ರಣಜಿ ಟ್ರೋಫಿ ಕ್ವಾರ್ಟರ್ ಫೈನಲ್ | ತಮಿಳುನಾಡು ವಿರುದ್ಧ ವಿದರ್ಭ ತಂಡಕ್ಕೆ ಭರ್ಜರಿ ಮುನ್ನಡೆ

PC : NDTV
ನಾಗ್ಪುರ: ವೇಗದ ಬೌಲರ್ ಆದಿತ್ಯ ಠಾಕ್ರೆ ಆರನೇ ಬಾರಿ ಕಬಳಿಸಿದ ಐದು ವಿಕೆಟ್ ಗೊಂಚಲು ಹಾಗೂ ಯಶ್ ರಾಥೋಡ್ ಅರ್ಧಶತಕದ ಕೊಡುಗೆಯ ನೆರವಿನಿಂದ ತಮಿಳುನಾಡು ವಿರುದ್ಧದ ರಣಜಿ ಟ್ರೋಫಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ವಿದರ್ಭ ಕ್ರಿಕೆಟ್ ತಂಡವು 2ನೇ ಇನಿಂಗ್ಸ್ನಲ್ಲಿ 297 ರನ್ ಮುನ್ನಡೆ ಪಡೆದಿದೆ.
ತನ್ನ ಮೊದಲ ಇನಿಂಗ್ಸ್ನಲ್ಲಿ 353 ರನ್ ಗಳಿಸಿದ್ದ ವಿದರ್ಭ ತಂಡ ಠಾಕ್ರೆ (5/34)ಅವರ ಅಮೋಘ ಬೌಲಿಂಗ್ ನೆರವಿನಿಂದ ತಮಿಳುನಾಡು ತಂಡವನ್ನು 225 ರನ್ಗೆ ನಿಯಂತ್ರಿಸಿತು.
ಈ ಋತುವಿನಲ್ಲಿ ಅಜೇಯ ದಾಖಲೆ ಕಾಯ್ದುಕೊಂಡಿರುವ ವಿದರ್ಭ ನಿಧಾನಗತಿಯ ಆರಂಭದಿಂದ ಚೇತರಿಸಿಕೊಂಡು ಸೋಮವಾರ 3ನೇ ದಿನದಾಟದಂತ್ಯಕ್ಕೆ 5 ವಿಕೆಟ್ಗಳ ನಷ್ಟಕ್ಕೆ 169 ರನ್ ಗಳಿಸಿತು. ರಾಥೋಡ್ ಔಟಾಗದೆ 55 ರನ್ ಗಳಿಸಿದ್ದು, ಹರ್ಷ್ ದುಬೆ(ಔಟಾಗದೆ 29) ಕ್ರೀಸ್ ಕಾಯ್ದುಕೊಂಡಿದ್ದಾರೆ.
*ಕೇರಳದ ವಿರುದ್ಧ ಜಮ್ಮು-ಕಾಶ್ಮೀರಕ್ಕೆ ಮುನ್ನಡೆ:
ನಾಯಕ ಪರಾಸ್ ಡೊಗ್ರಾ ಅವರ ನಿರ್ಣಾಯಕ ಇನಿಂಗ್ಸ್(ಔಟಾಗದೆ 73)ನೆರವಿನಿಂದ ರಣಜಿ ಟ್ರೋಫಿ ಕ್ವಾರ್ಟರ್ ಫೈನಲ್ನಲ್ಲಿ ಸೋಮವಾರ ಜಮ್ಮು-ಕಾಶ್ಮೀರ ತಂಡ ಕೇರಳದ ವಿರುದ್ಧ 179 ರನ್ ಮುನ್ನಡೆ ಸಾಧಿಸಿದೆ.
ಪುಣೆಯಲ್ಲಿ ನಡೆದ ಪಂದ್ಯದಲ್ಲಿ 3ನೇ ದಿನದಾಟದಂತ್ಯಕ್ಕೆ ಕಾಶ್ಮೀರ ತಂಡವು 2ನೇ ಇನಿಂಗ್ಸ್ನಲ್ಲಿ 3 ವಿಕೆಟ್ಗಳ ನಷ್ಟಕ್ಕೆ 180 ರನ್ ಗಳಿಸಿದೆ. ಪರಾಸ್ಗೆ ಕನ್ಹಯ್ಯಾ ವಧ್ವಾನ್(ಔಟಾಗದೆ 42)ಸಾಥ್ ನೀಡುತ್ತಿದ್ದಾರೆ.
ಸೋಮವಾರ 9 ವಿಕೆಟ್ಗಳ ನಷ್ಟಕ್ಕೆ 200 ರನ್ನಿಂದ ಬ್ಯಾಟಿಂಗ್ ಮುಂದುವರಿಸಿದ ಕೇರಳ ತಂಡವು ಸಲ್ಮಾನ್ ನಿಝಾರ್(112 ರನ್)ಶತಕದ ಹೊರತಾಗಿಯೂ 281 ರನ್ ಗಳಿಸಿ ಕೇವಲ 1 ರನ್ ಮುನ್ನಡೆ ಪಡೆಯಿತು. ಕಾಶ್ಮೀರದ ಪರ ಆಕಿಬ್ ನಬಿ(6-53)ಐದು ವಿಕೆಟ್ ಗೊಂಚಲು ಪಡೆದರು.
