ಬಹ್ರೈನ್: ಕನ್ನಡ ಸಂಘ ಬಹರೈನ್ ವತಿಯಿಂದ ʼಕೆಎಸ್ ಬಿ ಚಾಂಪಿಯನ್ಸ್ ಟ್ರೋಫಿ 2024ʼ ಕ್ರಿಕೆಟ್ ಪಂದ್ಯಾವಳಿ
ಬಹ್ರೈನ್: ರಾಜ್ಯ ಪ್ರಶಸ್ತಿ ವಿಜೇತ ಕನ್ನಡ ಸಂಘ ಬಹರೈನ್ ಆಯೋಜಿಸಿದ್ದ ಬಿಎಂಎಂಐ ಶಾಪ್ಸ್ ಕೆಎಸ್ ಬಿ ಚಾಂಪಿಯನ್ಸ್ ಟ್ರೋಫಿ 2024 ಕ್ರಿಕೆಟ್ ಪಂದ್ಯಾವಳಿಯ ವಿಜೇತರಿಗೆ ಭಾರತದ ಮಾಜಿ ಅಗ್ರ ವೇಗದ ಬೌಲರ್ ಮತ್ತು ಪ್ರಸ್ತುತ ಐಸಿಸಿ ಮ್ಯಾಚ್ ರೆಫರಿ ಜಾವಗಲ್ ಶ್ರೀನಾಥ್ ಶುಕ್ರವಾರ ಟ್ರೋಫಿಗಳನ್ನು ವಿತರಿಸಿದರು.
ಮನಾಮಾದ ಇಂಡಿಯನ್ ಕ್ಲಬ್ ನಲ್ಲಿ ನಡೆದ ಒಂದು ತಿಂಗಳ ಅವಧಿಯ ಪಂದ್ಯಾವಳಿಯಲ್ಲಿ ಪುರುಷ, ಮಹಿಳೆಯರು ಮತ್ತು 16 ವರ್ಷದೊಳಗಿನ ಬಾಲಕರ ಮೂರು ವಿಭಾಗಗಳಲ್ಲಿ 34 ತಂಡಗಳು ಭಾಗವಹಿಸಿದ್ದವು.
ಸುಮಾರು 700 ಮಂದಿ ಪಂದ್ಯಾವಳಿಯ ಫೈನಲ್ ಪಂದ್ಯಗಳನ್ನು ವೀಕ್ಷಿಸಿದರು ಮತ್ತು ಬಹುಮಾನ ಪ್ರದಾನದಲ್ಲಿ ಪಾಲ್ಗೊಂಡಿದ್ದರು.
ವಿಜೇತ ಮತ್ತು ರನ್ನರ್ ಅಪ್ ತಂಡಗಳು:
ಪುರುಷರು:
ವಿಜೇತರು - ರಿಫಾ ಇಂಡಿಯನ್ ಸ್ಟಾರ್
ರನ್ನರ್ ಅಪ್ - New World
ಮಹಿಳೆಯರು:
ವಿಜೇತರು - ಕನ್ನಡ ಸಂಘ ಬಹ್ರೈನ್
ರನ್ನರ್-ಅಪ್ - HPCA ಕ್ವೀನ್ಸ್
16 ವರ್ಷದೊಳಗಿನ ಬಾಲಕರು
ವಿಜೇತರು - HPCA;
ರನ್ನರ್-ಅಪ್ - NSP
ದ್ವೀಪದೇಶದಲ್ಲಿ ಕ್ರಿಕೆಟ್ ಅನ್ನು ಉತ್ತೇಜಿಸುವಲ್ಲಿ ಬಹ್ರೇನ್‌ನ ಪ್ರಯತ್ನಗಳನ್ನು ಶ್ಲಾಘಿಸಿದ ಜಾವಗಲ್ ಶ್ರೀನಾಥ್ ಅವರು ಪ್ರತಿ ವರ್ಷ ಕನ್ನಡ ಸಂಘದ ಆಯೋಜನೆಯಲ್ಲಿ ಪಂದ್ಯಾವಳಿ ನಡೆಸುವಂತೆ ಒತ್ತಾಯಿಸಿದ್ದಲ್ಲದೇ ಸಂಘಟಿತ ಪಂದ್ಯಾವಳಿ ಆಯೋಜಿಸಿದ ಕನ್ನಡ ಸಂಘವನ್ನು ಶ್ಲಾಘಿಸಿದರು.
