ಡಾ. ತುಂಬೆ ಮೊಯ್ದಿನ್ ಅವರಿಗೆ ಎರಡು ಗೌರವ ಡಾಕ್ಟರೇಟ್‌ಗಳು

ದುಬೈ: ಪ್ರತಿಷ್ಠಿತ ತುಂಬೆ ಗ್ರೂಪ್ ನ ಸ್ಥಾಪಕಾಧ್ಯಕ್ಷ ಡಾ. ತುಂಬೆ ಮೊಯ್ದಿನ್ ಅವರು ವೈದ್ಯಕೀಯ ಶಿಕ್ಷಣ ಕ್ಷೇತ್ರಕ್ಕೆ ನೀಡಿರುವ ಕೊಡುಗೆ, ಅರೋಗ್ಯ ಕ್ಷೇತ್ರದಲ್ಲಿ ತಂದಿರುವ ಧನಾತ್ಮಕ ಬದಲಾವಣೆಗಳು ಹಾಗು ಸಾಮಾಜಿಕ ಸೇವೆಯನ್ನು ಗುರುತಿಸಿ ಎರಡು ಗೌರವ ಡಾಕ್ಟರೇಟ್ ಗಳನ್ನು ನೀಡಲಾಗಿದೆ.
ಭಾರತದ ಚಿತ್ಕಾರ ವಿಶ್ವವಿದ್ಯಾಲಯ ಹಾಗು ಉಝ್ಬೆಕಿಸ್ತಾನದ ಫೇರ್ಗನಾ ಮೆಡಿಕಲ್ ಇನ್ಸ್ ಟಿಟ್ಯೂಟ್ ಆಫ್ ಪಬ್ಲಿಕ್ ಹೆಲ್ತ್ - ಈ ಎರಡೂ ವಿವಿಗಳಿಂದ ಡಾ. ತುಂಬೆ ಮೊಯ್ದಿನ್ ಅವರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಲಾಗಿದೆ.
ಚಂಡೀಗಢದ ಚಿತ್ಕಾರ ವಿವಿಯ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಡಾ. ಮೊಯ್ದಿನ್ ಅವರಿಗೆ ಡಾಕ್ಟರ್ ಆಫ್ ಲಿಟರೇಚರ್ ( ಡಿ ಲಿಟ್ ) ಪದವಿಯನ್ನು ಪ್ರದಾನ ಮಾಡಲಾಯಿತು.
ಉಝ್ಬೆಕಿಸ್ತಾನದ ಫೇರ್ಗನಾ ಮೆಡಿಕಲ್ ಇನ್ಸ್ ಟಿಟ್ಯೂಟ್ ಆಫ್ ಪಬ್ಲಿಕ್ ಹೆಲ್ತ್ ನಲ್ಲಿ ಇತ್ತೀಚಿಗೆ ನಡೆದ ಸಮಾರಂಭದಲ್ಲಿ ಡಾ. ಮೊಯ್ದಿನ್ ಅವರಿಗೆ ಗೌರವ ಡಾಕ್ಟರೇಟ್ ನೀಡಲಾಯಿತು. ಅಂತರ್ ರಾಷ್ಟ್ರೀಯ ಅರೋಗ್ಯ ಕ್ಷೇತ್ರದಲ್ಲಿ ಪರಸ್ಪರ ಪಾಲುದಾರಿಕೆ ಹಾಗು ಒಪ್ಪಂದಗಳ ಮೂಲಕ ಶೈಕ್ಷಣಿಕ ಹಾಗು ಅರೋಗ್ಯ ಕ್ಷೇತ್ರದಲ್ಲಿ ಡಾ. ಮೊಯ್ದಿನ್ ಅವರು ಮಾಡಿರುವ ಅಮೋಘ ಸಾಧನೆಗೆ ಜಾಗತಿಕ ಗೌರವ ಸಂದಂತಾಗಿದೆ. ಈವರೆಗೆ ಡಾ. ಮೊಯ್ದಿನ್ ಅವರಿಗೆ ಒಟ್ಟು ನಾಲ್ಕು ಗೌರವ ಡಾಕ್ಟರೇಟ್ ಗಳನ್ನು ನೀಡಲಾಗಿದೆ.
