Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಈ ಹೊತ್ತಿನ ಹೊತ್ತಿಗೆ
      • ಜನಚರಿತೆ
      • ವಿಡಂಬನೆ
      • ಜನ ಜನಿತ
      • ರಂಗ ಪ್ರಸಂಗ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಜನಮನ
      • ರಂಗದೊಳಗಿಂದ
      • ಶಂಬೂಕ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಗಾಳಿ ಬೆಳಕು
  5. ಬರಹಕ್ಕೆ ಹೆಸರಿಡುವ ಕಷ್ಟ-ಸುಖ!

ಬರಹಕ್ಕೆ ಹೆಸರಿಡುವ ಕಷ್ಟ-ಸುಖ!

ಡಾ.ನಟರಾಜ್ ಹುಳಿಯಾರ್ಡಾ.ನಟರಾಜ್ ಹುಳಿಯಾರ್30 Sept 2024 10:22 AM IST
share
ಬರಹಕ್ಕೆ ಹೆಸರಿಡುವ ಕಷ್ಟ-ಸುಖ!
ಅದೇನೇ ಇರಲಿ. ಕವಿತೆಯನ್ನೋ, ಲೇಖನವನ್ನೋ ಪ್ರತಿನಿಧಿಸಲು ಕೊಟ್ಟ ಟೈಟಲ್‌ನ ಕೇಂದ್ರದಿಂದಲೇ ಪದ್ಯವೊಂದನ್ನು ಓದುವುದು ಪದ್ಯದ ಇನ್ನಿತರ ಓದುಗಳನ್ನು ಕಡೆಗಣಿಸಬಲ್ಲದು. ಒಂದು ಕೇಂದ್ರ ಪ್ರತಿಮೆಯ ಸುತ್ತಲೇ ಕವಿತೆಯನ್ನು ಓದುವುದು ಈ ಕೃತಿಯನ್ನು ಬೇರೆ ಥರವೂ ಓದಲು ಸಾಧ್ಯ ಎಂಬುದನ್ನು ಕಡೆಗಣಿಸುತ್ತಿರುತ್ತದೆ.

ಬರೆವ ಬದುಕಿನಲ್ಲಿ ಇರುವವರಿಗೆಲ್ಲ ಬರೆಯುವಾಗಲೋ, ಬರೆದು ಮುಗಿಸಿದ ನಂತರವೋ ಎದುರಾಗುವ ಈ ಪ್ರಶ್ನೆ ಇಟಲಿಯ ಸುಪ್ರಸಿದ್ಧ ಲೇಖಕ ಅಂಬರ್ತೊ ಇಕೋಗೂ ಎದುರಾಯಿತು. ಹಲವು ಬಗೆಯ ‘ನ್ಯಾರೇಟೀವ್’ ಅಥವಾ ಕಥನಗಳನ್ನು ಬರೆಯುತ್ತಿದ್ದ ಇಕೋ ಕೊಂಚ ತಡವಾಗಿ ತನ್ನ ಮೊದಲ ಕಾದಂಬರಿ ಬರೆದ. ನಂತರ, ‘ಈ ಕಾದಂಬರಿಗೆ ಯಾವ ಹೆಸರಿಡಲಿ?’ ಎಂದು ಹತ್ತು ಹೆಸರುಗಳನ್ನು ಗೆಳೆಯ, ಗೆಳತಿಯರಿಗೆ ಕಳಿಸಿದ. ಅವರು ಆ ಹತ್ತು ಹೆಸರುಗಳಲ್ಲಿ ‘ದ ನೇಮ್ ಆಫ್ ದಿ ರೋಸ್’ ಎಂಬ ಟೈಟಲ್ ಆರಿಸಿದರು. ಕಾದಂಬರಿಯ ಐವತ್ತು ಮಿಲಿಯನ್ ಪ್ರತಿಗಳು ಮಾರಾಟವಾದವು. ಕಾದಂಬರಿಯ ಜನಪ್ರಿಯತೆಯಲ್ಲಿ ಟೈಟಲ್‌ನ ಮ್ಯಾಜಿಕ್ ಕೂಡ ಸೇರಿರಬಹುದೇನೋ.

