ಡಿ.21 ರಂದು ಬಹ್ರೇನ್ ಇಂಡಿಯಾ ಸೊಸೈಟಿ ವತಿಯಿಂದ ವಿಶೇಷ ಬಿಸಿನೆಸ್ ನೆಟ್ವರ್ಕಿಂಗ್ ಕಾರ್ಯಕ್ರಮ
ಕರ್ನಾಟಕ ವಿಧಾನಸಭಾ ಸ್ಪೀಕರ್ ಯು ಟಿ ಖಾದರ್ ಮುಖ್ಯ ಅತಿಥಿ
ಯು ಟಿ ಖಾದರ್ | ವಿನೋದ್ ಜೇಕಬ್
ಮನಾಮ(ಬಹ್ರೇನ್): ಬಹ್ರೇನ್ ಇಂಡಿಯಾ ಸೊಸೈಟಿ (BIS)ಯು ವಿಶೇಷ ಬಿಸಿನೆಸ್ ನೆಟ್ವರ್ಕಿಂಗ್ ಕಾರ್ಯಕ್ರಮ ಆಯೋಜಿಸಿದ್ದು, ಕರ್ನಾಟಕ ವಿಧಾನಸಭೆಯ ಸ್ಪೀಕರ್ ಯು ಟಿ ಖಾದರ್ ಅವರು ಮುಖ್ಯ ಭಾಷಣಕಾರರಾಗಿ ಆಗಮಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಅತಿಥಿಯಾಗಿ ಬಹ್ರೇನ್ನಲ್ಲಿ ಭಾರತೀಯ ರಾಯಭಾರಿ ವಿನೋದ್ ಜೇಕಬ್ ಅವರು ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಡಿಸೆಂಬರ್ 21 ರಂದು ಬಹ್ರೇನ್ನ ಮನಮಾದಲ್ಲಿರುವ ದಿ ಡಿಪ್ಲೋಮ್ಯಾಟ್ ರಾಡಿಸನ್ ಬ್ಲೂ ಹೋಟೆಲ್ನ ಗ್ರ್ಯಾಂಡ್ ಅಂಬಾಸಿಡರ್ ಬಾಲ್ರೂಮ್ನಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ.
ಕರ್ನಾಟಕದ ವಿಧಾನಸಭಾ ಸ್ಪೀಕರ್ ಯು ಟಿ ಖಾದರ್ ಅವರು "ಭಾರತ-ಬಹ್ರೇನ್ ವ್ಯಾಪಾರ ಸಂಬಂಧಗಳ ಭವಿಷ್ಯ" ಕುರಿತು ಮುಖ್ಯ ಭಾಷಣವನ್ನು ನೀಡಲಿದ್ದಾರೆ. ಅವರ ಅಪಾರ ಅನುಭವ ಮತ್ತು ದೃಷ್ಟಿಕೋನವು ಎರಡು ರಾಷ್ಟ್ರಗಳ ನಡುವೆ ಬೆಳೆಯುತ್ತಿರುವ ಆರ್ಥಿಕ ಸಂಬಂಧಗಳ ಲಾಭವನ್ನು ಪಡೆಯಲು ಬಯಸುವ ವ್ಯವಹಾರಗಳಿಗೆ ಹಾಗು ಉದ್ಯಮಿಗಳಿಗೆ ಅಮೂಲ್ಯವಾದ ಒಳನೋಟಗಳನ್ನು ನೀಡಲಿದೆ ಎಂದು ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದ ಬಹ್ರೇನ್ ಇಂಡಿಯಾ ಸೊಸೈಟಿಯ ಆಡಳಿತ ಮಂಡಳಿಯ ಸದಸ್ಯರಾದ ಕರ್ನಾಟಕದ ಮುಹಮ್ಮದ್ ಮನ್ಸೂರ್ ಹೇಳಿದ್ದಾರೆ.
“ಭಾರತ ಮತ್ತು ಬಹ್ರೇನ್ನ ಉದ್ಯಮ ಸಮುದಾಯಗಳನ್ನು ಒಟ್ಟುಗೂಡಿಸುವ ಈ ಮಹತ್ವದ ಕಾರ್ಯಕ್ರಮವನ್ನು ಆಯೋಜಿಸುತ್ತಿರುವುದು ನಮಗೆ ಬಹಳ ಸಂತಸ ತಂದಿದೆ. ಈ ಉದ್ಯಮ ವಿಸ್ತರಣಾ ಕಾರ್ಯಕ್ರಮ ಆರ್ಥಿಕ ಸಂಬಂಧಗಳನ್ನು ಬಲಪಡಿಸುವಲ್ಲಿ, ವಿಶೇಷವಾಗಿ ಕರ್ನಾಟಕ ರಾಜ್ಯದೊಂದಿಗೆ ಆಳವಾದ ಸಹಯೋಗವನ್ನು ಬೆಳೆಸುವಲ್ಲಿ ಮಹತ್ವದ ಹೆಜ್ಜೆಯಾಗಿದೆ. ಉದ್ಯಮಿಗಳು, ಹೂಡಿಕೆದಾರರು ಮತ್ತು ಉದ್ಯಮದ ನಾಯಕರ ಮಧ್ಯೆ ಸಂಪರ್ಕ, ಸಮನ್ವಯ ಸಾಧಿಸಲು, ಅವರ ಪರಿಣತಿಯನ್ನು ಹಂಚಿಕೊಳ್ಳಲು ಮತ್ತು ಪರಸ್ಪರ ಸಹಕಾರದ ಹೊಸ ಮಾರ್ಗಗಳನ್ನು ಅನ್ವೇಷಿಸಲು ವೇದಿಕೆಯನ್ನು ರಚಿಸುವುದು ನಮ್ಮ ಉದ್ದೇಶ. ಸಂವಾದ ಮತ್ತು ಪರಸ್ಪರ ಸಹಕಾರಗಳ ಮೂಲಕ, ಭಾರತ ಮತ್ತು ಬಹ್ರೇನ್ ನ ಆರ್ಥಿಕ ಬೆಳವಣಿಗೆಗೆ ನಾವು ಅಪಾರ ಅವಕಾಶಗಳನ್ನು ತೆರೆಯಬಹುದು” ಎಂದು ಮುಹಮ್ಮದ್ ಮನ್ಸೂರ್ ಹೇಳಿದ್ದಾರೆ.
ಕಾರ್ಯಕ್ರಮದಲ್ಲಿ ಭಾಗವಹಿಸಲು ನೋಂದಾಯಿಸಲು 38311166(ರೀಮ್) ಕರೆ ಮಾಡಬಹುದು. ಈ ಮೇಲ್ ಮೂಲಕ ನೋಂದಾಯಿಸಲು admin@bahindsociety.org ಸಂಪರ್ಕಿಸಬಹುದು