ತುಂಬೆ ದಂತವೈದ್ಯಕೀಯ ಕಾಲೇಜು| ಅಜ್ಮಾನ್ ಪ್ರೈವೇಟ್ ಎಜುಕೇಷನ್ ಸಚಿವಾಲಯದ ಸಹಯೋಗದೊಂದಿಗೆ ದಂತ ಆರೋಗ್ಯ ಪರೀಕ್ಷಾ ಅಭಿಯಾನ
ದುಬೈ: 5 ವರ್ಷದಿಂದ 14 ವರ್ಷ ವಯಸ್ಸಿನೊಳಗಿನ ಸುಮಾರು 85,000 ಮಕ್ಕಳನ್ನು ಗುರಿಯಾಗಿಸಿಕೊಂಡು ಅಜ್ಮಾನ್ ಪ್ರೈವೇಟ್ ಎಜುಕೇಷನ್ ಸಚಿವಾಲಯದ ಸಹಯೋಗದೊಂದಿಗೆ ತುಂಬೆ ದಂತ ವೈದ್ಯಕೀಯ ಕಾಲೇಜು ನಾರ್ಥನ್ ಎಮೆರೇಟ್ಸ್ ನಲ್ಲಿ ದಂತ ಆರೋಗ್ಯ ಪರೀಕ್ಷೆ ಅಭಿಯಾನವನ್ನು ಹಮ್ಮಿಕೊಂಡಿದೆ.
2024-25ನೇ ಶೈಕ್ಷಣಿಕ ವರ್ಷ ಪೂರ್ತಿ ನಡೆಯಲಿರುವ ಈ ಅಭಿಯಾನವು, ಖಾಸಗಿ ಶಾಲೆಗಳಲ್ಲಿನ ಪ್ರಾಥಮಿಕ ಹಾಗೂ ಪ್ರೌಢ ವಿಭಾಗದ ವಿದ್ಯಾರ್ಥಿಗಳಿಗೆ ಉಚಿತ ದಂತ ಆರೋಗ್ಯ ಪರೀಕ್ಷೆ ಹಾಗೂ ಸಮಾಲೋಚನೆಯ ಅವಕಾಶ ಒದಗಿಸಲಿದೆ.
ಈ ಅಭಿಯಾನವು ಅತ್ಯಗತ್ಯ ದಂತ ಆರೋಗ್ಯ ಅಭ್ಯಾಸಗಳು, ರೋಗ ನಿರೋಧಕ ಆರೈಕೆಯ ಬಗ್ಗೆ ಜಾಗೃತಿ ಮೂಡಿಸು ವುದು ಹಾಗೂ ದಂತ ಶುಚಿತ್ವ, ದಂತ ಜೋಡಣೆ ಹಾಗೂ ಆಹಾರಾಭ್ಯಾಸ ಸೇರಿದಂತೆ ಮಕ್ಕಳಲ್ಲಿ ಕಂಡು ಬರುವ ಸಾಮಾನ್ಯ ದಂತ ಸಮಸ್ಯೆಗಳನ್ನು ಪರಿಹರಿಸುವ ಗುರಿಯನ್ನು ಹೊಂದಿದೆ. ಅಜ್ಮಾನ್ ನಲ್ಲಿರುವ ಶಾಲೆಗಳಾದ್ಯಂತ ಈ ಅಭಿಯಾನ ನಡೆಯಲಿದ್ದು, ಯುಎಇಯಲ್ಲಿರುವ ಸಣ್ಣ ಮಕ್ಕಳಲ್ಲಿ ದಂತ ಆರೋಗ್ಯವನ್ನು ಸುಧಾರಿಸುವ ತುಂಬೆ ದಂತ ವೈದ್ಯಕೀಯ ಆಸ್ಪತ್ರೆಯ ಕಾಳಜಿಯ ಭಾಗವಾಗಿ ನಡೆಸಲಾಗುತ್ತಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಅಜ್ಮಾನ್ ನಲ್ಲಿನ ಖಾಸಗಿ ಶಿಕ್ಷಣ ಕಚೇರಿಯ ಪ್ರಧಾನ ನಿರ್ದೇಶಕ ಎಚ್.ಇ. ಮಹ್ಮೂದ್ ಖಲೀಲ್ ಅಲ್ ಹಶ್ಮಿ, “ತುಂಬೆ ದಂತ ವೈದ್ಯಕೀಯ ಆಸ್ಪತ್ರೆಯೊಂದಿಗಿನ ಸಹಭಾಗಿತ್ವವು ಸಾರ್ವಜನಿಕ ಹಾಗೂ ಖಾಸಗಿ ವಲಯಗಳ ನಡುವಿನ ಮೈತ್ರಿಯ ಅವಕಾಶವನ್ನು ಪ್ರತಿನಿಧಿಸುತ್ತದೆ” ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ತುಂಬೆ ದಂತ ವೈದ್ಯಕೀಯ ಆಸ್ಪತ್ರೆಯು ಮಧ್ಯಪ್ರಾಚ್ಯ ಪ್ರಾಂತ್ಯದಲ್ಲಿ ತುಂಬೆ ಸಮೂಹ ನಿರ್ವಹಿಸುತ್ತಿರುವ ಅತಿ ದೊಡ್ಡ ಶೈಕ್ಷಣಿಕ ದಂತ ವೈದ್ಯಕೀಯ ಆಸ್ಪತ್ರೆಯಾಗಿದೆ. ಸಮಗ್ರ ದಂತ ವೈದ್ಯಕೀಯ ಆರೈಕೆಯನ್ನು ನೀಡುತ್ತಿರುವ ಉನ್ನತ ಗುಣಮಟ್ಟದ ಸೌಕರ್ಯವನ್ನು ಹೊಂದಿದೆ. 37,000 ಚದರ ಅಡಿಗಳಷ್ಟು ಹರಡಿಕೊಂಡಿರುವ ಈ ಆಸ್ಪತ್ರೆಯಲ್ಲಿ 75 ದಂತ ಚಿಕಿತ್ಸಾ ಕುರ್ಚಿಗಳಿವೆ. ಈ ಆಸ್ಪತ್ರೆಯು ಸಾಮಾನ್ಯ ದಂತ ಚಿಕಿತ್ಸೆ, ಆರ್ಥೊ ಡೆಂಟಿಕ್ಸ್, ಪೆಡೊಡಾಂಟಿಕ್ಸ್, ಪೆರಿಯೊಡಾಂಟಿಕ್ಸ್, ಇಂಪ್ಲಾಂಟ್ಸ್, ಕಾಸ್ಮೆಟಿಕ್ ಡೆಂಟಿಸ್ಟ್ರಿಯಂತಹ ಉನ್ನತ ದರ್ಜೆಯ ಸೇವೆಗಳನ್ನು ಒಳಗೊಂಡಿದೆ ಎಂದು ಪ್ರಕಟನೆ ತಿಳಿಸಿದೆ.