ಇಕೋ ಕಾದಂಬರಿಯ ಟೈಟಲ್ ಪ್ರಸಂಗ ನೆನಪಾದಾಗ, ಎಷ್ಟೋ ವರ್ಷಗಳ ಕೆಳಗಿನ ಕುವೆಂಪು ಅವರ ಅನುಭವವೊಂದು ನೆನಪಾಯಿತು. ತಾವು ಹಿಂದೆ ಬರೆದ ಎರಡು ಕಾದಂಬರಿಗಳಿಗಿಂತ ಮಹತ್ವಾಕಾಂಕ್ಷೆಯ ಕಾದಂಬರಿಯೊಂದನ್ನು ಬರೆಯಲು ಕುವೆಂಪು ಯೋಚಿಸಿದ್ದರು. ಕಾದಂಬರಿ ಬರೆಯುವ ಮೊದಲೇ ಕುವೆಂಪುವಿಗೆ ‘ಕಾಲೋಸ್ಮಿ’ ಎಂಬ ಟೈಟಲ್ ಹೊಳೆದಿತ್ತು! ಆದರೆ ಕಾದಂಬರಿ ಬರೆಯುವ ಕಾಲ ಕೂಡಿ ಬರಲಿಲ್ಲ.

ಈಚೆಗೆ ಕನ್ನಡ ಅಧ್ಯಾಪಕ-ಅಧ್ಯಾಪಕಿಯರ ರಿಫ್ರೆಶರ್ ಕೋರ್ಸ್‌ನಲ್ಲಿ ಟೈಟಲ್ ಬಗ್ಗೆ ಚರ್ಚೆ ಮಾಡುವಾಗ ಈ ಎರಡೂ ಉದಾಹರಣೆಗಳು ನೆನಪಾಗಿರಲಿಲ್ಲ. ‘ತಡವಾಗಿ ಬಂದ ಬೆಳಕೇ!’ ಎಂಬ ರಾಮಚಂದ್ರ ಶರ್ಮರ ಸಾಲು ನನ್ನನ್ನು ಕುಟುಕಿತು. ಅವತ್ತು ಕವಿತೆಗೂ ಅದರ ಟೈಟಲ್‌ಗೂ ಏನು ಸಂಬಂಧ ಎಂಬ ಪ್ರಶ್ನೆ ಸಾಹಿತ್ಯಪ್ರಕಾರಗಳ ಅನುಸಂಧಾನದ ಚರ್ಚೆಯ ನಡುವೆ ನುಸುಳಿ ಬಂದಿತ್ತು. ಅಧ್ಯಾಪಕ, ಅಧ್ಯಾಪಕಿಯರು ಈ ಪ್ರಶ್ನೆಗೆ ಕೆಲವು ಉತ್ತರಗಳನ್ನು ತೇಲಿಬಿಟ್ಟರು.

‘ಕವಿತೆಯ ಕೇಂದ್ರ ಅರ್ಥ ಟೈಟಲ್‌ನಲ್ಲಿರುತ್ತದೆ’ ಎಂದರು ಮೇಡಂ.

‘ಕವಿತೆಯ ತಾತ್ವಿಕತೆ ಕವಿತೆಯ ಟೈಟಲ್‌ನಲ್ಲಿರುತ್ತದೆ’ ಎಂದರು ಮೇಷ್ಟರು.

‘ಕವಿತೆಗೊಂದು ಹೆಸರು ಬೇಕೆ?’ ಎಂದರು ಮತ್ತೊಬ್ಬ ಮೇಷ್ಟರು.

