ಸೌದಿ ಅರೇಬಿಯಾ ನಿಜವಾಗಿಯೂ ತೈಲ ಡಾಲರ್ ಒಪ್ಪಂದವನ್ನು ಅಂತ್ಯಗೊಳಿಸಿದೆಯೆ?
ಯುಬಿಎಸ್ ಅರ್ಥಶಾಸ್ತ್ರಜ್ಞರ ಸ್ಪಷ್ಟೀಕರಣ ಹೀಗಿದೆ…
PC : indiatoday
ಹೊಸದಿಲ್ಲಿ: ಕಳೆದ ವಾರ ಸೌದಿ ಅರೇಬಿಯಾವು ಅಮೆರಿಕಾದೊಂದಿಗಿನ ದೀರ್ಘಕಾಲೀನ ತೈಲ ಡಾಲರ್ ಒಪ್ಪಂದವನ್ನು ರದ್ದು ಗೊಳಿಸಿದೆ ಎಂಬ ವರದಿಗಳು, ಜಾಗತಿಕ ಮೀಸಲು ನಗದಿನ ಮೇಲೆ ಅಮೆರಿಕಾ ಡಾಲರ್ ಪ್ರಭಾವವನ್ನು ಕುಗ್ಗಿಸಲಿದೆ ಎಂಬ ಅಂತರ್ಜಾಲ ಚರ್ಚೆಗಳಿಗೆ ಕಿಡಿ ಹಚ್ಚಿವೆ.
ಆದರೆ, ಜಾಗತಿಕ ಪ್ರಭುತ್ವದಲ್ಲಿ ಅಮೆರಿಕ ಡಾಲರ್ನ ಪ್ರಭಾವವು ಕುಗ್ಗಲಿದೆ ಎಂಬ ವದಂತಿಗಳು ತೀವ್ರಗೊಂಡಿರುವ ಬೆನ್ನಿಗೇ, ಈ ಕುರಿತು ಪ್ರತಿಕ್ರಿಯಿಸಿರುವ ಹಲವಾರು ಮಾರುಕಟ್ಟೆ ತಜ್ಞರು, ತೈಲ ಡಾಲರ್ ಒಪ್ಪಂದ ಅಂತ್ಯಗೊಳ್ಳಲಿದೆ ಎನ್ನಲು ಅಂತಹ ಒಪ್ಪಂದವೊಂದು ಇರಲೇ ಇಲ್ಲ ಎಂಬುದರತ್ತ ಬೊಟ್ಟು ಮಾಡಿದ್ದಾರೆ.
ಯುಬಿಎಸ್ ಗ್ಲೋಬಲ್ ವೆಲ್ತ್ ಮ್ಯಾನೇಜ್ಮೆಂಟ್ ಸಂಸ್ಥೆಯಲ್ಲಿ ಮುಖ್ಯ ಅರ್ಥಶಾಸ್ತ್ರಜ್ಞರಾಗಿರುವ ಪೌಲ್ ಡೊನೊವನ್ ಪ್ರಕಾರ, ಈ ಕತೆಯು ಅನಿರೀಕ್ಷಿತ ಗಮನ ಸೆಳೆದಿದ್ದು, ದೃಢಪಡಿಸಿಕೊಳ್ಳುವುದರಲ್ಲಿನ ಪಕ್ಷಪಾತತನದ ಅಪಾಯಕ್ಕೆ ಮತ್ತೊಂದು ಉದಾಹರಣೆಯಾಗಿದೆ ಎಂದು ಹೇಳಿದ್ದಾರೆ.
"ಈ ಕತೆಯು ಬಹುಶಃ ಕ್ರಿಪ್ಟೊ ಜಗತ್ತಿನಲ್ಲಿ ಸೃಷ್ಟಿಯಾಗಿರಬೇಕು. ಡಾಲರ್ ಅವಸಾನವನ್ನು ಹಲವಾರು ಕ್ರಿಪ್ಟೊ ವದಂತಿಗಾರರು ಬಯಸುತ್ತಿದ್ದಾರೆ" ಎಂದು ಅವರು ವ್ಯಂಗ್ಯವಾಡಿದ್ದಾರೆ.
1974ರಲ್ಲಿ ಸೌದಿ ಅರೇಬಿಯಾ ಹಾಗೂ ಅಮೆರಿಕ ನಡುವೆ ನಡೆದಿದ್ದ ತೈಲ ಡಾಲರ್ ಒಪ್ಪಂದವು ಜೂನ್ 9, 2024ಕ್ಕೆ ಅಂತ್ಯಗೊಂಡಿದ್ದು, ಈ ಒಪ್ಪಂದವು ನವೀಕರಣಗೊಂಡಿಲ್ಲ ಎಂಬ ವರದಿಗಳು ಹಲವೆಡೆ ಪ್ರಕಟಗೊಂಡಿದ್ದವು.
