ಖತರ್: ಮಂಗಳೂರಿನ ಅನಿವಾಸಿ ಭಾರತೀಯ ಅಬ್ದುಲ್ಲಾ ಮೋನುರಿಗೆ ಐಸಿಸಿ ದೀರ್ಘಕಾಲೀನ ನಿವಾಸಿ ಗೌರವ ಪ್ರದಾನ
ಮಂಗಳೂರು: ಮಂಗಳೂರಿನ ಅನಿವಾಸಿ ಭಾರತೀಯ ಅಬ್ದುಲ್ಲಾ ಮೋನು ಮೊಯ್ದೀನ್ ಅವರಿಗೆ ಖತರ್ ನಲ್ಲಿನ ಭಾರತೀಯ ರಾಜತಾಂತ್ರಿಕ ಕಚೇರಿಯ ಸಹಯೋಗದೊಂದಿಗೆ ಇಂಡಿಯನ್ ಕಲ್ಚರಲ್ ಸೆಂಟರ್ (ICC) ವತಿಯಿಂದ ಐಸಿಸಿ ದೀರ್ಘಕಾಲೀನ ನಿವಾಸಿ ಪ್ರಶಸ್ತಿ 24 ಅನ್ನು ಪ್ರದಾನ ಮಾಡಲಾಯಿತು.
ಖತರ್ ನ ದೋಹಾದ ಮ್ಯೂಸಿಯಂ ಆಫ್ ಇಸ್ಲಾಮಿಕ್ ಆರ್ಟ್ ಪಾರ್ಕ್ ನಲ್ಲಿ ಹಮ್ಮಿಕೊಳ್ಳಲಾಗಿದ್ದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಖತರ್ ನಲ್ಲಿರುವ ಯೂರೋ ಗ್ರೂಪ್ ನ ಆಡಳಿತ ನಿರ್ದೇಶಕ ಅಬ್ದುಲ್ಲಾ ಮೋನು ಅವರು ತಮ್ಮ 43 ವರ್ಷಗಳ ದೋಹಾ ವಾಸ್ತವ್ಯದಲ್ಲಿ ಮಾಡಿರುವ ಅದ್ಭುತ ಸಾಮುದಾಯಿಕ ಸೇವೆಯನ್ನು ಗುರುತಿಸಿ, ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅಬ್ದುಲ್ಲಾ ಮೋನು, “ನಾನು ಈ ಪ್ರಶಸ್ತಿಯನ್ನು ಖತರ್ ನ ಐಸಿಸಿ ಮತ್ತು ಭಾರತದ ರಾಜತಾಂತ್ರಿಕ ಕಚೇರಿಯಿಂದ ಸ್ವೀಕರಿಸುವ ಮೂಲಕ ಗೌರವಕ್ಕೆ ಭಾಜನನಾಗಿದ್ದೇನೆ. ನಾನು ಕಳೆದ 43 ವರ್ಷಗಳಿಂದ ಖತರ್ ನಲ್ಲಿ ವಾಸಿಸುತ್ತಿರುವುದು ನನಗೆ ಮತ್ತು ನನ್ನ ಕುಟುಂಬಕ್ಕೆ ಒಂದು ಅದ್ಭುತ ಅನುಭವ. ನಮಗೆ ಅವಕಾಶ ಮತ್ತು ಅದ್ಭುತ ಜೀವನವನ್ನು ನೀಡಿದ ಈ ಸುಂದರ ದೇಶಕ್ಕೆ ನಾವು ಆಭಾರಿಗಳಾಗಿರುತ್ತೇವೆ” ಎಂದು ಕೃತಜ್ಞತೆ ಅರ್ಪಿಸಿದರು.