ಅಜ್ಮಾನ್: ಗಲ್ಫ್ ಮೆಡಿಕಲ್ ಯುನಿವರ್ಸಿಟಿಯ ಪದವಿ ಪ್ರದಾನ ಸಮಾರಂಭ
ಅಜ್ಮಾನ್: ಗಲ್ಫ್ ಮೆಡಿಕಲ್ ಯುನಿವರ್ಸಿಟಿಯ 20ನೇ ಬ್ಯಾಚ್ ಪದವಿ ಪ್ರದಾನ ಸಮಾರಂಭ ಅಜ್ಮಾನ್ ನ ತುಂಬೆ ವೈದ್ಯಕೀಯ ನಗರದಲ್ಲಿ ಬುಧವಾರ ನಡೆಯಿತು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಅಜ್ಮಾನ್ ಯುವರಾಜ ಶೇಖ್ ಅಮ್ಮಾರ್ ಬಿನ್ ಹುಮೈದ್ ಅಲ್ ನುಐಮಿ ಮಾತನಾಡಿ, ಜ್ಞಾನ ಹಾಗೂ ಯಶಸ್ವಿ ವೈಜ್ಞಾನಿಕ ಅಭಿವೃದ್ಧಿಗಳೊಂದಿಗೆ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ನಿರಂತರವಾಗಿ ನೆರವು ನೀಡುತ್ತಿರುವ ಯುಎಇಯ ವಿವೇಕಯುತ ನಾಯಕತ್ವವನ್ನು ಅಭಿನಂದಿಸಿ, ಆಶೀರ್ವದಿಸಿದರು.
ಯುಎಇ ದೊರೆ ಶೇಖ್ ಮುಹಮ್ಮದ್ ಬಿನ್ ಝಾಯೆದ್ ಅಲ್ ನಹ್ಯಾನ್, ಯುಎಇಯ ಉಪಾಧ್ಯಕ್ಷ ಹಾಗೂ ಪ್ರಧಾನ ಮಂತ್ರಿ ಮತ್ತು ದುಬೈ ಆಡಳಿತಗಾರ ಶೇಖ್ ಬಿನ್ ರಾಶಿದ್ ಅಲ್ ಮಕ್ತೂಮ್ ಹಾಗೂ ಅವರ ಸಹೋದರರು ದೇಶದ ಪ್ರಗತಿಯಲ್ಲಿ ಶಿಕ್ಷಣವನ್ನು ಅತ್ಯಂತ ಪ್ರಮುಖ ಆದ್ಯತೆಯಾಗಿಸಿದ್ದಾರೆ. ತನ್ನ ಆಶಯ ಹಾಗೂ ಮಹತ್ವಾಕಾಂಕ್ಷೆಯನ್ನು ಸಾಧಿಸಲು ಯುಎಇ ನೈಜ ಹೂಡಿಕೆಯನ್ನು ಮಾಡಿದ್ದು, ಇದು ಸೀಮಾತೀತವಾಗಿದೆ ಎಂದು ಅವರು ಶ್ಲಾಘಿಸಿದರು.
ಗಲ್ಫ್ ವೈದ್ಯಕೀಯ ವಿಶ್ವವಿದ್ಯಾಲಯವು ತನ್ನ 25ನೇ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುತ್ತಿದ್ದು, ಈ ಪ್ರಾಂತ್ಯದಲ್ಲಿನ ಖಾಸಗಿ ಆರೋಗ್ಯ, ವೃತ್ತಿಪರ ಶಿಕ್ಷಣದಲ್ಲಿ ಯಶಸ್ಸಿನ ಪ್ರತೀಕವಾಗಿ ನಿಂತಿದೆ. ತನ್ನ ವಿಶಿಷ್ಟತೆ, ಹೊಸತನದ ಉಪಕ್ರಮಗಳು ಹಾಗೂ ಆವಿಷ್ಕಾರವು ಗಲ್ಫ್ ವೈದ್ಯಕೀಯ ವಿಶ್ವವಿದ್ಯಾಲಯವನ್ನು ಈ ವಲಯದಲ್ಲಿ ಮುಂಚೂಣಿ ಸಂಸ್ಥೆಯನ್ನಾಗಿಸಿದೆ. 97 ದೇಶಗಳ ವಿದ್ಯಾರ್ಥಿಗಳು, 50 ದೇಶಗಳ ಸಿಬ್ಬಂದಿ ವರ್ಗ ಹಾಗೂ ಆಸ್ಪತ್ರೆಯಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವ 175 ದೇಶಗಳ ಪ್ರಜೆಗಳು ಈ ಸಂಸ್ಥೆಯ ಬೆಳವಣಿಗೆಯಲ್ಲಿ ಪಾತ್ರ ವಹಿಸಿದ್ದಾರೆ ಎಂದು ತುಂಬೆ ಗ್ರೂಪ್ ಅಧ್ಯಕ್ಷ ಡಾ.ತುಂಬೆ ಮೊಯ್ದಿನ್ ಶ್ಲಾಘಿಸಿದರು.
ಸಮಾರಂಭವನ್ನುದ್ದೇಶಿಸಿ ಮಾತನಾಡಿದ ಗಲ್ಫ್ ಮೆಡಿಕಲ್ ಯುನಿವರ್ಸಿಟಿಯ ಕುಲಪತಿ ಹೊಸ್ಸಾಮ್ ಹಮ್ದಿ, ಅರ್ಪಣಾ ಮನೋಭಾವ ಹಾಗೂ ಸ್ಥಿತಿ ಸ್ಥಾಪಕತ್ವ ಧೋರಣೆಯನ್ನು ಪ್ರದರ್ಶಿಸಿದ ಎಲ್ಲ ವಿದ್ಯಾರ್ಥಿಗಳನ್ನು ನಾನು ಅಭಿನಂದಿಸಲು ಬಯಸುತ್ತೇನೆ. ಇದರೊಂದಿಗೆ, ವಿದ್ಯಾರ್ಥಿಗಳ ಶೈಕ್ಷಣಿಕ ಪಯಣದುದ್ದಕ್ಕೂ ಅವರ ಬೆಂಬಲಕ್ಕೆ ನಿಂತ ಅವರ ಕುಟುಂಬದ ಸದಸ್ಯರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಹೇಳಿದರು.
ಪದವಿ ಪ್ರದಾನ ಸಮಾರಂಭದಲ್ಲಿ 46 ದೇಶಗಳ 509 ವಿದ್ಯಾರ್ಥಿಗಳು ತಮ್ಮ ಪದವಿ ಪ್ರಮಾಣ ಪತ್ರವನ್ನು ಸ್ವೀಕರಿಸಿದರು. ಈ ಪೈಕಿ 180 ಮಂದಿ ವೈದ್ಯಕೀಯ, 76 ಮಂದಿ ದಂತವೈದ್ಯ, 53 ಮಂದಿ ಔಷಧ ವಿಜ್ಞಾನ, 129 ಮಂದಿ ಆರೋಗ್ಯ ವಿಜ್ಞಾನ, 53 ಮಂದಿ ಶುಶ್ರೂಷಕ ಹಾಗೂ 18 ಮಂದಿ ಆರೋಗ್ಯ ಸೇವೆ ನಿರ್ವಹಣೆ ಹಾಗೂ ಅರ್ಥಶಾಸ್ತ್ರ ವಿಭಾಗದಲ್ಲಿ ಪದವಿ ಪಡೆದಿದ್ದಾರೆ.