“ಅಬ್ಬೂ… ಇದು ನನ್ನ ಕೊನೆಯ ಕರೆ…” ಎಂದು ಗದ್ಗದಿತರಾದ ಮರಣದಂಡನೆಗೆ ಗುರಿಯಾದ ಶಹಝಾದಿ
ಉತ್ತರ ಪ್ರದೇಶದ ಮಹಿಳೆಗೆ ಅಬುಧಾಬಿಯಲ್ಲಿ ಗಲ್ಲು ಶಿಕ್ಷೆ!

Photo | News18
ಹೊಸದಿಲ್ಲಿ: ಉತ್ತರ ಪ್ರದೇಶದ ಬಂದಾ ಜಿಲ್ಲೆಯ ಮಹಿಳೆ ಶೆಹಝಾದಿ ಅಬುಧಾಬಿಯಲ್ಲಿ ಮರಣದಂಡನೆ ಶಿಕ್ಷೆ ಎದುರಿಸುತ್ತಿದ್ದಾರೆ. ಮಗುವೊಂದು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿ ಅಬುಧಾಬಿ ನ್ಯಾಯಾಲಯ 33 ವರ್ಷದ ಶೆಹಝಾದಿಗೆ ಈ ಘೋರವಾದ ಶಿಕ್ಷೆಯನ್ನು ವಿಧಿಸಿದೆ.
ಶೆಹಝಾದಿಯನ್ನು 24 ಗಂಟೆಯೊಳಗಡೆ ಗಲ್ಲಿಗೇರಿಸಲು ನಿರ್ಧರಿಸಲಾಗಿದೆ ಎಂದು ಈ ಹಿಂದೆ ವರದಿಯಾಗಿತ್ತು. ಆದರೆ ಮರುಪರಿಶೀಲನಾ ಅರ್ಜಿಯನ್ನು ಸಲ್ಲಿಸಲಾಗಿದೆ ಮತ್ತು ವಿಷಯವು ಪರಿಗಣನೆಯಲ್ಲಿದೆ ಎಂದು ಭಾರತೀಯ ರಾಯಭಾರಿ ಕಚೇರಿಯು ಸ್ಪಷ್ಟನೆಯನ್ನು ನೀಡಿದೆ.
ದುಬೈಯ ಅಲ್ ವತ್ಬಾ ಜೈಲಿನಲ್ಲಿರುವ ಖೈದಿ ಶಹಝಾದಿ ತನ್ನ ತಂದೆಗೆ ದೂರವಾಣಿ ಕರೆ ಮಾಡಿ, ಅಬ್ಬೂ.. ಇದು ನನ್ನ ಕೊನೆಯ ಕರೆ. ಈಗ ನನ್ನನ್ನು ಬೇರೆ ಕೋಣೆಗೆ ಸ್ಥಳಾಂತರಿಸಲಾಗಿದೆ. ನಾನು ನಿಮಗೆ ಮತ್ತೆ ಕರೆ ಮಾಡಲು ಸಾಧ್ಯವಾಗದೆ ಇರಬಹುದು ಎಂದು ತನಗೆ ಮರಣದಂಡನೆ ಶಿಕ್ಷೆ ವಿಧಿಸಿರುವ ಬಗ್ಗೆ ತನ್ನ ಪೋಷಕರಿಗೆ ತಿಳಿಸಿದ್ದಾರೆ. ಇದರ ಜೊತೆಗೆ ಶಹಝಾದಿ ತನ್ನ ಕುಟುಂಬಕ್ಕೆ ಸಾಂತ್ವನವನ್ನು ಕೂಡ ಹೇಳಿದ್ದಾರೆ.
ಶಹಝಾದಿಯ ಕರೆಯ ಬಳಿಕ ಅವರ ಕುಟುಂಬವು ಕಣ್ಣೀರಿನಲ್ಲಿದೆ. ತಂದೆ ಶಬ್ಬೀರ್ ಖಾನ್ ಪ್ರಧಾನಿ ನರೇಂದ್ರ ಮೋದಿ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಈ ವಿಷಯದಲ್ಲಿ ಮಧ್ಯಪ್ರವೇಶಿಸಬೇಕೆಂದು ಮನವಿ ಮಾಡಿದ್ದಾರೆ.
