2023 ರಲ್ಲಿ ಉಮ್ರಾ ಕೈಗೊಂಡ 18 ಲಕ್ಷ ಭಾರತೀಯ ಮುಸ್ಲಿಮರು: ಸೌದಿ ಸರ್ಕಾರ
ಜಾಗತಿಕ ಮಟ್ಟದಲ್ಲಿ ಮೂರನೇ ಗರಿಷ್ಠ ಸಂಖ್ಯೆ
ಹೊಸದಿಲ್ಲಿ: ಪ್ರಸಕ್ತ ವರ್ಷದಲ್ಲಿ 18 ಲಕ್ಷ ಭಾರತೀಯ ಮುಸ್ಲಿಮರು ಉಮ್ರಾ ಕೈಗೊಂಡಿದ್ದು, ಇದು ವಿಶ್ವದಲ್ಲೇ ಮೂರನೇ ಗರಿಷ್ಠ ಸಂಖ್ಯೆ ಎಂದು ಸೌದಿ ಅರೇಬಿಯಾ ಸರ್ಕಾರ ಬುಧವಾರ ಘೋಷಿಸಿದೆ.
ಈ ಸಂಖ್ಯೆಯ ವಾರ್ಷಿಕ ಹೆಚ್ಚಳವನ್ನು ನಾವು ನಿರೀಕ್ಷಿಸುತ್ತಿದ್ದೇವೆ ಎಂದು ಅಧಿಕೃತ ಪ್ರಕಟಣೆ ಹೇಳಿದೆ. ಉಮ್ರಾ ಎನ್ನುವುದು ಮೆಕ್ಕಾಗೆ ಕೈಗೊಳ್ಳುವ ಇಸ್ಲಾಮಿಕ್ ಯಾತ್ರೆಯಾಗಿದ್ದು, ವರ್ಷದ ಯಾವುದೇ ಸಂದರ್ಭದಲ್ಲಿ ಈ ಪ್ರವಾಸ ಕೈಗೊಳ್ಳಬಹುದಾಗಿದೆ.
18 ಲಕ್ಷ ಭಾರತೀಯರು ಈ ಬಾರಿ ಉಮ್ರಾ ಕೈಗೊಳ್ಳುವ ಮೂಲಕ ವಿಶ್ವದಲ್ಲೇ ಮೂರನೇ ಗರಿಷ್ಠ ಯಾತ್ರೆ ಕೈಗೊಂಡ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ. ಆದರೆ ಅಗ್ರ ಎರಡು ದೇಶಗಳ ಹೆಸರನ್ನು ಅಧಿಕಾರಿಗಳು ಉಲ್ಲೇಖಿಸಿಲ್ಲ. ಉಮ್ರಾ ಕ್ಷೇತ್ರದಲ್ಲಿ ಭಾರತದ ಮಹತ್ವವನ್ನು ವಿವರಿಸಿದ ಸೌದಿ ಅರೇಭಿಯಾದ ಹಜ್ ಮತ್ತು ಉಮ್ರಾ ಖಾತೆ ಸಚಿವ ಡಾ.ತೌಫೀಕ್ ಬಿನ್ ಫೌಝಾನ್ ಅಲ್-ರಬೀಹ್ ಡಿಸೆಂಬರ್ ಆರಂಭದಲ್ಲಿ ಮೊಟ್ಟಮೊದಲ ಬಾರಿಗೆ ಭಾರತಕ್ಕೆ ಭೇಟಿ ನೀಡಿದ್ದರು. ಡಿಸೆಂಬರ್ 4 ರಿಂದ 6ರವರೆಗೆ ಭಾರತದ ಏಕೀಕೃತ ಪ್ಲಾಟ್ಫಾರಂ 'ನುಸುಕ್' ಆಯೋಜಿಸಿದ್ದ ಸಭೆಯಲ್ಲಿ ಅವರು ಭಾಗವಹಿಸಿದ್ದರು.
ವಿಶ್ವಾದ್ಯಂತ ಮುಸ್ಲಿಂ ಅತಿಥಿಗಳಿಗೆ ನೀಡುವ ಪ್ಲಾಟ್ಫಾರಂನ ವಿಶಿಷ್ಟ ಸೇವೆಗಳು ಮತ್ತು ಸೌಲಭ್ಯಗಳನ್ನು ಈ ಕಾರ್ಯಕ್ರಮ ಬಿಂಬಿಸಿದ್ದು, ವಿಶೇಷವಾಗಿ ಭಾರತೀಯರಿಗೆ ನೀಡುವ ಸೇವೆ/ಸೌಲಭ್ಯಗಳ ಬಗ್ಗೆ ವಿವರ ನೀಡಿತ್ತು. ಈ ವಿಷಯದಲ್ಲಿ ಇರುವ ಎಲ್ಲ ಕಳವಳಗಳನ್ನು ಬಗೆಹರಿಸಿದ ಡಾ.ಅಲ್ ರಬೀಹ್, ಆರಂಭಿಕ ಪರಿಹಾರಗಳನ್ನು ಪ್ರಸ್ತಾವಿಸಿದರು. ಈ ಮೂಲಕ ಸಹಭಾಗಿತ್ವಕ್ಕೆ ವೇದಿಕೆ ಸಜ್ಜುಗೊಳಿಸಿದ್ದರು.
ಎಲೆಕ್ಟ್ರಾನಿಕ್ ವೀಸಾಗಳನ್ನು ಪಡೆಯುವ ಪ್ರಕ್ರಿಯೆಯನ್ನು ಮುಖ್ಯವಾಹಿನಿಗೆ ತರುವ ಹಾಗೂ ಉಮ್ರಾ ಮತ್ತು ಪ್ರವಾದಿ ಮಸೀದಿಗೆ ಭೇಟಿ ನೀಡುವ ವಿಧಿವಿಧಾನಗಳನ್ನು ಯಾಂತ್ರೀಕರಿಸುವ ಉದ್ದೇಶದಿಂದ ಸೌದಿ ಅರೇಬಿಯಾ ಸರ್ಕಾರ ನುಸುಕ್ ಪ್ಲಾಟ್ಫಾರಂಗೆ ಚಾಲನೆ ನೀಡಿತ್ತು.