ದುಬೈ: ಎನ್‌ಆರ್‌ಐ ಉದ್ಯಮಿ ನಾಸಿರ್ ಸೈಯದ್‌ಗೆ ಐಕನ್ಸ್ ಆಫ್ ಯುಎಇ ಅವಾರ್ಡ್
ದುಬೈ: ದುಬೈನ ದಿ ಪಾಮ್‌ನಲ್ಲಿನ ತಾಜ್ ಎಕ್ಸೋಟಿಕಾ ಹೋಟೆಲ್‌ನಲ್ಲಿ ಆಯೋಜಿಸಲಾಗಿದ್ದ ವರ್ಣರಂಜಿತ ಸಮಾರಂಭವೊಂದರಲ್ಲಿ ಅನಿವಾಸಿ ಭಾರತೀಯ ಉದ್ಯಮಿ ನಾಸಿರ್ ಸೈಯದ್ ಅವರಿಗೆ ಎನ್‌ಕೆಎನ್ ಮಾಧ್ಯಮ ಸಂಸ್ಥೆಯ ವತಿಯಿಂದ ‘ಐಕನ್ಸ್ ಆಫ್ ಯುಎಇ’ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ವಿವಿಧ ಉದ್ಯಮ ವಲಯಗಳ 16 ಪ್ರಖ್ಯಾತ ಉದ್ಯಮ ನಾಯಕರಿಗೆ ಪ್ರಶಸ್ತಿ ಪ್ರದಾನ ಮಾಡಿದ ಈ ಸಮಾರಂಭದಲ್ಲಿ ಕೇಂದ್ರದ ವಿದೇಶಾಂಗ ವ್ಯವಹಾರಗಳ ಮಾಜಿ ರಾಜ್ಯ ಸಚಿವ, ಸಂಸದ ಹಾಗೂ ಖ್ಯಾತ ಲೇಖಕ ಶಶಿ ತರೂರ್ ಉಪಸ್ಥಿತರಿದ್ದರು. ಅವರು ನಾಸಿರ್ ಸೈಯದ್ ಅವರಿಗೆ ಪ್ರಶಸ್ತಿಯನ್ನು ಪ್ರದಾನ ಮಾಡಿದರು.
ಮೂಲತಃ ಮೂಡುಬಿದಿರೆಯವರಾದ, ಸೈಯದ್ ಮೊಹಿದಿನ್ ಅವರ ಪುತ್ರರಾದ ನಾಸಿರ್ ಸೈಯದ್, ಯುಎಇಯಲ್ಲಿ ಪ್ರಖ್ಯಾತ ಉದ್ಯಮಿ ಹಾಗೂ ಅಂತಾರಾಷ್ಟ್ರೀಯ ಸೂಪರ್ ಬೈಕ್ ರೇಸರ್ ಆಗಿ ಗುರುತಿಸಿಕೊಂಡಿದ್ದಾರೆ. ಅವರು ದುಬೈಯಲ್ಲಿ ಕ್ರಿಯೇಟಿವ್ ಹೌಸ್ ಸ್ಕ್ಯಾಫೋಲ್ಡಿಂಗ್ ಸಂಸ್ಥೆಯ ಸ್ಥಾಪಕ ಹಾಗೂ ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ.
ಈ ಪ್ರತಿಷ್ಠಿತ ಸಮಾರಂಭವನ್ನು ಭಾರತದ ಮುಂಚೂಣಿ ಮಾಧ್ಯಮ ಸಂಸ್ಥೆಯಾದ ‘ಇಂಡಿಯಾ ಟುಡೇ’ ಸಮೂಹದ ಸಹಯೋಗದಲ್ಲಿ ಏರ್ಪಡಿಸಲಾಗಿತ್ತು. ‘ಇಂಡಿಯಾ ಟುಡೇ’ ಹಾಗೂ ‘ಆಜ್ ತಕ್’ ಚಾನಲ್ ಗಳು ಕಾರ್ಯಕ್ರಮವನ್ನು ಪ್ರಸಾರ ಮಾಡಿದ್ದವು. ದೂರದೃಷ್ಟಿಯ ನಾಯಕರು ಯುಎಇ ಉದ್ಯಮ ವಲಯ ಹಾಗೂ ಸಮಯದಾಯದ ಮೇಲೆ ಬೀರಿರುವ ಧನಾತ್ಮಕ ಪರಿಣಾಮಗಳನ್ನು ಗುರುತಿಸುವ ಉದ್ದೇಶ ಈ ಪ್ರಶಸ್ತಿಗಿದೆ.
ವಿವೇಕ್ ಒಬೆರಾಯ್ ಹಾಗೂ ಸಲ್ಮಾನ್ ಯೂಸುಫ್ ಖಾನ್ ಸೇರಿದಂತೆ ಖ್ಯಾತ ನಟರು ಹಾಗೂ ಪ್ರಭಾವಿ ವ್ಯಕ್ತಿಗಳು ಈ ಕಾರ್ಯಕ್ರಮಕ್ಕೆ ಪ್ರಚಾರ ನೀಡಿದ್ದರು. ಭಾರತದ ಖ್ಯಾತ ಪತ್ರಕರ್ತ ಹಾಗೂ ಸುದ್ದಿ ನಿರೂಪಕ ರಾಜ್‌ದೀಪ್ ಸರ್ದೇಸಾಯಿ ಈ ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಈ ಸಮಾರಂಭವು ಈ ಉದ್ಯಮ ನಾಯಕರ ಸ್ಫೂರ್ತಿದಾಯಕ ಪಯಣಗಳು ಹಾಗೂ ತಮ್ಮ ಕನಸನ್ನು ನನಸು ಮಾಡಿಕೊಂಡ ಹಾದಿಯ ಅನುಭವಗಳನ್ನು ಹಂಚಿಕೊಳ್ಳಲು ವೇದಿಕೆಯಾಯಿತು. ಈ ಪ್ರಭಾವಿಗಳ ಅನುಭವಗಳು ಹಾಗೂ ಸಾಧನೆಗಳ ಕುರಿತು ವೀಕ್ಷಕರಿಗೆ ಬೆಳಕು ಚೆಲ್ಲುವ ತಲಾ 30 ನಿಮಿಷಗಳ ಅವಧಿಯ ಸಂಚಿಕೆಗಳು ಸುದ್ದಿ ವಾಹಿನಿಗಳಲ್ಲಿ ಪ್ರಸಾರವಾಗಲಿವೆ.