ನಂಬಲಸಾಧ್ಯ ರೀತಿಯಲ್ಲಿ 500 ಕೆಜಿ ತೂಕ ಕಳೆದುಕೊಂಡ ಸೌದಿ ವ್ಯಕ್ತಿ!
PC: X.com
ಹೊಸದಿಲ್ಲಿ: ಜೀವಂತವಿರುವ ಅತಿಹೆಚ್ಚು ತೂಕದ ವ್ಯಕ್ತಿ ಎನಿಸಿಕೊಂಡಿದ್ದ ಸೌದಿ ಅರೇಬಿಯಾದ ಖಾಲಿದ್ ಬಿನ್ ಮೊಹ್ಸೆನ್ ಶಾರಿ 542 ಕೆ.ಜಿ ತೂಕ ಕಳೆದುಕೊಳ್ಳುವ ಮೂಲಕ ಮತ್ತೆ ಸುದ್ದಿಯಲ್ಲಿದ್ದಾರೆ. 2013ರಲ್ಲಿ ಖಾಲಿದ್ 610 ಕೆ.ಜಿ ತೂಕ ಹೊಂದಿ ಪ್ರಾಣಾಪಾಯದ ಸ್ಥಿತಿಯಲ್ಲಿದ್ದು, ಮೂರು ವರ್ಷಗಳ ಕಾಲ ಹಾಸಿಗೆ ಹಿಡಿದಿದ್ದರು. ಅಗತ್ಯ ಕೆಲಸಗಳಿಗೆ ಕೂಡಾ ಕುಟುಂಬ ಅಥವಾ ಸ್ನೇಹಿತರ ನೆರವು ಪಡೆಯಬೇಕಾದ ಸ್ಥಿತಿ ತಲುಪಿದ್ದ. ಖಾಲಿದ್ ಸ್ಥಿತಿಯನ್ನು ಕಂಡು ಮಧ್ಯಪ್ರವೇಶಿಸಿದ ದೊರೆ ಅಬ್ದುಲ್ಲಾ, ಅವರ ಜೀವರಕ್ಷಣೆಗೆ ಸಮಗ್ರ ಯೋಜನೆಯನ್ನು ಕೈಗೊಂಡದ್ದು ಈಗ ಫಲ ನೀಡಿದೆ.
ನಿಶುಲ್ಕವಾಗಿ ಖಾಲಿದ್ ಗೆ ಅತ್ಯುತ್ತಮ ಚಿಕಿತ್ಸೆ ದೊರೆಯುವಂತೆ ದೊರೆ ವ್ಯವಸ್ಥೆ ಮಾಡಿದರು. ಖಾಲಿದ್ ಅವರನ್ನು ಜಝಾನ್ ನಲ್ಲಿದ್ದ ಅವರ ಮನೆಯಿಂದ ರಿಯಾದ್ ನಲ್ಲಿರುವ ಕಿಂಗ್ ಫಹದ್ ಮೆಡಿಕಲ್ ಸಿಟಿಗೆ ಕರೆದೊಯ್ದು ಮತ್ತು ವಿಶೇಷವಾಗಿ ವಿನ್ಯಾಸಗೊಳಿಸಿದ ಬೆಡ್ಗೆ ಸ್ಥಳಾಂತರಿಸಲಾಯಿತು. 30 ಮಂದಿ ವೃತ್ತಿಪರ ವೈದ್ಯರ ತಂಡವನ್ನು ರಚಿಸಿ ಅವರಿಗೆ ತೀವ್ರ ಚಿಕಿತ್ಸೆ ಮತ್ತು ಕಡು ಪಥ್ಯಕ್ಕೆ ವ್ಯವಸ್ಥೆ ಮಾಡಲಾಯಿತು.
ಗ್ಯಾಸ್ಟ್ರಿಕ್ ಬೈಪಾಸ್ ಸರ್ಜರಿ, ವಿಶೇಷ ಆಹಾರ ಕ್ರಮ ಮತ್ತು ವ್ಯಾಯಾಮ ಈ ಚಿಕಿತ್ಸೆಯಲ್ಲಿ ಸೇರಿತ್ತು. ಜತೆಗೆ ತೀವ್ರತರ ಫಿಸಿಯೋಥೆರಪಿ ಕೂಡಾ ವ್ಯವಸ್ಥೆ ಮಾಡಿದ ಪರಿಣಾಮ ಖಾಲಿದ್ ನಡೆಯುವಂತಾದರು. ಮಧ್ಯಪ್ರಾಚ್ಯದ ಅಗ್ರಗಣ್ಯ ವಿಜ್ಞಾನಿಗಳ ನೆರವಿನಿಂದಾಗಿ ಖಾಲಿದ್ ನಂಬಲಸಾಧ್ಯ ಫಲಿತಾಂಶ ಪಡೆಯಲು ಸಾಧ್ಯವಾಗಿದೆ. ಕೇವಲ ಆರು ತಿಂಗಳಲ್ಲಿ ದೇಹತೂಕವನ್ನು ಅರ್ಧದಷ್ಟು ಇಳಿಸಿಕೊಳ್ಳಲು ಸಾಧ್ಯವಾಯಿತು.
2023ರ ವೇಳೆಗೆ 542 ಕೆ.ಜಿ ತೂಕ ಕಳೆದುಕೊಂಡ ಖಾಲೀದ್ ಈಗ ಕೇವಲ 63.5 ಕೆ.ಜಿಯೊಂದಿಗೆ ಆರೋಗ್ಯವಂತ ದೇಹತೂಕ ಹೊಂದಿದ್ದಾರೆ. ಅವರ ದೈಹಿಕ ಪರಿವರ್ತನೆ ಎಷ್ಟರ ಮಟ್ಟಿಗೆ ನಾಟಕೀಯವಾಗಿತ್ತು ಎಂದರೆ ದೇಹ ಹೊಸ ಆಕಾರಕ್ಕೆ ಹೊಂದಿಕೊಳ್ಳಲು ಅನುವಾಗುವಂತೆ ಹಲವು ಚರ್ಮ ಹೊರತೆಗೆಯುವ ಶಸ್ತ್ರಚಿಕಿತ್ಸೆಗಳೂ ಬೇಕಾದವು. ಈ ಪವಾಡ ಸದೃಶ ಬದಲಾವಣೆಗೆ ಕಾರಣರಾದ ಇವರಿಗೆ ವೈದ್ಯರು "ದ ಸ್ಮೈಲಿಂಗ್ ಮ್ಯಾನ್" ಎಂಬ ಹೆಸರಿಟ್ಟಿದ್ದಾರೆ.