‘ಕವಯಿತ್ರಿ ಅಥವಾ ಕವಿ ಹೇಗೆ ಮತ್ತು ಯಾಕೆ ಟೈಟಲ್ ಕೊಡುತ್ತಾರೆ ಎಂಬುದು ಯಾರಿಗೆ ಗೊತ್ತು? ಈ ಹೆಸರು ಕವಿತೆಯ ಒಟ್ಟು ಅರ್ಥವನ್ನೋ, ಕೇಂದ್ರ ಅರ್ಥವನ್ನೋ ಹೇಳುತ್ತದೆ ಎಂಬುದಕ್ಕೆ ಖಾತ್ರಿಯೇನು? ಒಂದು ಕವಿತೆಯ ಟೈಟಲ್ ಎಷ್ಟೋ ಸಲ ಆ ಕವಿತೆಯನ್ನು ಒಂದು ನಿರ್ದಿಷ್ಟ ಅರ್ಥಕ್ಕೆ, ನಿರ್ದಿಷ್ಟ ಭಾವಕ್ಕೆ ಕಟ್ಟಿ ಹಾಕಬಹುದಲ್ಲವೆ? ಉದಾಹರಣೆಗೆ, ಬೇಂದ್ರೆಯವರ ‘ಬೆಳಗು’ ಪದ್ಯದ ಟೈಟಲ್ ಬೆಳಗಿನ ರೂಪಕದ ಸುತ್ತ ಒಂದು ದಿಕ್ಕಿನ ಅರ್ಥವನ್ನು ನಿರ್ದಿಷ್ಟಗೊಳಿಸುತ್ತದೆಯೇ? ಎಷ್ಟೋ ಸಲ ಈ ಟೈಟಲ್‌ಗಳು ಕವಿತೆಯ ನಾನಾರ್ಥಗಳಿಗೆ ಅವಕಾಶ ಕೊಡದೆ, ಇದೇ ಕವಿತೆಯ ಮುಖ್ಯ ಅರ್ಥ ಎಂದು ನಿರ್ದೇಶನ ಮಾಡುತ್ತವೆಯೇ? ಕವಿತೆಯ ಹೆಸರುಗಳು ಅರ್ಥವಿಸ್ತಾರಕ್ಕೆ ಅವಕಾಶ ಮಾಡಿಕೊಡುತ್ತವೆಯೋ, ಇಲ್ಲವೋ?’

ಹೀಗೆಲ್ಲ ಅನ್ನಿಸಿದ್ದನ್ನು ಅಲ್ಲಿದ್ದ ಅಧ್ಯಾಪಕಿಯರು, ಅಧ್ಯಾಪಕರೊಡನೆ ಹೇಳಿಕೊಳ್ಳುತ್ತಾ, ‘ಟೈಟಲ್’ ಎಂಬ ಪರಿಕಲ್ಪನೆಯನ್ನು ‘ಪ್ರಾಬ್ಲಮೆಟೈಸ್’ ಮಾಡಲೆತ್ನಿಸಿದೆ. ಗಂಭೀರವಾದ ಓದಿನಲ್ಲಿ ಅಥವಾ ರಿಸರ್ಚಿನಲ್ಲಿ ‘ಪ್ರಾಬ್ಲಮೆಟೈಸ್’ ಮಾಡುವುದು ಅಂದರೆ, ನಾವು ಪರೀಕ್ಷಿಸಬೇಕಾದ ಅಥವಾ ಉತ್ತರ ಕಂಡುಕೊಳ್ಳಬೇಕಾದ ಯಾವುದೇ ಐಡಿಯಾ, ಪದ, ನಂಬಿಕೆ ಇತ್ಯಾದಿಗಳನ್ನು ಒಂದು ಪ್ರಶ್ನೆ ಅಥವಾ ಸಮಸ್ಯೆ ಎಂದು ಪರಿಗಣಿಸುವುದು; ಆ ಪದ ಅಥವಾ ಐಡಿಯಾ ಜನರು ಈಗ ತಿಳಿದಿರುವಷ್ಟು ಸರಳವಾಗಿದೆಯೋ ಇಲ್ಲವೋ ಎಂಬುದನ್ನು ಪರಿಶೀಲಿಸುವುದು.

