ಗಂಗೊಳ್ಳಿ | ದಲಿತ ಯುವಕನಿಗೆ ಜಾತಿ ನಿಂದನೆ ಆರೋಪ: ರಾಜಿ ಸಂಧಾನ ಮಾಡಿದ ದಸಂಸ ಮುಖಂಡನಿಗೆ ಹಲ್ಲೆ; ಆಸ್ಪತ್ರೆಗೆ ದಾಖಲು
ಗಂಗೊಳ್ಳಿ, ಸೆ.22: ನಾಡ ಗ್ರಾಮದ ಗಣೇಶ ಚತುರ್ಥಿಯ ಗಣಪತಿ ವಿಸರ್ಜನೆ ಸಂದರ್ಭದಲ್ಲಿ ದಲಿತ ಯುವಕನೋರ್ವನಿಗೆ ಜಾತಿ ನಿಂದನೆ ಮಾಡಿರುವ ವಿಚಾರಕ್ಕೆ ಸಂಬಂಧಿಸಿ ರಾಜಿ ಸಂಧಾನ ಮಾಡಿದ ದಸಂಸ ಮುಖಂಡರೊಬ್ಬರಿಗೆ ತಂಡವೊಂದು ಹಲ್ಲೆ ನಡೆಸಿರುವ ಘಟನೆ ಸೆ.10ರಂದು ರಾತ್ರಿ ನಾಡಾದ ಚಂದ್ರಿಕಾ ಬಾರ್ ಬಳಿ ನಡೆದಿದೆ.
ಹಲ್ಲೆಯಿಂದ ಗಾಯಗೊಂಡ ದಸಂಸ ಮುಖಂಡ ಪಡುಕೋಣೆಯ ಸುರೇಶ್ ಮತ್ತು ಅವರ ಜೊತೆ ಇದ್ದ ಸುಕುಮಾರ್ ಎಂಬವರು ಚಿಕಿತ್ಸೆಗಾಗಿ ಕುಂದಾಪುರ ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ನಾಡಾ ಗ್ರಾಮದ ಗಣೇಶ ವಿರ್ಸಜನೆ ಕಾರ್ಯಕ್ರಮದಲ್ಲಿ ರೋಹಿತ್ ಹಾಗೂ ಸನಾತ್ ಶೆಟ್ಟಿ, ದೀಪಕ್ ಕುಲಾಲ್ ಕಡ್ಕೆ, ಆದಿ ಯಾನೆ ಆದಿತ್ಯ ಪೂಜಾರಿ ಮಧ್ಯೆ ಜಗಳವಾಗಿದ್ದು, ಬಳಿಕ ಸುರೇಶ್ ಮತ್ತು ಗಣೇಶೋತ್ಸವ ಸಮಿತಿ ಸದಸ್ಯರು ಸೇರಿ ಗಲಾಟೆ ಬಿಡಿಸಿ ಪ್ರಸನ್ನ ಗಣಪತಿ ದೇವಸ್ಥಾನದಲ್ಲಿ ಆರೋಪಿಗಳಿಂದ ಪದಾಧಿಕಾರಿ ಗಳ ಸಮಕ್ಷಮದಲ್ಲಿ ಕ್ಷಮೆ ಕೇಳಿಸಿ ರಾಜಿ ಮಾಡಿದ್ದರು.
ನಂತರ ಮನೆಗೆ ಬಂದ ಸುರೇಶ್ ಅವರನ್ನು ರಾತ್ರಿ ವೇಳೆ ನಾಡಾದ ಚಂದ್ರಿಕಾ ಬಾರ್ ಬಳಿ ಕರೆದಿದ್ದು, ಇವರು ವಸಂತ, ರೋಹಿತ್, ಸುಕುಮಾರ್ ಜೊತೆ ಅಲ್ಲಿಗೆ ಹೋಗಿದ್ದರು. ಈ ವೇಳೆ ಸಂತೋಷ, ಆದಿತ್ಯ, ಸನಾತ್, ಪವನ್ ಶೆಟ್ಟಿ, ದೀಪಕ್, ಸುದರ್ಶನ್, ಚೇತನ್ ಶೆಟ್ಟಿ ವಕ್ಕೇರಿ ಸೇರಿ ಸುರೇಶ್‌ಗೆ ಅವಾಚ್ಯವಾಗಿ ಬೈದು ಕೈ ಹಾಗೂ ಮರದ ದೊಣ್ಣೆಯಿಂದ ಹಲ್ಲೆ ನಡೆಸಿದರು. ಆ ವೇಳೆ ಇವರೊಂದಿಗೆ ಇದ್ದ ವಸಂತ್, ರೋಹಿತ್, ಸುಕುಮಾರ್ ಎಂಬವರಿಗೂ ಆರೋಪಿಗಳು ಹೊಡೆದು ಕಾಲಿನಿಂದ ತುಳಿದಿರುವುದಾಗಿ ದೂರಲಾಗಿದೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದಸಂಸ ತೀವ್ರ ಖಂಡನೆ: ಪ್ರಕರಣದ ಆರೋಪಿಗಳೆಲ್ಲರೂ ಕ್ರಿಮಿನಲ್ ಹಿನ್ನೆಲೆ ಹೊಂದಿದ್ದು, ಮತೀಯ ಗಲಭೆ ಉಂಟಾಗಿ ಸಮಾಜದಲ್ಲಿನ ಸಾಮರಸ್ಯ ಕದಕದಂತೆ ಸಮಸ್ಯೆಯನ್ನು ಬಗೆಹರಿಸಲು ಹೋದ ದಸಂಸ ಮುಖಂಡನಿಗೆ ಹಲ್ಲೆ ಮಾಡಿರುವುದನ್ನು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ತೀವ್ರವಾಗಿ ಖಂಡಿಸಿದೆ.
