ರಾಜತಾಂತ್ರಿಕ ಸಂಬಂಧ ಮರುಸ್ಥಾಪನೆಗೆ ಬಹ್ರೇನ್-ಇರಾನ್ ಮಾತುಕತೆ
PC : shutterstock
ನ್ಯೂಯಾರ್ಕ್ : ನ್ಯೂಯಾರ್ಕ್ನಲ್ಲಿ ನಡೆಯುತ್ತಿರುವ ವಿಶ್ವಸಂಸ್ಥೆ ಸಾಮಾನ್ಯ ಸಭೆಯ 79ನೆಯ ಅಧಿವೇಶನದ ನೇಪಥ್ಯದಲ್ಲಿ ಬಹ್ರೇನ್ ಮತ್ತು ಇರಾನ್ ವಿದೇಶಾಂಗ ಸಚಿವರ ನಡುವೆ ನಡೆದ ಸಭೆಯಲ್ಲಿ ರಾಜತಾಂತ್ರಿಕ ಸಂಬಂಧ ಮರುಸ್ಥಾಪನೆಯ ಬಗ್ಗೆ ಮಾತುಕತೆ ನಡೆದಿರುವುದಾಗಿ ವರದಿಯಾಗಿದೆ.
ಬಹ್ರೇನ್ನ ವಿದೇಶಾಂಗ ಸಚಿವ ಅಬ್ದುಲ್ಲತೀಫ್ ಬಿನ್ ರಶೀದ್ ಅಲ್ ಜಯಾನಿ, ಕುವೈಟ್ ವಿದೇಶಾಂಗ ಸಚಿವ ಅಬ್ದುಲ್ಲಾ ಅಲ್-ಯಾಹ್ಯಾ ಅವರು ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ ಜತೆ ಪ್ರತ್ಯೇಕ ಮಾತುಕತೆ ನಡೆಸಿದ್ದಾರೆ. ಬಹ್ರೇನ್ ವಿದೇಶಾಂಗ ಸಚಿವರು ಎರಡೂ ದೇಶಗಳ ಪ್ರಯೋಜನಕ್ಕಾಗಿ ಉತ್ತಮ ನೆರೆಹೊರೆ ಮತ್ತು ಪರಸ್ಪರ ಸಹಕಾರದ ತತ್ವಗಳನ್ನು ಒತ್ತಿಹೇಳಿದರು.
ಬಹ್ರೇನ್ ವಿದೇಶಾಂಗ ಇಲಾಖೆಯ ಅಧೀನ ಕಾರ್ಯದರ್ಶಿ ಶೇಖ್ ಅಬ್ದುಲ್ಲಾ ಬಿನ್ ಅಹ್ಮದ್ ಅಲ್ಖಲೀಫಾ, ವಿಶ್ವಸಂಸ್ಥೆಯಲ್ಲಿ ಬಹ್ರೇನ್ನ ಖಾಯಂ ಪ್ರತಿನಿಧಿ ಜಮಾಲ್ ಅಲ್ ರೊವೈ ಈ ಸಂದರ್ಭ ಉಪಸ್ಥಿತರಿದ್ದರು ಎಂದು ವರದಿಯಾಗಿದೆ.
ಈ ಮಧ್ಯೆ, ಇರಾನ್ ವಿದೇಶಾಂಗ ಸಚಿವರ ಜತೆಗಿನ ಸಭೆಯಲ್ಲಿ ಕುವೈತ್ ವಿದೇಶಾಂಗ ಸಚಿವ ಅಲ್-ಯಾಹ್ಯಾ ಕುವೈತ್ ಮತ್ತು ಇರಾನ್ ನಡುವೆ ವಿವಿಧ ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಸಂಬಂಧಗಳ ಬಗ್ಗೆ ಚರ್ಚಿಸಿದರು. ಎರಡೂ ದೇಶಗಳ ಹಿತಾಸಕ್ತಿಗೆ ಸಂಬಂಧಿಸಿದ ಪ್ರಾದೇಶಿಕ ಮತ್ತು ಅಂತರಾಷ್ಟ್ರೀಯ ಬೆಳವಣಿಗಳ ಬಗ್ಗೆ ಸಮಾಲೋಚನೆ ನಡೆಸಿರುವುದಾಗಿ ವರದಿಯಾಗಿದೆ.