ದುಬೈ: ಎಮಿರೇಟ್ಸ್, ಫ್ಲೈದುಬೈ ವಿಮಾನಗಳ ಹಾರಾಟ ಸಾಮಾನ್ಯ ಸ್ಥಿತಿಗೆ
PC : X/@DXBMediaOffice
ದುಬೈ: ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ)ನಲ್ಲಿ ಈ ವಾರದ ಆದಿ ಭಾಗದಲ್ಲಿ ಉದ್ಭವಿಸಿದ ಭೀಕರ ಪ್ರವಾಹದಿಂದಾಗಿ ಅಸ್ತವ್ಯಸ್ತವಾಗಿದ್ದ ಕಾರ್ಯಾಚರಣೆಗಳು ಸಾಮಾನ್ಯ ಸ್ಥಿತಿಗೆ ಮರಳಿವೆ ಎಂದು ದುಬೈಯ ಪ್ರಮುಖ ವಿಮಾನಯಾನ ಕಂಪೆನಿ ಎಮಿರೇಟ್ಸ್ ಮತ್ತು ಅದರ ಸಹೋದರ ಕಂಪೆನಿ ಫ್ಲೈದುಬೈ ಶನಿವಾರ ಘೋಷಿಸಿವೆ.
ಮಂಗಳವಾರ ಮರುಭೂಮಿ ನಗರ ದುಬೈಗೆ ಅಪ್ಪಳಿಸಿದ ಚಂಡಮಾರುತದ ಪರಿಣಾಮವಾಗಿ ಎಮಿರೇಟ್ಸ್ ಸುಮಾರು 400 ವಿಮಾನಗಳ ಹಾರಾಟವನ್ನು ರದ್ದುಗೊಳಿಸಿತ್ತು ಮತ್ತು ಹಲವಾರು ವಿಮಾನಗಳ ಹಾರಾಟವನ್ನು ವಿಳಂಬಿಸಿತ್ತು ಎಂದು ಎಮಿರೇಟ್ಸ್ ಅಧ್ಯಕ್ಷ ಟಿಮ್ ಕ್ಲಾರ್ಕ್ ಬಿಡುಗಡೆಗೊಳಿಸಿರುವ ಹೇಳಿಕೆಯೊಂದು ತಿಳಿಸಿದೆ.
ಚಂಡಮಾರುತದ ಪರಿಣಾಮವಾಗಿ, ದುಬೈಯಿಂದ ಹೊರಡುವ ಪ್ರಯಾಣಿಕರ ವಿಮಾನಗಳನ್ನು ವಾಯುಯಾನ ಕಂಪೆನಿಯು ರದ್ದುಗೊಳಿಸಿತ್ತು. ಅದೂ ಅಲ್ಲದೆ, ದುಬೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬೇರೆ ವಿಮಾನಗಳಿಂದ ಬರುವ ಪ್ರಯಾಣಿಕರನ್ನು ಕರೆದುಕೊಂಡು ಹೋಗುವ ಸೇವೆಯನ್ನೂ ನಿಲ್ಲಿಸಿತ್ತು. ಇದರಿಂದಾಗಿ ಸಾವಿರಾರು ಪ್ರಯಾಣಿಕರು ದುಬೈಯಲ್ಲಿ ಸಿಕ್ಕಿಹಾಕಿಕೊಂಡಿದ್ದರು.
ಪ್ರವಾಹದ ನೀರು ವಿಮಾನ ನಿಲ್ದಾಣಕ್ಕೆ ನುಗ್ಗಿದ ಪರಿಣಾಮವಾಗಿ ತನ್ನ ಸಾಮಾನ್ಯ ಚಟುವಟಿಕೆಗಳನ್ನು ಪುನಾರಂಭಿಸಲು ಅದು ಪರದಾಡಿತ್ತು. ಹಾಗಾಗಿ, ವಿಮಾನಗಳನ್ನು ಬೇರೆಡೆಗೆ ತಿರುಗಿಸಲಾಗಿತ್ತು, ವಿಳಂಬಿಸಲಾಗಿತ್ತು ಮತ್ತು ರದ್ದುಗೊಳಿಸಲಾಗಿತ್ತು.
ಈತ ಎರಡೂ ವಿಮಾನಯಾನ ಸಂಸ್ಥೆಗಳು ವಿಮಾನ ನಿಲ್ದಾಣದಲ್ಲಿ ತಮ್ಮ ಸಂಪೂರ್ಣ ಸಾಮರ್ಥ್ಯದ ಕಾರ್ಯಾಚರಣೆಗೆ ಶನಿವಾರ ಮರಳಿವೆ.
ಸಿಕ್ಕಿಹಾಕಿಕೊಂಡಿರುವ ಪ್ರಯಾಣಿಕರಿಗೆ ಎಮಿರೇಟ್ಸ್ 12,000 ಹೊಟೇಲ್ ಕೋಣೆಗಳು ಮತ್ತು 2,50,000 ಊಟಗಳನ್ನು ಒದಗಿಸಿದೆ ಎಂದು ಕ್ಲಾರ್ಕ್ ತಿಳಿಸಿದರು. ರದ್ದಾಗಿರುವ ವಿಮಾನಗಳ ಪ್ರಯಾಣಿಕರನ್ನು ಅವರ ಸ್ಥಳಗಳಿಗೆ ತಲುಪಿಸಲು ಕೆಲವು ದಿನಗಳು ಬೇಕಾಗುತ್ತವೆ ಎಂದು ಅವರು ಹೇಳಿದರು.