ಇದು ಕೇಂಬ್ರಿಡ್ಜ್ ನಿಘಂಟು ‘ಪ್ರಾಬ್ಲಮೆಟೈಸೇಶನ್’ ಪರಿಕಲ್ಪನೆಯ ಬಗ್ಗೆ ಕೊಡುವ ಸರಳ ವಿವರಣೆ. ‘ಪ್ರಾಬ್ಲಮೆಟೈಸೇಶನ್’ ಎಂಬ ಪದವನ್ನು ಮಕ್ಕಿಕಾಮಕ್ಕಿಯಾಗಿ ‘ಸಮಸ್ಯೀಕರಣ’ ಎಂದು ಕನ್ನಡದಲ್ಲಿ ಅನುವಾದಿಸಿಕೊಂಡಿದ್ದು ಕೊಂಚ ಸಮಸ್ಯಾತ್ಮಕವಾದಂತಿದೆ! ಯಾವುದೇ ಪ್ರಶ್ನೆಯನ್ನಾಗಲಿ ‘ಪ್ರಾಬ್ಲಮೆಟೈಸ್’ ಮಾಡುವುದೆಂದರೆ, ಒಂದು ಪ್ರಶ್ನೆಯ ಸರಳ, ಸಿದ್ಧ, ಪರಿಚಿತ ಅರ್ಥದ ಆಚೆಗೆ ಹೋಗಿ ಆ ಪ್ರಶ್ನೆಯನ್ನು ವಿಸ್ತರಿಸಿ, ಪರಿಶೀಲಿಸುವುದು; ಅದರ ಹೊಸ ಮುಖಗಳನ್ನು ಹುಡುಕುವುದು. ಇದನ್ನು ‘ಪ್ರಶ್ನವಿಸ್ತಾರ’ ಅಥವಾ ‘ಸಿದ್ಧ ಅರ್ಥಗಳ ಪರಿಶೀಲನೆ’ ಎಂದು ಕೂಡ ಕರೆಯಬಹುದು. ‘ಪ್ರಾಬ್ಲಮೆಟೈಸೇಶನ್’ ಎಂಬ ಪದಕ್ಕೆ ಮತ್ತೊಂದು ಸಂವಾದಿ ಪದ ಹುಡುಕಬಹುದೇನೋ, ಮುಂದೆ ನೋಡೋಣ.

ಅದೇನೇ ಇರಲಿ. ಕವಿತೆಯನ್ನೋ, ಲೇಖನವನ್ನೋ ಪ್ರತಿನಿಧಿಸಲು ಕೊಟ್ಟ ಟೈಟಲ್‌ನ ಕೇಂದ್ರದಿಂದಲೇ ಪದ್ಯವೊಂದನ್ನು ಓದುವುದು ಪದ್ಯದ ಇನ್ನಿತರ ಓದುಗಳನ್ನು ಕಡೆಗಣಿಸಬಲ್ಲದು. ಒಂದು ಕೇಂದ್ರ ಪ್ರತಿಮೆಯ ಸುತ್ತಲೇ ಕವಿತೆಯನ್ನು ಓದುವುದು ಈ ಕೃತಿಯನ್ನು ಬೇರೆ ಥರವೂ ಓದಲು ಸಾಧ್ಯ ಎಂಬುದನ್ನು ಕಡೆಗಣಿಸುತ್ತಿರುತ್ತದೆ. ಈ ಕುರಿತು ಹಿಂದೊಮ್ಮೆ ಚರ್ಚಿಸಿದ್ದ ಲೇಖನವೊಂದರ ವಿವರಗಳನ್ನು ಇಲ್ಲಿ ಕೊಡುತ್ತಿರುವೆ: ಕವಿ ಎಲಿಯಟ್ ತನ್ನ ಪ್ರಖ್ಯಾತ ‘ಟ್ರೆಡಿಷನ್ ಆ್ಯಂಡ್ ದಿ ಇಂಡಿವಿಜುಯಲ್ ಟ್ಯಾಲೆಂಟ್’ ಲೇಖನದಲ್ಲಿ ಜಾನ್ ಕೀಟ್ಸ್‌ನ ‘ಓಡ್ ಟು ಎ ನೈಟಿಂಗೇಲ್’ ಕವಿತೆಯನ್ನು ಪ್ರಸ್ತಾಪಿಸುತ್ತಾನೆ. ಕವಿತೆಯ ತಲೆಬರಹವನ್ನು

