18 ಗಂಟೆ ಕಳೆದರೂ ಟೇಕ್ ಆಫ್ ಆಗದ ದಮಾಮ್ - ಮಂಗಳೂರು ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನ
ವಿಮಾನ ನಿಲ್ದಾಣದಲ್ಲೇ ಸಿಲುಕಿ ಹೈರಾಣಾಗಿರುವ ಪ್ರಯಾಣಿಕರು
ಸಾಂದರ್ಭಿಕ ಚಿತ್ರ ( PTI )
ಮಂಗಳೂರು : ಸೌದಿ ಅರೇಬಿಯಾದ ದಮಾಮ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮಂಗಳೂರಿಗೆ ಹೊರಡಬೇಕಿದ್ದ ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನವು 18 ಗಂಟೆ ಕಳೆದರೂ ಪ್ರಯಾಣ ಆರಂಭಿಸದೇ ಇರುವುದರಿಂದ ಪ್ರಯಾಣಿಕರು ತೊಂದರೆ ಅನುಭವಿಸುತ್ತಿದ್ದಾರೆ ಎಂದು ವರದಿಯಾಗಿದೆ.
ಬುಧವಾರ ರಾತ್ರಿ 10:20 ಕ್ಕೆ ಟೇಕಾಫ್ ಆಗಬೇಕಿದ್ದ ವಿಮಾನವು ಗುರುವಾರ ಸಂಜೆಯಾದರೂ, ಇನ್ನೂ ದಮಾಮ್ ನಿಂದ ನಿರ್ಗಮಿಸಿಲ್ಲ. ವಿಮಾನ ವಿಳಂಬವಾಗಿದ್ದಕ್ಕೆ ಏರ್ ಇಂಡಿಯಾ ವಿಮಾನಯಾನ ಸಂಸ್ಥೆಯಿಂದ ಪ್ರಯಾಣಿಕರಿಗೆ ಸೂಕ್ತ ಮಾಹಿತಿ ನೀಡಲಿಲ್ಲ ಎಂದು ಪ್ರಯಾಣಿಕರು ದೂರಿದ್ದಾರೆ.
ಏರ್ ಇಂಡಿಯಾ ಎಕ್ಸ್ಪ್ರೆಸ್ ಮಧ್ಯರಾತ್ರಿಯ ಸುಮಾರಿಗೆ ವಿಮಾನದ ರದ್ದತಿಯ ಬಗ್ಗೆ ಪ್ರಯಾಣಿಕರಿಗೆ ಸೂಚನೆ ನೀಡಿತ್ತು. ಗುರುವಾರ ಬೆಳಿಗ್ಗೆ 11 ಗಂಟೆಗೆ ಪ್ರಯಾಣ ಆರಂಭಿಸುವ ಬಗ್ಗೆ ಭರವಸೆ ನೀಡಿತು. ಈ ಅನಿರೀಕ್ಷಿತ ಪ್ರಕಟಣೆಯಿಂದ ವಿಮಾನ ನಿಲ್ದಾಣದಲ್ಲಿ ಕಾಯುತ್ತಿದ್ದ, ಪ್ರಯಾಣಿಕರಿಗೆ ಅನಾನುಕೂಲವಾಯಿತು ಎಂದು ಪ್ರಯಾಣಿಕರು ಹೇಳಿದ್ದಾರೆ.
ವಾರ್ತಾ ಭಾರತಿಯೊಂದಿಗೆ ಮಾತನಾಡಿದ ಪ್ರಯಾಣಿಕರೊಬ್ಬರು, “ವಿಮಾನದಲ್ಲಿ ಪ್ರಯಾಣಿಸಲು ದೂರದ ಸ್ಥಳಗಳಿಂದ ವಿಮಾನ ನಿಲ್ದಾಣಕ್ಕೆ ಆಗಮಿಸಿದವರಿಗೆ ಉಳಿದುಕೊಳ್ಳಲು ವಸತಿ ವ್ಯವಸ್ಥೆ ಇಲ್ಲದೇ ಪರದಾಡಿದರು. ವಿಮಾನಯಾನ ಸಂಸ್ಥೆಯು ಆಹಾರ ಅಥವಾ ವಸತಿ ವ್ಯವಸ್ಥೆ ಸೇರಿದಂತೆ ಯಾವುದೇ ನೆರವು ನೀಡಲಿಲ್ಲ” ಎಂದರು.
