ಕೋಟೆಕಾರು ನಿವಾಸಿ ರಿಯಾದ್ ನಲ್ಲಿ ನಿಧನ; ಮೃತದೇಹ ಊರಿಗೆ ತಲುಪಿಸಲು ಸಹಕರಿಸಿದ ಕೆಸಿಎಫ್
ರಿಯಾದ್: ಕಳೆದವಾರ ರಿಯಾದ್ ನ ನಸೀಂ ಪ್ರಾಂತ್ಯದ ಪಾಕಿಸ್ತಾನಿ ಓರ್ವರ ಸಂಸ್ಥೆ ಯಲ್ಲಿ ಉದ್ಯೋಗದಲ್ಲಿ ಇದ್ದ ಪುರೋಶೋತಮ ಅಡ್ಕರವರು ಹೃದಯಾಘಾತದಿಂದ ಮರಣ ಹೊಂದಿದ್ದರು. ಇವರ ಮೃತದೇಹವನ್ನು ಊರಿಗೆ ತಲುಪಿಸುವ ಕೆಲಸವು ಕರ್ನಾಟಕ ಕಲ್ಚರಲ್ ಫೌಂಡೇಶನ್ (ಕೆಸಿಎಫ್) ರಿಯಾದ್ ಝೋನ್ ಸಾಂತ್ವನ ಇಲಾಖೆಯ ನೇತೃತ್ವದಲ್ಲಿ ನಡೆಯಿತು.
ಮರಣ ವಾರ್ತೆ ತಿಳಿದ ಕೂಡಲೇ ಅನಿವಾಸಿ ಕನ್ನಡಿಗರ ಸಂಘಟನೆಯಾದ ಕರ್ನಾಟಕ ಕಲ್ಚರಲ್ ಫೌಂಡೇಶನ್ (ಕೆಸಿಎಫ್) ರಿಯಾದ್ ಝೋನ್ ಸಾಂತ್ವನ ಇಲಾಖೆಯ ನಾಯಕರು ಹಾಗೂ ಕಾರ್ಯಕರ್ತರು ಸ್ಥಳಕ್ಕೆ ಧಾವಿಸಿದ್ದಾರೆ.
ಸೌದಿ ಅರೇಬಿಯಾದಲ್ಲಿ ನಿಧನರಾಗುವ ಅನಿವಾಸಿಗಳ ಮೃತದೇಹವನ್ನು ಇಲ್ಲಿ ದಫನ ಮಾಡುವುದು ಅಥವಾ ಊರಿಗೆ ಕೊಂಡೊಯ್ಯುವುದಿದ್ದರೆ ವಲಸೆ ನೀತಿಗೆ ಸಂಬಂಧಿಸಿದ ಹಲವಾರು ದಾಖಲೆ ಪತ್ರಗಳನ್ನು ಸರಿಪಡಿಸಬೇಕಾದ ಅಗತ್ಯವಿದೆ. ಈ ನಿಟ್ಟಿನಲ್ಲಿ ಭಾರತೀಯ ಧೂತವಾಸ ಕೇಂದ್ರ, ಸ್ಥಳೀಯ ಆರೋಗ್ಯ ಇಲಾಖೆ, ಸೌದಿ ವಲಸೆ ಪ್ರಾಧಿಕಾರ, ಪೊಲೀಸ್ ಹಾಗೂ ಕಾರ್ಮಿಕ ಇಲಾಖೆ ಸೇರಿದಂತೆ ವಿವಿಧ ಕಡೆಗಳಿಂದ ಸಿಗಬೇಕಾದ ದಾಖಲೆಗಳನ್ನು ಸರಿಪಡಿಸಲು ಕೆಸಿಎಫ್ ಸಾಂತ್ವನ ಇಲಾಖೆಯ ನಾಯಕರಾದ ಮಜೀದ್ ವಿಟ್ಲ, ದಮಾಂ ಝೋನ್ ಸಾಂತ್ವನ ವಿಭಾಗದ ಅಧ್ಯಕ್ಷ ಬಾಷಾ ಗಂಗಾವಳಿ, ಅಶ್ರಫ್ ಕೆಎಮ್ ಎಸ್ ಮುಂಚೂಣಿಯಲ್ಲಿದ್ದು ಕೆಲಸ ಮಾಡಿದ್ದಾರೆ.
ಕೆಸಿಎಫ್ ರಿಯಾದ್ ಝೋನ್ ನಾಯಕರು ತಮ್ಮ ಕೆಲಸ ಕಾರ್ಯಗಳನ್ನು ಬದಿಗಿಟ್ಟು ಇದಕ್ಕಾಗಿ ಶ್ರಮಿಸಿದರ ಫಲವಾಗಿ ಅತೀ ಶೀಘ್ರದಲ್ಲಿ ಎಲ್ಲಾ ದಾಖಲೆಗಳನ್ನು ಸರಿಪಡಿಸಿ ಮೃತದೇಹವನ್ನು ಊರಿಗೆ ಕಳುಹಿಸಲು ಸಾಧ್ಯವಾಯಿತು. ಕೆಸಿಎಫ್ ರಿಯಾದ್ ತಂಡದ ಈ ಸೇವೆಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸೆಪ್ಟೆಂಬರ್15 ರಂದು ಆದಿತ್ಯವಾರ ಬೆಳಿಗ್ಗೆ ಮಂಗಳೂರು ವಿಮಾನ ನಿಲ್ದಾಣಕ್ಕೆ ತಲುಪಿದ ಮೃತದೇಹವನ್ನು ಮೃತರ ಸಂಬಂಧಿ ಲೋಕೇಶ್ ಬೋಳಾರ್ ರವರು ಸ್ವೀಕರಿಸಿ ಅಲ್ಲಿಂದ ಆಂಬ್ಯುಲೆನ್ಸ್ ಮೂಲಕ ಮೃತರ ಸ್ವಗೃಹಕ್ಕೆ ತಲುಪಿಸಲಾಗಿದೆ.
ವಿಮಾನ ನಿಲ್ದಾಣದಿಂದ ಮೃತದೇಹವನ್ನು ಕೋಟೆಕಾರಿಗೆ ತಲುಪಿಸುವ ಸಂದರ್ಭದಲ್ಲಿ ಮೃತರ ಕುಟುಂಬಸ್ಥರು ಹಾಗೂ ಎಸ್ಸೆಸ್ಸೆಫ್ ದ.ಕ. ಜಿಲ್ಲಾ ಕಾರ್ಯದರ್ಶಿ ಶಾಕಿರ್ ಎಂಎಸ್ಇ ಹಾಗೂ ನಾಯಕರಾದ ಸಿದ್ದೀಖ್ ಬಜ್ಪೆ, ಶಾಹಿಕ್ ಬಜ್ಪೆ, ಶಕೀಲ್ ಬಜ್ಪೆ ಉಪಸ್ಥಿತರಿದ್ದರು.
ಮೃತರು ಪತ್ನಿ, ಮಗಳು ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ.