ತುಂಬೆ ಮೆಡಿಸಿಟಿ, ಅಜ್ಮಾನ್ ರೂಲರ್ಸ್ ಕೋರ್ಟ್ ಗೆ ಸಿಎಂ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್ ಭೇಟಿ

ಯುಎಇ : ವಿಧಾನ ಪರಿಷತ್ ಸದಸ್ಯ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್ ಅವರು ಯುಎಇ ಅಜ್ಮಾನ್ ನ ರೂಲರ್ಸ್ ಕೋರ್ಟ್ ಮತ್ತು ತುಂಬೆ ಮೆಡಿಸಿಟಿಗೆ ಭೇಟಿ ನೀಡಿದ್ದಾರೆ.
ಅಜ್ಮಾನ್ ರೂಲರ್ಸ್ ಕೋರ್ಟ್ ನ ಮುಖ್ಯಸ್ಥರಾದ ಡಾ. ಮಜೀದ್ ಬಿನ್ ಸಯೀದ್ ಅಲ್ ನುಐಮಿ ಅವರನ್ನು ನಸೀರ್ ಅಹ್ಮದ್ ಅವರು ಭೇಟಿ ಮಾಡಿದ್ದು, ಶೇಖ್ ಮಜೀದ್ ಅವರನ್ನು ಬೆಂಗಳೂರಿಗೆ ಬರುವಂತೆ ಆಹ್ವಾನವನ್ನು ನೀಡಿದ್ದಾರೆ. ಈ ವೇಳೆ ಆರೋಗ್ಯ ರಕ್ಷಣೆ, ಶಿಕ್ಷಣ ಮತ್ತು ಸಂಶೋಧನೆ ಬಗ್ಗೆ ಮಹತ್ವದ ಮಾತುಕತೆಯನ್ನು ನಡೆಸಿದ್ದಾರೆ.
ಇದೇ ವೇಳೆ ನಸೀರ್ ಅಹ್ಮದ್ ಅವರು ಯುಎಇ ಅಜ್ಮಾನ್ ನ ತುಂಬೆ ಮೆಡಿಸಿಟಿಗೆ ಭೇಟಿ ನೀಡಿದ್ದು, ಅತ್ಯಾಧುನಿಕ ಆರೋಗ್ಯ ಸೇವೆ, ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಸೌಲಭ್ಯಗಳನ್ನು ವೀಕ್ಷಿಸಿದ್ದಾರೆ. ಇದೇ ವೇಳೆ ನಡೆದ ಕಾರ್ಯಕ್ರಮದಲ್ಲಿ ಡಾ. ತುಂಬೆ ಮೊಯ್ದೀನ್ ಅವರಿಗೆ "ಗ್ಲೋಬಲ್ ವಿಷನರಿ ಎನ್ ಆರ್ ಐ ಪ್ರಶಸ್ತಿ" ಪ್ರದಾನ ಮಾಡಿದ್ದಾರೆ.
ಜಾಗತಿಕ ಆರೋಗ್ಯ ರಕ್ಷಣೆ, ಶಿಕ್ಷಣ, ಸಂಶೋಧನಾ ಕ್ಷೇತ್ರಕ್ಕೆ ಡಾ. ಮೊಯ್ದೀನ್ ಅವರ ಅಮೋಘ ಕೊಡುಗೆಗಳನ್ನು ನಸೀರ್ ಅಹ್ಮದ್ ಅವರು ಶ್ಲಾಘಿಸಿದ್ದಾರೆ. ಸಂಸ್ಥೆಯು ಆರೋಗ್ಯ ಸೇವಾ ಕ್ಷೇತ್ರದಲ್ಲಿ ಜಾಗತಿಕ ಕೇಂದ್ರವಾಗಿದೆ ಎಂದು ಬಣ್ಣಿಸಿದ್ದಾರೆ.