*ಪಟೇಲ್ದ್ವಯರ ಶತಕ, ಸೆಮಿ ಫೈನಲ್ ಅಂಚಿನಲ್ಲಿ ಗುಜರಾತ್
ಜಯ್ಮೀತ್ ಪಟೇಲ್ ಹಾಗೂ ಉರ್ವಿಲ್ ಪಟೆಲ್ ಅವರ ಶತಕದ ಬಲದಿಂದ ಗುಜರಾತ್ ತಂಡವು ಸೌರಾಷ್ಟ್ರ ತಂಡದ ವಿರುದ್ಧದ ಕ್ವಾರ್ಟರ್ ಫೈನಲ್ನಲ್ಲಿ ಮೇಲುಗೈ ಸಾಧಿಸಿದ್ದು, ಸೆಮಿ ಫೈನಲ್ ಸನಿಹದಲ್ಲಿದೆ.
ಸೌರಾಷ್ಟ್ರ ತಂಡವನ್ನು 216 ರನ್ಗೆ ನಿಯಂತ್ರಿಸಿದ ಗುಜರಾತ್ ತಂಡವು ತನ್ನ ಮೊದಲ ಇನಿಂಗ್ಸ್ನಲ್ಲಿ 511 ರನ್ ಗಳಿಸಿ 295 ರನ್ ಮುನ್ನಡೆ ಪಡೆದಿದೆ. ಈ ಮೂಲಕ ಚಿಂತನ್ ಗಜ ನೇತೃತ್ವದ ತಂಡ ಪಂದ್ಯದಲ್ಲಿ ಬಿಗಿ ಹಿಡಿತ ಸಾಧಿಸಿದೆ.
ಮನನ್ ಹಿಂಗ್ರಾಜಿಯ(83ರನ್)ಭದ್ರ ಬುನಾದಿ ಹಾಕಿಕೊಟ್ಟರು. ಎಡಗೈ ಬ್ಯಾಟರ್ ಜಯಮೀತ್(103 ರನ್)ಹಾಗೂ ಉರ್ವಿಲ್ ಪಟೇಲ್(140 ರನ್)ಗುಜರಾತ್ ತಂಡವು ಬೃಹತ್ ಮೊತ್ತ ಗಳಿಸಲು ನೆರವಾದರು. ಧರ್ಮೇಂದ್ರ ಜಡೇಜ(5-120)ಐದು ವಿಕೆಟ್ ಗೊಂಚಲು ಪಡೆದಿದ್ದಾರೆ.
*ಮುಂಬೈಗೆ 292 ರನ್ ಮುನ್ನಡೆ
ನಾಯಕ ಅಜಿಂಕ್ಯ ರಹಾನೆ(ಔಟಾಗದೆ 88, 142 ಎಸೆತ)ಹಾಗೂ ಸೂರ್ಯಕುಮಾರ್ ಯಾದವ್(70 ರನ್, 86 ಎಸೆತ)ಅರ್ಧಶತಕದ ಕೊಡುಗೆಯ ನೆರವಿನಿಂದ ಮುಂಬೈ ತಂಡವು ರಣಜಿ ಟ್ರೋಫಿಯ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಹರ್ಯಾಣ ತಂಡದ ವಿರುದ್ಧ 292 ಮುನ್ನಡೆ ಸಾಧಿಸಿದೆ.
ತನ್ನ ಮೊದಲ ಇನಿಂಗ್ಸ್ನಲ್ಲಿ 315 ರನ್ ಗಳಿಸಿದ್ದ ಮುಂಬೈ ತಂಡವು 3ನೇ ದಿನದಾಟವಾದ ಸೋಮವಾರ ಹರ್ಯಾಣ ತಂಡವನ್ನು ಮೊದಲ ಇನಿಂಗ್ಸ್ನಲ್ಲಿ 301ರನ್ಗೆ ನಿಯಂತ್ರಿಸಿ ಕೇವಲ 14 ರನ್ ಇನಿಂಗ್ಸ್ ಮುನ್ನಡೆ ಪಡೆಯಿತು. ಮುಂಬೈ ಪರ ವೇಗಿ ಶಾರ್ದೂಲ್ ಠಾಕೂರ್(6-58)ಯಶಸ್ವಿ ಬೌಲರ್ ಎನಿಸಿಕೊಂಡರು. ತನುಷ್ ಕೋಟ್ಯಾನ್(2-57) ಹಾಗೂ ಮುಲಾನಿ(2-68) ತಲಾ ಎರಡು ವಿಕೆಟ್ಗಳನ್ನು ಪಡೆದರು.
ತನ್ನ 2ನೇ ಇನಿಂಗ್ಸ್ ಆರಂಭಿಸಿರುವ ಮುಂಬೈ ತಂಡವು ದಿನದಾಟದಂತ್ಯಕ್ಕೆ 4 ವಿಕೆಟ್ಗಳ ನಷ್ಟಕ್ಕೆ 278 ರನ್ ಗಳಿಸಿದ್ದು,ರಹಾನೆ ಹಾಗೂ ಶಿವಂ ದುಬೆ(ಔಟಾಗದೆ 30) ಕ್ರೀಸ್ ಕಾಯ್ದುಕೊಂಡಿದ್ದಾರೆ. ಸಿದ್ದೇಶ್ ಲಾಡ್(43 ರನ್)ಹಾಗೂ ಆಯುಷ್ ಮ್ಹಾತ್ರೆ(31 ರನ್)ಎರಡಂಕೆಯ ಸ್ಕೋರ್ ಗಳಿಸಿದರು.
ಹರ್ಯಾಣದ ಬೌಲಿಂಗ್ ವಿಭಾಗದಲ್ಲಿ ಅನುಜ್ ಥಕ್ರಾಲ್(2-61)ಎರಡು ವಿಕೆಟ್ ಪಡೆದಿದ್ದಾರೆ.