ಸೌದಿ ಅರೇಬಿಯಾ: ವಲಸೆ ಕಾರ್ಮಿಕರ ಹಕ್ಕುಗಳ ರಕ್ಷಣೆಗೆ 'Musaned' ಡಿಜಿಟಲ್ ಪ್ಲಾಟ್ಫಾರ್ಮ್ ಸಜ್ಜು
PC : .alakeel.sa
ರಿಯಾದ್: ಭಾರತವನ್ನು ಒಳಗೊಂಡಂತೆ ವಲಸೆ ಕಾರ್ಮಿಕರ ಹಕ್ಕುಗಳ ರಕ್ಷಣೆಗೆ ಸೌದಿ ಅರೇಬಿಯಾವು ಡಿಜಿಟಲ್ ಚಾಲಿತ ಸುಧಾರಣೆಗಳನ್ನು ಜಾರಿಗೆ ತರಲು ಸಜ್ಜಾಗಿದೆ.
ಮಾನವ ಸಂಪನ್ಮೂಲ ಮತ್ತು ಸಾಮಾಜಿಕ ಅಭಿವೃದ್ಧಿ ಸಚಿವಾಲಯದ ಅಧಿಕಾರಿಗಳು ಗುರುವಾರ ಕಿಂಗ್ಡಮ್ನ ನೂತನ ಕಾರ್ಮಿಕ ಚೌಕಟ್ಟಿನ ಕುರಿತು ಮಾಹಿತಿ ನೀಡಿದರು. ನೂತನ ಯೋಜನೆಯು ಸೌದಿ ಅರೇಬಿಯಾದ 'ವಿಷನ್ 2030'ರ ಭಾಗವಾಗಿದೆ. ನೂತನ ಸುಧಾರಣೆಗಳು ಕಾರ್ಮಿಕರ ಹಕ್ಕುಗಳನ್ನು ರಕ್ಷಿಸುವ ಮತ್ತು ಅಕ್ರಮ ವಲಸೆಯನ್ನು ನಿಗ್ರಹಿಸುವ ಗುರಿಯನ್ನು ಹೊಂದಿವೆ.
ಈ ಪ್ರಯತ್ನಗಳ ಫಲವಾಗಿ 'Musaned' ಪ್ಲಾಟ್ಫಾರ್ಮ್ ರೂಪುಗೊಂಡಿದೆ. ವಿಶೇಷವಾಗಿ ದೇಶೀಯ ವಲಯದಲ್ಲಿ ಇದು ವಲಸಿಗ ಕಾರ್ಮಿಕರನ್ನು ಬೆಂಬಲಿಸಲು ವಿನ್ಯಾಸಗೊಳಿಸಲಾದ ಡಿಜಿಟಲ್ ವೇದಿಕೆ. ಈ ವ್ಯವಸ್ಥೆಯು ಸುಡಾನ್, ಈಜಿಪ್ಟ್ ಮತ್ತು ಇಥಿಯೋಪಿಯಾ ಸೇರಿದಂತೆ ಹತ್ತು ಆಫ್ರಿಕನ್ ದೇಶಗಳ ಕಾರ್ಮಿಕರಿಗೆ ಮತ್ತು ಏಷ್ಯಾದ ಒಂಬತ್ತು ರಾಷ್ಟ್ರಗಳಾದ ಭಾರತ, ಬಾಂಗ್ಲಾದೇಶ, ಪಾಕಿಸ್ತಾನ ಮತ್ತು ಫಿಲಿಪೈನ್ಸ್ ಕಾರ್ಮಿಕರ ಹಿತಾಸಕ್ತಿ ಕಾಪಾಡಲಿದೆ.
'Musaned' ಡಿಜಿಟಲ್ ಅಪ್ಲಿಕೇಷನ್ ವಿದೇಶಿ ಉದ್ಯೋಗಿಗಳಿಗೆ ಅವರ ಉದ್ಯೋಗ ಒಪ್ಪಂದಗಳಿಗೆ ಸಂಬಂಧಿಸಿದಂತೆ ಮಾಹಿತಿ ಒದಗಿಸುತ್ತದೆ. ಈ ಅಪ್ಲಿಕೇಷನ್ ಬಳಸಿ ಅವರು ತಮ್ಮ ಉದ್ಯೋಗ ವಿವರಗಳನ್ನು ಬದಲಾಯಿಸುವ ಅವಕಾಶವನ್ನೂ ಪಡೆಯಲಿದ್ದಾರೆ.
ಅಲ್ಲದೇ ವಿದೇಶಿ ರಾಯಭಾರ ಕಚೇರಿಗಳು ಸೌದಿ ಅರೇಬಿಯಾದಲ್ಲಿ ಕೆಲಸ ಮಾಡುವ ತಮ್ಮ ಪ್ರಜೆಗಳಿಗೆ ಉದ್ಯೋಗದಾತರ ವಿವರಗಳಿಗೆ ಸಂಬಂಧಿಸಿದ ಮಾಹಿತಿಯನ್ನು Musaned ಬಳಸಿ ಪಡೆಯುವ ಅವಕಾಶ ಕಲ್ಪಿಸಲಾಗಿದೆ. ಈ ಪಾರದರ್ಶಕತೆಯು ಕಾರ್ಮಿಕರಿಗೆ ತೊಂದರೆಯಾದಾಗ ಪರಿಹಾರ ನೀಡುವ ವಿಧಾನವನ್ನು ಸರಳೀಕರಿಸುವ ಗುರಿಯನ್ನು ಹೊಂದಿದೆ.