ಈ ಪ್ರಕರಣದ ಎಲ್ಲಾ ಆರೋಪಿಗಳನ್ನು ಬಂಧಿಸಬೇಕು. ಇಲ್ಲದಿದ್ದರೆ ಉಗ್ರ ಪ್ರತಿಭಟನೆ ಮಾಡಲಾಗುವುದು ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಉಡುಪಿ ಜಿಲ್ಲಾ ಸಂಘಟನಾ ಸಂಚಾಲಕರು ಹಾಗು ಜಿಲ್ಲಾ ದೌರ್ಜನ್ಯ ತಡೆ ಜಾಗೃತಿ ಉಸ್ತುವಾರಿ ಸಮಿತಿ ಸದಸ್ಯ ವಾಸುದೇವ ಮುದೂರು, ದಲಿತ ಸಂಘಟನೆಗಳ ಐಕ್ಯ ಹೋರಾಟ ಸಮಿತಿ ಜಿಲ್ಲಾ ಪ್ರಧಾನ ಸಂಚಾಲಕ ಮಂಜುನಾಥ ಗಿಳಿಯಾರು, ಕುಂದಾಪುರ ತಾಲೂಕು ಸಂಚಾಲಕರು ರಾಜು ಬೆಟ್ಟಿನಮನೆ, ಸಂಘಟನಾ ಸಂಚಾಲಕರು ಸುರೇಶ್ ಹಕ್ಲಾಡಿ, ಮಂಜುನಾಥ ನಾಗೂರು, ಶಿವರಾಜ್ ಬೈಂದೂರು, ಮಹಿಳಾ ಒಕ್ಕೂಟದ ಗೀತಾ ಸುರೇಶ್, ಜ್ಯೋತಿ ಸುರೇಶ್ ನಾಡ, ಕೊಲ್ಲೂರು ಟ್ರಸ್ಟಿ ಗೋಪಾಲ ನಾಡ, ರಮೇಶ್ ನಾಡ, ಸತೀಶ್ ನಾಡ ಹೇಳಿಕೆಯಲ್ಲಿ ಎಚ್ಚರಿಕೆ ನೀಡಿದ್ದಾರೆ.
‘ಗಣಪತಿ ವಿಸರ್ಜನೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ದಲಿತ ಯುವಕನಿಗೆ ಇತರರ ವ್ಯಕ್ತಿಗಳ ಗುಂಪು ಜಾತಿ ವಿಚಾರದಲ್ಲಿ ಅವಹೇಳನ ಮಾಡಿ ಅಸ್ಪಶ್ಯತೆ ಆಚರಣೆಗೆ ಮುಂದಾಗಿದ್ದರು. ಈ ಬಗ್ಗೆ ರಾಜಿ ಸಂಧಾನ ಮಾಡಿ ಆರೋಪಿ ಗಳಿಂದ ಕ್ಷಮೆ ಕೇಳಿಸಿದ ಕಾರಣಕ್ಕಾಗಿ ದಸಂಸ ಮುಖಂಡ ಸುರೇಶ್ ಅವರಿಗೆ ಆರೋಪಿಗಳು ಮಾತುಕತೆಗೆ ಕರೆಸಿ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ’
-ವಾಸುದೇವ ಮುದೂರು, ಸದಸ್ಯರು, ದೌರ್ಜನ್ಯ ತಡೆ ಜಾಗೃತಿ ಉಸ್ತುವಾರಿ ಸಮಿತಿ, ಉಡುಪಿ ಜಿಲ್ಲೆ