"ಈ ಪ್ರತಿಷ್ಠಿತ ಪದವಿಗಳನ್ನು ಸ್ವೀಕರಿಸಿ ನನಗೆ ಬಹಳ ಸಂತಸವಾಗಿದೆ. ಇದು ವೈಯಕ್ತಿಕವಾಗಿ ನನಗೆ ಮಾತ್ರವಲ್ಲದೆ ಇಡೀ ತುಂಬೆ ಗ್ರೂಪ್ ಗೆ ಸಂದಿರುವ ಗೌರವವಾಗಿದೆ. ಜಾಗತಿಕವಾಗಿ ಅರೋಗ್ಯ ಹಾಗು ವೈದ್ಯಕೀಯ ವಿಜ್ಞಾನ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆ ತರುವ ತುಂಬೆ ಗ್ರೂಪ್ ನ ಪ್ರಯತ್ನ ಹಾಗು ಬದ್ಧತೆಗೆ ಈ ಗೌರವ ಸಲ್ಲುತ್ತದೆ. ಎಲ್ಲರಿಗೂ ಅತ್ಯುನ್ನತ ವೈದ್ಯಕೀಯ ಸೌಲಭ್ಯಗಳು ಹಾಗು ಶಿಕ್ಷಣ ಕೈಗೆಟಕುವಂತೆ ಮಾಡಲು ನಾವು ನಮ್ಮ ಪ್ರಯತ್ನವನ್ನು ಮುಂದುವರಿಸುತ್ತೇವೆ" ಎಂದು ಡಾ. ತುಂಬೆ ಮೊಯ್ದಿನ್ ಅವರು ಪ್ರತಿಕ್ರಿಯಿಸಿದ್ದಾರೆ.
ತುಂಬೆ ಗ್ರೂಪ್ ಅನ್ನು ಅರೋಗ್ಯ, ವೈದ್ಯಕೀಯ ಶಿಕ್ಷಣ, ಸಂಶೋಧನೆ ಹಾಗು ಚಿಕಿತ್ಸಾ ಕ್ಷೇತ್ರದಲ್ಲಿ ಜಾಗತಿಕ ನಾಯಕನಾಗಿ ರೂಪಿಸುವ ವಿಷನ್ 2028 ನತ್ತ ಮುನ್ನುಗ್ಗಲು ಈ ಎರಡೂ ಗೌರವಗಳು ಪ್ರೇರಣೆಯಾಗಿವೆ.
ಡಾ. ತುಂಬೆ ಮೊಯ್ದಿನ್ ಅವರ ಸಮರ್ಥ ಹಾಗು ದೂರದರ್ಶಿ ನಾಯಕತ್ವದಲ್ಲಿ ತುಂಬೆ ಗ್ರೂಪ್ ಈಗಾಗಲೇ ವೇಗವಾಗಿ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳುತ್ತಿದೆ. ಜೊತೆಗೆ ವೈದ್ಯಕೀಯ ಕ್ಷೇತ್ರದಲ್ಲಾಗುತ್ತಿರುವ ಡಿಜಿಟಲ್ ಕ್ರಾಂತಿಗೆ ಹೊಂದಿಕೊಂಡು ತನ್ನ ಜಾಗತಿಕ ಗುರಿಯನ್ನು ತಲುಪಲು ಹೆಜ್ಜೆಯಿಡುತ್ತಿದೆ ಎಂದು ತುಂಬೆ ಗ್ರೂಪ್ ಪ್ರಕಟಣೆ ತಿಳಿಸಿದೆ.