Fact-Check: ಇಸ್ರೇಲ್-ಹಮಾಸ್ ಸಂಘರ್ಷ: ಅನಿಲ ಪೂರೈಕೆ ಸ್ಥಗಿತಗೊಳಿಸಲಿದೆಯೇ ಕತರ್?
ಹೊಸದಿಲ್ಲಿ: ತನ್ನ ನೆಲದ ಮೇಲೆ ಹಮಾಸ್ ದಾಳಿಯ ಬೆನ್ನಲ್ಲೇ ಗಾಝಾ ಮೇಲೆ ದಾಳಿಯನ್ನು ಆರಂಭಿಸಿರುವ ಇಸ್ರೇಲ್ ತನ್ನ ದಾಳಿಯನ್ನು ನಿಲ್ಲಿಸದೇ ಇದ್ದರೆ ಜಾಗತಿಕ ಅನಿಲ ಪೂರೈಕೆಯನ್ನು ಸ್ಥಗಿತಗೊಳಿಸುವುದಾಗಿ ಕತರ್‌ನ ಅಮೀರ್ ಶೇಖ್ ತಮೀಮ್ ಬಿನ್ ಹಮದ್ ಅಲ್-ಥಾನಿ ಅವರು ಎಚ್ಚರಿಕೆ ನೀಡಿದ್ದಾರೆಂದು ಹೇಳಲಾದ ಸುದ್ದಿ ಕಳೆದ ಕೆಲ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಆದರೆ ಈ ಕುರಿತು ಪರಿಶೀಲಿಸಿದಾಗ ಹಾಗೂ ಸತ್ಯ ಶೋಧನೆಗೆ ಮುಂದಾದಾಗ ಈ ಸುದ್ದಿಗಳು ಸುಳ್ಳು ಎಂದು ತಿಳಿದು ಬಂದಿದೆ. ಕತರ್ ಸರ್ಕಾರಿ ಮೂಲಗಳಿಂದ ಅಥವಾ ಅಕ್ಟೋಬರ್ 13ರಂದು ಕತರ್‌ಗೆ ಭೇಟಿ ನೀಡಿದ್ದ ಅಮೆರಿಕಾದ ಸೆಕ್ರಟರಿ ಆಫ್ ಸ್ಟೇಟ್ ಆಂಟನಿ ಬ್ಲಿಂಕೆನ್ ಅವರು ಈ ಕುರಿತು ಯಾವುದೇ ಹೇಳಿಕೆ ನೀಡಿಲ್ಲ. ಬ್ಲಿಂಕೆನ್ ಭೇಟಿಯ ವೇಳೆ ನಡೆದ ಸುದ್ದಿ ಗೋಷ್ಠಿಯಲ್ಲಿ ಅನಿಲ ಪೂರೈಕೆ ವಿಚಾರ ಬಂದಿಲ್ಲ.
ಅಷ್ಟಕ್ಕೂ ಈ ಸುಳ್ಳು ಸುದ್ದಿಯನ್ನು ಮೊದಲು ಪೋಸ್ಟ್ ಮಾಡಿದ್ದ ಟ್ವಿಟರ್ ಖಾತೆ @qattar_affairs," (ಹಿಂದೆ ಅದು "@Qatar_Affairs" ಆಗಿತ್ತು) ಈಗ ಅಮಾನತುಗೊಂಡಿದೆ. ಕತರ್‌ನ ಹಮದ್ ಬಿನ್ ಖಲೀಫಾ ವಿವಿಯಲ್ಲಿ ಪ್ರೊಫೆಸರ್ ಆಗಿರುವ ಮಾರ್ಕ್ ಓವೆನ್ ಜೋನ್ಸ್ ಅವರು ಈ ಖಾತೆಯ ಪೋಸ್ಟ್‌ಗಳು ನಕಲಿ ಎಂದು ಹೇಳಿದ್ದಾರೆ.
ಜಗತ್ತಿನಲ್ಲಿ ನೈಸರ್ಗಿಕ ಅನಿಲದ ಅತ್ಯಂತ ದೊಡ್ಡ ರಫ್ತುದಾರ ದೇಶ ಕತರ್ ಆಗಿದೆ. ಆದರೆ ಕತರ್ ಸರ್ಕಾರ ಅಥವಾ ಅದರ ಅಧಿಕಾರಿಗಳು ಅನಿಲ ಪೂರೈಕೆ ಸ್ಥಗಿತಗೊಳಿಸುವಂತಹ ಯಾವುದೇ ಹೇಳಿಕೆ ನೀಡದೇ ಇರುವುದರಿಂದ ಸಾಮಾಜಿಕ ಜಾಲತಾಣಗಳಲ್ಲಿ ಹರಡಿರುವ ಸುದ್ದಿ ಸುಳ್ಳು ಎಂದು ಸಾಬೀತಾಗಿದೆ.