ದುಬೈ: ಮಾರ್ಚ್ 8ರಂದು 'ಬಿಸಿಎಫ್ ಇಫ್ತಾರ್ ಮೀಟ್ 2025'

ದುಬೈ: ಬ್ಯಾರೀಸ್ ಕಲ್ಬರಲ್ ಫೋರಂ (ಬಿಸಿಎಫ್) ವತಿಯಿಂದ ಪ್ರತೀ ವರ್ಷದಂತೆ ಈ ವರ್ಷವೂ ರಮಾಝಾನ್ ನಲ್ಲಿ 'ಬಿಸಿಎಫ್ ಇಫ್ತಾರ್ ಮೀಟ್-2025' ಅನ್ನು ಆಯೋಜಿಸಲು ಉದ್ದೇಶಿಸಿದ್ದು, ಮಾರ್ಚ್ 8ರಂದು ದುಬೈ ದೇರಾದ ಅಬು ಹೈಲ್ ನ ಅಲ್ ಜಾಹಿಯ ಬಾಂಕ್ವೆಟ್ ಹಾಲ್ ನಲ್ಲಿ ಇಫ್ತಾರ್ ಕೂಟ ನಡೆಯಲಿದೆ ಎಂದು ಬಿಸಿಎಫ್ ಪ್ರಕಟನೆ ತಿಳಿಸಿದೆ.
ಯುಎಇ, ಇತರ ಕೊಲ್ಲಿ ರಾಷ್ಟ್ರ ಮತ್ತು ಕರ್ನಾಟಕದಿಂದ ನೂರಾರು ಮಂದಿ ಈ ಇಫ್ತಾರ್ ಕೂಟದಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ. ವಿಶೇಷ ಆಹ್ವಾನಿತರು, ಉಲಮಾ ಸಾದಾತುಗಳು, ಧಾರ್ಮಿಕ, ರಾಜಕೀಯ ಮತ್ತು ಸಾಮಾಜಿಕ ನೇತಾರರು, ಉದ್ಯಮಿಗಳು ಮತ್ತು ಹಲವಾರು ಕನ್ನಡ ಪರ ಸೇವಾ ಸಂಸ್ಥೆಗಳ ಪ್ರತಿನಿಧಿಗಳು ಕೂಡಾ ಭಾಗವಹಿಸಲಿದ್ದಾರೆ ಎಂದು ಬಿಸಿಎಫ್ ಪ್ರಕಟನೆ ತಿಳಿಸಿದೆ.
ಕಾರ್ಯಕ್ರಮದಲ್ಲಿ ಮಕ್ಕಳಿಗೆ ಇಸ್ಲಾಮಿಕ್ ರಸಪ್ರಶ್ನೆಗಳು, ಕುರ್ ಆನ್ ಪಾರಾಯಣ ಮೊದಲಾದ ಸ್ಪರ್ಧೆಗಳು ಇರಲಿವೆ. ಪ್ರಖ್ಯಾತ ಧಾರ್ಮಿಕ ನಾಯಕರು ಧಾರ್ಮಿಕ-ನೈತಿಕ ಪ್ರವಚನ ನೀಡಲಿದ್ದಾರೆ. ಇದೇ ಸಂದರ್ಭದಲ್ಲಿ ಬಿಸಿಎಫ್ ಸ್ಕಾಲರ್ ಶಿಪ್ ಬಗ್ಗೆ ಘೋಷಿಸಲಾಗುವುದು. ಅಲ್ಲದೇ, ಸಾಮುದಾಯಿಕ ರಂಗದಲ್ಲಿ ವಿಶೇಷ ಸೇವೆಗೈದ ವ್ಯಕ್ತಿಗಳನ್ನು ಗೌರವಿಸಲಾಗುವುದು.
ಬಿಸಿಎಫ್ ಅಧ್ಯಕ್ಷ ಡಾ.ಬಿ.ಕೆ.ಯೂಸುಫ್ ಮತ್ತು ಇತರ ನಾಯಕರ ಮುಂದಾಳುತ್ವದಲ್ಲಿ ನಡೆಯುವ ಈ ಇಫ್ತಾರ್ ಕೂಟದಲ್ಲಿ ಯುಎಇಯಲ್ಲಿರುವ ಎಲ್ಲ ಕನ್ನಡಿಗರು ತಮ್ಮ ಕುಟುಂಬ, ಸ್ನೇಹಿತರೊಂದಿಗೆ ಭಾಗಿಯಾಗುವಂತೆ ಬಿಸಿಎಫ್ ಇಫ್ತಾರ್ ಸಮಿತಿಯ ಅಧ್ಯಕ್ಷ ಅಬ್ದುಲ್ ಲತೀಫ್ ಮುಲ್ಕಿ, ಉಪಾಧ್ಯಕ್ಷ ಅಫೀಕ್ ಹುಸೈನ್ ಮತ್ತು ಪದಾಧಿಕಾರಿಗಳು ಕೋರಿದ್ದಾರೆ.