ಇಂದಿನಿಂದ ರಿಯಾದ್ ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ ಬದಲಾವಣೆ
(Photo credit- stom.sa/en/king-khalid-international-airport-riyadhasas)
ರಿಯಾದ್: ಇಂದಿನಿಂದ (ಡಿ.30) ಟರ್ಮಿನಲ್ ಬದಲಾವಣೆ ಜಾರಿಗೆ ಬರಲಿದೆ ಎಂದು ರಿಯಾದ್ ನ ಕಿಂಗ್ ಖಾಲಿದ್ ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಕಟಿಸಿದೆ.
ಈ ಬದಲಾವಣೆ ಸೋಮವಾರ ಮಧ್ಯಾಹ್ನದಿಂದ ಜಾರಿಗೆ ಬರಲಿದ್ದು, ಟರ್ಮಿನಲ್ 2ರಿಂದ ಕಾರ್ಯಾಚರಣೆ ನಡೆಸುವ ವಿಮಾನಗಳನ್ನು ಹೊಸದಾಗಿ ನಿಯೋಜಿಸಲಾಗಿರುವ ಟರ್ಮಿನಲ್ 3ಕ್ಕೆ ಸ್ಥಳಾಂತರಿಸಲಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ.
ಈ ಬದಲಾವಣೆಯಿಂದ ಏರ್ ಇಂಡಿಯಾ ಮತ್ತು ಇಂಡಿಗೊ ಏರ್ ಲೈನ್ಸ್ ಸೇರಿದಂತೆ ಭಾರತಕ್ಕೆ ವಿಮಾನ ಕಾರ್ಯಾಚರಣೆ ನಡೆಸುವ ವಿವಿಧ ವಿಮಾನ ಯಾನ ಸಂಸ್ಥೆಗಳ ವಿಮಾನಗಳ ಹಾರಾಟದ ಮೇಲೆ ಪರಿಣಾಮ ಉಂಟಾಗಲಿದ್ದು, ಇನ್ನು ಮುಂದೆ ಈ ವಿಮಾನಗಳು ಟರ್ಮಿನಲ್ 3ರಿಂದ ಆಗಮನ ಮತ್ತು ನಿರ್ಗಮನ ಕಾರ್ಯಾಚರಣೆ ನಡೆಸಲಿವೆ.
ಇದರೊಂದಿಗೆ ಎಮಿರೇಟ್ಸ್, ಬ್ರಿಟಿಷ್ ಏರ್ ವೇಸ್, ಗಲ್ಫ್ ಏರ್, ಈಜಿಪ್ಟ್ ಏರ್ ಹಾಗೂ ಇನ್ನೂ ಹಲವು ಅಂತರ್ರಾಷ್ಟ್ರೀಯ ವಿಮಾನ ಯಾನ ಸಂಸ್ಥೆಗಳೂ ಈ ನೂತನ ಟರ್ಮಿನಲ್ ನಿಂದ ಕಾರ್ಯಾಚರಣೆ ನಡೆಸುವುದನ್ನು ಪ್ರಾರಂಭಿಸಲಿವೆ.
ಇಲ್ಲಿಯವರೆಗೆ ಈ ವಿಮಾನ ಯಾನ ಸಂಸ್ಥೆಗಳು ಟರ್ಮಿನಲ್ 2ರ ಮೂಲಕ ಕಾರ್ಯಾಚರಣೆ ನಡೆಸುತ್ತಿದ್ದವು. ಇನ್ನು ಮುಂದೆ ಟರ್ಮಿನಲ್ 3 ಈ ವಿಮಾನಗಳ ಕಾರ್ಯಾಚರಣೆಯನ್ನು ವಿಶೇಷವಾಗಿ ನಿರ್ವಹಿಸಲಿದೆ.
ವಿಶ್ವದ ಅತಿ ದೊಡ್ಡ ವಿಮಾನ ನಿಲ್ದಾಣವಾಗಿರುವ ಕಿಂಗ್ ಖಾಲಿದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಕಾರ್ಯಾಚರಣೆ ಸಾಮರ್ಥ್ಯವನ್ನು ವೃದ್ಧಿಸಲು ಸದ್ಯ ಭಾರೀ ವಿಸ್ತರಣೆಗೆ ಒಳಗಾಗುತ್ತಿದೆ. ತಮ್ಮ ವಿಮಾನದ ವಿವರಗಳನ್ನು ಪರೀಕ್ಷಿಸಿಕೊಳ್ಳುವಂತೆ ಪ್ರಯಾಣಿಕರಿಗೆ ಸಲಹೆ ನೀಡಲಾಗಿದ್ದು, ಟರ್ಮಿನಲ್ ಬದಲಾವಣೆಯನ್ನು ಅರಿಯಲು ಮುಂಚಿತವಾಗಿ ವಿಮಾನ ನಿಲ್ದಾಣಕ್ಕೆ ಆಗಮಿಸುವಂತೆಯೂ ಅವರಿಗೆ ಸೂಚಿಸಲಾಗಿದೆ.