ಸಮಾರಂಭದಲ್ಲಿ ಕನ್ನಡ ಸಂಘದ ಅಧ್ಯಕ್ಷ ಅಮರನಾಥ್ ರೈ, ವಿಶೇಷ ಅಭ್ಯಾಗತರಾದ ಡಾ.ಶ್ರೀಕಾಂತ್ ರೈ, ನವೀನ್ ಶೆಟ್ಟಿ, ಆಡಳಿತ ನಿರ್ದೇಶಕರು(AUMA Middle east), ಸುಭಾಸ್ ಚಂದ್ರ (CFO) ದಿಯಾರ್ ಅಲ್ ಮುಹರಕ್, ದೀಪಕ್ ನಾಯರ್ (ಸಿಇಒ, ಬಿಎಫ್‌ಸಿ), ಕ್ಯಾಸಿಯಸ್ ಪೆರಿಯೆರಾ (ಅಧ್ಯಕ್ಷರು, ದಿ ಇಂಡಿಯನ್ ಕ್ಲಬ್), ಪ್ರದೀಪ ಶೆಟ್ಟಿ (ಮಾಜಿ ಅಧ್ಯಕ್ಷರು, ಕನ್ನಡ ಸಂಘ), ನವೀನ್ ಶೆಟ್ಟಿ ರಿಫಾ (ಉದ್ಯಮಿ), ಹಾಗೂ ಕರ್ನಾಟಕದ ಮಾಜಿ ಕ್ರಿಕೆಟಿಗರು ಸೇರಿದಂತೆ ಗಣ್ಯರು ಭಾಗವಹಿಸಿದ್ದರು.
ಸಂಘದ ಉಪಾಧ್ಯಕ್ಷ ಮಹೇಶ್‌ಕುಮಾರ್, ಕೆಎಸ್‌ಬಿ ಚಾಂಪಿಯನ್ಸ್ ಟ್ರೋಫಿ ಮುಖ್ಯ ಸಂಯೋಜಕ ಡಿ.ರಮೇಶ್ ಮತ್ತು ಕನ್ನಡ ಸಂಘದ ಕ್ರೀಡಾ ಕಾರ್ಯದರ್ಶಿ ಜಾನ್ ದೀಪಕ್ ಡೆ'ಸ ಪ್ರಧಾನ ನಿರ್ವಾಹಕರಾಗಿದ್ದರು.
ಇದಕ್ಕೂ ಮುನ್ನ ಮನಾಮದ ಕನ್ನಡ ಭವನದಲ್ಲಿ ನಡೆದ ಸಮಾರಂಭದಲ್ಲಿ ಶ್ರೀನಾಥ್ ಅವರನ್ನು ಸನ್ಮಾನಿಸಲಾಯಿತು. 'ಮೈಸೂರು ಎಕ್ಸ್‌ಪ್ರೆಸ್' ಎಂದೇ ಕರೆಯಲ್ಪಡುವ ಶ್ರೀನಾಥ್ ಅವರು ಆಕರ್ಷಕ ಸಂವಾದದ ಮೂಲಕ ಪ್ರೇಕ್ಷಕರ ಮನಗೆದ್ದರು.
ಪ್ರಸ್ತುತ ಕಾರ್ಯಕ್ರಮದಲ್ಲಿ ಬಹ್ರೈನ್‌ನಲ್ಲಿರುವ ಭಾರತೀಯ ರಾಯಭಾರಿ, ವಿನೋದ್ ಕೆ. ಜೇಕಬ್, ದಕ್ಷಿಣ ಕನ್ನಡ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷ ಡಾ.ಶ್ರೀಕಾಂತ್ ರೈ ಮತ್ತು ಬಹ್ರೈನ್ ಕ್ರಿಕೆಟ್ ಫೆಡರೇಶನ್ ಸಲಹಾ ಮಂಡಳಿಯ ಅಧ್ಯಕ್ಷ ಮೊಹಮ್ಮದ್ ಮನ್ಸೂರ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಕನ್ನಡ ಸಂಘದ ಅಧ್ಯಕ್ಷ ಅಮರನಾಥ ರೈ ಅತಿಥಿಗಳನ್ನು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ರಾಮಪ್ರಸಾದ್ ಅಮ್ಮೆನಡ್ಕ ಕಾರ್ಯಕ್ರಮವನ್ನು ನಿರೂಪಿಸಿದರು.