ನೋಡುವವರಿಗೆ ಇದು ನೈಟಿಂಗೇಲ್ ಹಕ್ಕಿಯನ್ನು ಕೇಂದ್ರದಲ್ಲಿಟ್ಟುಕೊಂಡು ಅಥವಾ ನೈಟಿಂಗೇಲ್ ಹಕ್ಕಿಯನ್ನು ಉದ್ದೇಶಿಸಿ ಬರೆದ ಓಡ್ ಅಥವಾ ಪ್ರಗಾಥ ಎನ್ನಿಸುತ್ತದೆ. ಹತ್ತೊಂಬತ್ತನೆಯ ಶತಮಾನದಲ್ಲಿ ತನ್ನ ಇಪ್ಪತ್ತೈದನೆಯ ವಯಸ್ಸಿನಲ್ಲೇ ತೀರಿಕೊಂಡ ಕೀಟ್ಸ್ ತನ್ನ ಇಪ್ಪತ್ಮೂರನೆಯ ವಯಸ್ಸಿನಲ್ಲಿ ಈ ಕವಿತೆ ಬರೆದಿದ್ದ.

ನೂರು ವರ್ಷಗಳ ನಂತರ ಕವಿ ಎಲಿಯಟ್ ‘ಓಡ್ ಟು ಎ ನೈಟಿಂಗೇಲ್’ ಕವಿತೆಯನ್ನು ಚರ್ಚಿಸುತ್ತಿರುವಾಗ ಅವನಿಗೆ ಹೀಗೆನ್ನಿಸಿತು: ‘...ಕೀಟ್ಸ್‌ನ ಪದ್ಯದಲ್ಲಿ ತುಂಬಿರುವ ಅನೇಕ ರೀತಿಯ ಭಾವಗಳಿಗೂ ನೈಟಿಂಗೇಲ್ ಹಕ್ಕಿಗೂ ನಿರ್ದಿಷ್ಟ ಸಂಬಂಧವೇನೂ ಇಲ್ಲ. ಆದರೆ ನೈಟಿಂಗೇಲ್ ಎಂಬ ಆಕರ್ಷಕ ಹೆಸರು ಅಥವಾ ಹಕ್ಕಿಗಿರುವ ಕೀರ್ತಿ ಈ ಎಲ್ಲ ಭಾವಗಳನ್ನು ಒಟ್ಟಾಗಿ ತರಲು ಸಹಾಯಕವಾಗಿದೆ.’