ಶಹಝಾದಿ ಅಬುಧಾಬಿಗೆ ತೆರಳಿದ್ದೇಗೆ?
ಉತ್ತರಪ್ರದೇಶದ ಬಂದಾ ಜಿಲ್ಲೆಯ ಮತೌಂಧ್ ಪೊಲೀಸ್ ಠಾಣೆ ವ್ಯಾಪ್ತಿಯ ಗೊಯ್ರಾ ಮುಗ್ಲಿ ಗ್ರಾಮದ ನಿವಾಸಿಯಾಗಿರುವ ಶಹಝಾದಿ ಬಡ ಕುಟುಂಬದ ಹೆಣ್ಣು ಮಗಳು, ಬಾಲ್ಯದಲ್ಲಿ ಅಡುಗೆ ಮನೆಯಲ್ಲಿ ಕೆಲಸ ಮಾಡುತ್ತಿದ್ದಾಗ ಆಕೆಗೆ ಸುಟ್ಟ ಗಾಯಗಳಾಗಿದ್ದವು. ಈಕೆಗೆ ಆಗ್ರಾದ ನಿವಾಸಿ ಉಝೈರ್ ಎಂಬಾತನನ್ನು ಫೇಸ್ಬುಕ್ ಮೂಲಕ ಪರಿಚಯವಾಗಿದೆ. ಬಳಿಕ ಇಬ್ಬರ ನಡುವೆ ಪ್ರೀತಿ ಬೆಳೆದಿದೆ. 2021ರಲ್ಲಿ ಆಕೆಯ ಮುಖಕ್ಕೆ ಪ್ಲಾಸ್ಟಿಕ್ ಸರ್ಜರಿ ಮಾಡುವುದಾಗಿ ಆಗ್ರಾಕ್ಕೆ ಕರೆದುಕೊಂಡು ಹೋದ ಉಝೈರ್ ಆಕೆಯನ್ನು ತನ್ನ ಸಂಬಂಧಿಕರಾದ ಫೈಝ್ ಮತ್ತು ನಾದಿಯಾ ಎಂಬ ದಂಪತಿಗೆ ಮಾರಾಟ ಮಾಡಿದ್ದಾನೆ ಎಂದು ಹೇಳಲಾಗಿದೆ. ಆಕೆಯನ್ನು ದಂಪತಿ ದುಬೈಗೆ ಕರೆದುಕೊಂಡು ಹೋಗಿದ್ದಾರೆ.
ಬಂದಾ ಜಿಲ್ಲಾ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಆದೇಶದ ಮೇರೆಗೆ ಅಧಿಕಾರಿಗಳು ಈಗ ದುಬೈನಲ್ಲಿ ನೆಲೆಸಿರುವ ಈ ದಂಪತಿಗಳ ವಿರುದ್ಧ ಮಾನವ ಕಳ್ಳಸಾಗಣೆ ಪ್ರಕರಣವನ್ನು ದಾಖಲಿಸಿ ಹುಡುಕಾಟವನ್ನು ನಡೆಸುತ್ತಿದ್ದಾರೆ.
ಶಹಝಾದಿ ಇದ್ದ ಮನೆಯಲ್ಲಿ, ಇದ್ದಕ್ಕಿದ್ದಂತೆ ಒಂದು ದಿನ ಅವರ ಮಗುವಿನ ಆರೋಗ್ಯ ಹದಗೆಟ್ಟು ಮೃತಪಟ್ಟಿದೆ. ಮಗು ಮೃತಪಟ್ಟ ಎರಡು ತಿಂಗಳ ನಂತರ ಮಗುವಿನ ಸಾವಿಗೆ ಶಹಝಾದಿ ಕಾರಣ ಎಂದು ಪೋಷಕರು ಆರೋಪಿಸಿ ದೂರು ನೀಡಿದ್ದಾರೆ. ಬಳಿಕ ಅವರ ಬಂಧನವೂ ನಡೆದಿದೆ. ಈ ಕುರಿತ ತನಿಖೆಯ ನಂತರ ದುಬೈ ನ್ಯಾಯಾಲಯವು ಶಹಝಾದಿ ತಪ್ಪಿತಸ್ಥೆ ಎಂದು ಮರಣದಂಡನೆ ಶಿಕ್ಷೆ ವಿಧಿಸಿದೆ. ಶಹಝಾದಿ ಅಲ್ಬತ್ವಾ ಜೈಲಿನಲ್ಲಿ ಬಂಧಿಯಾಗಿದ್ದಾರೆ.