ಈ ವ್ಯವಸ್ಥೆಯನ್ನು ತನ್ನ ಹೆಚ್ಚುವರಿ ತೈಲ ಮಾರಾಟದ ಆದಾಯವನ್ನು ಹೂಡಿಕೆ ಮಾಡುವ ಸೌದಿ ಅರೇಬಿಯಾದ ಅಗತ್ಯವನ್ನು ಪೂರೈಸಲು ಮಾಡಿರಬಹುದು ಎಂದು ಪೌಲ್ ಡೊನೊವನ್ ವಿವರಿಸಿದ್ದಾರೆ.
"ಜೂನ್ 1974ರಲ್ಲಿ ಸೌದಿ ಅರೇಬಿಯಾ ಮತ್ತು ಅಮೆರಿಕ ಜಂಟಿ ಆರ್ಥಿಕ ಸಹಕಾರ ಆಯೋಗವನ್ನು ಸ್ಥಾಪಿಸಿದ್ದವು. ಇದು ಸೌದಿ ಅರೇಬಿಯಾದ ದಿಢೀರ್ ಡಾಲರ್ ಗಳಿಕೆಯನ್ನು ಅಮೆರಿಕ ಉತ್ಪನ್ನಗಳಲ್ಲಿ ಹೂಡಿಕೆ ಮಾಡಲು ನೆರವು ನೀಡುವ ಗುರಿಯನ್ನು ಹೊಂದಿತ್ತು. ಆ ವರ್ಷದ ಜುಲೈ ತಿಂಗಳಲ್ಲಿ ಸೌದಿ ಅರೇಬಿಯಾವು ತನ್ನ ತೈಲ ಡಾಲರ್ ಅನ್ನು ಅಮೆರಿಕ ಖಜಾನೆಯಲ್ಲಿ ಹೂಡಿಕೆ ಮಾಡಲು ಸಮ್ಮತಿಸಿತ್ತು (ಈ ಸಂಗತಿಯನ್ನು 2016ರವರೆಗೆ ಗೌಪ್ಯವಾಗಿರಿಸಲಾಗಿತ್ತು)" ಎಂದು ಡೊನೊವನ್ ತಮ್ಮ ಬ್ಲಾಗ್ನಲ್ಲಿ ಬರೆದುಕೊಂಡಿದ್ದಾರೆ.
ತೈಲ ಮಾರಾಟವನ್ನೆಂದಿಗೂ ಡಾಲರೇತರ ನಗದಿನ ಮೂಲಕವೇ ಮಾಡಲಾಗುತ್ತಿದೆ ಎಂದೂ ಅವರು ಹೇಳಿದ್ದಾರೆ.
"2023ರಲ್ಲಿ ಸೌದಿ ಅರೇಬಿಯಾವು ತೈಲ ಮಾರಾಟಗಳನ್ನು ಇತರ ನಗದಿನ ಮೂಲಕ ಮಾಡಲು ಸಿದ್ಧ ಎಂಬ ಸೂಚನೆ ನೀಡಿತು. ಇದರಿಂದ ಆರ್ಥಿಕ ಮಾರುಕಟ್ಟೆಯ ಸಾಧ್ಯತೆಗಳು ಕೊಂಚ ಮಟ್ಟಿಗೆ ಬದಲಾಗಲಿವೆ. ಸೌದಿ ಅರೇಬಿಯಾದ ರಿಯಾಲ್ ಡಾಲರ್ಗೆ ಸರಿಸಮನಾಗಿ ಉಳಿದಿದೆ ಹಾಗೂ ಸೌದಿ ಅರೇಬಿಯಾದ ಹಣಕಾಸು ಸ್ವತ್ತುಗಳ ಸಂಗ್ರಹವು ಡಾಲರ್ ಕೇಂದ್ರಿತವಾಗಿದೆ. ಡಾಲರ್ನ ಮೀಸಲು ಸ್ಥಿತಿಯು ಹೇಗೆ ನಗದನ್ನು ಸಂಗ್ರಹಿಸಿಡಲಾಗುತ್ತದೆ ಎಂಬುದನ್ನು ಅವಲಂಬಿಸಿದೆಯೆ ಹೊರತು ವ್ಯವಹಾರಗಳು ಹೇಗೆ ಪ್ರಭುತ್ವ ಸಾಧಿಸುತ್ತವೆ ಎಂಬುದನ್ನು ಆಧರಿಸಿಯಲ್ಲ" ಎಂದು ಅವರು ವಿವರಿಸಿದ್ದಾರೆ.