ಒಂದು ಕವಿತೆಯ ಬಗ್ಗೆ ಒಬ್ಬ ವಿಮರ್ಶಕ ಬರೆದ ಮಾತು ನಮಗೆ ಇನ್ನೊಂದು ಕವಿತೆಯನ್ನು ಓದುವ ಹಾದಿ ತೋರಿಸಬಲ್ಲದು. ಈ ಅನುಭವ ನನಗೂ ಆಯಿತು. ಕೀಟ್ಸ್ ಕವಿತೆಯ ಬಗ್ಗೆ ಎಲಿಯಟ್ ಬರೆದಿದ್ದನ್ನು ಓದಿದ ಮೇಲೆ ಬೇಂದ್ರೆಯ ‘ಮಲ್ಲಾಡದ ಗಿಣಿ’ ಕವಿತೆಯನ್ನು ಓದುವ ಹೊಸ ಹಾದಿ ತೆರೆಯಿತು. ಈ ಕವಿತೆ ಕೂಡ ಹೀಗೆ ಹಲವು ಭಾವಗಳನ್ನು ತಂದು ಸೇರಿಸುತ್ತದೆ. ಎಲ್ಲ ಉತ್ತಮ ಕವಿತೆಗಳೂ, ಕತೆಗಳೂ ಒಂದು ಕೇಂದ್ರ ಪ್ರತಿಮೆಗೆ ಬಗೆಬಗೆಯ ಸರಕನ್ನು ತಂದು ಜೋಡಿಸುವುದನ್ನು ನೀವು ಗಮನಿಸಿರಬಹುದು. ಅಂದರೆ, ನಿಮಿತ್ತಮಾತ್ರವಾಗಿ ಒಂದು ಗಿಣಿ ಅಥವಾ ನೈಟಿಂಗೇಲ್ ಕವಿತೆಯ ಆಯಕಟ್ಟಿನ ಸ್ಥಳವೊಂದರಲ್ಲಿ ಕೂತು ಕವಿಯಿಂದ ಏನೇನನ್ನೋ ಹೇಳಿಸಲೆತ್ನಿಸುತ್ತಿರುತ್ತದೆ. ಭಾವಗಳನ್ನು ಒಂದರಿಂದ ಇನ್ನೊಂದಕ್ಕೆ ಹಾರಿಸಲೆತ್ನಿಸುತ್ತಿರುತ್ತದೆ. ಆದರೆ ಅವುಗಳ ಜೊತೆಗೆ ಹಾರಲೊಲ್ಲದ, ಹಾರಲಾಗದ ಓದುಗರು ಅಥವಾ ಕವಿತೆಯ ಸಂದರ್ಭಸೂಚಕರು ‘ಕವಿ ನೈಟಿಂಗೇಲ್ ಬಗ್ಗೆ ಹೀಗೆ ಹೇಳಿದ್ದಾನೆ’ ಅಥವಾ ‘ಗಿಣಿಯನ್ನು ಈ ರೀತಿ ವರ್ಣಿಸಿದ್ದಾನೆ’ ಎಂದು ಎಲ್ಲವನ್ನೂ ಕವಿತೆಯ ಕೇಂದ್ರಕ್ಕೇ ಆರೋಪಿಸಿ ಮಾತಾಡುತ್ತಿರುತ್ತಾರೆ. ಇದು ಕೇವಲ ಈ ಬಗೆಯ ಓದುಗ, ಓದುಗಿಯರ ಸಮಸ್ಯೆ ಮಾತ್ರ ಅಲ್ಲ. ‘ಕವಿತೆಯೊಂದರಲ್ಲಿ ಬರುವ ಎಲ್ಲವೂ ಕೇಂದ್ರ ಅರ್ಥಕ್ಕೇ ದುಡಿಯಬೇಕು’ ಎಂದು ನಂಬುವ ವಿಮರ್ಶಕರು ಕೂಡ ಈ ತಪ್ಪು ಮಾಡುತ್ತಿರುತ್ತಾರೆ.

ಈ ಅಂಶ ಕವಿತೆಯ ಟೈಟಲ್ ಕುರಿತ ಚರ್ಚೆಗೂ ಅನ್ವಯವಾಗುತ್ತದೆ. ಹೀಗೆ ಟೈಟಲ್‌ನ ಪರಿಕಲ್ಪನೆಯನ್ನು ‘ಪ್ರಾಬ್ಲಮೆಟೈಸ್’ ಮಾಡುತ್ತಿದ್ದಾಗ, ಲಂಕೇಶರು ತಮ್ಮ ಆತ್ಮಚರಿತ್ರೆ ಬರೆಯುವಾಗ ಕಾಲಕಾಲಕ್ಕೆ ಯೋಚಿಸಿದ ಹೆಸರುಗಳು ನೆನಪಾದವು. ಮೊದಲು ಅವರು ತಮ್ಮ ಆತ್ಮಚರಿತ್ರೆಗೆ ‘ಅರಿವು’ ಎಂದು ಹೆಸರಿಡಬೇಕೆಂದುಕೊಂಡರು. ನಂತರ, ಅದನ್ನು ಶಿಶುನಾಳ ಶರೀಫರ ಸಾಲು ಬಳಸಿ ‘ನನ್ನೊಳಗ ನಾ ತಿಳಕೊಂಡೆ’ ಎನ್ನಬೇಕೆಂದುಕೊಂಡರು. ಈ ಟೈಟಲ್ ತೀರಾ ಪಾಂಪಸ್ ಅನ್ನಿಸಿತೇನೋ ಅಥವಾ ನನ್ನೊಳಗನ್ನು ತಿಳಿಯುವುದು ಆತ್ಮಚರಿತ್ರೆಯ ಗುರಿಯಾದರೂ, ‘ತಿಳಕೊಂಡೆ’ ಎನ್ನುವುದು ಅಹಂಕಾರದಿಂದ ಹೇಳಿದಂತೆ ಆದೀತೇನೋ ಎಂದು ಲಂಕೇಶರಿಗೆ ಅನ್ನಿಸಿರಬಹುದು. ಅದನ್ನು ಕೈಬಿಟ್ಟು ತಮ್ಮ ಬಾಲ್ಯದಲ್ಲಿ ಕಂಡ ಆಲೆಮನೆಯ ಕಂಪು, ಸಿಹಿ ನೆನಪಾಗಿ ‘ಆಲೆಮನೆ’ಯೇ ಒಳ್ಳೆಯ ರೂಪಕಾತ್ಮಕ ಹೆಸರು ಎಂದು ಲಂಕೇಶರಿಗೆ ಅನ್ನಿಸಿತು. ಕೊನೆಗೆ ಅವರ ಕೈಬರಹ ಟೈಪಾಗಿ, ಅದರ ಮೊದಲ ಪ್ರತಿ ಒಂದು ಸೋನೆ ಮಳೆಯ ಸಂಜೆ ನನ್ನ ಕೈ ಸೇರಿದಾಗ ಅದರ ಹೆಸರು ‘ಹುಳಿಮಾವಿನ ಮರ’ ಆಗಿತ್ತು; ‘ಆಲೆಮನೆ’ಗೆ ವಿರುದ್ಧವಾದ ಹೆಸರು ನಿಕ್ಕಿಯಾಗಿತ್ತು!