ಮಗುವಿನ ಸಾವಿಗೆ ವೈದ್ಯಕೀಯ ನಿರ್ಲಕ್ಷ್ಯವೇ ಕಾರಣ ಎಂದು ಶಹಝಾದಿ ಮತ್ತು ಆಕೆಯ ತಂದೆ ಹೇಳಿಕೊಂಡಿದ್ದಾರೆ. ಆದರೆ, ದಂಪತಿಗಳು ಶಹಝಾದಿಯ ಮೇಲೆ ಆರೋಪವನ್ನು ಹೊರಿಸಿದರು. ಇದು ಆಕೆಯ ವಿರುದ್ಧ ಮೊಕದ್ದಮೆ ಹೂಡಲು ಮತ್ತು ಅಂತಿಮವಾಗಿ ಮರಣದಂಡನೆ ಶಿಕ್ಷೆ ವಿಧಿಸಲು ಕಾರಣವಾಗಿದೆ.
►ಶಹಝಾದಿಗೆ ಗಲ್ಲು ಶಿಕ್ಷೆಗೆ ಸಜ್ಜು!
ಫೆಬ್ರವರಿ 16ರಂದು ಶಹಝಾದಿ ಅವರ ಕುಟುಂಬಕ್ಕೆ ದುಬೈನಿಂದ ಕರೆ ಬಂದಿದೆ. ಆಕೆ ತನ್ನ ತಂದೆ, ತಾಯಿಯ ಜೊತೆ ಮಾತನಾಡುತ್ತಾ, ನನ್ನನ್ನು ಪ್ರತ್ಯೇಕವಾಗಿ ಇರಿಸಲಾಗಿದೆ. ನನ್ನನ್ನು ಗಲ್ಲಿಗೇರಿಸುವುದಾಗಿ ಜೈಲಿನ ಕ್ಯಾಪ್ಟನ್ ತಿಳಿಸಿದ್ದಾರೆ. ಕೊನೆಯ ಆಸೆಯ ಬಗ್ಗೆ ಕೇಳಿದಾಗ ಕುಟುಂಬದೊಂದಿಗೆ ಮಾತನಾಡಬೇಕೆಂದು ವಿನಂತಿಸಿರುವುದಾಗಿ ಹೇಳಿದ್ದಾರೆ.
►ಶಹಝಾದಿ ತಂದೆ ಶಬ್ಬೀರ್ ಖಾನ್ ಪ್ರತಿಕ್ರಿಯೆ :
ʼನನ್ನ ಮಗಳು ನಿರಪರಾಧಿ. ಅವಳನ್ನು ಸುಳ್ಳು ಪ್ರಕರಣದಲ್ಲಿ ಬಂಧನದಲ್ಲಿಡಲಾಗಿದೆ. ಕಳೆದ ಎರಡು ವರ್ಷಗಳಿಂದ ದುಬೈ ಜೈಲಿನಲ್ಲಿ ಬಂಧಿಯಾಗಿದ್ದಾಳೆ. ರಾಷ್ಟ್ರಪತಿ, ಪ್ರಧಾನಿ, ವಿದೇಶಾಂಗ ಸಚಿವಾಲಯ ಹೀಗೆ ಎಲ್ಲಾ ಕಡೆಗೂ ಹೋಗಿ ಮಗಳನ್ನು ರಕ್ಷಿಸುವಂತೆ ಮನವಿ ಮಾಡಿದ್ದೇನೆ. ತಕ್ಷಣ ಮಧ್ಯಪ್ರವೇಶಿಸಿ ನನ್ನ ಮಗಳನ್ನು ರಕ್ಷಿಸಬೇಕೆಂದುʼ ಮನವಿಯನ್ನು ಮಾಡಿದ್ದಾರೆ.
ಸೌಜನ್ಯ : News18