ಸೌದಿ ಅರೇಬಿಯಾ ಸಂಸ್ಥಾನದ ದೊಡ್ಡ ಖರೀದಿದಾರರ ಬಳಿ ನಗದು ಆಯ್ಕೆಯ ಕುರಿತು ಪ್ರಭಾವಶಾಲಿ ಚೌಕಾಸಿ ಸಾಮರ್ಥ್ಯವಿದ್ದರೂ, ಸೌದಿ ಅರೇಬಿಯಾ ಮತ್ತು ಅಮೆರಿಕ ನಡುವಿನ ಸಂಬಂಧ ಈಗಲೂ ಬಲಿಷ್ಠವಾಗುಳಿದಿದೆ.
ಮಧ್ಯಪ್ರಾಚ್ಯ ಜಗತ್ತಿನಲ್ಲಿ ಸೌದಿ ಅರೇಬಿಯಾ ಈಗಲೂ ಅಮೆರಿಕದ ಪ್ರಮುಖ ಮಿತ್ರ ರಾಷ್ಟ್ರವಾಗುಳಿದಿದೆ. ನಿರ್ದಿಷ್ಟವಾಗಿ ಡಾಲರ್ ಬೆಲೆಯಲ್ಲಿ ಅಳೆಯಲಾಗುವ ಮಹತ್ತರ ಅಮೆರಿಕ ಶಸ್ತ್ರಾಸ್ತ್ರಗಳ ಖರೀದಿ ವಿಚಾರದಲ್ಲಿ.
ಸೌದಿ ಅರೇಬಿಯಾಕ್ಕಿಂತಲೂ ಚೀನಾವೇ ಗಣನೀಯ ಪ್ರಮಾಣದ ಅಮೆರಿಕ ಮೀಸಲು ನಗದು ಹೊಂದಿದ್ದರೂ, ಜಾಗತಿಕ ಮಟ್ಟದಲ್ಲಿ ಡಾಲರ್ನ ಜಾಗತಿಕ ಮೀಸಲು ನಗದು ಪ್ರಭಾವವನ್ನು ತಗ್ಗಿಸುವ ಪ್ರಯತ್ನಗಳ ಪರಿಣಾಮ ತೀರಾ ಕನಿಷ್ಠವಾಗಿದೆ.
ಒಂದು ವೇಳೆ ಸೌದಿ ಅರೇಬಿಯಾವು ತೈಲವನ್ನು ಯುವಾನ್ನಲ್ಲಿ ಮಾರಾಟ ಮಾಡಲು ನಿರ್ಧರಿಸಿದರೆ.
ವಹಿವಾಟಿನಿಂದ ಹಿಡಿದು ಸಾರಿಗೆ ಮತ್ತು ವಿಮೆಯವರೆಗೆ ಜಾಗತಿಕ ತೈಲ ವ್ಯಾಪಾರದಲ್ಲಿ ಡಾಲರ್ ಪ್ರಭಾವ ಬದಲಾಗುವ ಸಾಧ್ಯತೆ ತೀರಾ ಕಡಿಮೆ.
ಈ ಡಾಲರ್ಗಾಗಿನ ಆದ್ಯತೆಯು ವ್ಯವಹಾರಗಳನ್ನು ಸರಳಗೊಳಿಸುತ್ತದೆ. ಇದಕ್ಕೆ ಪ್ರತಿಯಾಗಿ ಭಾರತವು ಸ್ಥಳೀಯ ನಗದು ನೀಡಿ ರಶ್ಯದಿಂದ ತೈಲವನ್ನು ಖರೀದಿಸತೊಡಗಿದಾಗ, ಹೆಚ್ಚುವರಿ ನಗದು ಕ್ರೋಡೀಕರಣದಿಂದ ಅದನ್ನು ಹೂಡಿಕೆ ಮತ್ತು ಸಾಲ ನೀಡುವ ಆಯ್ಕೆಗಳ ಕುರಿತು ರಶ್ಯ ಕಳವಳಗೊಳ್ಳುವಂತಾಯಿತು.
ಚೀನಾಗೆ ತೈಲ ರಫ್ತು ಮಾಡಲು ಸೌದಿ ಅರೇಬಿಯಾ ಯುವಾನ್ ಪಾವತಿ ಸಾಧ್ಯತೆಯನ್ನು ಪರೀಕ್ಷಿಸಬಹುದಾದರೂ, ಈ ವ್ಯವಹಾರವು ಡಾಲರ್ನಲ್ಲೂ ಕೂಡಾ ಸುಲಭ ಸಾಧ್ಯವಾಗಲಿದೆ. ತೈಲ ಉದ್ಯಮಗಳು ಡಾಲರ್ ಅನ್ನು ಪ್ರಾಥಮಿಕ ವ್ಯವಹಾರ ಮಾಧ್ಯಮವನ್ನಾಗಿ ಬಳಸುವುದು ಬದಲಾಗುವ ಸಾಧ್ಯತೆ ತೀರಾ ಕಡಿಮೆ.
ಸೌಜನ್ಯ: indiatoday.in