ಲಂಕೇಶ್ ತಾರುಣ್ಯದಲ್ಲಿ ‘ಹುಳಿಮಾವಿನ ಮರ’ ಎಂಬ ಪದ್ಯ ಬರೆದಿದ್ದರು. ಕೊನೆಗೆ ‘ಹುಳಿಮಾವಿನ ಮರ’ವೇ ತಮ್ಮ ಆತ್ಮಚರಿತ್ರೆಗೆ ಹೆಚ್ಚು ರೂಪಕಾತ್ಮಕ ಟೈಟಲ್ ಎಂದು ಅವರಿಗೆ ಅನ್ನಿಸಿರಬಹುದು. ಅದೇನೇ ಇರಲಿ, ಕನ್ನಡದ ಅತ್ಯುತ್ತಮ ಆತ್ಮಚರಿತ್ರೆ ಎನ್ನಬಹುದಾದ ಈ ಪುಸ್ತಕದ ತೀವ್ರ ಬರವಣಿಗೆ ಹೇಗಿದೆಯೆಂದರೆ, ಅದು ಬೇರೆ ಯಾವ ಹೆಸರು ಹೊತ್ತು ಬಂದಿದ್ದರೂ ಅದಕ್ಕೆ ಈಗ ಇರುವ ಶ್ರೇಷ್ಠತೆ, ಎತ್ತರ ಇದ್ದೇ ಇರುತ್ತಿತ್ತು.

ಇದೆಲ್ಲದರ ಹಿನ್ನೆಲೆಯಲ್ಲಿ, ಯಾವುದೇ ಕೃತಿಗೆ ಹೆಸರಿಡುವ ಕೆಲಸ ಹಾಗೂ ಕೃತಿಯ ಹೆಸರಿಗೂ ಇರುವ ಸಂಬಂಧ ತೀರಾ ಸಂಕೀರ್ಣ ಎಂದಷ್ಟೇ ಸೂಚಿಸಬಯಸುವೆ! ಈ ಕುರಿತಂತೆ ಈ ಗಳಿಗೆಯ ಅನುಭವವನ್ನೇ ಹೇಳಲೆ? ನೀವು ಓದುತ್ತಿರುವ ಈ ಬರಹದ ಹೆಸರನ್ನೇ ಮೂರು...ನಾಲ್ಕು...ಐದು...ಆರನೆಯ ಸಲ ತಿದ್ದಿದೆ; ಏಳನೆಯ ಸಲ ಫೈನಲ್ ಮಾಡಿದೆ!

share
ಡಾ.ನಟರಾಜ್ ಹುಳಿಯಾರ್
ಡಾ.ನಟರಾಜ್ ಹುಳಿಯಾರ್
Next Story
X