ಹಜ್ ಯಾತ್ರೆ: ಮಕ್ಕಳಿಗೆ ನಿಷೇಧ ಸೇರಿದಂತೆ ವೀಸಾ ನಿರ್ಬಂಧಗಳನ್ನು ಪ್ರಕಟಿಸಿದ ಸೌದಿ ಅರೇಬಿಯಾ

ಸಾಂದರ್ಭಿಕ ಚಿತ್ರ | PC : PTI
ರಿಯಾದ್: 2025ರ ಹಜ್ ಯಾತ್ರೆಗೆ ಗಮನಾರ್ಹ ಬದಲಾವಣೆಗಳನ್ನು ಮಾಡಿರುವ ಸೌದಿ ಅರೇಬಿಯಾ, ಮಕ್ಕಳ ಮೇಲೆ ನಿಷೇಧ ಹಾಗೂ ವೀಸಾ ನಿರ್ಬಂಧಗಳು ಸೇರಿದಂತೆ ಹಲವು ಬದಲಾವಣೆಗಳನ್ನು ಜಾರಿಗೊಳಿಸಿದೆ.
ಈ ವಾರ್ಷಿಕ ಯಾತ್ರೆಯ ಸಂದರ್ಭದಲ್ಲಿ ಏರ್ಪಡುವ ಜನದಟ್ಟಣೆಯ ಹಿನ್ನೆಲೆಯಲ್ಲಿ ಮಕ್ಕಳನ್ನು ರಕ್ಷಿಸಲು ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದು ಹಜ್ ಮತ್ತು ಉಮ್ರಾ ಸಚಿವಾಲಯ ಹೇಳಿದೆ.
ಮಕ್ಕಳನ್ನು ಜನದಟ್ಟಣೆಯ ಅಪಾಯದಿಂದ ರಕ್ಷಿಸಲು ಹಾಗೂ ಯಾತ್ರೆಯ ಅನುಭವವನ್ನು ಮತ್ತಷ್ಟು ಸೀಮಾತೀತಗೊಳಿಸಲು ಹಜ್ ಯಾತ್ರೆಗೆ ಮಕ್ಕಳನ್ನು ನಿಷೇಧಿಸಲಾಗಿದೆ. ಅಪಾಯಕಾರಿ ಸನ್ನಿವೇಶಗಳಲ್ಲಿ ಭಾರಿ ಜನಜಂಗುಳಿಯನ್ನು ನಿಯಂತ್ರಿಸಬೇಕಾಗುವುದರಿಂದ ಹಜ್ ಸಂದರ್ಭದಲ್ಲಿ ಸಣ್ಣ ಮಕ್ಕಳು ಗಂಭೀರ ಅಪಾಯಕ್ಕೊಳಗಾಗುವ ಸಾಧ್ಯತೆ ಇದೆ ಎಂದು ಸಚಿವಾಲಯ ಒತ್ತಿ ಹೇಳಿದೆ.
ಇದರೊಂದಿಗೆ, 2025ರ ಹಜ್ ಯಾತ್ರೆ ಕೈಗೊಳ್ಳಲು ಮೊದಲ ಬಾರಿಯ ಯಾತ್ರಾರ್ಥಿಗಳಿಗೆ ಆದ್ಯತೆ ನೀಡಲಾಗಿದೆ. ಎಷ್ಟು ಸಾಧ್ಯವೊ ಅಷ್ಟು ಮುಸ್ಲಿಮರಿಗೆ ತಮ್ಮ ಜೀವಮಾನದಲ್ಲಿ ಒಮ್ಮೆಯಾದರೂ ಈ ಪವಿತ್ರ ಯಾತ್ರೆಯ ಅವಕಾಶ ಮಾಡಿಕೊಡಲು ಸೌದಿ ಅರೇಬಿಯಾ ಈ ಕ್ರಮಕ್ಕೆ ಮುಂದಾಗಿದೆ.
ಇದಲ್ಲದೆ, ಹಜ್ ಯಾತ್ರೆಯಲ್ಲಿ ಅನಧಿಕೃತ ಪಾಲ್ಗೊಳ್ಳುವಿಕೆಯನ್ನು ತಡೆಯಲು ಸೌದಿ ಅರೇಬಿಯಾ ತನ್ನ ವೀಸಾ ನೀತಿಯಲ್ಲಿ ಪ್ರಮುಖ ಬದಲಾವಣೆಗಳನ್ನು ಘೋಷಿಸಿದೆ.
ಫೆಬ್ರವರಿ 1, 2025ರಿಂದ ಭಾರತ ಸೇರಿದಂತೆ 14 ದೇಶಗಳ ನಿವಾಸಿಗಳು ಮಾತ್ರ ಏಕಪ್ರವೇಶ ವೀಸಾ(Single entry visa)ಗಳಿಗೆ ಅರ್ಹರಾಗಲಿದ್ದಾರೆ. ಈ ನಡೆಯು ಬಹುಪ್ರವೇಶ ವೀಸಾಗಳ ದುರ್ಬಳಕೆಯನ್ನು ಮಟ್ಟ ಹಾಕುವ ಉದ್ದೇಶ ಹೊಂದಿದ್ದು, ಕೆಲವು ಪ್ರವಾಸಿಗರು ಅಧಿಕೃತ ನೋಂದಣಿ ಇಲ್ಲದೆ ಹಜ್ ನಲ್ಲಿ ಭಾಗವಹಿಸುತ್ತಿರುವುದಿಂದ ಈ ನೀತಿಯನ್ನು ಜಾರಿಗೊಳಿಸಲಾಗಿದೆ.