Musaned ನ ಪ್ರಮುಖ ಅಂಶವೆಂದರೆ ಉದ್ಯೋಗದಾತರ ಹಿನ್ನೆಲೆ ಪರಿಶೀಲನೆಗಳನ್ನು ನಡೆಸುವ ಸಾಮರ್ಥ್ಯ. ಇದು ಕಾರ್ಮಿಕರ ಹಕ್ಕುಗಳ ಉಲ್ಲಂಘನೆಯನ್ನು ತಡೆಯಲು ಸಹಾಯ ಮಾಡುತ್ತದೆ. ಅನಧಿಕೃತ ವ್ಯಕ್ತಿಗಳ ಪ್ರವೇಶವನ್ನು ತಡೆಗಟ್ಟುವ ಮೂಲಕ ವಲಸೆಯನ್ನು ಮೇಲ್ವಿಚಾರಣೆ ಮಾಡುವಲ್ಲಿ ವೇದಿಕೆಯು ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ.
Musaned ಗುತ್ತಿಗೆ ವಿಮೆ ಮತ್ತು ಆರೋಗ್ಯ ಸೌಲಭ್ಯಗಳು ಕಾರ್ಮಿಕರಿಗೆ ತಲುಪುವಂತೆ ಮಾಡುತ್ತದೆ. ಅದರೊಂದಿಗೆ ಕಾರ್ಮಿಕರಿಗೆ ವೇತನ ಸಂರಕ್ಷಣಾ ವ್ಯವಸ್ಥೆಯನ್ನು ಒದಗಿಸಲಿದೆ. ಇದು ಉದ್ಯೋಗದಾತರ ಹಣಕಾಸಿನ ವಹಿವಾಟುಗಳ ಮೇಲೆ ನಿಗಾ ಇಡಲಿದೆ. ಕಾರ್ಮಿಕರು ತಮ್ಮ ಸಂಬಳವನ್ನು ಸಮಯಕ್ಕೆ ಸರಿಯಾಗಿ ಸ್ವೀಕರಿಸುವುದನ್ನು ಖಚಿತಪಡಿಸಲಿದೆ. ಆ ಮೂಲಕ ಉದ್ಯೋಗ ಒಪ್ಪಂದದ ಜವಾಬ್ದಾರಿಗಳನ್ನು ಬಲಪಡಿಸಲಿದೆ.
ಸೌದಿ ಅರೇಬಿಯಾವು ಕಾರ್ಮಿಕರಿಗಾಗಿ ಬಾಂಗ್ಲಾದೇಶ, ಭಾರತ ಮತ್ತು ಪಾಕಿಸ್ತಾನದ ಕಾರ್ಮಿಕರ ಮೇಲೆ ಹೆಚ್ಚು ಅವಲಂಬಿತವಾಗಿದೆ. ಸೌದಿ ಅರೇಬಿಯಾದಲ್ಲಿ ಬಾಂಗ್ಲಾದೇಶದ 27 ಲಕ್ಷ ವಲಸೆ ಕಾರ್ಮಿಕರಿದ್ದು, ಬಾಂಗ್ಲಾವು ವಲಸಿಗರಲ್ಲಿ ಮೊದಲ ಸ್ಥಾನದಲ್ಲಿದೆ. 21 ಲಕ್ಷ ವಲಸಿಗರೊಂದಿಗೆ ಪಾಕಿಸ್ತಾನವು ಎರಡನೇ ಸ್ಥಾನದಲ್ಲಿದೆ. 14 ಲಕ್ಷ ವಲಸಿಗರಿರುವ ಭಾರತವು ಮೂರನೇ ಸ್ಥಾನದಲ್ಲಿದೆ. ನೇಪಾಳ, ಇಂಡೋನೇಷಿಯಾ ಮತ್ತು ಫಿಲಿಪೈನ್ಸ್ ದೇಶಗಳ ವಲಸೆ ಕಾರ್ಮಿಕರೂ ನೂತನ ವೇದಿಕೆಯ ಪ್ರಯೋಜನ ಪಡೆಯಲಿದ್ದಾರೆ.
2021 ರಿಂದ 2024 ರವರೆಗೆ ಮನೆ ಕೆಲಸಕ್ಕೆ ನಿಯೋಜಿತ ಭಾರತೀಯ ಕಾರ್ಮಿಕರನ್ನು ಒಳಗೊಂಡಂತೆ 12,649 ಕಾರ್ಮಿಕ ಮೊಕದ್ದಮೆಗಳನ್ನು ಸೌದಿ ಅರೇಬಿಯಾದಲ್ಲಿ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಂತಹ ಪ್ರಕರಣಗಳನ್ನು ಸಮರ್ಥವಾಗಿ ಇತ್ಯರ್ಥಪಡಿಸಲು ಹೊಸ ವೇದಿಕೆಯು ಕೆಲಸ ಮಾಡಲಿದೆ.