ಪ್ರಯಾಸಪಟ್ಟು ರಾತ್ರಿ ಕಳೆದ ನಂತರ, ಸೂಚನೆಯಂತೆ ಗುರುವಾರ ಬೆಳಿಗ್ಗೆ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಪ್ರಯಾಣಿಕರಿಗೆ, ವಿಮಾನವೇರಲು ಅವಕಾಶ ನೀಡಲಾಯಿತು. ವಿಮಾನವೇರಿದ ಅರ್ಧ ಗಂಟೆಯ ನಂತರ, ಪ್ರಯಾಣಿಕರನ್ನು ಇದ್ದಕ್ಕಿಂದ್ದಂತೆ ಇಳಿಸಲಾಯಿತು. ವಿಮಾನದ ಹಾರಾಟವು ಮತ್ತಷ್ಟು ವಿಳಂಬವಾಯಿತು. ಸೌದಿ ಅರೇಬಿಯಾದ ಸ್ಥಳೀಯ ಸಮಯ ಮಧ್ಯಾಹ್ನ 3 ಗಂಟೆಯಾದರೂ, ಅಧಿಕಾರಿಗಳು ಮಂಗಳೂರಿಗೆ ಹೊರಡುವ ಏರ್ ಇಂಡಿಯಾ ವಿಮಾನದ ಹಾರಾಟದ ಬಗ್ಗೆ ಯಾವುದೇ ಖಚಿತ ಮಾಹಿತಿ ನೀಡಿಲ್ಲ ಎಂದು ಪ್ರಯಾಣಿಕರು ಹೇಳಿದ್ದಾರೆ.
ಮಹಿಳೆಯರು, ಮಕ್ಕಳು, ಹಿರಿಯ ನಾಗರಿಕರು ಮತ್ತು ರೋಗಿಗಳು ವಿಮಾನ ವಿಳಂಬವಾದ್ದರಿಂದ ಸರಿಯಾದ ವ್ಯವಸ್ಥೆಗಳಿಲ್ಲದೇ 18 ಗಂಟೆಗಳ ಕಾಲ ಕಾಯಬೇಕಾಯಿತು. ಇದರಿಂದ ಹತಾಶರಾದ ಪ್ರಯಾಣಿಕರು, ಸುಧೀರ್ಘ ವಿಳಂಬದ ಬಗ್ಗೆ ದೂರುಗಳನ್ನು ಆಲಿಸದ ಏರ್ ಇಂಡಿಯಾ ಎಕ್ಸ್ಪ್ರೆಸ್ ಅಧಿಕಾರಿಗಳ ಸಂವಹನ ಕೊರತೆಗೆ ಆಕ್ರೋಶ ವ್ಯಕ್ತಪಡಿಸಿದರು.
ದಮಾಮ್ ಮತ್ತು ಮಂಗಳೂರಿನ ನಡುವಿನ ನೇರ ವಿಮಾನಯಾನವು ಕರಾವಳಿ ಕರ್ನಾಟಕ ಮತ್ತು ನೆರೆಯ ಕೇರಳದ ಪ್ರಯಾಣಿಕರಲ್ಲಿ ಜನಪ್ರಿಯವಾಗಿದೆ. ನೇರ ಪ್ರಯಾಣ ಮಾಡುವ ಪ್ರಯಾಣಿಕರು ಈ ವಿಮಾನ ಬಳಸುತ್ತಾರೆ. ವಿಮಾನ ವಿಳಂಬದ ಬಗ್ಗೆ ವರದಿ ಮಾಡುವ ಸಮಯದಲ್ಲಿ ಏರ್ ಇಂಡಿಯಾ ಎಕ್ಸ್ಪ್ರೆಸ್ ಅಧಿಕಾರಿಗಳನ್ನು ಸಂಪರ್ಕಿಸಲು ʼವಾರ್ತಾ ಭಾರತಿʼ ನಡೆಸಿದ ಪ್ರಯತ್ನಗಳು ವಿಫಲವಾಗಿವೆ. ಏರ್ ಇಂಡಿಯಾ ಎಕ್ಸ್ಪ್ರೆಸ್ನಿಂದ ಅಧಿಕೃತ ಹೇಳಿಕೆಯನ್ನು ಸ್ವೀಕರಿಸಿದ ನಂತರ ಸುದ್ದಿಯನ್ನು ಅಪ್ಡೇಟ್ ಮಾಡಲಾಗುತ್ತದೆ.