ಸ್ವತಂತ್ರ ಫೆಲೆಸ್ತೀನ್ ರಾಷ್ಟ್ರಕ್ಕೆ ಮಾನ್ಯತೆ ಸಿಗದಿದ್ದರೆ ಇಸ್ರೇಲ್ ಜೊತೆ ರಾಜತಾಂತ್ರಿಕ ಸಂಬಂಧ ಸ್ಥಾಪಿಸುವುದಿಲ್ಲ : ಸೌದಿ ಅರೇಬಿಯಾ

ಸೌದಿ ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್ (Photo credit: saudigazette.com.sa)
ಕೈರೋ : ಸ್ವತಂತ್ರ ಫೆಲೆಸ್ತೀನ್ ರಾಷ್ಟ್ರಕ್ಕೆ ಸೌದಿ ಅರೇಬಿಯಾ ತನ್ನ ಬೆಂಬಲವನ್ನು ಪುನರುಚ್ಚರಿಸಿದ್ದು, ಫೆಲೆಸ್ತೀನ್ ರಾಷ್ಟ್ರಕ್ಕೆ ಮಾನ್ಯತೆ ಸಿಗದಿದ್ದರೆ ಇಸ್ರೇಲ್ ಜೊತೆ ರಾಜತಾಂತ್ರಿಕ ಸಂಬಂಧ ಸ್ಥಾಪಿಸುವುದಿಲ್ಲ ಎಂದು ಹೇಳಿದೆ.
ಫೆಲೆಸ್ತೀನ್ ಜನರನ್ನು ಬೇರೆಡೆ ಪುನರ್ವಸತಿಗೊಳಿಸಿ ಆರ್ಥಿಕವಾಗಿ ಅಭಿವೃದ್ಧಿಪಡಿಸಿದ ನಂತರ ಯುದ್ಧದಿಂದ ಹಾನಿಗೊಳಗಾದ ಪ್ರದೇಶವನ್ನು ಅಮೆರಿಕ ಸ್ವಾಧೀನಪಡಿಸಿಕೊಳ್ಳಲಿದೆ ಎಂದು ಟ್ರಂಪ್ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಜೊತೆಗೆ ನಡೆಸಿದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದರು.
ಇದರ ಬೆನ್ನಲ್ಲೇ ಸೌದಿ ಅರೇಬಿಯಾದ ವಿದೇಶಾಂಗ ಸಚಿವಾಲಯ ಹೇಳಿಕೆಯನ್ನು ಹೊರಡಿಸಿದ್ದು, ಸೌದಿ ಅರೇಬಿಯಾ ಫೆಲೆಸ್ತೀನಿಯನ್ನರನ್ನು ಅವರ ಸ್ವಂತ ನೆಲದಿಂದ ಸ್ಥಳಾಂತರಿಸುವ ಯಾವುದೇ ಪ್ರಯತ್ನಗಳನ್ನು ತಿರಸ್ಕರಿಸಲಿದೆ. ಫೆಲೆಸ್ತೀನ್ ಗೆ ಸಂಬಂಧಿಸಿದ ತನ್ನ ನಿಲುವಿನಲ್ಲಿ ಯಾವುದೇ ಬದಲಾವಣೆಯಿಲ್ಲ ಎಂದು ಸ್ಪಷ್ಟವಾಗಿ ಹೇಳಿದೆ.
ಸೌದಿ ರಾಜಕುಮಾರ ಮುಹಮ್ಮದ್ ಬಿನ್ ಸಲ್ಮಾನ್ ಈ ಕುರಿತು ರಾಜ್ಯದ ನಿಲುವನ್ನು ಸ್ಪಷ್ಟಪಡಿಸಿದ್ದಾರೆ. ಪೂರ್ವ ಜೆರುಸಲೆಮ್ ಅನ್ನು ರಾಜಧಾನಿಯಾಗಿಟ್ಟುಕೊಂಡು ಸ್ವತಂತ್ರ ಫೆಲೆಸ್ತೀನ್ ರಾಷ್ಟ್ರ ಸ್ಥಾಪಿಸುವ ತನ್ನ ದಣಿವರಿಯದ ಕೆಲಸವನ್ನು ಸೌದಿ ಅರೇಬಿಯಾ ನಿಲ್ಲಿಸುವುದಿಲ್ಲ. ಸ್ವತಂತ್ರ ಫೆಲೆಸ್ತೀನ್ ರಾಷ್ಟ್ರ ರಚನೆಯಾಗದೆ ಇಸ್ರೇಲ್ ಜೊತೆ ರಾಜತಾಂತ್ರಿಕ ಸಂಬಂಧವನ್ನು ಸ್ಥಾಪಿಸುವುದಿಲ್ಲ ಎಂದು ಹೇಳಿದ್ದಾರೆ.