ಒಮಾನ್ ಕರಾವಳಿಯಲ್ಲಿ ಮುಳುಗಿದ ಹಡಗು: ಎಂಟು ಭಾರತೀಯರ ಸಹಿತ ಒಂಬತ್ತು ಮಂದಿಯ ರಕ್ಷಣೆ
PC:x.com/Jansatta
ಹೊಸದಿಲ್ಲಿ: ಒಮನ್ ಕರಾವಳಿಯಲ್ಲಿ ಕಳೆದ ಭಾನುವಾರ ಮುಳುಗಿದ ಪ್ರೆಸ್ಟೀಜ್ ಫಾಲ್ಕನ್ ತೈಲ ಸಾಗಾಣಿಕೆ ಹಡಗಿನಲ್ಲಿದ್ದ 13 ಮಂದಿ ಭಾರತೀಯರ ಪೈಕಿ ಎಂಟು ಮಂದಿ ಸೇರಿದಂತೆ ಒಟ್ಟು ಒಂಬತ್ತು ಮಂದಿಯನ್ನು ರಕ್ಷಿಸಲಾಗಿದೆ. ರಕ್ಷಿಸಲ್ಪಟ್ಟ ಮತ್ತೊಬ್ಬ ಸಿಬ್ಬಂದಿ ಶ್ರೀಲಂಕಾ ಮೂಲದವರು ಎನ್ನಲಾಗಿದೆ.
"ಉಳಿದ ಸಿಬ್ಬಂದಿಯ ಹುಡುಕಾಟಕ್ಕಾಗಿ ಶೋಧ ಮತ್ತು ಪರಿಹಾರ ಕಾರ್ಯಾಚರಣೆ ಮುಂದುವರಿದಿದೆ. ಈಗಾಗಲೇ ಪತ್ತೆಯಾಗಿರುವ ಎಲ್ಲ ಒಂಬತ್ತು ಮಂದಿ ಮಸ್ಕತ್ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಜುಲೈ 14ರಂದು ರಾತ್ರಿ 10 ಗಂಟೆಯ ವೇಳೆಗೆ ಈ ಅವಘಡದ ಬಗ್ಗೆ ಪ್ರೆಸ್ಟೀಜ್ ಫಾಲ್ಕನ್ ಹಡಗಿನಿಂದ ಮಾಹಿತಿ ಸಿಕ್ಕಿತ್ತು. ಒಮಾನ್ ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಅಧಿಕಾರಿಗಳು ಒಮಾನ್ ಅಧಿಕಾರಿಗಳ ಜತೆ ಸಂಪರ್ಕದಲ್ಲಿದ್ದು, ಶೋಧ ಕಾರ್ಯಾಚರಣೆಯಲ್ಲಿ ಭಾರತೀಯ ನೌಕಾಪಡೆ ಕೂಡಾ ಕೈಜೋಡಿಸಿದೆ.
ಒಮಾನ್ ಕರಾವಳಿಯ ರಾಸ್ ಮದ್ರಖಾದಿಂದ 25 ನಾಟಿಕಲ್ ಮೈಲು ದೂರದಲ್ಲಿ ಹಡಗು ಮುಳುಗಿತ್ತು. ಹಡಗು ಇನ್ನೂ ಮುಳುಗಿದ ಸ್ಥಿತಿಯಲ್ಲೇ ಇದೆ. ಇದರಲ್ಲಿ ಸಾಗಿಸಲಾಗುತ್ತಿದ್ದ ತೈಲ ಸಮುದ್ರಕ್ಕೆ ಸೋರಿಕೆಯಾಗಿದೆಯೇ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ.