ಸೈಬರ್ ಅಪರಾಧದ ಹಾಟ್ ಸ್ಪಾಟ್ ಆಗುತ್ತಿರುವ ಗುಜರಾತ್
Photo: Freepik
ಅಹ್ಮದಾಬಾದ್: ಡಿಜಿಟಲ್ ಪ್ರಾಬಲ್ಯದ ಯುಗದಲ್ಲಿ ಗುಜರಾತ್ ರಾಜ್ಯ ಸೈಬರ್ ಅಪರಾಧಿಗಳ ಟಾರ್ಗೆಟ್ ಆಗಿ ಮಾರ್ಪಡುತ್ತಿರುವ ಆತಂಕಕಾರಿ ಅಂಶವನ್ನು ಕಾನ್ಪುರ ಐಐಟಿಯ ಫ್ಯೂಚರ್ ಕ್ರೈಂ ರಿಸರ್ಚ್ ಫೌಂಡೇಷನ್ (FCRF) ದೃಢಪಡಿಸಿದೆ. ಅಹ್ಮದಾಬಾದ್ ಹಾಗೂ ಸೂರತ್ ಗಳು ದೇಶದ ಹೊಸ ಸೈಬರ್ ಅಪರಾಧ ಹಾಟ್ ಸ್ಪಾಟ್ ಗಳಾಗಿ ಬೆಳೆಯುತ್ತಿವೆ ಎಂದು FCRF ಬಿಡುಗಡೆ ಮಾಡಿದ ಶ್ವೇತಪತ್ರದಲ್ಲಿ ಹೇಳಲಾಗಿದೆ.
2020ರ ಜನವರಿಯಿಂದ 2023ರ ಜೂನ್ ನಡುವೆ ದೇಶಾದ್ಯಂತ ವರದಿಯಾದ ಸೈಬರ್ ಅಪರಾಧ ಪ್ರಕರಣಗಳನ್ನು ವಿಶ್ಲೇಷಿಸಿ ಈ ವರದಿ ಸಿದ್ಧಪಡಿಸಲಾಗಿದೆ. 18 ರಾಜ್ಯಗಳ 83 ಸಣ್ಣ ಪಟ್ಟಣಗಳು ಹಾಗೂ ನಗರಗಳು ಕ್ಷಿಪ್ರವಾಗಿ ಸೈಬರ್ ಕ್ರೈಂ ಹಬ್ ಗಳಾಗಿ ರೂಪುಗೊಳ್ಳುತ್ತಿವೆ ಎಂದು ವರದಿ ವಿವರಿಸಿದೆ.
ಆನ್ ಲೈನ್ ಹಣಕಾಸು ವಂಚನೆ, ಹ್ಯಾಕಿಂಗ್ ಮತ್ತು ಸೋಗು ಹಾಕಿ ವಂಚನೆ ಮಾಡುವುದು ಅತ್ಯಂತ ಪ್ರಮುಖ ವಂಚನಾ ವಿಧಾನಗಳಾಗಿವೆ. ಗುಜರಾತ್ ನಲ್ಲಿ ಟಾಸ್ಕ್ ಆಧರಿತ ಹಾಗೂ ಮೊಬೈಲ್ ಆಧರಿತ ಹೂಡಿಕೆ ವಂಚನೆ ಪ್ರಕರಣಗಳು ಹೆಚ್ಚುತ್ತಿವೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಇದಕ್ಕೆ ಮೂರು ಪ್ರಮುಖ ಕಾರಣಗಳನ್ನು ವರದಿ ಪಟ್ಟಿ ಮಾಡಿದೆ. ಕಳಪೆ ಕೆವೈಸಿ ಮತ್ತು ದೃಢೀಕರಣ ಪ್ರಕ್ರಿಯೆ, ನಿರುದ್ಯೋಗಿಗಳು ಅಥವಾ ಅರೆ ಉದ್ಯೋಗಿಗಳಿಗೆ ನೇಮಕಾತಿ ಮತ್ತು ತರಬೇತಿ ವ್ಯವಸ್ಥೆ ಹಾಗೂ ವರ್ಚುವಲ್ ಪ್ರೈವೇಟ್ ನೆಟ್ವರ್ಕ್ ಗಳ ಬಳಕೆ. ಈ ವಿಪಿಎನ್ ಬಳಕೆಯಿಂದಾಗಿ ಅಪರಾಧಿಗಳು ಆನ್ ಲೈನ್ ನಲ್ಲಿ ತಮ್ಮ ಗುರುತು ಮರೆಮಾಚಲು ಅವಕಾಶವಾಗುತ್ತದೆ ಎಂದು ವರದಿ ಹೇಳಿದೆ.