆ.
ಇದು ಸಿನೆಮಾ ಕ್ಷೇತ್ರದಲ್ಲಿ ಮಾತ್ರ ಆಗುತ್ತದೆ ಎಂದುಕೊಂಡು ಇನ್ನಿತರ ಸಾಂಸ್ಕೃತಿಕ ಕ್ಷೇತ್ರಗಳ ಜನ ಬೀಗಬೇಕಾಗಿಲ್ಲ. ಇನ್ನೊಂದು ತಂಡಕ್ಕೆ ಥಿಯೇಟರ್ ಸಿಗದಂತೆ ಪಿತೂರಿ ಮಾಡುವ ನಾಟಕಕಾರನೂ, ನಿರ್ದೇಶಕನೂ ಇಂಥದೇ ಕೊಲೆಗಡುಕ ಕೆಲಸದಲ್ಲಿ ಭಾಗಿಯಾಗಿರುತ್ತಾನೆ! ತನ್ನ ಕಳಪೆ ಕೃತಿಯನ್ನು ಶ್ರೇಷ್ಠ ಎನ್ನಲಿಲ್ಲ ಎಂಬ ಕಾರಣಕ್ಕಾಗಿ ಮತ್ತೊಬ್ಬ ಒಳ್ಳೆಯ ಲೇಖಕನ ಮೇಲೆ ದ್ವೇಷ ಸಾಧಿಸಿ ಪ್ರಶಸ್ತಿ ತಪ್ಪಿಸುವ ಕವಿವೇಷಧಾರಿಗಳು; ಸಾಹಿತ್ಯಕ ಪರಪುಟ್ಟಗಳು, ಜ್ಞಾನಪೀಠಿಗಳು, ಅಪಪ್ರಚಾರ ನಿರತ ಪತ್ರಕರ್ತರು, ಅಧ್ಯಾಪಕ, ಪ್ರಾಧ್ಯಾಪಕಿ...ಹೀಗೆ ಇಂಥ ಸೇಡುಮಾರಿಗಳ ಪಟ್ಟಿ ಎಲ್ಲ ವಲಯಗಳಲ್ಲೂ ಬೆಳೆಯುತ್ತಲೇ ಹೋಗುತ್ತದೆ! ನಟನೊಬ್ಬ ಕೊಲೆಯಲ್ಲಿ ಭಾಗಿಯಾಗಿದ್ದರೆ, ಈ ಸುಪಾರಿ ಸಾಹಿತಿಗಳು, ಸುಪಾರಿ ವೃತ್ತಿವಂತರು ಸ್ಲೋ ಪಾಯಿಸನ್ ರೀತಿ ಕೆಲಸ ಮಾಡುತ್ತಿರುತ್ತಾರೆ!
ಇದೆಲ್ಲ ಬರೆಯುವಾಗ, ಸಿನೆಮಾದ ಖ್ಯಾತ ಖಳನಾಯಕರು ಬರಬರುತ್ತಾ ನಾಯಕಪಾತ್ರಗಳಲ್ಲಿ, ಹಾಸ್ಯ ಪಾತ್ರಗಳಲ್ಲಿ ನಟಿಸುವುದರ ಹಿಂದಿರುವ ಕಾತರ ನೆನಪಾಯಿತು. ಖಳನಾಯಕನ ಪಾತ್ರ ಮಾಡಿ ‘ಟೈಪ್ಡ್’ ನಟನಾಗಿದ್ದ ಕನ್ನಡ ನಟ ದಿನೇಶ್ ಮುಂದೆ ಹಾಸ್ಯ ಪಾತ್ರಗಳಲ್ಲಿ ನಟಿಸುತ್ತಾ ತಮ್ಮ ಕಲೆಯ ಶಕ್ತಿಯನ್ನು ಕಂಡುಕೊಂಡರು. ಖಳನಾಯಕ ಟೈಗರ್ ಪ್ರಭಾಕರ್ ತಮ್ಮದೇ ಶೈಲಿಯ ಹೀರೋ ಆಗಿ ಕ್ಲಿಕ್ಕಾದರು.
ಎಲ್ಲೋ ಓದಿದ್ದು: ‘ಶೋಲೆ’ಯ ಗಬ್ಬರ್‌ಸಿಂಗ್ ಪಾತ್ರದಿಂದ ಖ್ಯಾತರಾಗಿದ್ದ ಅಮ್ಜದ್‌ಖಾನ್ ಒಮ್ಮೆ ಅಮಿತಾಬ್ ಬಚ್ಚನ್ ಮನೆಗೆ ಹೋದರು. ಆಗ ಅಮಿತಾಭ್ ಮಗ ಅಭಿಷೇಕ್ ಬಚ್ಚನ್ ಇನ್ನೂ ಬಚ್ಚಾ! ಅಮ್ಜದ್‌ಖಾನ್ ಬಂದ ತಕ್ಷಣ ಅಭಿಷೇಕ್, ‘ಗಬ್ಬರ್ ಸಿಂಗ್ ಆ ಗಯಾ’ ಎಂದು ಹೆದರಿ ಅಪ್ಪನ ಹಿಂದೆ ಅವಿತುಕೊಂಡ. ಆಗ ಅಮಿತಾಭ್, ‘ಗಬ್ಬರ್ ಸಿಂಗ್ ಒಂದು ಪಾತ್ರ ಅಷ್ಟೆ’ ಎಂದು ಮಗನಿಗೆ ತಿಳಿ ಹೇಳಿದರು. ಆಗ ಇದ್ದಕ್ಕಿದ್ದಂತೆ ಅಮ್ಜದ್‌ಗೆ ಒಳ್ಳೆಯವನ ಪಾತ್ರ ಮಾಡಿ ಮಕ್ಕಳಿಗೆ ಪ್ರಿಯವಾಗುವ ಆಸೆ ಹುಟ್ಟಿದ್ದರೆ ಅಚ್ಚರಿಯಲ್ಲ! ಅಮ್ಜದ್‌ಖಾನ್ ಮುಂದೆ ‘ಮೈಲ್ಡ್’ ಪಾತ್ರಗಳನ್ನು ಮಾಡಿ ಆನಂದಿಸಿದರು.
ಈಚೆಗೆ ಗೆಳೆಯರೊಬ್ಬರು ಖ್ಯಾತ ಸಿನೆಮಾ ನಟ ದಿಲೀಪ್ ಕುಮಾರ್ ಅನುಭವವೊಂದನ್ನು ಹೇಳಿದರು: ಭಗ್ನಪ್ರೇಮಿ ದೇವದಾಸ್ ಥರದ ದುಃಖಿ ಪಾತ್ರಗಳನ್ನೇ ಮಾಡಿ ದಿಲೀಪ್ ಖಿನ್ನತೆಗೊಳಗಾದರು. ಕೊನೆಗೆ ಮನೋವೈದ್ಯರನ್ನೂ ನೋಡಿದರು. ‘ಈಗ ನೀವು ಮಾಡುತ್ತಿರುವ ಖಿನ್ನತೆಯ ಪಾತ್ರಗಳನ್ನು ಬಿಟ್ಟು ಲವಲವಿಕೆಯ ಪಾತ್ರಗಳನ್ನು ಮಾಡಿ’ ಎಂದರು ವೈದ್ಯರು. ದಿಲೀಪ್ ಕುಮಾರ್ ಖಿನ್ನತೆಯ ಪಾತ್ರಗಳನ್ನು ಬಿಟ್ಟು ವಿಭಿನ್ನ ಪಾತ್ರಗಳನ್ನು ಮಾಡಿ ತಮ್ಮ ಆರೋಗ್ಯವನ್ನು ಮರಳಿ ಪಡೆದುಕೊಂಡರಂತೆ!
ಹೀರೋ ಪಾತ್ರ ಮಾಡಿ ಖ್ಯಾತರಾದವರು ತಮ್ಮ ಇಮೇಜನ್ನು ಕಳೆದುಕೊಳ್ಳಲು ಸಿದ್ಧರಿರಲಾರರು! ಆದರೂ, ಸೋಲುವುದು ಮನುಷ್ಯನ ವ್ಯಕ್ತಿತ್ವಕ್ಕೆ ಧಕ್ಕೆ ಮಾಡಿದಂತೆ ಕೆಲವೊಮ್ಮೆ ಒಳಿತನ್ನೂ ಮಾಡಬಹುದು; ಆಗಾಗ್ಗೆಯಾದರೂ ‘ನಾಯಕ’ ಪಾತ್ರ ಬಿಟ್ಟು ‘ಮನುಷ್ಯ’ ಪಾತ್ರಗಳನ್ನು ಮಾಡುವುದು ನಾಯಕನಟರ ಒಳಬದುಕಿಗೂ ಒಳ್ಳೆಯದು! ಖಳನಾಯಕ ಪಾತ್ರ ಮಾಡಿ ಬೋರಾಗಿ ಕ್ಯಾರಕ್ಟರ್ ಪಾತ್ರಗಳನ್ನು, ಹಾಸ್ಯ ಪಾತ್ರಗಳನ್ನು ಮಾಡಿದ ನಟರಂತೆಯೇ, ಅತಿಮಾನವ ಪಾತ್ರಗಳನ್ನು ಮಾಡಿ ಬೋರಾದ ನಾಯಕನಟರು ಖಳಪಾತ್ರಗಳನ್ನೋ ಹಾಸ್ಯಪಾತ್ರಗಳನ್ನೋ ಮಾಡುವುದು ಆರೋಗ್ಯಕರವಾಗಿರಬಲ್ಲದು. ಎಷ್ಟೋ ಸಲ ಹಾಸ್ಯಾಸ್ಪದವಾಗುವುದು, ಸೋಲುವುದು ಕೂಡ ‘ಇಗೋ’ದ ವಿಕಾರಗಳಿಗೆ ಕೊನೆ ಹೇಳಬಲ್ಲದು.
ನಟನೆ ಹಾಗೂ ಕಲೆ ತನ್ನನ್ನು ತಾನು ಮೀರುವ ಕಲೆ; ಅದು ನಟ ನಟಿಯರಿಗೆ ನಿಜಕ್ಕೂ ಥೆರಪಿಯಾಗಬಲ್ಲದು. ಆದರೆ ಇವನ್ನೆಲ್ಲ ನಟರಿಗೆ ಹೇಳಿಕೊಡಬಲ್ಲ ಜ್ಞಾನಿ ನಿರ್ದೇಶಕರು ಎಲ್ಲಿದ್ದಾರೆ! ಎಲ್ಲಕ್ಕಿಂತ ಮುಖ್ಯವಾಗಿ ಇಲ್ಲಿ ‘ಮನೆಯೊಳಗೆ ಮನೆಯೊಡೆಯನಿದ್ದಾನೂ ಇಲ್ಲವೋ!’